Homeಮುಖಪುಟನಡುವೆ ಸುಳಿವ ಆತ್ಮ ಎಡವೋ? ಬಲವೋ?

ನಡುವೆ ಸುಳಿವ ಆತ್ಮ ಎಡವೋ? ಬಲವೋ?

- Advertisement -
- Advertisement -

ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣಗಳ ಬೌದ್ಧಿಕ ವಲಯಗಳಲ್ಲಿ ಎಡ ಮತ್ತು ಬಲದ ಕುರಿತು ಜಿಜ್ಞಾಸೆ ಮುನ್ನೆಲೆಗೆ ಬರುತ್ತದೆ. ಇದು ಬಹುತೇಕ ಸಂದರ್ಭಗಳಲ್ಲಿ ಒಂದು ಸ್ಪಷ್ಟ ಚರ್ಚೆ, ಸಂವಾದದ ರೂಪವನ್ನು ಪಡೆಯದೆ ಬರಿದೇ ಮತ್ತೊಬ್ಬರನ್ನು ತೆಗಳುವ, ಹಂಗಿಸುವ ಮತ್ತು ಕೀಳುಗಯ್ಯುವ ಸ್ವರೂಪವನ್ನೇ ಪಡೆದಿರುತ್ತದೆ. ಕೆಸರೆರಚಾಟದ ಈ ವಾಗ್ವಾದಗಳಲ್ಲಿನ ವಾದಗಳನ್ನು ಮೂರಾಗಿ ವಿಂಗಡಿಸಬಹುದು –

ಅ) ತಮ್ಮನ್ನು ತಾವು ಬಲಪಂಥೀಯರು ಎಂದು ಕರೆಸಿಕೊಳ್ಳಲು ಒಪ್ಪದೆ ರಾಷ್ಟ್ರವಾದಿ, ಹಿಂದುತ್ವವಾದಿ, ಸುಧಾರಣಾವಾದಿ ಮುಸ್ಲಿಂ, ಲಿಬರಲ್ ಕ್ರಿಶ್ಚಿಯನ್, ಕನ್ನಡ ಕುಲೋದ್ಭವ ಮುಂತಾದ ಸಾಂಸ್ಕೃತಿಕ ಗುರುತುಗಳಿಂದ ಕರೆಸಿಕೊಳ್ಳಲು ಬಯಸುವವರ ವಾದಗಳು.

ಆ) ತಮ್ಮ ಚಿಂತನೆಗಳನ್ನು ಎಡ ಅಥವಾ ಬಲ ಎಂದು ಕಪ್ಪುಬಿಳುಪಿನಂತೆ ವಿಂಗಡಿಸುವುದನ್ನು ವಿರೋಧಿಸುತ್ತಲೇ ತಮ್ಮದೇ ಬೇರೆ ಪಂಥವಿದೆಯೆಂದು ಸಾರುವ, ಆದರೆ, ಆ ಪಂಥವನ್ನು ಸಂಸ್ಕೃತಿಯ ಪರಿಭಾಷೆಗಳಲ್ಲಿ ವ್ಯಾಖ್ಯಾನಿಸಲು ಒಪ್ಪದ ವಾದಗಳು.

ಇ) ಎಡಪಂಥೀಯರು ತಮ್ಮ ಎಡಪಂಥೀಯತೆಯ ಕುರಿತು ವಿವಿಧ ಅನ್ಯ ಬಗೆಯ ಎಡಪಂಥೀಯರು ಅನುಮಾನ ವ್ಯಕ್ತಪಡಿಸಿದಾಗ ಹೂಡುವ ವಾದಗಳು.

