Homeಮುಖಪುಟಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

- Advertisement -
- Advertisement -

ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಒಬ್ಬ ತಂದೆ ತನ್ನ ಪುಟ್ಟ ಮಗನೊಂದಿಗೆ ಸಿಂಹದ ಬೋನಿನ ಎದುರು ನಿಂತಿದ್ದ. ಮಗು ಕುತೂಹಲದಿಂದ ಬೋನಿನ ಅತಿ ಸಮೀಪಕ್ಕೆ ಹೋಯಿತು, ಇನ್ನೇನು ಸಿಂಹ ಮಗುವಿಗೆ ತನ್ನ ಪಂಜದಲ್ಲಿ ಹೊಡೆಯುವುದರಲ್ಲಿತ್ತು. ಅಲ್ಲಿಯೇ ನಿಂತಿದ್ದ ಯುವಕ ಸರಕ್ಕನೆ ಮಗುವನ್ನು ಎಳೆದುಕೊಂಡು ಪ್ರಾಣ ಉಳಿಸಿದ. ಗುಂಪಿನಲ್ಲಿದ್ದ ಪತ್ರಕರ್ತನೊಬ್ಬ ಆ ಯುವಕನ ಬಳಿಬಂದು, ತಾನಿದರ ಬಗ್ಗೆ ಒಂದು ಲೇಖನ ಬರೆಯುತ್ತೇನೆಂದು ಅನೇಕ ಪ್ರಶ್ನೆ ಕೇಳಿದ. ಕೊನೆಯದಾಗಿ ನೀನು ಯಾವ ಪಕ್ಷದವನು ಎಂದಾಗ ಯುವಕ “ನಾನು ನಾಝಿ” ಎಂದ. ಮರುದಿನದ ಪತ್ರಿಕೆಯ ಹೆಡ್‌ಲೈನ್ ಹೀಗಿತ್ತು: “ಹಸಿದ ಆಫ್ರಿಕನ್ ವಲಸೆಗಾರನ ಊಟವನ್ನು ಕಸಿದುಕೊಂಡ ದುಷ್ಟ ನಾಝಿ”.

– ಓಶೋ ಹೇಳಿದ ಕತೆಯಿಂದ

ಪ್ರತಿಯೊಬ್ಬ ಮನುಷ್ಯನೂ ತನ್ನ ಪೂರ್ವಾಗ್ರಹಗಳ ಪ್ರತಿಫಲವೇ ಆಗಿರುತ್ತಾನೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಹೀಗಿದ್ದಾಗ ನಮ್ಮ ಸುಪ್ರೀಂ ಕೋರ್ಟಿನ ನ್ಯಾಯಾಧೀಶರುಗಳೂ ಇದಕ್ಕೆ ಹೊರತಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಮ್ಮೆ ಹೀಗೆ ಒಪ್ಪಿಕೊಂಡ ಮೇಲೆ ಯಾಕೆ ಕಾಲಕಾಲಕ್ಕೆ ಸುಪ್ರೀಂಕೋರ್ಟಿನ ಬಗೆಗಿನ ಚಿತ್ರಣ ಭಿನ್ನಭಿನ್ನವಾಗಿ ಕಾಣುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಸುಲಭ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಹತ್ವವನ್ನು ಎತ್ತಿಹಿಡಿದ ಮತ್ತು ಅವುಗಳ ವಿಸ್ತಾರವನ್ನು ಹೆಚ್ಚಿಸಿದ ಜಸ್ಟಿಸ್ ಕೃಷ್ಣ ಐಯ್ಯರ್ ಮತ್ತು ಪಿ.ಎನ್ ಭಗವತಿ ಅವರು ಒಂದು ಸಮಯದಲ್ಲಿ ಎಲ್ಲರೂ ಸುಪ್ರೀಂ ಕೋರ್ಟಿನ ಕಡೆಗೆ ಆಶಾದಾಯಕವಾಗಿ ನೋಡುವಂತೆ ಮಾಡಿದ್ದರು. ಆದರೀಗ ಎಲೆಕ್ಟೋರಲ್ ಬಾಂಡ್, ಇವಿಎಮ್,
370ನೇ ಪರಿಚ್ಛೇದದಂತಹ ವಿಷಯಗಳೂ ಕೋರ್ಟಿನ ಕಡೆಗೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡುವುದಿಲ್ಲ.

