Homeಮುಖಪುಟಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ

ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ

- Advertisement -
- Advertisement -

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಗಂಡಸಿನಷ್ಟೇ ಹೆಣ್ಣಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಬೇಕು ಎಂಬುದು ಸ್ತ್ರೀವಾದ. ಅದರೊಟ್ಟಿಗೆ ಸಮಾನ ಗೌರವದ ಬೇಡಿಕೆ ಸ್ತ್ರೀವಾದದ ಪ್ರಮುಖ ಅಂಶ.

ಈ ಮಣ್ಣಿನ ಸ್ತ್ರೀವಾದ ಹುಟ್ಟಿದ್ದು ’ಕ್ವೀನ್ ಆಫ್ ಡೆಕ್ಕನ್ ಎಂದು ಕರೆಯಲ್ಪಡುವ ಪುಣೆಯಲ್ಲಿ. ಭಾರತದ ಸ್ತ್ರೀವಾದ ಎಂದರೆ ಮಹಿಳೆಯರ ಸಮ್ಮಾನಕ್ಕಾಗಿ ಹೆಣ್ಣಿನ ಜೊತೆ ಗಂಡೂ ಜೊತೆಯಾಗಿ ಸಮಬಾಳಿಗಾಗಿ ಹೋರಾಡುತ್ತಾ ಬಂದಿರುವ ಹಾದಿ. ರಾಜಾರಾಂ ಮೋಹನರಾಯ, ಜೋತಿರಾವ್ ಫುಲೆ, ಮನೋಕ್‌ಜೀ ಕುರ್‌ಸೇಟ್‌ಜೀ, ಬೆಹರಂಜಿ ಮಲಬಾರಿ, ಡಾ ಬಿ ಆರ್ ಅಂಬೇಡ್ಕರ್ ಇವರೆಲ್ಲಾ ಈ ಹೋರಾಟದ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಸ್ತ್ರೀವಾದ ಎಂದರೆ ರಾಜಾರಾಂ ಮೋಹನರಾಯರು ’ಸತಿ’ ಪದ್ಧತಿ, ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ್ದು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ತೊಡಗಿಕೊಂಡಿದ್ದು ಎನ್ನಬಹುದಾದರೆ, ಇದೆರಡರ ಮಧ್ಯದಲ್ಲಿ ಭಾರತೀಯ ಸ್ತ್ರೀವಾದ ನಿಜವಾದ ಅರ್ಥದಲ್ಲಿ ಹುಟ್ಟಿದ್ದು ಪುಣೆಯಲ್ಲಿ.

ಸವರ್ಣೀಯರಿಗೆ ಅದರಲ್ಲೂ ಗಂಡುಮಕ್ಕಳಿಗೆ ಮಾತ್ರ ಸುಲಭವಾಗಿ ಶಿಕ್ಷಣ ಸಿಗುತ್ತಿದ್ದ ಕಾಲದಲ್ಲಿ ದಲಿತ ಹೆಣ್ಣೊಬ್ಬಳು ಶಿಕ್ಷಣ ಕಲಿತು ಹೆಣ್ಣುಮಕ್ಕಳ ಬಾಳಿಗೆ ದೀವಿಗೆಯಾಗಿದ್ದು ಇದೆ ನೆಲದಲ್ಲಿ. ಆಕೆಯೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. ಬಾಲ್ಯವಿವಾಹದ ನಂತರ ಗಂಡನ ಸಹಾಯದಿಂದ ಶಿಕ್ಷಣ ಪಡೆದು ಕ್ರಾಂತಿಜ್ಯೋತಿಯಾದವರು. ಜಾತಿ ತಾರತಮ್ಯ ಮತ್ತು ಲಿಂಗ ಅಸಮಾನತೆ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ವಿಧವೆಯರ ಹತ್ಯೆ, ಅತ್ಯಾಚಾರಕ್ಕೊಳಪಟ್ಟು ಗರ್ಭಧರಿಸಿದ ಹೆಣ್ಣುಮಕ್ಕಳ ಹತ್ಯೆಯನ್ನು ತಡೆಯಲು “ಭಾರತೀಯ ಪ್ರತಿಬಂಧಕ ಗೃಹ” ಸ್ಥಾಪಿಸಿ ಅಲ್ಲಿ ಈ ಮಹಿಳೆಯರಿಹೆ ರಕ್ಷಣೆ ಜೊತೆ ಶಿಕ್ಷಣ ನೀಡಿದಾಕೆ ಅವರು.