   ಮುಂದುವರಿಯುವ ಮೊದಲು, ಮೇಲಿನ ವಿಂಗಡಣೆಯ ಕುರಿತು ಮುಖ್ಯವಾದ ಎರಡು ಅಂಶಗಳನ್ನು ಪ್ರಸ್ತಾಪಿಸಿ, ಅವನ್ನು ವಿವರಿಸುವುದು ಸೂಕ್ತ. ಮೊದಲನೆಯದಾಗಿ, ಮೇಲಿನ ವಿಂಗಡಣೆಯಲ್ಲೆಲ್ಲೂ ತಮ್ಮ ಬಲಪಂಥೀಯತೆಯನ್ನು ಒಪ್ಪಿಕೊಂಡು ವಾದ ಹೂಡುವವರ ಪ್ರಸ್ತಾಪವೇ ಇಲ್ಲ. ಇಂದು ವಿಶ್ವಾದ್ಯಂತ, ವಿಶೇಷವಾಗಿ ಯುರೋಪ್‌ಗೆ ಹೊರತಾದ ನಾಡುಗಳಲ್ಲಿ ತಮ್ಮನ್ನು ತಾವು ಬಲಪಂಥೀಯರೆಂದು ಗುರುತಿಸಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇನ್ನು ಎರಡನೆಯದಾಗಿ, ಸಂಖ್ಯೆಯ ದೃಷ್ಟಿಯಿಂದ ಮೂರನೆಯ ವಿಭಾಗದವರ ಅಳವು ಕಡಿಮೆಯಿದ್ದರೂ ಎಡ-ಬಲದ ಒಟ್ಟು ಸಂಕಥನವನ್ನು ರೂಪಿಸುವ, ಚರ್ಚೆಯನ್ನು ದಿಕ್ಸೂಚಿಸುವ ಅಗಾಧ ಶಕ್ತಿ ಇವರಲ್ಲಿದೆ! ಕಾರಣ, ಎಡ ಮತ್ತು ಬಲ ಎಂಬ ಪರಿಭಾಷೆಗಳನ್ನು ದರ್ಶನೋಪಾದಿಯಲ್ಲಿ ಕಟ್ಟಿಬೆಳೆಸಿದವರಲ್ಲಿ ಬಹುತೇಕರು ತಮ್ಮನ್ನು ತಾವು ಎಡಪಂಥೀಯರೆಂದು ಗುರುತಿಸಿಕೊಂಡವರೇ ಆಗಿದ್ದಾರೆ. ಅಲ್ಲದೆ, ಈ ಪರಿಭಾಷೆಗಳಿಗೆ ಅಕೆಡೆಮಿಕ್ ಸ್ವರೂಪದ ಘನತೆ, ಗಾಂಭೀರ್ಯವನ್ನು ತಂದುಕೊಡುವಲ್ಲಿ ಎಡಪಂಥೀಯರ ಕೊಡುಗೆ ಸಾಕಷ್ಟಿದೆ. ಹಾಗಾಗಿ, ಎಡ ಮತ್ತು ಬಲದ ಕುರಿತು ಎಡಪಂಥೀಯರ ಸ್ಥೂಲ ನೋಟವನ್ನು ಅರಿಯುವುದು, ಪ್ರಸ್ತುತ ಚರ್ಚೆಗೆ ಮುಖ್ಯವಾಗುತ್ತದೆ.