ಜಸ್ಟೀಸ್ ಎಮ್. ಫಾತಿಮಾ ಬೀವಿ

ಪರಿಸ್ಥಿತಿ ಹೀಗಿರುವಾಗ ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಎನ್ನುವುದು ಎಷ್ಟರಮಟ್ಟಿಗೆ ಸಾರ್ವಜನಿಕರ ಗಮನ ಅಥವಾ ಕುತೂಹಲವನ್ನು ಕೆರಳಿಸುತ್ತದೆ? ಅಕಸ್ಮಾತ್ ಇದು ದೇಶದ ಗಮನ ಸೆಳೆಯದೇ ಇದ್ದರೆ ಅದರ ವೈಫಲ್ಯ ಎಲ್ಲಿ ಅಡಗಿದೆ? ಲೋಕಸಭೆ, ವಿಧಾನಸಭೆಗಳಲ್ಲಿ 33% ಮಹಿಳಾ ಪ್ರಾತಿನಿಧ್ಯ ಕೊಡಬೇಕು ಎಂದು ಪ್ರತಿಪಾದಿಸುವವರೂ ಅದರ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ನೀಡದೇ ಇದ್ದಾಗ ಇನ್ನು ಸಂಪೂರ್ಣವಾಗಿ ಅರ್ಹತೆಯನ್ನೇ ಆಧರಿಸಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಹುದ್ದೆಯ ಬಗ್ಗೆ ಜನ ತಲೆ ಕೆಡಿಸಿಕೊಳ್ಳುತ್ತಾರಾ? ಇನ್ನೂ ಎಷ್ಟೋ ಪ್ರಶ್ನೆಗಳಿರಬಹುದು ಆದರೆ ಉತ್ತರ ಒಂದೇ. ದೇಶದ ಸಂವಿಧಾನದಲ್ಲಿ ಹೇಳಲಾದ ಆದರ್ಶಗಳ ಪ್ರತಿಪಾಲನೆ ಆಗಬೇಕಾದರೆ ಶತಮಾನಗಳಿಂದಲೂ ಬೇರುಬಿಟ್ಟಿರುವ ಪೂರ್ವಾಗ್ರಹಗಳನ್ನು ಕಾಲಕಾಲಕ್ಕೆ ಒಡೆದು ಹೊಸ ಗ್ರಹಿಕೆಗಳನ್ನು ಕಟ್ಟುವ ಕೆಲಸ ಪ್ರಜ್ಞಾಪೂರ್ವಕವಾಗಿ ಆಗಲೇಬೇಕು.

70 ವರ್ಷಗಳ ಸುಪ್ರೀಂಕೋರ್ಟಿನ ಚರಿತ್ರೆಯಲ್ಲಿ ಇವತ್ತಿಗೂ ಒಬ್ಬ ಮಹಿಳಾ ಮುಖ್ಯನ್ಯಾಯಮೂರ್ತಿಯ ನೇಮಕ ಎನ್ನುವುದು ಒಂದು ಬಹುದೊಡ್ಡ ಚರ್ಚೆಯ ವಿಷಯವಾಗುತ್ತದೆ ಎಂಬ ಪ್ರಶ್ನೆ ಮುಖ್ಯವಾದದ್ದು. ಸುಪ್ರೀಂ ಕೋರ್ಟಿಗೆ 1950ರಿಂದ ಇಲ್ಲಿಯವರೆಗೆ ಒಟ್ಟು 247 ನ್ಯಾಯಾಧೀಶರು ನೇಮಕಗೊಂಡಿದ್ದಾರೆ, ಅವರಲ್ಲಿ ಮಹಿಳೆಯರು ಕೇವಲ 8. 1980ರಲ್ಲಿ ಜಸ್ಟೀಸ್ ಎಮ್. ಫಾತಿಮಾ ಬೀವಿ ದೇಶದ ಮೊದಲ ಸುಪ್ರೀಂ ಕೋರ್ಟ್ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು. ಮೊನ್ನೆಯವರೆಗೆ ಸುಪ್ರೀಂ ಕೋರ್ಟಿನ 27 ನ್ಯಾಯಾಧೀಶರಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದರು. (ಆಗಸ್ಟ್ 31ರಂದು ಮೂವರು ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದರು)

ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ಇಂದು ಮಲ್ಹೋತ್ರಾ ನಂತರ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಒಬ್ಬರೇ ಮಹಿಳೆ ಇದ್ದದ್ದು. ಇನ್ನು ಹೈಕೋರ್ಟುಗಳ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಟ್ಟು ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ 1079, ಆದರೆ 426 ಸ್ಥಾನಗಳು ಖಾಲಿ ಇವೆ. ಭರ್ತಿಯಾಗಿರುವ 653 ಸ್ಥಾನಗಳಲ್ಲಿ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಕೇವಲ 78. ಮದ್ರಾಸ್ ಹೈಕೋರ್ಟ್ 13, ಬಾಂಬೆ ಹೈಕೋರ್ಟ್ 8, ಪಂಜಾಬ್ ಹರಿಯಾಣ ಹೈಕೋರ್ಟ್ 7, ದೆಹಲಿ ಮತ್ತು ಕರ್ನಾಟಕ ತಲಾ 6, ಕೇರಳ ಮತ್ತು ಗುಜರಾತ್ ತಲಾ 5.

ಇಂದು ಮಲ್ಹೋತ್ರಾ

ಇನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸೇವಾ ಹಿರಿತನವನ್ನು ನೋಡಿದರೆ 2027ರವರೆಗಿನ ಪಟ್ಟಿ ಹೆಚ್ಚು ಕಡಿಮೆ ರೆಡಿಯಾಗಿದೆ. ಜಸ್ಟೀಸ್ ಎನ್.ವಿ ರಮಣ ನಂತರ ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಡಿ.ವೈ ಚಂದ್ರಚೂಡ್, ಜಸ್ಟೀಸ್ ಸಂಜೀವ್ ಖನ್ನಾ, ಜಸ್ಟೀಸ್ ಬಿ.ಆರ್ ಗವಾಯಿ ಮತ್ತು ಜಸ್ಟೀಸ್ ಸೂರ್ಯಕಾಂತ್. ಆದ್ದರಿಂದಲೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮುಖ್ಯನ್ಯಾಯಧೀಶರಾಗಿ ನೇಮಕವಾಗುವ ಸಂಭವವಿರುವುದು 2027ರಲ್ಲಿ.ದೇಶದ ಸಂವಿಧಾನ ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ಪರಿಸ್ಥಿತಿಯೇ ಹೀಗಿದ್ದರೆ ಇನ್ನು ಉಳಿದ ಕ್ಷೇತ್ರಗಳ ಪಾಡನ್ನು ಊಹಿಸಿಕೊಳ್ಳಬಹುದು ಕಷ್ಟವಾಗಲಾರದು.

ಇದನ್ನೆಲ್ಲ ನೋಡಿದಾಗ ದೇಶದಲ್ಲಿ ಮಹಿಳೆಯರಿಗೆ ನ್ಯಾಯಮೂರ್ತಿಗಳಾಗುವ ಅರ್ಹತೆಯೇ ಇಲ್ಲವೇನೋ ಎಂಬ ಭಾವನೆ ಬರುತ್ತದೆ ಅಥವಾ ಭಾವನೆ ಬರುವಂತೆ ಮಾಡಲಾಗುತ್ತದೆ ಎಂದೂ ಹೇಳಬಹುದು. ನಿಜ ಹೇಳಬೇಕೆಂದರೆ ಕಳೆದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟಿನಲ್ಲಾಗಲೀ, ಹೈಕೋರ್ಟುಗಳಲ್ಲಾಗಲೀ ಸೂಕ್ತ ಮಹಿಳಾ ಪ್ರಾತಿನಿಧ್ಯವನ್ನು ಒದಗಿಸುವ ಗಂಭೀರವಾದ ಪ್ರಯತ್ನಗಳೇ ನಡೆದಿಲ್ಲ. ಶತಮಾನಗಳ ಪುರುಷಪ್ರಧಾನ, ಪ್ರತಿಗಾಮಿ ಧೋರಣೆ ಸುಪ್ರೀಂ ಕೋರ್ಟಿನಲ್ಲೂ ಆಳವಾಗಿ ಬೇರೂರಿರುವುದನ್ನು ಕಾಣಬಹುದು. ಇದನ್ನು ತಿಳಿದುಕೊಳ್ಳಬೇಕಾದರೆ ಈ ನ್ಯಾಯಮೂರ್ತಿಗಳ ಆಯ್ಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು.

