Homeಮುಖಪುಟಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು...

- Advertisement -
- Advertisement -

ನಮ್ಮ ಯೋಗಪ್ಪನವರನ್ನು ಕೊರೊನಾ ಬಲಿ ಪಡೆದಿದೆ. ಇದು ಕನ್ನಡ ಸಾಹಿತ್ಯಾಕ್ಕಾದ ದೊಡ್ಡ ನಷ್ಟ. ಏಕೆಂದರೆ, ಯೋಗಪ್ಪನವರು ಇನ್ನೂ ಮಹತ್ತರವಾದುದನ್ನು ಬರೆಯುವವರಿದ್ದರು. ಅವರು ಲಂಕೇಶರಿಗೆ ಪರಿಚಯವಾದುದ್ದೇ ತಮ್ಮ ಗಟ್ಟಿಯಾದ ಬರಹ ಮತ್ತು ಓದಿನ ಮುಖಾಂತರ. ಇಂಗ್ಲಿಷ್ ಸಾಹಿತ್ಯದ ಓದಿನ ವಿಷಯದಲ್ಲಿ ಪಾಂಡಿತ್ಯದ ಔನ್ನತ್ಯದಲ್ಲಿದ್ದ ಯೋಗಪ್ಪನವರು ನಮ್ಮಂತವರ ಜೊತೆಯೂ ಸಹಜವಾದ ಸ್ನೇಹದಿಂದಿದ್ದರು. ಅವರು ಲಂಕೇಶ್ ಜೊತೆ ಮಾತನಾಡುತ್ತ ಕುಳಿತಿದ್ದರೆ ನಾವು ಉಸಿರೆತ್ತದೆ ಸುಮ್ಮನೆ ಕೇಳಿಸಿಕೊಳ್ಳುವಂತಾಗುತ್ತಿತ್ತು.

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು. ಆಗಲೇ ಅವರ ಮನದಾಳದಲ್ಲಿ ಈ ಜಗತ್ತಿನ ರೂಪಕ ಲೇಖಕರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಸಂಕ್ಷಿಪ್ತವಾಗಿ ಕೊಡಬೇಕೆನ್ನಿಸಿರಬೇಕು. ಲಂಕೇಶ್ ಪತ್ರಿಕೆಯನ್ನ ನಿರಂತರ ಪ್ರಯೋಗಶೀಲತೆಗೆ ಗುರಿ ಮಾಡುತ್ತಿದ್ದರಿಂದ ಈ ಹಿಂದೆ ಎನ್.ಎಸ್ ಶಂಕರ್ ಕೈಲಿ ’ಚಂಚಲೆ’ ಮತ್ತು ನಟರಾಜ್ ಹುಳಿಯಾರ್‌ರಿಂದ ’ಬರೆವ ಬದುಕು’ ಅಂಕಣಗಳನ್ನು ಬರೆಸಿದ್ದರು. ಮಹಿಳಾ ಲೇಖಕಿಯರಿಂದ ’ನಿಮ್ಮಿ’ ಬರೆಸಿದ್ದರು. ಇವನ್ನೆಲ್ಲಾ ಶುರುಮಾಡಿ ಪತ್ರಿಕೆಯ ನೌಕರರಿಗೆ ಮುಂದುವರಿಸಲು ಬಿಡುತ್ತಿದ್ದರು.

ಹಾಗೆಯೇ ಯೋಗಪ್ಪನವರಿಂದ ಜಗತ್ತಿನ ವಿಸ್ಮಯಕಾರಿ ಲೇಖಕರ ಬಗೆಗಿನ ಸಂಗತಿಗಳನ್ನು ಬರೆಸುತ್ತಿದ್ದರು. ಪತ್ರಿಕೆಯ ಸಾಹಿತ್ಯ ಮತ್ತು ರಾಜಕಾರಣದ ಸಮತೂಕವನ್ನು ನಿಭಾಯಿಸುವುದರಲ್ಲಿ ಯೋಗಪ್ಪನವರ ಬರವಣಿಗೆ ಮಹತ್ವ ಪಡೆದುಕೊಂಡಿದ್ದವು.