ಎಡಪಂಥೀಯರ ಕಣ್ಣಲ್ಲಿ ಎಡ ಮತ್ತು ಬಲ

   ಪ್ರಸ್ತುತ ಜಾಗತಿಕ ರಾಜಕೀಯದ ಸನ್ನಿವೇಶದಲ್ಲಿ ಎಡ ಮತ್ತು ಮಾರ್ಕ್ಸ್‌ವಾದ ಸಮಾನಾರ್ಥಕ ಪರಿಭಾಷೆಗಳೇನೋ ಎಂಬಂತೆ ವ್ಯಾಖ್ಯಾನಕ್ಕೊಳಪಟ್ಟಿವೆ. ಈಗಿನ ಭಾರತೀಯ ಸಂದರ್ಭದಲ್ಲಂತೂ ಎಡಪಕ್ಷಗಳು ಎಂದರೆ ಕಮ್ಯುನಿಸ್ಟ್ ಪಕ್ಷಗಳು ಎನ್ನುವ ಅರ್ಥವನ್ನೇ ಕೊಡುತ್ತದೆ. ಆದರೆ, ಇದೇ ಭಾರತೀಯ ರಾಜಕಾರಣದ ಇತಿಹಾಸದಲ್ಲಿ ತಮ್ಮನ್ನು ತಾವು ವಿಶಾಲಾರ್ಥದಲ್ಲಿ ಎಡ ಎಂದು ಗುರುತಿಸಿಕೊಂಡರೂ ಮಾರ್ಕ್ಸ್‌ವಾದಿ ಎಂದು ಗುರುತಿಸಿಕೊಳ್ಳಲು ಒಪ್ಪದವರ ಸಂಖ್ಯೆ ದೊಡ್ಡದಿತ್ತು. ಇವರಲ್ಲಿ ಗಾಂಧಿವಾದಿ, ಅಂಬೇಡ್ಕರ್‌ವಾದಿ, ಲೋಹಿಯಾ ಸಮಾಜವಾದಿ, ನೆಹರೂವಾದಿ ಮುಂತಾದವರನೇಕರಿದ್ದರು. ಈಗಲೂ ಅಂಬೇಡ್ಕರ್‌ವಾದಿಗಳು ಎಡಪಂಥೀಯ ಚಳವಳಿಗಳ ಜೊತೆಗೆ ಗುರುತಿಸಿಕೊಳ್ಳುವವರಾದರೂ ಮಾರ್ಕ್ಸ್‌ವಾದ ದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಇನ್ನು, ಮಾರ್ಕ್ಸ್‌ವಾದದೊಂದಿಗೆ ಗುರುತಿಸಿಕೊಳ್ಳುವ ಎಡಪಂಥೀಯರು ಕೂಡ ಮಾರ್ಕ್ಸ್‌ವಾದ ಮತ್ತು ಒಟ್ಟು ಕಮ್ಯುನಿಸ್ಟ್ ತತ್ವ ಮತ್ತು ಕ್ರಿಯೆಯ ನೆಲೆಗಟ್ಟಿನಲ್ಲಿ ಹತ್ತು ಹಲವು ಉಪಪಂಥಗಳಾಗಿ ಹಂಚಿಹೋಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಬಂಗಾಳದಲ್ಲಿ ಎಡಪಂಥವನ್ನು ಹೆಡೆಮುರಿಕಟ್ಟುವೆನೆಂದು ಪ್ರತಿಜ್ಞೆ ಮಾಡಿದ್ದ ಮಮತಾ ದೀದಿಯನ್ನು ಎಡಪಂಥೀಯ ಮಾವೋವಾದಿಗಳೇ ಬೆಂಬಲಿಸಿ, ಎಡಪಂಥೀಯ ಸಿಪಿಎಂ-ಸಿಪಿಐ ಪಕ್ಷಗಳ ವಿರುದ್ಧವೇ ಜನಾಂದೋಲನಕ್ಕೆ ಕರೆನೀಡಿದ್ದರು!  ಇದರ ತಾತ್ಪರ್ಯ ಇಷ್ಟೇ – ಎಡಪಂಥವೆಂದರೆ ಕೇವಲ ಮಾರ್ಕ್ಸ್‌ವಾದವಲ್ಲ, ಮಾರ್ಕ್ಸ್‌ವಾದವು ಕೂಡ ಕೇವಲ ಒಂದೇಒಂದು ನಿರೂಪಣೆಯನ್ನು ಹೊಂದಿಲ್ಲ. ಎಂದಿಗೂ ಒಂದುಗೂಡಲಾರವೇನೋ ಎಂಬಂಥ ಬಿರುಕುಗಳನ್ನು ಈ ಪಂಥ ಹೊಂದಿದ್ದರೂ, ಎಡ ಮತ್ತು ಬಲದ ಇವರ ವ್ಯಾಖ್ಯಾನಗಳಲ್ಲಿ ಕೆಲವು ಸಮಾನ ಅಂಶಗಳಿವೆ. ಅವು ಇಂತಿವೆ –

   ಅ) ಜನರ ದಿನನಿತ್ಯದ ಅಗತ್ಯಗಳಾದ ಊಟ, ಬಟ್ಟೆ, ಸೂರು, ಕೆಲಸಗಳ ಕುರಿತು ಗಂಭೀರ ಚಿಂತನೆ ನಡೆಸದೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಆಶಯಗಳನ್ನು ಹೊಂದದೆ, ಧರ್ಮ, ಭಾಷೆ, ಜನಾಂಗ, ರಾಷ್ಟ್ರ ಮುಂತಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಗತಿಗಳ ತಳಪಾಯದ ಮೇಲೆ ತಮ್ಮ ರಾಜಕೀಯ ಸಂಕಥನವನ್ನು ಕಟ್ಟಿ, ಬೆಳೆಸುವ ಪಂಥವೇ ಬಲಪಂಥ. ಇದರ ವಿರುದ್ಧ ದಿಕ್ಕಿನಲ್ಲಿ ರಾಜಕಾರಣ ಮಾಡುವ ಪಂಥವೇ ಎಡಪಂಥ.