ಈ ಹಾದಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಕೈಜೋಡಿಸಿದ ಮತ್ತೊಬ್ಬ ಮಹಿಳೆ ಎಂದರೆ ಫಾತಿಮಾ ಶೇಕ್. ಸಾವಿತ್ರಿ ಬಾಯಿ ಫುಲೆಯವರ ಸಹೋದ್ಯೋಗಿ. ಇವರಿಬ್ಬರೂ ಸೇರಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಆರಂಭಿಸಿ ಖುದ್ದು ಶಾಲೆಗಳ ನಿರ್ವಹಣೆ ಮಾಡುತ್ತಾರೆ. ಫಾತಿಮಾ ಶೇಕ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಕೂಡ.

ಸಾವಿತ್ರಿ ಬಾಯಿ ದಂಪತಿಗಳು ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಳವಳಿಗೆ ಧುಮುಕಿದ ಮೇಲೆ ತಮ್ಮ ಮನೆಯನ್ನು ಉದಾತ್ತ ಧ್ಯೇಯಗಳ ಕೇಂದ್ರವಾಗಿಸಿಕೊಂಡು ಮಹಿಳಾ ಸಮಾನತೆಗೆ ಒಂದು ಪರಂಪರೆಯನ್ನು ಹುಟ್ಟು ಹಾಕಿದರು. ಇದು ಧರ್ಮ ಸಮನ್ವಯತೆ, ಜಾತಿಸಮನ್ವಯ, ಶಿಕ್ಷಣ, ಮಹಿಳಾ ಸಬಲೀಕರಣ ಕೇಂದ್ರವಾಗಿತ್ತು. ಸಂಪ್ರದಾಯವಾದಿ ಮುಸ್ಲಿಂ ಮತ್ತು ಕೆಳ ಸಮುದಾಯದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿದ ಈ ಮಹಿಳೆಯರು ಅಂದಿನ ಕಾಲಕ್ಕೆ ತೆಗೆದುಕೊಂಡ ನಿಲುವುಗಳಿಗಾಗಿ, ಮಾಡುತ್ತಿದ್ದ ಕೆಲಸಕ್ಕಾಗಿ ಒದಗುತ್ತಿದ್ದ ಅಪಾಯ ಊಹೆಗೂ ನಿಲುಕದ್ದು.

ಇದೇ ಪರಂಪರೆಯ ಮುಂದುವರೆದ ಭಾಗವಾಗಿ ತಾರಾಬಾಯಿ ಶಿಂಧೆ ಅವರು ಕಾಣಸಿಗುತ್ತಾರೆ. ಪುರುಷಾಧಿಪತ್ಯ (ಪಿತೃ ಪ್ರಧಾನ ವ್ಯವಸ್ಥೆ) ಮತ್ತು ಜಾತಿಯಾಧಾರಿತ ಭೇದಗಳ ವಿರುದ್ಧ ಹೋರಾಡಿದ ಮಹಿಳೆ ಈಕೆ. ಹಿಂದು ಪುರಾಣಗಳು ಹೇಳುವ ಪುರುಷ ಪ್ರಧಾನತೆ ಮತ್ತು ಮಹಿಳೆ ಅಸಮಾನತೆ ಕುರಿತಾಗಿ ಆಕೆ ಮರಾಠಿಯಲ್ಲಿ ಬರೆದ “ಸ್ತ್ರೀ ಪುರುಷ ತುಲನೆ” ಗಂಡು ಹೆಣ್ಣಿನ ನಡುವಿನ ಅಸಮಾನತೆಯನ್ನು ಮನಗಾಣಿಸುವ ಆಧುನಿಕ ಸ್ತ್ರೀವಾದದ ಮೊದಲ ಪುಸ್ತಕ ಎಂದು ಕರೆಯಲ್ಪಟ್ಟಿದೆ.