ಅವರು ನನಗೆ ಅಷ್ಟಾಗಿ ಪರಿಚಯವಿಲ್ಲದ ಸಮಯದಲ್ಲಿ ಅವರ ಗೆಳೆಯನಂತಿದ್ದ ಉತ್ತರ ಕರ್ನಾಟಕದ ವರದಿಗಾರನೊಬ್ಬ ಲಂಕೇಶರಿಗೆ ಯೋಗಪ್ಪನವರ ವಿಷಯದಲ್ಲಿ ಚಾಡಿ ಹೇಳುತ್ತ ಕುಳಿತಿದ್ದ. ಅದನ್ನ ಕೇಳಿಸಿಕೊಂಡ ನಾನು ಇನ್ನು ಯೋಗಪ್ಪನವರು ಪತ್ರಿಕೆಯಿಂದ ಹೊರನಡೆದಂತೆಯೇ ಎಂದು ಭಾವಿಸಿದ್ದೆ. ಆದರೆ ಲಂಕೇಶ್ ಚಾಡಿ ಹೇಳಿದವನ ಮಾತನ್ನು ಪಕ್ಕಕ್ಕಿಟ್ಟು ಯೋಗಪ್ಪನವರನ್ನು ಗೌರವಿಸಿದ್ದರು. ಆಗೊಮ್ಮೆ ಪತ್ರಿಕೆ ಆಫೀಸಿನಲ್ಲಿ ಶರ್ಮರ ಕಾವ್ಯ ಕುರಿತ ಚರ್ಚೆಯಲ್ಲಿ ಯೋಗಪ್ಪನವರು ಶರ್ಮರ ಎದುರೇ ಅವರ ಕಾವ್ಯದ ಅಂತರಾಳವನ್ನು ಅನಾವರಣ ಮಾಡಿದ್ದರು. ಇದರಿಂದ ಕೆರಳಿದ ಶರ್ಮರು ಯೋಗ್ಯಪ್ಪನವರು ಎಂದು ವ್ಯಂಗ್ಯವಾಗಿ ಮೂದಲಿಸಿದ್ದರು. ಆದರೂ ಯೋಗಪ್ಪನವರು ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ತುಟಿಬಿರಿದರು. ಆಗ ನಟರಾಜ್ ಹುಳಿಯಾರ್ ಮತ್ತು ಲಂಕೇಶರು ಯೋಗಪ್ಪನವರ ವ್ಯಾಖ್ಯಾನವನ್ನು ಸಮರ್ಥಿಸಿಕೊಂಡಿದ್ದರು.

ಒಮ್ಮೆ ಪಶುಸಂಗೋಪನಾ ಸಚಿವರಾಗಿದ್ದ ಬಿ.ಬಿ ನಿಂಗಯ್ಯ ನನ್ನ ಗೆಳೆಯರಾದ ಕಾರಣಕ್ಕೆ ಆಫೀಸಿಗೆ ಕರೆದರು. ಹೋದಾಗ ಇಲ್ಲೆ ಊಟ ಮಾಡಿ ಎಂದರು. ಆಯ್ತು ಎಂದು ಊಟಕ್ಕೆ ಕುಳಿತಾಗ ನಿಂಗಯ್ಯನವರಿಗೆ ಪಿ.ಎಸ್ ಆಗಿದ್ದ ಯೋಗಪ್ಪನವರು ವಿಧೇಯ ಪರಿಚಾರಕನಂತೆ ಊಟ ಬಡಿಸಿದ್ದು ನಾನು ಮರೆಯಲಾಗದ ಮುಜುಗರಕ್ಕೆ ಈಡುಮಾಡಿತ್ತು. ಆದರೆ ಯೋಗಪ್ಪನವರಿಗೆ ಏನೂ ಅನ್ನಿಸಿರಲಿಲ್ಲ ಬದಲಿಗೆ ಗೆಳೆಯನಿಗೆ ಆತಿಥ್ಯ ನೀಡಿದ ಖುಷಿಯಲ್ಲಿದ್ದರು.

ಅವರು ಪಿ.ಎಸ್‌ ಆಗಿ ಕೆಲಸ ಮಾಡಿದ ಮಂತ್ರಿಗಳು ನೆನೆಸಿಕೊಳ್ಳುವಂತಹ ಅಧಿಕಾರಿಯಾಗಿದ್ದರು. ಅವರು ಉದಾಸಿ ಬಳಿಯಿದ್ದಾಗ ನಾನೊಮ್ಮೆ ಹೋಗಿದ್ದೆ. ನನ್ನನ್ನು ಉದಾಸಿಗೆ ಪರಿಚಯಿಸಿದ್ದನ್ನು ನೋಡಿ ದಂಗು ಬಡಿದಿದ್ದೆ. ಏಕೆಂದರೆ, ನನ್ನ ಕಟ್ಟೆಪುರಾಣವನ್ನು ಆ ರೂಪದಲ್ಲಿ ಉದಾಸಿಗೆ ವಿವರಿಸಿದ್ದರು. ಉದಾಸಿ ಕೂಡ ಎಂ.ಪಿ ಪ್ರಕಾಶರ ಒಡನಾಡಿಯಾದ್ದರಿಂದ ಯೋಗಪ್ಪನವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಮುಂದೆ ನಾನು ಕಟ್ಟೆಪುರಾಣವನ್ನು ಪುಸ್ತಕವಾಗಿ ಪ್ರಕಟಿಸಿದಾಗ ಯೋಗಪ್ಪನವರಿಂದಲೇ ಮುನ್ನುಡಿ ಬರೆಸಿದ್ದೆ.