ಸಂವಿಧಾನದ 217 ಹಾಗೂ 124ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ನಡೆಯುತ್ತದೆ. ಈ ನೇಮಕಾತಿಗಳಲ್ಲಿ ಯಾವುದೇ ಜಾತಿ, ವರ್ಗ ಅಥವಾ ಲಿಂಗಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಈ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಧೀಶರುಗಳಾಗಿ ಬಡ್ತಿ ಹೊಂದಿದವರು ಇರಬಹುದು ಅಥವಾ ನೇರವಾಗಿ ಆಯ್ಕೆಯಾದವರೂ ಇರಬಹುದು. ಇನ್ನು ಹೈಕೋರ್ಟುಗಳಲ್ಲಿ ಸೇವಾಹಿರಿತನ ಹೊಂದಿದ ನಂತರ ಸುಪ್ರೀಂ ಕೋರ್ಟ್‌ಗೆ ಹೋದವರೂ ಇರಬಹುದು. ಅಂದರೆ ಸೇವಾಹಿರಿತನ
ಹೊಂದಿದ ಮಹಿಳಾ ನ್ಯಾಯಮೂರ್ತಿ ಕೇವಲ ನ್ಯಾಯಾಧೀಶರಾಗಿ ಕೆಲಸ ಮಾಡಿದವರೇ ಇರಬೇಕು ಎಂಬ ನಿಯಮ ಇಲ್ಲ.

ಅಂದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗಳಲ್ಲಿ ಗಣನೀಯವಾಗಿ ವಕೀಲಿವೃತ್ತಿ ನಡೆಸಿದವರನ್ನೂ ಆಯ್ಕೆ ಮಾಡಬಹುದು. ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಅತ್ಯಂತ ಯಶಸ್ವಿಯಾದ ವೃತ್ತಿನಿರತ ಮಹಿಳಾ ವಕೀಲರು ಲಭ್ಯವಿದ್ದಾಗ ಅವರನ್ನು ಕಡೆಗಣಿಸಿ ಮಹಿಳಾ ನ್ಯಾಯಮೂರ್ತಿಗಳ ಕೊರತೆ ಇದೆ ಎನ್ನುವುದು ಮಹಿಳೆಯರನ್ನು ದೂರ ಇಡುವ ಒಂದು ತಂತ್ರವಷ್ಟೇ. ಇತ್ತೀಚೆಗೆ ನಿವೃತ್ತಿ ಹೊಂದಿದ ಜಸ್ಟೀಸ್ ರೋಹಿಂಗ್ಟ್‌ನ್ ನಾರಿಮನ್, ಜಸ್ಟೀಸ್ ಯು.ಯು ಲಲಿತ್, ಜಸ್ಟೀಸ್ ಎಲ್. ನಾಗೇಶ್ವರರಾವ್ ಅವರು ಹೀಗೆ ನೇರವಾಗಿ ವಕೀಲ ವೃತ್ತಿಯಿಂದ ಆಯ್ಕೆಯಾದವರು. ಜಸ್ಟೀಸ್ ಇಂದು ಮಲ್ಹೋತ್ರಾ ಕೂಡ ವಕೀಲರಾಗಿದ್ದುಕೊಂಡು ನೇರವಾಗಿ ಆಯ್ಕೆಯಾದವರು. ಇಷ್ಟೆಲ್ಲ ಸೌಲಭ್ಯ ಇದ್ದಾಗ್ಯೂ ಮಹಿಳೆಯರ ಕೊರತೆ ಕಂಡಾಗ ಇದು ಕೇವಲ ಇಚ್ಛಾಶಕ್ತಿಯ ಕೊರತೆ ಅಲ್ಲ ಆಳವಾಗಿ ಬೇರೂರಿದ ಪುರುಷಪ್ರದಾನ ಸಮಾಜದ ಕುರುಹುಗಳಾಗಿಯೂ ಕಾಣುತ್ತದೆ.