   ಆ) ಎಡಪಂಥೀಯ ಚಿಂತನೆಯು ಮಾನವ ನಾಗರಿಕತೆಯ ಚಾರಿತ್ರಿಕ ಪ್ರಗತಿಯಲ್ಲಿ ನಂಬಿಕೆಯಿಟ್ಟಿರುತ್ತದೆ ಹಾಗೂ ಜಗತ್ತಿನ ಎಲ್ಲ ಸಮಾಜಗಳಲ್ಲೂ ಈ ಪ್ರಗತಿ ಸಾಧ್ಯ ಎಂದು ನಂಬುತ್ತದೆ. ಈ ಪ್ರಗತಿಯ ಕಲ್ಪನೆ ಮತ್ತು ಸಾಧನೆಯಲ್ಲಿ ಆಧುನಿಕ ವಿಜ್ಞಾನದ ಕೊಡುಗೆ ಮಹತ್ವದ್ದು. ಈ ಚಿಂತನಾಧಾರೆಯನ್ನು ಪ್ರೊಗ್ರೆಸಿವ್, ಪ್ರಗತಿಪರ ಎಂದೆಲ್ಲ ಕರೆಯಲಾಗುವುದು. ಇದಕ್ಕೆ ವಿರುದ್ಧವಾಗಿ ಬಲಪಂಥೀಯ ಚಿಂತನೆಯು, ಭೂಗೋಳ ನಿರ್ದಿಷ್ಟ ಸಂಸ್ಕೃತಿ-ಸಮಾಜಗಳ ಪ್ರತ್ಯೇಕತೆ, ವಿಶಿಷ್ಟತೆ ಹಾಗೂ ವಿಸ್ಮೃತಿಗೆ ಸರಿದ ವೈಭವಯುಗದ ಪ್ರತಿಷ್ಠಾಪನೆಯಲ್ಲಿ (ಸಾಮಾನ್ಯವಾಗಿ ಅವುಗಳಲ್ಲಿ ಒಂದು ಯಜಮಾನಿಕೆಯ ಸಂಸ್ಕೃತಿಯನ್ನು ಏಕೀಕೃತವಾಗಿ ಬಿಂಬಿಸುವಲ್ಲಿ) ನಂಬಿಕೆ ಉಳಿಸಿಕೊಂಡಿರುತ್ತದೆಯಲ್ಲದೆ, ಒಂದು ಸಮಾಜದಲ್ಲಿನ ಪ್ರಗತಿಯ ಕಲ್ಪನೆಯು ಮತ್ತೊಂದು ಸಮಾಜಕ್ಕೆ ಅನ್ವಯಿಸದು ಎಂದೂ ಭಾವಿಸುತ್ತದೆ. ಆಧುನಿಕ ವಿಜ್ಞಾನದ ವಿಧಾನಕ್ರಮದಲ್ಲಿ ಇದಕ್ಕೆ ಅನುಮಾನ (ಸಂಪೂರ್ಣ ನಿರಾಕರಣೆ ಅಲ್ಲ). ಈ ಚಿಂತನಾಧಾರೆಯನ್ನು ಕನ್ಸರ್ವೆಟೀವ್, ಸಂಪ್ರದಾಯನಿಷ್ಠ, ಪ್ರತಿಗಾಮಿ ಎಂದೆಲ್ಲ ಕರೆಯಲಾಗುವುದು.