ತಾರಾಬಾಯಿ ಶಿಂಧೆ ಕೂಡ ಫುಲೆ ದಂಪತಿಗಳ ಒಡನಾಡಿ. ಭಾತದಲ್ಲಿ ಮಹಿಳೆಯರ ಹಕ್ಕಿಗಾಗಿ ತಾರಾಬಾಯಿ ಅವರು ಆರಂಭಿಸಿದ ಹೋರಾಟದಲ್ಲಿ ಫುಲೆ ದಂಪತಿಗಳು ಅವರ ಬೆನ್ನಿಗೆ ನಿಂತಿದ್ದರು. ಭಾರತದ ಮಹಿಳೆಯರು ಅಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯಿಂದ ತುಳಿತಕ್ಕೆ ಒಳಗಾದವರು ಎಂಬ ಮಹಿಳೆಯರ ಬಗೆಗೆ ವಿಶ್ವವ್ಯಾಪಿ ಕಲ್ಪನೆಯಿದ್ದ ತಾರಾಬಾಯಿ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳ ಹಕ್ಕಿಗಾಗಿ ಧ್ವನಿ ಎತ್ತಿದ ಮೊದಲ ಭಾರತೀಯ ಹೆಣ್ಣುಮಗಳು.

ಇದೇ ನೆಲದ ಇನ್ನೊಬ್ಬ ದಿಟ್ಟ ಮಹಿಳೆ ರಮಾಬಾಯಿ ರಾನಡೆ. ಕೌಶಲ್ಯದ ಮೂಲಕ ಹೆಣ್ಣುಮಕ್ಕಳ ಬದುಕಿನಲ್ಲಿ ಬದಲಾವಣೆ ತರಬಹುದು ಎಂದು ನಂಬಿದಾಕೆ. ಮುಂಬೈನ ’ಸೇವಾಸದನ’ ಸ್ಥಾಪಿಸುವ ಮೂಲಕ ಸಾವಿರಾರು ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವುದು ಮತ್ತು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವ ಉದ್ದೇಶದಿಂದಲೆ ಮುಂಬೈ ಮತ್ತು ಪುಣೆಯಲ್ಲಿನ ಇವರ ಸಂಸ್ಥೆಗಳು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದವು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದಲ್ಲಿ ಮಹಿಳಾ ಸಮಾನತೆಗಾಗಿ ದುಡಿದವರಲ್ಲಿ ಡಾ. ವೀಣಾ ಮಜುಂದಾರ್, ಶರ್ಮಿಳಾ ರೇಗೆ ಪ್ರಮುಖರಾಗಿದ್ದಾರೆ. ಡಾ ವೀಣಾ ಮಜುಂದಾರ್ ಮಹಿಳಾ ಶಿಕ್ಷಣ ಮತ್ತು ಮಹಿಳಾ ಹೋರಾಟಗಳನ್ನು ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಷ್ಟೆ ಅಲ್ಲದೆ, ಮಹಿಳೆಯರ ಮೇಲೆ ಪಿತೃಪ್ರಧಾನ ವ್ಯವಸ್ಥೆಯ ಕಬಂಧಬಾಹುಗಳ ಕುರಿತಾಗಿ ಸುದೀರ್ಘ ಕಾಲದವರೆಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಮಹಿಳೆಯರ ಸ್ಥಿತಿಗೆ ಅರಿವಿನ ಕೊರತೆ ಕಾರಣ ಎಂದು ಮಹಿಳಾ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಸೆಂಟರ್ ಫಾರ್ ವಿಮೆನ್ಸ್ ಡೆವಲಪ್ ಮೆಂಟ್ ಸ್ಟಡೀಸ್‌ಅನ್ನು (CWDS) 1980ರಲ್ಲಿ ಸ್ಥಾಪಿಸಿದರು. 1982ರಲ್ಲಿ ಆರಂಭಿಸಿದ ಇಂಡಿಯನ್ ಅಸೋಸಿಯೇಷನ್ ಆಫ್ ವಿಮೆನ್ಸ್ ಸ್ಟಡೀಸ್ ಸಂಸ್ಥಾಪಕ ಸದಸ್ಯೆ ಕೂಡ ಹೌದು. ಈ ಸಂಸ್ಥೆ ಮಹಿಳೆಯರ ಅಧ್ಯಯನಕ್ಕಾಗಿ ಇಂದಿಗೂ ರಾಷ್ಟ್ರ ಮಟ್ಟದ ಕಾರ್ಯಾಗಾರಗಳನ್ನು ನಡೆಸುತ್ತದೆ.