ಬಿ.ವಿ ನಾಗರತ್ನ

ನ್ಯಾಯಮೂರ್ತಿಗಳ ಆಯ್ಕೆಯನ್ನು ಸುಪ್ರೀಂ ಕೋರ್ಟಿನ ಕೊಲಿಜಿಯಂ ನಡೆಸುತ್ತದೆ. ಈ ಕೊಲಿಜಿಯಂ ಬಗ್ಗೆ ಅನೇಕ ಪರ ಹಾಗೂ ವಿರೋಧದ ವಾದಗಳಿವೆ. ನ್ಯಾಯಮೂರ್ತಿಗಳೇ ತಮ್ಮ ಅಧೀನ ನ್ಯಾಯಾಧೀಶರನ್ನು ಆಯ್ಕೆ ಮಾಡುವುದು ಸಂವಿಧಾನಬಾಹಿರ ಮತ್ತು ಇದರಲ್ಲಿ ಪಾರದರ್ಶಕತೆ ಇರುವುದಿಲ್ಲ, ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಡಲಾಗುತ್ತದೆ ಇತ್ಯಾದಿ ಆರೋಪಗಳು ಅದರ ಮೇಲಿವೆ. ಈ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರ ಆಯ್ಕೆಯೂ ಸಹ ಇತರ ಉನ್ನತ ಹುದ್ದೆಗಳಂತೆ ಭರ್ತಿಯಾಗಬೇಕು, ಆ ಇಲಾಖೆ ಸರ್ಕಾರದ ಕಾನೂನು ಮಂತ್ರಿಗಳ ಅಡಿಯಲ್ಲಿ ಬರಬೇಕು ಎಂಬುದು ಮತ್ತೊಂದು ವಾದ. 1993ರ ಮೊದಲು ಈ ಎಲ್ಲ ಆಯ್ಕೆಗಳೂ ಕಾನೂನು ಮಂತ್ರಿಗಳ ಹಸ್ತಕ್ಷೇಪ ಹಾಗೂ ರಾಷ್ಟ್ರಪತಿಗಳ ಶಿಫಾರಸ್ಸಿನ ಮೇಲೆಯೇ ನಡೆಯುತ್ತಿದ್ದವು. ಆಗ ನಡೆದ ಕೆಲವು ಆಯ್ಕೆಗಳು ಸೇವಾಹಿರಿತನವನ್ನು ಪರಿಗಣಿಸದೇ ನಡೆದಿದ್ದವು.

ಆದರೆ 1993ರ ’ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಟ್ ಅಸೋಸಿಯೇಶನ್ ವಿರುದ್ಧ ಭಾರತ ಒಕ್ಕೂಟ’ ಕೇಸಿನಲ್ಲಿ ಸಂವಿಧಾನ ಹಾಗೂ ಕಾನೂನಿನ ಪರಿಕಲ್ಪನೆಯನ್ನು ವಿಸ್ತರಿಸುತ್ತಾ ಸುಪ್ರೀಂಕೋರ್ಟ್ ಅಧೀನ ನ್ಯಾಯಾಧೀಶರ ಆಯ್ಕೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿತು. ಈಗ ರಾಷ್ಟ್ರಪತಿಗಳು ಕೊಲಿಜಿಯಂ ನೀಡಿದ ಪಟ್ಟಿಯನ್ನು ಮರಿಪರಿಶೀಲಿಸಿ ಎಂದು ಹೇಳಬಹುದೇ ಹೊರತು ಬದಲಿಸಿ ಎನ್ನುವುದು ಕಷ್ಟ. ಈ ಆಯ್ಕೆಯ ಪಟ್ಟಿ ಕೊಲಿಜಿಯಂನ ಎಲ್ಲಾ 5 ನ್ಯಾಯಮೂರ್ತಿಗಳ ಸರ್ವಾನುಮತದ ಆಯ್ಕೆಯಾಗಿರಬೇಕು. ಇಷ್ಟಿದ್ದೂ ಇವತ್ತಿನ ದಿನಗಳಲ್ಲಿ ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಯವನ್ನು ನೋಡುತ್ತಿದ್ದೇವೆ. ಒಂದು ಸರ್ವಾಧಿಕಾರಿ ಧೋರಣೆಯ ಸರ್ಕಾರ ಇದ್ದಾಗ ಸುಪ್ರೀಂ ಕೋರ್ಟ್ ಎಷ್ಟು ನಿರ್ಭಿಡೆಯಿಂದ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ಅದರ ವಿಶ್ವಾಸಾರ್ಹತೆ ನಿಂತಿರುತ್ತದೆ.