   ಮೇಲಿನ ಈ ಎರಡೂ ವಿಚಾರಗಳನ್ನು ಮಾರ್ಕ್ಸ್‌ವಾದಿಗಳು, ಅಂಬೇಡ್ಕರ್‌ವಾದಿಗಳು, ಲೋಹಿಯಾವಾದಿಗಳು ಮತ್ತು ತಕ್ಕಮಟ್ಟಿಗೆ ಗಾಂಧಿವಾದಿಗಳು ಒಪ್ಪುತ್ತಾರೆ ಹಾಗೂ, ಇವರೆಲ್ಲರೂ ಈ ಅರ್ಥದಲ್ಲಿ ಎಡಪಂಥೀಯರೇ ಆಗಿದ್ದಾರೆ. ಆದರೆ, ಮಾರ್ಕ್ಸ್‌ವಾದಿಗಳು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಅವರಿಗೆ ಮೇಲಿನ ಈ ಎರಡೂ ಅಂಶಗಳು ಮೇಲ್‌ರಚನೆಗಳು. ಇವನ್ನು ಗಾಢವಾಗಿ ಪ್ರಭಾವಿಸುವ ಮೂಲರಚನೆಯೊಂದಿದೆ. ಅದು, ಉತ್ಪಾದನೆಯ ವ್ಯವಸ್ಥೆ ಮತ್ತು ಸಂಬಂಧಗಳು. ಸರಳವಾಗಿ ಆರ್ಥಿಕ ವ್ಯವಸ್ಥೆ ಎನ್ನಬಹುದು. ಈ ಮೂಲರಚನೆಯು ಮೇಲ್‌ರಚನೆಗಳ ಪ್ರಭಾವಕ್ಕೊಳಗಾಗಿ ಮಾರ್ಪಡುತ್ತದೆ ಎಂದು ಹೇಳುವ ಮಾರ್ಕ್ಸ್‌ವಾದಿಗಳೂ ಇದ್ದಾರೆ. ಈ ಆಳದ ವಿವರಗಳು ಇನ್ನಷ್ಟು ಸಂಕೀರ್ಣವಾದವು. ಅದು ಏನೇ ಇರಲಿ, ಒಟ್ಟಿನಲ್ಲಿ ಮಾರ್ಕ್ಸ್‌ವಾದಿಗಳಿಗೆ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ಆಗದೆ ಮಿಕ್ಕ ಬದಲಾವಣೆಗಳೆಲ್ಲವೂ ಕೇವಲ ಸುಧಾರಣೆಗಳು ಮತ್ತು ಹೊಸ ಬಗೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಶೋಷಣೆಗಳನ್ನು ಪೊರೆಯುವಂಥವು. ಈ ಹಿನ್ನೆಲೆಯಿಂದ ನೋಡಿದಾಗ ಅಂಬೇಡ್ಕರ್, ಗಾಂಧಿ, ನೆಹರು, ಲೋಹಿಯಾವಾದಿಗಳು ಮಾರ್ಕ್ಸ್‌ವಾದಿಗಳಿಗಿಂತ ಭಿನ್ನ ನಿಲುವು ತಾಳುವುದು ಗಮನಕ್ಕೆ ಬರುತ್ತದೆ. ಈ ಮೇಲ್‌ರಚನೆ ಮತ್ತು ಮೂಲರಚನೆಯ ತಾತ್ವೀಕರಣದಲ್ಲಿ ಜಾತಿಗೆ ಸರಿಯಾದ ಸ್ಥಾನ ದೊರಕಿಲ್ಲವೆಂದೂ, ಭಾರತದ ಸಮಾಜ ಮತ್ತು ಸಂಸ್ಕೃತಿಯನ್ನು ವಿವರಿಸುವಲ್ಲಿ ಜಾತಿಗೆ ಮಹತ್ವ ನೀಡಲಾಗಿಲ್ಲವೆಂದೂ ಅಂಬೇಡ್ಕರ್ ಸರಿಯಾಗೇ ಬೊಟ್ಟುಮಾಡಿ ತೋರಿಸಿದ್ದನ್ನಿಲ್ಲಿ ನೆನೆಯಬಹುದು. ಅಲ್ಲದೆ, ಉತ್ಪಾದನೆಯ ವ್ಯವಸ್ಥೆ ಮತ್ತು ಸಂಬಂಧಗಳ ವ್ಯಾಖ್ಯಾನ ಹಾಗೂ ನಿರೀಕ್ಷೆಗಳ ಆಧಾರದಲ್ಲಿ ಲಿಬರಲ್, ಲೆಫ್ಟ್-ಲಿಬರಲ್, ಲಿಬರಲ್-ಲೆಫ್ಟ್ ಮುಂತಾದ ಪರಿಕಲ್ಪನೆಗಳು ರೂಪುಗೊಂಡಿವೆ. ಆದರೆ, ಮತ್ತೆ ಮತ್ತೆ ಬೂದಿಯಿಂದ ಎದ್ದುಬರುತ್ತಿರುವ ಎಡ-ಬಲದ ಚರ್ಚೆಯು ಈ ಆರ್ಥಿಕತೆಯ ಆಯಾಮವನ್ನು ಹೊಂದಿಲ್ಲವಾದ್ದರಿಂದ, ಕೇವಲ ಆ ಎರಡು ಸಮಾನ ಅಂಶಗಳನ್ನಷ್ಟೇ ʼಎಡಪಂಥೀಯರ ಎಡ-ಬಲದ ವ್ಯಾಖ್ಯಾನʼವೆಂದು ಮುಂದಿನ ಚರ್ಚೆಗೆ ಪರಿಗಣಿಸಲಾಗಿದೆ.