ಮಹಿಳಾಪರ ಧ್ವನಿ ಎತ್ತಿದ ಮತ್ತು ಮಹಿಳೆಯರ ಸ್ಥಿತಿಗತಿಯ ಕುರಿತು ವಿವಿಧ ನೆಲೆಗಳಲ್ಲಿ ಅಧ್ಯಯನ ನಡೆಸಿದವರು ಶರ್ಮಿಳಾ ರೇಗೆ. ಇವರು ಪುಣೆ ವಿಶ್ವವಿದ್ಯಾಲಯದ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಂಬೇಡ್ಕರರ ಸ್ತ್ರೀವಾದದ ಪ್ರತಿಪಾದಕಿಯಾಗಿ ಕೆಳ ಸಮುದಾಯ ಮತ್ತು ಬುಡಕಟ್ಟು ಹೆಣ್ಣು ಮಕ್ಕಳ ಧ್ವನಿಯಾದವರು. ದಲಿತ ಮಹಿಳೆಯರು ಸವರ್ಣೀಯ ಮಹಿಳೆಯರ ಬದುಕಿನ ವಿಧಾನ ಪಾಲಿಸಲು ಮುಂದಾಗುವುದರ ವಿರುದ್ಧ ಕಟುವಾಗಿ ಟೀಕಿಸಿದವರು ಶರ್ಮಿಳಾ ರೇಗೆ.

PC : Wikipedia (ಡಾ. ವೀಣಾ ಮಜುಂದಾರ್)

ಆ ನಂತರದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಸ್ತ್ರೀವಾದಿ ಚಳವಳಿಯಲ್ಲಿ ನಾಲ್ಕು ಅಲೆಗಳನ್ನು ಗುರುತಿಸಬಹುದು. ಸಂವಿಧಾನದ ಮೂಲಕ ಮಹಿಳಾ ಹಕ್ಕುಗಳನ್ನು ಸೇರಿಸಿದ್ದು ಮಹಿಳಾ ಸಮಾನತೆಯೆ ಮೊದಲನೆ ಹಂತ ಎಂದು ಗುರುತಿಸಬಹುದು.

ರಾಜ್ಯಗಳು ಜಾತಿ ವರ್ಗ ಸಾಂಸ್ಕೃತಿಕ ಆಧಾರದಲ್ಲಿ ಸಮುದಾಯಗಳನ್ನು ಗುರುತಿಸಿದ ನಂತರ ಆಡಳಿತಾತ್ಮಕವಾಗಿ ಮಹಿಳಾ ಸಬಲೀಕರಣದ ಹಾದಿ ಸುಲಭವಾಯಿತು. ಸಮಾನ ಹಕ್ಕುಗಳು, ವಿವಾಹ ವಿಚ್ಛೇದನ, ದತ್ತು ಪಡೆಯುವ ಹಕ್ಕು, ಉತ್ತರಾಧಿಕಾರ, ಆಸ್ತಿಯ ಹಕ್ಕು, ಲೈಂಗಿಕ ದೌರ್ಜನ್ಯದ ವಿರುದ್ಧದ ಕಾನೂನುಗಳು, ವರದಕ್ಷಿಣೆ ವಿರುದ್ಧದದ ಕಾನೂನು ಹೀಗೆ 1950ರ ಹಿಂದೂ ಕೋಡ್ ಬಿಲ್ ಇದಕ್ಕೆ ಒಂದು ಉದಾಹರಣೆ.

ಎರಡನೆ ಅಲೆ ಎಂದರೆ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮಹಿಳಾ ಸಂಘಟನೆಗಳು ಸ್ಥಾಪನೆಯಾಗಿದ್ದು. ಮಹಿಳೆಯರ ಉದ್ಯೋಗ, ಸುರಕ್ಷತೆ, ಲಿಂಗ ಅಸಮಾನತೆ, ವರದಕ್ಷಿಣೆ, ರಾಜಕೀಯ ಪ್ರಾತಿನಿಧ್ಯದ ಕುರಿತು ಮಹಿಳೆಯರು ಧ್ವನಿ ಎತ್ತಿದ ಸಮಯ ಇದು. 1960ರಲ್ಲಿ ಕೆಳ ಮತ್ತು ಬುಡಕಟ್ಟು ಮಹಿಳೆಯರ ಸಬಲೀಕರಣ, ಜಾಗೃತಿ ಮತ್ತು ಸಂತಾನೋತ್ಪತ್ತಿ ಹಾಗೂ ಲೈಂಗಿಕತೆ ಕುರಿತಾದ ಜಾಗೃತಿ ಮೂಡಿಸಲು ಸಂಘಟನೆಗಳು ಮುಂದಾದವು. 1973-74ರಲ್ಲಿ ಮಾವೋಯಿಸ್ಟ್ ಮಹಿಳೆಯರು ಸೇರಿ ಸ್ಥಾಪಿಸಿದ ಮಹಿಳಾ ಪ್ರಗತಿಪರ ಸಂಸ್ಥೆ, ಸಿಪಿಐ(ಎಂ) ಮಹಿಳಾ ಶ್ರಮಿಕ ಸಂಘಟನೆ ಇದಕ್ಕೆ ಉದಾಹರಣೆ.

