Homeಅಂಕಣಗಳುಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

- Advertisement -
- Advertisement -

ಅತಿದೊಡ್ಡ ಮತ್ತು ಗಂಭೀರ ಹಗರಣವೊಂದು ದಾಖಲೆಗಳ ಸಮೇತ ಅನಾವರಣಗೊಳ್ಳುತ್ತಿದೆ. ಫ್ರಾನ್ಸ್ ಮೂಲದ ಫಾರ್‍ಬಿಡನ್ ಸ್ಟೋರೀಸ್ ಮತ್ತು ಮಾನವ ಹಕ್ಕುಗಳ ಎನ್‌ಜಿಒ ಆಮ್ನೆಸ್ಟಿ ಇಂಟರ್ ನ್ಯಾಷನಲ್‌ನ ಸೆಕ್ಯುರಿಟಿ ಲ್ಯಾಬ್ ಜಗತ್ತಿನ ಸುಮಾರು 16 ಸುದ್ದಿಸಂಸ್ಥೆಗಳ ಜೊತೆಗೂಡಿ ಈ ಹಗರಣವನ್ನು ಬಯಲುಮಾಡುತ್ತಿವೆ. ರಾಜಕೀಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಪತ್ರಕರ್ತರು, ಅಕಾಡೆಮಿಕ್‌ಗಳು ಹೀಗೆ ಜಗತ್ತಿನಾದ್ಯಂತ ಸುಮಾರು 50,000 ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಅದರ ಮೂಲಕ ಅವರ ವೈಯಕ್ತಿಕ ಮಾಹಿತಿಗಳನ್ನು ಕದಿಯುವುದರಿಂದ ಹಿಡಿದು, ಅವರ ಮಾತುಗಳನ್ನು ಕದ್ದಾಲಿಸಿ ಚಲನವಲನಗಳ ಮೇಲೆ ಕಣ್ಗಾವಲಿಡುವುದನ್ನು ಇಸ್ರೇಲ್ ದೇಶದ ಬೇಹುಗಾರಿಕೆ ತಂತ್ರಜ್ಞಾನದ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ತನ್ನ ಪೆಗಸಸ್ ಎಂಬ ಮ್ಯಾಲ್ವೇರ್ ತಂತ್ರಾಂಶದ ಮೂಲಕ ಮಾಡಿದೆ. ಈ ಸಂಸ್ಥೆಯೇ ಹೇಳಿಕೊಂಡಿರುವಂತೆ ಈ ಮ್ಯಾಲ್ವೇರ್‌ಅನ್ನು ವಿವಿಧ ದೇಶಗಳ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಇದಕ್ಕೆ ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಅನುಮತಿ ಬೇಕಿದೆ. ಭಾರತದಲ್ಲಿ ಪ್ರಮುಖ ರಾಜಕಾರಣಿಗಳೂ ಸೇರಿದಂತೆ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಸರ್ಕಾರವೇ ಕದ್ದಾಲಿಕೆ ನಡೆಸಿತೇ ಎಂಬ ಸಂಶಯಕ್ಕೆ ಇದು ಎಡೆಮಾಡಿಕೊಟ್ಟಿದ್ದು, ಈ ಆರೋಪಗಳು ಮಾನವ ಹಕ್ಕುಗಳ ಬಗ್ಗೆ ಕಾಳಜಿಯಿರುವ ಹಾಗೂ ಅಧಿಕಾರ ಕೇಂದ್ರಗಳನ್ನು ಚೆಕ್‌ನಲ್ಲಿಡಬೇಕು ಎಂಬ ನಂಬಿಕೆಯಿರುವ ಸಾಮಾನ್ಯ ನಾಗರಿಕರನ್ನು ಆತಂಕಕ್ಕೀಡುಮಾಡಿದೆ.