ಇವುಗಳ ಜೊತೆಗೆ ಹಲವು ಸಮುದಾಯಗಳ ಹಕ್ಕುಗಳಿಗೆ ಹೋರಾಟ ಮಾಡುವವರು ತಮ್ಮನ್ನು ‘ನ್ಯೂ ಲೆಫ್ಟ್’ ಎಂದು ಕರೆದುಕೊಂಡದ್ದೂ ಇದೆ. ಮಹಿಳಾ, ಬುಡಕಟ್ಟು, ಅಲ್ಪಸಂಖ್ಯಾತ ಧರ್ಮ-ಜಾತಿ ಸಮುದಾಯಗಳು, ಎಲ್ ಜಿ ಬಿ ಟಿ ಹೀಗೆ ಹಲವು ಅಂಚಿನಲ್ಲುಳಿದ ಸಮುದಾಯಗಳ ಹಕ್ಕನ್ನು ಸಮಾಜ ಮತ್ತು ಪ್ರಭುತ್ವ ಹಲವು ಕಾರಣಗಳಿಗೆ ಮೊಟಕುಗೊಳಿಸುವುದನ್ನು/ನಿಯಂತ್ರಿಸಿರುವುದನ್ನು ವಿರೋಧಿಸಿ ಆ ಹಕ್ಕುಗಳ ಮರುಸ್ಥಾಪನೆಗೆ ಹೋರಾಡುವ ಒಂದು ವಲಯ ಸಾಂಪ್ರದಾಯಿಕ ಎಡಪಂಥಕ್ಕೆ ಹೋಲಿಸಿದರೆ ಹಲವು ರೀತಿಯಲ್ಲಿ ಭಿನ್ನಾವಾಗಿದೆ.