ಮೂರನೆಯ ಅಲೆ ಎಂದರೆ, 1980ರ ಪಂಚವಾರ್ಷಿಕ ಯೋಜನೆಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಆರೋಗ್ಯ, ಉದ್ಯೋಗ ಶಿಕ್ಷಣದ ಕುರಿತಾಗಿ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದ್ದು. ಎಂಟನೆ ಪಂಚವಾರ್ಷಿಕ ಯೋಜನೆಯಲ್ಲಿ (1992-97) ಮಹಿಳಾ ಅಭಿವೃದ್ಧಿ ಪದದ ಬದಲು ಮಹಿಳಾ ಸಬಲೀಕರಣ ಎಂದು ಸರ್ಕಾರ ತನ್ನ ಕಡತದಲ್ಲಿ ಹೊಸ ಶಬ್ದ ಸೇರಿಸಿಕೊಂಡಿತು. ಮಹಿಳೆಯರಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಇದೇ ಸಮಯದಲ್ಲಿ ಆರಂಭಿಸಲಾಯಿತು. ಬಡ ಮಹಿಳೆಯರಿಗಾಗಿ ರಾಷ್ಟ್ರೀಯ ಕೋಶ ಸ್ಥಾಪಿಸಲಾಯಿತು. ಹಲವಾರು ಯೋಜನೆಗಳು ಜಾರಿಯಾದವು. ಸರ್ಕಾರೇತರ ಸಂಸ್ಥೆಗಳು ಮಹಿಳೆಯರಿಗಾಗಿ ಕೆಲಸ ನಿರ್ವಹಿಸಲು ಆರಂಭಿಸಿದವು.

ನಾಲ್ಕನೆ ಅಲೆ ಎಂದರೆ, ಸೈಬರ್ ಸ್ತ್ರೀವಾದ. 2000 ಇಸವಿಯ ಹೊತ್ತಿಗೆ ಹೊಸ ತಂತ್ರಜ್ಞಾನ ಆಗಮನದಿಂದ ಮಹಿಳೆಯರು ತಮ್ಮ ವಿಚಾರಗಳನ್ನು ಮಂಡಿಸಲು, ಸಂಘಟಿತರಾಗಲು ಡಿಜಿಟಲ್ ವೇದಿಕೆಗಳ ನೂತನ ಮಾದರಿ ಕಂಡುಕೊಂಡರು. ಮಹಿಳೆಯ ಅಭಿವ್ಯಕ್ತಿ, ಅಭಿರುಚಿ ಮತ್ತು ಸ್ವಾತಂತ್ರ್ಯದ ಕುರಿತಾದ ಚರ್ಚೆಗೆ ದೊಡ್ಡ ವೇದಿಕೆ ನಿರ್ಮಾಣವಾದ ಕಾಲಘಟ್ಟ ಇದು.

ಈಗ ಸಾಮಾಜಿಕ ಜಾಲತಾಣಗಳ ಮೂಲಕ ಚಳವಳಿಗಳು ರೂಪುಗೊಳ್ಳುತ್ತಿವೆ. ಸ್ಯಾನಿಟರಿ ನ್ಯಾಪಕಿನ್ ಮೇಲೆ 12% ಟ್ಯಾಕ್ಸ್ ಹಾಕಿದ್ದನ್ನು ಪ್ರಶ್ನಿಸಿ ಟ್ವಿಟ್ಟರ್‌ನಲ್ಲಿ 2017ರಲ್ಲಿ #LahuKaLagaan ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿತ್ತು. ಇದೆ ಚಳವಳಿಯ ಪರಿಣಾಮ 2018ರಲ್ಲಿ ಋತುಸ್ರಾವದ ಮೇಲಿನ ತೆರಿಗೆಯನ್ನು ಸರ್ಕಾರ ಹಿಂಪಡೆಯಿತು.