“ಪ್ರೀತಿಯೆಂಬುದು ಚಂದ್ರನ ದಯೆ” ಎಂಬ ಕಾವ್ಯದ ಗಣಿಯಂತಿರುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಈಗಾಗಲೇ ಕೆಎಎಸ್ ಅಧಿಕಾರಿಯಾಗಿರುವ ಅವರ ಮಗಳೊಂದಿಗೆ ದಿಢೀರನೆ ಪತ್ರಿಕೆ ಆಫೀಸಿಗೆ ಬಂದು ಗೌರಿ ಕೈಯಿಂದ ಬಿಡುಗಡೆ ಮಾಡಿಸಿದರು. ನಂತರ ಕ್ರಿಕೆಟ್ ಕ್ಲಬ್ಬಿನಲ್ಲಿ ಗೌರಿ, ಸತೀಶ್, ಶ್ರೀನಿವಾಸ ಕರಿಯಪ್ಪ ಮತ್ತು ಈ ಚಂದ್ರನಿಗೆ ಪಾರ್ಟಿ ಕೊಟ್ಟರು. ಸಾಮಾನ್ಯವಾಗಿ ಯಾರಾದರೂ ಕುಡಿಸಿದಾಗ ಆಗುವಂತೆಯೇ, ಜಾಸ್ತಿ ಕುಡಿದು ಪೊಲೀಸರಿಗೆ ಸಿಕ್ಕಿಬಿದ್ದೆವು. ಆಗ ಪೊಲೀಸರಿಗೆ, ಕೆಎಎಸ್ ಅಧಿಕಾರಿ ಮತ್ತು ಕನ್ನಡದ ದೊಡ್ಡ ಸಾಹಿತಿ ಯೋಗಪ್ಪನವರು ಪಾರ್ಟಿ ಕೊಟ್ಟರು, ಆದ್ದರಿಂದ ಬಿಡಿ ಸಾರ್ ಎಂದೆವು. ಸಾಹಿತಿ ಪಾರ್ಟಿ ಕೊಟ್ರು ಅಂತ ಇಷ್ಟೊಂದೇನ್ರಿ ಕುಡಿಯದು. ಈ ಕಡೆ ಬನ್ನಿ ಗಾಡಿ ಹಾಕಿ ಎಂದರು. ದಿಕ್ಕು ಕಾಣದ ನಾನು  ಕೊನೆಗೆ ಕಷ್ಟಪಟ್ಟು ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ರಾತ್ರಿಯಾಯ್ತು. ಇದನ್ನು ಯೋಗಪ್ಪನವರಿಗೆ ಹೇಳಿದಾಗ, ಅದಾಗಲೇ ಜಗತ್ತಿನ ರೂಪಕ ಲೇಖಕರ ಬಗ್ಗೆ ಅರೆದು ಕುಡಿದಿದ್ದ ಯೋಗಪ್ಪನವರು ತುಟಿ ಬಿರಿದು ಹೌದ್ರಾ ಎಂದಿದ್ದರು!

ಅವರು ’ಪ್ರೀತಿಯೆಂಬುದು ಚಂದ್ರನ ದಯೆ’ ಎಂಬ ಪುಸ್ತಕ ಕೊಟ್ಟು ಅಭಿಪ್ರಾಯ ಕೇಳಿದ್ದರು. ಆಗ ನಾನು ಫೋನು ಮಾಡಿ “ಸಂಗವ್ವಕ್ಕನ ಮುದ್ದಿನ.. ಬನಶಂಕರಿ ಜಾತ್ರೆಯಲ್ಲಿ ಮಾಯವಾದವಲ್ಲೊ ಎಂಬ ಹಾಡಿನ ಸಾಲುಗಳನ್ನು ರಾಗವಾಗಿ ಹೇಳಿ ಬನಶಂಕರಿ ಜಾತ್ರೆ ನೋಡಬೇಕಲ್ರಿ ಸರ ಎಂದಿದ್ದೆ. ಅದಕೇನಂತೆ ಈ ಬಾರಿ ನೋಡೋನು ಎಂದು ಆ ಜಾತ್ರೆಯನ್ನು ವರ್ಣಿಸಿದ್ದರು.