ಚರ್ಚೆಯನ್ನು ಮುಂದುವರಿಸುತ್ತ

   ಎಡ ಮತ್ತು ಬಲದ ಕುರಿತು ಎಡಪಂಥೀಯರ ವ್ಯಾಖ್ಯಾನವೇನು ಎಂಬುದನ್ನು ನೋಡಾಯಿತು. ಇಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ಎಡಪಂಥೀಯರ ಆ ವ್ಯಾಖ್ಯಾನವನ್ನೇ ಎಲ್ಲರು ಒಪ್ಪಬೇಕೇ? ನಮ್ಮ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಒಲವು-ಸೆಳವುಗಳನ್ನು ಬೇರೆ ಬಗೆಯಲ್ಲಿ ವ್ಯಾಖ್ಯಾನಿಸಬಹುದಲ್ಲವೇ? ಅವರು ಎಸೆದ ಚಂಡಿನೊಂದಿಗೇ ಎಲ್ಲರೂ ಆಡಬೇಕೆನ್ನುವುದು ಎಷ್ಟು ಸರಿ? ಇವೆಲ್ಲ ಸಮಂಜಸವಾದ ಪ್ರಶ್ನೆಗಳೇ ಆಗಿವೆ. ಎಡಪಂಥೀಯರ ಎಡ-ಬಲದ ವ್ಯಾಖ್ಯಾನವನ್ನು ಎರಡು ರೀತಿಯಲ್ಲಿ ಎದುರಾಗಬಹುದು. ಒಂದು, ಎಡ-ಬಲದ ಒಟ್ಟು ಪರಿಭಾಷೆ, ಪರಿಕಲ್ಪನೆಗಳನ್ನೇ ಅಲ್ಲಗಳೆಯುವುದು, ಅದರ ಬದಲು ಜನರ ಸಾಮಾಜಿಕ ಪ್ರಜ್ಞೆಯನ್ನು ಬೇರೆ ಅಳತೆಗೋಲುಗಳಿಂದ ವಿಂಗಡಿಸುತ್ತೇವೆ ಎನ್ನುವುದು. ಎರಡನೆಯ ರೀತಿ, ಎಡ-ಬಲವೆಂಬ ಪರಿಭಾಷೆಯನ್ನು ಒಪ್ಪುತ್ತಲೇ ಅದರ ವ್ಯಾಖ್ಯಾನವನ್ನು ತಿದ್ದುವುದು. ಮೊದಲನೆಯ ದಾರಿಗೆ, ಜನರನ್ನು ಹಿಂದೂರಾಷ್ಟ್ರವಾದಿಗಳು ಮತ್ತು ಹಿಂದೂರಾಷ್ಟ್ರದ್ರೋಹಿಗಳು ಎಂದು ವಿಂಗಡಿಸುವುದನ್ನು ಉದಾಹರಿಸಬಹುದು. ಈ ವಿಂಗಡಣೆಯ ಪ್ರಕಾರ ಹಿಂದೂರಾಷ್ಟ್ರವಾದಿಗಳ ಕಣ್ಣಲ್ಲಿ ಗಾಂಧಿ, ಅಂಬೇಡ್ಕರ್, ನೆಹರು, ಮಾರ್ಕ್ಸ್‌ವಾದಿಗಳೂ ರಾಷ್ಟ್ರದ್ರೋಹಿಗಳಾಗುತ್ತಾರೆ, ಹಿಂದೂರಾಷ್ಟ್ರವನ್ನು ವಿರೋಧಿಸುತ್ತಲೇ ಅದೇ ಬಗೆಯ ರಾಜಕಾರಣವನ್ನು ಮಾಡುತ್ತ ಕನ್ನಡ ರಾಷ್ಟ್ರವಾದವನ್ನು ಮುಂದಿಡುವವರೂ ರಾಷ್ಟ್ರದ್ರೋಹಿಗಳಾಗುತ್ತಾರೆ. ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ ಸಕಲವನ್ನೂ ಸಮರ್ಪಿಸಲು ಅಣಿಗೊಂಡ ಪ್ರಜೆಗಳನ್ನು ಸೃಷ್ಟಿಸಿದರೆ ಸಾಕು, ಊಟ, ಬಟ್ಟೆ, ಸೂರು, ಸಮಾನತೆಯ ಕೂಗುಗಳು ಗೌಣವಾಗುವವು. ಹೀಗೆ ಎಡಪಂಥೀಯ ಎಡ-ಬಲದ ಪರಿಭಾಷೆಗಳನ್ನೇ ಅಲ್ಲಗಳೆದು, ಪರ್ಯಾಯ ಪರಿಭಾಷೆಗಳನ್ನು ಜನರ ಮೆದುಳುಗಳಲ್ಲಿ ಬಿತ್ತುವ ಕೆಲಸದಲ್ಲಿ ʼಬಲಪಂಥೀʼಯರು ತೊಡಗಿದ್ದಾರೆ. ಅವರಲ್ಲಿ ಅನೇಕರಿಗೆ ಕನಿಷ್ಠಪಕ್ಷ ತಾವು ಮಾಡುತ್ತಿರುವ ರಾಜಕಾರಣದ ಬಗ್ಗೆಯಾದರೂ ಸ್ಪಷ್ಟತೆ ಇದೆ.

PC: dna india (ಸಾಂದರ್ಭಿಕ ಚಿತ್ರ)