ಮಹಿಳಾ ನ್ಯಾಯಮೂರ್ತಿಗಳು ಮತ್ತು ಅವರ ಬುದ್ಧಿಮಟ್ಟದ ಬಗ್ಗೆಯೂ ಮಾತುಗಳು ಬರುತ್ತವೆ. ಇವತ್ತಿನವರೆಗೆ ನ್ಯಾಯಾಧೀಶರ ಸ್ಥಾನ ಅಲಂಕರಿಸಿದವರೆಲ್ಲ ಅಪ್ರತಿಮ ಬುದ್ಧಿವಂತರೇನಲ್ಲ. ಸಮಾಜದ 50% ಜನಸಂಖ್ಯೆ ಹೊಂದಿದ ಮಹಿಳಾ ಸಮುದಾಯಕ್ಕೆ ನೀಡುವ ನಗಣ್ಯ ಪ್ರಾತಿನಿಧ್ಯ ಸಾಮಾಜಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ.

ಶಬರಿಮಲೈ ದೇವಸ್ಥಾನದ ಪ್ರವೇಶದ ಕೇಸಿನಲ್ಲಿ 4:1 ತೀರ್ಪಿನಲ್ಲಿ ಮಹಿಳೆ ದೇವಸ್ಥಾನ ಪ್ರವೇಶಿಸಬಾರದು ಎಂದು ಹೇಳಿದ್ದು, ಒಬ್ಬ ಮಹಿಳಾ ನ್ಯಾಯಮೂರ್ತಿ ಇದ್ದಾಗಲೇ- ಅಂತಹ ಪ್ರಾತಿನಿಧ್ಯದಿಂದ ಏನು ಉಪಯೋಗ ಎಂದು ಉಡಾಫೆಯ ಮಾತುಗಳನ್ನು ಆಡಿದವರು ಎಷ್ಟೋ ಜನರಿದ್ದಾರೆ. ಆದ್ದರಿಂದಲೇ ಪ್ರಾರಂಭದಲ್ಲೇ ಹೇಳಿದ್ದು ಪ್ರತಿಯೊಬ್ಬ ನ್ಯಾಯಮೂರ್ತಿಯ ವೈಯಕ್ತಿಕ ಅನುಭವ, ಬೆಳವಣಿಗೆ, ಸಾಮಾಜಿಕ ಸ್ಥಾನಮಾನಗಳು ಕೆಲವೊಮ್ಮೆ ಅವರ ತೀರ್ಪುಗಳಲ್ಲಿ ಪ್ರತಿಫಲಿಸುತ್ತವೆ ಎಂದು. ಹಾಗೆಂದ ಮಾತ್ರಕ್ಕೆ ಆ ಪ್ರಕ್ರಿಯೆಯಲ್ಲಯೇ ಹುಳುಕು ಹುಡುಕುವುದಲ್ಲ. ಪ್ರಜಾಪ್ರಭುತ್ವದ ಸೌಂದರ್ಯವೇ ವಿವಿಧತೆಯಲ್ಲಿದೆ. ಜಸ್ಟೀಸ್ ಬಿ.ಆರ್ ಗವಾಯಿ ಒಬ್ಬರು ಎಸ್‌ಸಿ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ, ಇನ್ನು ಎಸ್‌ಟಿ ವಿವಿಧ ಅಲ್ಪಸಂಖ್ಯಾತ, ವಿಕಲಚೇತನ ಮತ್ತು LGBTQ ಮುಂತಾದ ಹಿನ್ನೆಲೆಯ ನ್ಯಾಯಮೂರ್ತಿಗಳನ್ನು ಈ ದೇಶ ನೋಡುವುದು ಯಾವಾಗ? ಸುಪ್ರೀಂ ಕೋರ್ಟ್ ತನ್ನ ಪೂರ್ವಾಗ್ರಹಗಳ ಪೊರೆ ಹರಿದುಕೊಳ್ಳುವುದು ಯಾವಾಗ?

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...