ಹಾರುವ ಬಿಳಿಕುದುರೆ ಎಂಬ ಗ್ರೀಕ್ ಮಿಥಿಕ ಪೆಗಸಸ್. ಆ ಮಿಥ್ ರೀತಿಯಲ್ಲಿಯೇ ಕೆಲಸ ನಿರ್ವಹಿಸುವ ಈ ಕಳ್ಳ ತಂತ್ರಾಂಶ, ಬಳಕೆದಾರನಿಗೆ ಅರಿವಿಲ್ಲದಂತೆಯೇ ಆತನ ಮೊಬೈಲ್ ಫೋನ್‌ಗೆ ನುಸುಳಿ, ಎಸ್‌ಎಂಎಸ್, ಈಮೇಲ್, ಫೋಟೋಗಳು ಸೇರಿದಂತೆ ಖಾಸಗಿ ಮಾಹಿತಿಯನ್ನು ಕದ್ದು ನೋಡುವುದರಿಂದ ಹಿಡಿದು, ಮೈಕ್ರೋಫೋನ್‌ಅನ್ನು ಸ್ವಿಚ್ ಆನ್ ಮಾಡಿ ಯಾರ ಮೇಲೆ ಅಟ್ಯಾಕ್ ಆಗಿದೆಯೋ ಅವರ ಮಾತುಗಳನ್ನು ಕೂಡ ಕದ್ದಾಲಿಸಬಹುದಾದಷ್ಟು ಬಲಿಷ್ಠವಾಗಿದೆ. ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡದೆ ಇರುವುದರ ಹಿಂದಿನ ಪ್ರಮುಖ ಉದ್ದೇಶ, ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದಂತೆ ಕಾಪಾಡಿಕೊಳ್ಳಲು. ಆ ನಿಟ್ಟಿನಲ್ಲಿ ಈ ಮ್ಯಾಲ್ವೇರ್ ನಿರ್ವಹಿಸುವ ಕೆಲಸವನ್ನು ನ್ಯೂಟ್ರಲೈಸ್ ಮಾಡಲು ಬೇರೆ ಸಂಸ್ಥೆಗಳಿಗೆ ತಂತ್ರಾಂಶ ಅಭಿವೃದ್ಧಿಪಡಿಸಲು ದೀರ್ಘಕಾಲಾವಕಾಶ ಹಿಡಿಯುತ್ತದೆ. ಆ ಸಮಯದಲ್ಲಿ ತನ್ನ ಕಳ್ಳತನವನ್ನು ಪೆಗಸಸ್ ಮಾಡಿ ಮುಗಿಸಿರುತ್ತದೆ.

ಈ ಮ್ಯಾಲ್‌ವೇರ್ ಬಗ್ಗೆ ಮೊದಲು ಜಾಗತಿಕ ಮಟ್ಟದಲ್ಲಿ ವಿವಾದ ಎದ್ದದ್ದು ಸೌದಿ ಅರೇಬಿಯಾ ಮೂಲದ ಪತ್ರಕರ್ತ ಜಮಲ್ ಖಶೋಗ್ಗಿ ಅವರನ್ನು ಅಕ್ಟೋಬರ್ 2018ರಲ್ಲಿ ಟರ್ಕಿಯ ಇಸ್ತಾಂಬುಲ್‌ನ ರಾಯಭಾರ ಕಚೇರಿಯಲ್ಲಿಯೇ ಕೊಂದು, ಅವರ ದೇಹದ ಅವಶೇಷವನ್ನೂ ಸಿಗದಂತೆ ಮಾಡಿದಾಗ! ಸೌದಿ ಅರೇಬಿಯಾ ದೇಶದ ನೀತಿಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಖಶೋಗ್ಗಿ ಅವರ ನಿಕಟ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರ ಮೊಬೈಲ್ ಫೋನ್‌ಗಳ ಮೇಲೆ ನವೆಂಬರ್ 2017 ಮತ್ತು ಏಪ್ರಿಲ್ 2018ರ ನಡುವೆ ಈ ಸ್ಪೈವೇರ್ ದಾಳಿ ನಡೆಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಸೌದಿ ಅರೇಬಿಯಾದ ರಾಜನೇ ಈ ಕೊಲೆಗೆ ಆದೇಶಿಸಿದ್ದ ಎಂದು ಅಮೆರಿಕದಿಂದ ಸೋರಿಕೆಯಾಗಿದ್ದ ರಹಸ್ಯ ದಾಖಲೆಗಳಿಂದ ತಿಳಿದುಬಂದಿತ್ತು ಎಂದು ಕೂಡ ವರದಿಯಾಗಿತ್ತು. ಸೌದಿ, ಹಂಗೆರಿ ಇತ್ಯಾದಿಯಾಗಿ ಜಗತ್ತಿನ ಹಲವು ದೇಶಗಳಲ್ಲಿ ಪ್ರಭುತ್ವದ ವಿರೋಧಿಗಳ ಸದ್ದಡಗಿಸಲು ಇದನ್ನು ಬಳಸಿರುವ ಬಗ್ಗೆ ಈಗ ವಿಶ್ವದೆಲ್ಲೆಡೆ ವರದಿಯಾಗುತ್ತಿದೆ.