2012ರ ನಿರ್ಭಯಾ ಚಳವಳಿ ಕೂಡ ದೊಡ್ಡ ಸದ್ದು ಮಾಡಿತು. ಸಂತ್ರಸ್ತೆ ಸಾವಿಗೆ ನ್ಯಾಯ ಕೋರಿ #Delhibraveheart ಎಂಬ ಹ್ಯಾಷ್‌ಟ್ಯಾಗ್ ಬಳಸಿ ಮಿಲಿಯನ್‌ಗಟ್ಟಲೆ ಜನರು ಟ್ವೀಟ್ ಮಾಡಿದರು. ಈ ಸಂಬಂಧಿತ ಕಾಯಿದೆಗಳಲ್ಲಿ ಬದಲಾವಣೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತು. ಜಾಗತಿಕವಾಗಿ ಇದು ಗಮನ ಸೆಳೆಯಿತು.

ಶರ್ಮಿಳಾ ರೇಗೆ

2018ರ ಹೊತ್ತಿಗೆ ಹೆಣ್ಣು ಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಹೇಳಿಕೊಳ್ಳಲು #MeToo ಚಳವಳಿಗೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯಾಯಿತು. ಇದು ದೊಡ್ಡ ಸದ್ದು ಮಾಡಿತು. ಕೆಲಸದ ಸ್ಥಳಗಳಲ್ಲಿ ಆದ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದವು. 2013ರಲ್ಲಿ ಜಾರಿಗೆ ತಂದ ಮಹಿಳಾ ದೌರ್ಜನ್ಯ ಕಾಯ್ದೆ ತಿದ್ದುಪಡಿಗೆ ಇದು ಸಹಾಯ ಮಾಡಿತು.

#MeToo ಚಳವಳಿಯ ಸಂದರ್ಭದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರಮಂತ್ರಿ ಎಂ.ಜೆ ಅಕ್ಬರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿದ ದೆಹಲಿ ನ್ಯಾಯಾಲಯ, ತನ್ನ ತೀರ್ಪಿನಲ್ಲಿ “ದಶಕಗಳ ನಂತರವೂ ಮಹಿಳೆಗೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕಿದೆ..” ಎಂಬುದನ್ನು ಉಲ್ಲೇಖಿಸಿರುವುದು ಗಮನಾರ್ಹ.

ಎನ್.ಆರ್.ಸಿ ವಿರುದ್ಧ ಶಾಹಿನ್ ಭಾಗ್ ಮಹಿಳೆಯರ ಹೋರಾಟ, ರೈತರ ದೆಹಲಿ ಚಲೋನಲ್ಲಿ ಮಹಿಳೆಯರು ಹೋರಾಟಕ್ಕಿಳಿದಿದ್ದು, ಟ್ರ್ಯಾಕ್ಟರ್ ರ್‍ಯಾಲಿ ಮಾಡಿದ್ದು, ಪ್ರಜಾಪ್ರಭುತ್ವದಲ್ಲಿ ಗಂಡಾಳ್ವಿಕೆಯ ಅನೀತಿ ವಿರೋಧದ ರಾಜಕೀಯ ಧ್ವನಿಯಾಗಿದೆ. ಮಹಿಳೆಯರ ಧ್ವನಿಗಳನ್ನು ಹತ್ತಿಕ್ಕಲು ಕೆಲಸ ಮಾಡುತ್ತಿರುವ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ಇನ್ನೂ ಗಟ್ಟಿಯಾಗಿರುವುದು ಕೂಡ ಢಾಳವಾಗಿ ಕಾಣಸಿಗುತ್ತದೆ.

ಸ್ತ್ರೀವಾದವೆಂದರೆ ಗಂಡು ಮತ್ತು ಹೆಣ್ಣು ಸಮಾನ ತತ್ವದಡಿ ಬದುಕು ಕಟ್ಟಿಕೊಳ್ಳುವ ಸಮಬಾಳಿನ ತತ್ವ. ಸಮಾನ ಸಮ್ಮಾನದ ಬೇಡಿಕೆ.

ಚೈತ್ರಿಕಾ ಹರ್ಗಿ
ಯುವತಲೆಮಾರಿನ ಬರಹಗಾರ್ತಿ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಚೈತ್ರಿಕಾ ಕನ್ನಡದ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...