ಕಳೆದ ಕೊರೊನಾ ಟೈಮಿನಲ್ಲಿ ನಾನು ಮನೆಯಲ್ಲೇ ಇದ್ದು ಲಂಕೇಶರ ಒಡನಾಟದಲ್ಲಿನ ವಿವರಕ್ಕೆ ರೂಪಕೊಟ್ಟು ಒಂದು ಪುಸ್ತಕ ಮಾಡಿ ಅದಕ್ಕೊಂದು ಟೈಟಲ್ ಬೇಕು ಎಂದು ಕೇಳಿದ್ದೆ. ಅದಕ್ಕವರು, ಲಂಕೇಶ್ ಜೊತೆಯಾಗಿದ್ದವುರು ಏನೇನಾದ್ರು ಅನ್ನದನ್ನ ನೀವು ಮಾತ್ರ ಬರೀತಿರಿ ಅದಕ “ಲಂಕೇಶ್ ಜೊತೆಗೆ” ಅಂತ ಟೈಟಲ್ ಇಡ್ರಲ್ಲಾ ಎಂದಿದ್ದರು. ಆ ಪುಸ್ತಕವನ್ನು ಅವರಿಗೆ ಕೊಡಲು ಇಂದು ನಾಳೆ ಎನ್ನುತ್ತಿದ್ದ ನನಗೆ ಕೊರೊನಾ ಸರಿಯಾದ ಉತ್ತರ ಕೊಟ್ಟಿತು. ಆರೋಗ್ಯದ ವಿಷಯದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದ ಯೋಗಪ್ಪನವರು ಮಗನ ಮದುವೆ ಸಲುವಾಗಿ ಲಗ್ನಪತ್ರಿಕೆ ಕೊಡಲು ಹೋದಾಗ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗ ಚೇತರಿಸಿಕೊಂಡಿರುವುದು ಸುದೈವ. ಈಗಿನ ಸರಕಾರದ ಸುಮಾರು ಜನ ನಮಗೊಬ್ಬ ಸಮರ್ಥ ಪಿಎಸ್ ಬೇಕಾಗಿದ್ದಾರೆಂದು ವಿಚಾರಿಸುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಗಮನಕ್ಕೆ ಯೋಗಪ್ಪನವರು ಬಂದಿದ್ದರು. ಇನ್ನೇನು ನೇಮಕ ಹೊರಬೀಳುವ ಸಮಯಕ್ಕೆ ಸರಿಯಾಗಿ ಅಪ್ಪ ಮಕ್ಕಳ ಪಕ್ಷ ತಮ್ಮ ಕಡೆಯವರೊಬ್ಬರನ್ನು ಹೊರಟ್ಟಿಯವರ ಮೇಲೆ ಹೇರಿದ್ದರು. ಎಂದಿನಂತೆ ಯೋಗಪ್ಪನವರು “ಬೇಷಾತು ಬಿಡ್ರಿ” ಎಂದು ನೆಮ್ಮದಿಯಾಗಿದ್ದರು.

ಯೋಗಪ್ಪನವರ ಬರವಣಿಗೆ ಕಡಿಮೆಯಿದ್ದರೂ ಅವು ಮತ್ತೆ ಮತ್ತೆ ಓದುವಂತಹ ತೂಕವುಳ್ಳ ಕೃತಿಗಳಾಗಿವೆ. ’ದೇವರ ಹೆಸರಲ್ಲಿ ಪ್ರಮಾಣ ಮಾಡಿ’ ಎಂಬ ಕಾದಂಬರಿ, ’ಆರಾಮ ಕುರ್ಚಿ’ ಎಂಬ ಕಥಾಸಂಕಲನ, ’ರೂಪಕ ಲೇಖಕರು’, ’ಪ್ರೀತಿಯೆಂಬುದು ಚಂದ್ರನ ದಯೆ’, ನೀಲು ಕುರಿತ ವಿಶ್ಲೇಷಣೆ ಇವೆಲ್ಲಾ ಕನ್ನಡ ಸಾಹಿತ್ಯಕ್ಕೆ ಯೋಗಪ್ಪನವರು ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.


ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...