PC : The Hindu

ಈ ಕೊಲೆಗೂ ತಮಗೂ ಸಂಬಂಧ ಇಲ್ಲವೆಂದು ಎನ್‌ಎಸ್‌ಒ ಹೇಳಿಕೊಂಡಿದ್ದರೂ, ಇದರ ಬೆನ್ನಲ್ಲೇ, ವಾಟ್ಸ್‌ಆಪ್ ಮೂಲಕ ಈ ಮ್ಯಾಲ್ವೇರ್‌ಅನ್ನು ಹಲವರ ಮೊಬೈಲ್ ಸಾಧನಗಳ ಒಳಗೆ ಹೊಕ್ಕಿಸಿರುವುದರ ಬಗ್ಗೆ ಚರ್ಚೆಯಾಗಿ, ವಾಟ್ಸ್‌ಆಪ್ ಸಂಸ್ಥೆ ಪೆಗಸಸ್ ಸಿದ್ಧಪಡಿಸಿದ ಎನ್‌ಎಸ್‌ಒ ಸಂಸ್ಥೆಯ ಮೇಲೆ ಪ್ರಕರಣ ಕೂಡ ದಾಖಲಿಸಿತ್ತು. ಡಿಸೆಂಬರ್ 2017ರ ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಸಂಬಂಧಿಸಿದಂತೆ ಬಹುತೇಕ ಇದೇ ಸಮಯದಲ್ಲಿ ಹಲವು ಮಾನವಹಕ್ಕುಗಳ ಸಾಮಾಜಿಕ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು. ಭೀಮಾ ಕೊರೆಗಾಂವ್ ಪ್ರಕರಣ ಎಂದೇ ಕರೆಯಲಾಗುವ ಈ ಪ್ರಕರಣವನ್ನು ನಂತರ ಎನ್‌ಐಎಗೆ ವರ್ಗಾಯಿಸಲಾಯಿತು. ಚಿಂತಕ-ಅಂಬೇಡ್ಕರ್‌ವಾದಿ ಆನಂದ್ ತೇಲ್ತುಂಬ್ಡೆ ಅವರ ಮೇಲೆಯೂ ದಾಳಿ ನಡೆಸಿ, ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ರಕ್ಷಣೆ ಅಂತ್ಯಗೊಂಡ ಮೇಲೆ ಏಪ್ರಿಲ್ 14, 2020ರಂದು ತೇಲ್ತುಂಬ್ಡೆಯವರು ಎನ್‌ಐಎ ಪೊಲೀಸರ ಮುಂದೆ ಶರಣಾಗಿದ್ದರು. 2018-19ರಿಂದಲೇ ತೇಲ್ತುಂಬ್ಡೆ ಅವರ ಮೊಬೈಲ್ ಫೋನ್ ಮೇಲೆ ಪೆಗಾಸಸ್ ಮ್ಯಾಲ್ವೇರ್ ದಾಳಿ ಮಾಡಿದೆ ಎಂಬ ಅಂಶ ಬಹಿರಂಗಗೊಂಡಿದ್ದರೂ ಅದು ಸಾರ್ವಜನಿಕ ವಿಷಯವಾಗಿ ಅಷ್ಟು ಚರ್ಚೆಗೆ ಒಳಗಾಗಲೇ ಇಲ್ಲ. ಅದರ ವಿರುದ್ಧ ತನಿಖೆ ಮಾಡಬೇಕೆಂಬ ಕೂಗು ಸಣ್ಣವಲಯದಲ್ಲಿ ಕೇಳಿಬಂತಾದರೂ ಅದರ ಗಂಭೀರತೆ ಅರ್ಥವಾಗದೇ ಹೋಗಿತ್ತು.

ಈಗ ಕೆಲವೇ ತಿಂಗಳುಗಳ ಹಿಂದೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್ ಮುಂತಾದವರ ಲ್ಯಾಪ್‌ಟಾಪ್‌ಗಳ ಮೇಲೆ ಕೂಡ ಸೈಬರ್ ದಾಳಿ ನಡೆಸಿ, ಸುಳ್ಳು ಸಾಕ್ಷ್ಯಗಳನ್ನು ಮ್ಯಾಲ್ವೇರ್ ಮೂಲಕ ಅದರಲ್ಲಿ ಅಡಗಿಸಲಾಗಿದೆ ಎಂಬ ವರದಿಯನ್ನು ಅಮೆರಿಕ ಮೂಲದ ವಾಶಿಂಗ್ಟನ್ ಪೋಸ್ಟ್ ಪತ್ರಿಕೆ ಬಯಲಿಗೆಳೆದಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆ ಮತ್ತು ಮೇಲೆ ಚರ್ಚಿಸಿದ ಸಂಗತಿಗಳ ಎಲ್ಲ ಲಿಂಕ್‌ಗಳನ್ನು ಕೂಡಿಸುವಂತೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಬಹುತೇಕ ಎಲ್ಲರ ಮೇಲೆ ಅಥವಾ ಅವರ ಸಂಬಂಧಿಗಳು-ಗೆಳೆಯರು-ಪರಿಚಯಸ್ಥರ ಮೇಲೆ ಪೆಗಸಸ್ ದಾಳಿ ನಡೆದಿದೆ ಎಂಬ ಅಂಶ, ಪೆಗಸಸ್ ದಾಳಿಗೆ ಒಳಗಾದ ಸುಮಾರು 50 ಸಾವಿರ ಲೀಕ್ ಆದ ಫೋನ್ ನಂಬರ್‌ಗಳ ಲಿಸ್ಟ್‌ನಿಂದ ತಿಳಿದುಬಂದಿದೆ. ಆದರೆ ಅದು ನಿರೀಕ್ಷಿತ ಆಕ್ರೋಶವನ್ನು ಇನ್ನೂ ಹುಟ್ಟಿಸಿಲ್ಲ!

ಅಲ್ಲಗಳೆದರಷ್ಟೇ ಸಾಲದು, ನಿಷ್ಪಕ್ಷಪಾತ ತನಿಖೆ ಬೇಕಾಗಿದೆ

ಬಿಜೆಪಿ ಮುಖ್ಯಪಕ್ಷವಾಗಿರುವ ಎನ್‌ಡಿಎ ಒಕ್ಕೂಟ ಸರ್ಕಾರ ಪೆಗಸಸ್ ಮ್ಯಾಲ್ವೇರ್ ಬಳಸಿದೆಯೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ. ಬಳಸಿದ್ದರೆ ಯಾರ ವಿರುದ್ಧ ಬಳಸಲಾಗಿದೆ ಎಂಬುದನ್ನು ಜನರ ಮುಂದೆ ಇಡುವುದು ಅತ್ಯಗತ್ಯ. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕಿದೆ. ಕದ್ದಾಲಿಕೆ ಎಂಬುದೇ ಗಂಭೀರವಾದ ಆರೋಪ. ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಯಾವುದೋ ರಾಷ್ಟ್ರದ ಮ್ಯಾಲ್ವೇರ್ ಬಳಸಿಕೊಂಡು ಮಾಡಿರುವ ಈ ಕದ್ದಾಲಿಕೆ ಅದಕ್ಕಿಂತಲೂ ಗಂಭೀರ ಆರೋಪ. ದೇಶದ 130 ಕೋಟಿ ಜನರ ಖಾಸಗಿ ಬದುಕು ಒಂದು ಟೆಕ್ ಸಂಸ್ಥೆಯ ಮ್ಯಾಲ್ವೇರ್ ಕದ್ದಾಲಿಕೆಗೆ ಸಿಗುವ ಸಂಭವ ಇದೆ ಎಂಬ ಕಲ್ಪನೆಯೇ ಭೀಕರ ಮತ್ತು ಭಯಂಕರವಾದದ್ದು.

ಈ ಹಗರಣವು ಪ್ರಮುಖ ನಾಲ್ಕು ಆಯಾಮಗಳಲ್ಲಿ ಅನಾವರಣಗೊಂಡಿರುವುದರಿಂದ ಅತಿ ಹೆಚ್ಚು ಭೀಕರವಾಗಿ ಗೋಚರಿಸುತ್ತಿದೆ. 1. ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿರುವ ಆರೋಪ 2. ಮಾನವ ಹಕ್ಕುಗಳ ಉಲ್ಲಂಘನೆ 3. ಸಾಮಾನ್ಯ ಜನರ ಖಾಸಗಿ ಜೀವನಕ್ಕೆ ಬೆಲೆ ಇಲ್ಲವಾಗಿರುವುದು 4. ಇದು ಕೇವಲ ಒಂದು ದೇಶದ ನಾಗರಿಕರ ಸಮಸ್ಯೆ ಆಗಿರದೆ ಜಾಗತಿಕ ಪಿಡುಗಾಗಿ ಪರಿಣಮಿಸಿರುವುದು.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವವರು ಹಾಗೂ ಈ ಹಗರಣವನ್ನು ಬಯಲಿಗೆಳೆಯುತ್ತಿರುವ ದ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್ ಸೇರಿದಂತೆ ಸುಮಾರು 40 ಭಾರತೀಯ ಪತ್ರಕರ್ತರ ಮೇಲೆ ನಡೆದಿರುವ ದಾಳಿಯ ಪ್ಯಾಟರ್ನ್‌ಅನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಯಾರನ್ನಾದರೂ ಮಟ್ಟಹಾಕುವುದಕ್ಕೆ ಈ ಮ್ಯಾಲ್ವೇರ್ ಬಳಕೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕೆಲಸವನ್ನು ಕೈಗೊಂಡವರಿಗೆ ಮಾನವ ಹಕ್ಕುಗಳ ದಮನ ಪ್ರಥಮ ಆದ್ಯತೆಯಾಗಿರುವುದು ಅತಿ ಸ್ಪಷ್ಟ.

PC : Public TV

ಇನ್ನು ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಅವರಂತಹ ಪ್ರಭಾವಿ ರಾಜಕಾರಣಿಗಳ ಮೇಲೆಯೂ ದಾಳಿ ನಡೆದಿರುವುದು ಮತ್ತೊಂದು ಆಯಾಮ. ಇಂತಹ ಪ್ರಭಾವಿಗಳ ಮೇಲೆಯೇ ಸ್ನೂಪಿಂಗ್ ನಡೆಸಿ ಗೆದ್ದುಕೊಳ್ಳಬಹುದು ಎಂಬ ಧಾರ್ಷ್ಟ್ಯವನ್ನು ಯಾರಾದರೂ ಹೊಂದಿದ್ದರೆ ಇನ್ನು ಸಾಮಾನ್ಯ ಪ್ರಜೆಗಳ ಗತಿಯೇನು? ಅಲ್ಲದೆ ಕರ್ನಾಟಕದಲ್ಲಿ ಸರ್ಕಾರವನ್ನು ಉರುಳಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರ ಮೇಲೆ ಕೂಡ ಈ ಪೆಗಸಸ್ ಬೇಹುಗಾರಿಕೆ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಚುನಾಯಿತ ಸರ್ಕಾರವನ್ನು ಬೀಳಿಸಲು ಇಂತಹ ಒಂದು ಬೇಹುಗಾರಿಕೆ ನಡೆದಿದ್ದರೆ ಅದು ದೇಶದ ಸಾರ್ವಭೌಮತೆಯ ಪ್ರಶ್ನೆಯಾಗಿದೆ. ಯಾರೇ ಮಾಡಿದ್ದರೂ ಅದು ದೇಶದ್ರೋಹವೇ ಸರಿ. ರಾಜಕೀಯ ಮೇಲಾಟಗಳಿಗೆ ಇಂತಹ ಸ್ನೂಪಿಂಗ್ ನಡೆದಿದ್ದರೆ ಅದರಿಂದ ಯಾರಿಗೆ ಉಪಯೋಗ ಆಗಿರಬಹುದೆಂಬ ಲೆಕ್ಕಾಚಾರದಿಂದ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಲೇಬೇಕಿದೆ.

ಇನ್ನು ಸಾಮಾನ್ಯ ಜನರ ಖಾಸಗಿ ಮಾಹಿತಿಯನ್ನು ಖಾಸಗಿ ಸಂಸ್ಥೆಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವುದೇ ಅನೈತಿಕವಾದದ್ದು ಎಂಬ ಚರ್ಚೆ ಜಗತ್ತಿನಾದ್ಯಂತ ನಡೆಯುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಅದನ್ನು ಹಕ್ಕುಗಳ ದಮನಕ್ಕೆ, ಸುಳ್ಳು ಸಾಕ್ಷ್ಯಗಳನ್ನು ಪ್ಲಾಂಟ್ ಮಾಡುವುದಕ್ಕೆ ಕೂಡ ಬಳಕೆಯಾಗುವುದಾದರೆ ಜನರ ಖಾಸಗಿತನದ, ಹಕ್ಕುಗಳ ರಕ್ಷಣೆ ಸರ್ಕಾರಗಳದ್ದಲ್ಲವೇ? ಸರ್ಕಾರಗಳು ತಮ್ಮ ದೇಶದ ಮಟ್ಟದಲ್ಲಿ ಇಂತಹ ತಂತ್ರಜ್ಞಾನಗಳು ದುರ್ಬಳಕೆ ಆಗದಂತೆ ತಡೆಯುವುದಕ್ಕೆ ನೀತಿ ನಿಯಮಗಳನ್ನು ರೂಪಿಸಬೇಕಲ್ಲವೇ? ಬೇಲಿಯೇ ಎದ್ದು ಹೊಲ ಮೇಯ್ದಿದ್ದರೆ ಅದನ್ನು ತಡೆಯುವ ಸಂಸ್ಥೆಗಳು ಯಾವುವು? ಜೊತೆಗೆ, ಜಗತ್ತಿನಾದ್ಯಂತ ಇಂತಹ ಸ್ನೂಪಿಂಗ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸದಂತೆ ತಡೆಯಲು, ಅಭಿವೃದ್ಧಿಪಡಿಸಿದ ಸಂಸ್ಥೆಗಳನ್ನು ಜಾಗತಿಕವಾಗಿ ನಿಷೇಧಿಸಲು ಅಂತಾರಾಷ್ಟ್ರೀಯ ಮಾನ್ಯತೆಯ ಕಾನೂನುಗಳನ್ನು ರಚಿಸಲು, ಬಿಕ್ಕಟ್ಟಿನ ಸಮಯದಲ್ಲಿ ಸೂಕ್ತ ತನಿಖೆ ನಡೆಸಲು ವಿಶ್ವಸಂಸ್ಥೆಯಡಿ ಅಂತಾರಾಷ್ಟ್ರೀಯ ಸಂಸ್ಥೆಯೊಂದನ್ನು ಸ್ಥಾಪಿಸಲು ದೇಶಗಳು ಅಡಿಯಿಡಬೇಕಿದೆ.

ಯಾವುದೇ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಮೇಲೆ ಬೇಹುಗಾರಿಕೆಗೆ, ಖಾಸಗಿತನದ ಹರಣಕ್ಕೆ ಜಾಗವಿರಬಾರದು. ಅದರಲ್ಲೂ ಭಿನ್ನಮತವನ್ನು ದಮನಿಸುವುದಕ್ಕೆ ಅದನ್ನು ಉಪಯೋಗಿಸುವುದಾದರೆ ಅದು ಪ್ರಜಾಪ್ರಭುತ್ವದ ಸಾವೇ ಸರಿ. ಇಂತಹ ಮುನ್ಸೂಚನೆ ಪೆಗಸಸ್ ಗೂಢಾಚಾರಿಕೆಯ ಹಗರಣದಲ್ಲಿ ಗೋಚರಿಸಿರುವುದು ಕಳವಳಕಾರಿಯಾಗಿದೆ. ದೇಶದ ಜನರು ಹೆಚ್ಚು ಜಾಗೃತವಾಗಿರಬೇಕಿರುವ ಸಮಯ ಇದು. ಸರ್ಕಾರಗಳಿಂದ, ದೈತ್ಯ ಟೆಕ್ ಸಂಸ್ಥೆಗಳಿಂದ ಜವಾಬ್ದಾರಿಯುತ ನಡವಳಿಕೆಯನ್ನು ಆಗ್ರಹಿಸಬೇಕಿರುವ ದಿನಗಳಿವು.


ಇದನ್ನೂ ಓದಿ: ಪೆಗಾಸಸ್ ಹಗರಣ: ಅಮಿತ್ ಶಾ ಮೇಲೆ ನೇರ ಆರೋಪ ಹೊರಿಸಿದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...