   ಎಡ-ಬಲದ ಚರ್ಚೆಯಲ್ಲಿ ಕೆಲವೊಮ್ಮೆ ಬಹಳ ಸಮಸ್ಯಾತ್ಮಕವಾಗಿ ಕಾಣುವುದು, ಈ ವಿಂಗಡಣೆಯನ್ನು ಒಪ್ಪದ, ಆದರೆ ತಮ್ಮ ಪಂಥವನ್ನು ಸಂಸ್ಕೃತಿಯ ಪರಿಭಾಷೆಗಳಲ್ಲಿ ವ್ಯಾಖ್ಯಾನಿಸಲೂ ಹಿಂದುಮುಂದು ನೋಡುವ ಸೊ ಕಾಲ್ಡ್ ʼಸೆಕ್ಯುಲರ್ʼ ಚಿಂತಕರ ಧೋರಣೆಗಳು. (ಕೆಲವೊಮ್ಮೆ ಅವರು ತಮ್ಮನ್ನು ಸೆಕ್ಯುಲರ್ ಎಂದು ಕರೆದುಕೊಳ್ಳುವುದಕ್ಕೂ ಹಿಂಜರಿಯುತ್ತಾರೆ). ತಾವು ಯಾವ ಪಂಥಕ್ಕೂ ನಿಷ್ಠರಲ್ಲ, ಸತ್ಯವನ್ನು ಮುಖಕ್ಕೆ ಹೊಡೆಯುವ ಹಾಗೆ ಹೇಳುವ ಧೈರ್ಯವುಳ್ಳವರು ಎಂದು ತಮ್ಮನ್ನು ತಾವು ಪ್ರಶಂಸೆ ಮಾಡಿಕೊಳ್ಳುವುದರಲ್ಲಿ ಖಂಡಿತಾ ಪ್ರಾಮಾಣಿಕತೆ ಇದೆ. ಆದರೆ ಈ ಪ್ರಾಮಾಣಿಕತೆಯು ಒಂದು ಗಟ್ಟಿಯಾದ ತಾತ್ವಿಕತೆಯನ್ನು ಆನದೇ ಹೋದರೆ ಅದು ಮಕ್ಕಳ ಮುಗ್ಧತೆಯನ್ನೇ ಹೋಲುತ್ತದೆ. ಮಕ್ಕಳ ಮುಗ್ಧತೆಯು ನೋಡಲು ಚಂದ. ಆದರೆ, ಲೋಕವ್ಯವಹಾರದಲ್ಲಿ ಅದು ಉಪಯೋಗಕ್ಕೆ ಬಾರದು. ಹಾಗಾಗಿ ಈ ಪಂಥದವರು ಎಡ-ಬಲದ ಪರಿಭಾಷೆಯನ್ನು ಅಲ್ಲಗಳೆಯುವುದಾದರೆ ಅದಕ್ಕೆ ಪರ್ಯಾಯ ಪರಿಭಾಷೆಗಳನ್ನು ಕಟ್ಟಿಬೆಳೆಸಬೇಕು. ಅಥವಾ, ಎಡ-ಬಲದ ಪರಿಭಾಷೆಯನ್ನು ಒಪ್ಪಿ ಅದನ್ನು ಹಾಗೆ ವ್ಯಾಖ್ಯಾನಿಸುವುದಲ್ಲ, ಬದಲಿಗೆ ಹೀಗೆ ಎಂದು ವಿವರಿಸಬೇಕು. ಈ ಎರಡನೆಯ ದಾರಿಯಲ್ಲಿ ಸ್ತ್ರೀವಾದಿಗಳು ಕಾಣಿಸುತ್ತಾರೆ. ಇವರು ಕಟ್ಟಿ, ರೂಪಿಸಿದ ತಾತ್ವಿಕತೆಯು ಘನವಾದದ್ದಾಗಿದೆ. ಆದರೆ, ಇವೆರಡನ್ನೂ ಮಾಡದೆ ತಮ್ಮದು ಎಡವೂ ಅಲ್ಲ, ಬಲವೂ ಅಲ್ಲ, ಅವೆರಡರಿಂದಲೂ ಸಮಾನ ದೂರವೆಂದು ಭಾವಾವೇಶದಿಂದ ಮಾತನಾಡುವುದು ಒಂದು ಆರೋಗ್ಯಪೂರ್ಣ ಸಂವಾದಕ್ಕೆ ಎಡೆಮಾಡಿಕೊಡುವುದಿಲ್ಲ. ಅಲ್ಲದೆ ಇಂತಹ ಮಾತುಗಳು, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ, ಆ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಅಧಿಕಾರ ಸಂರಚನೆಯ ಪರಿಪ್ರೇಕ್ಷದಲ್ಲಿ ದೃಢ ನೈತಿಕ ತೀರ್ಮಾನವನ್ನು ತೆಗೆದುಕೊಳ್ಳಲು ನೆರವಿಗೆ ಬರುವುದಿಲ್ಲ. ನೈತಿಕತೆಯು ದೇಶ, ಕಾಲ, ಸಂದರ್ಭ ಮತ್ತು ಭೌತಿಕ ವಾಸ್ತವಕ್ಕೆ ಅತೀತವಾಗಿರುವ ಮೌಲ್ಯವೇ? ಹೌದು ಎಂದಾದರೆ ಅದು ಎಲ್ಲ ಮನುಷ್ಯರಲ್ಲೂ ಸಮಾನವಾಗಿದೆ ಎಂದು ಭಾವಿಸಲಾದ ʼಮಾನವೀಯತೆʼಯ ನೆಲೆಯಲ್ಲಷ್ಟೇ ಸಾಧ್ಯ. ಎಡಪಂಥೀಯರ ಎಡ-ಬಲದ ವ್ಯಾಖ್ಯಾನದಲ್ಲಿ, ವೈಶ್ವಿಕ ತತ್ವವಾದ ಮಾನವೀಯತೆಯ ಆಧಾರದಲ್ಲಿ ರೂಪುಪಡೆಯಬಲ್ಲ ಸಮಾಜವನ್ನು ಕನಸುವವರು ಯಾವ ಪಂಥದವರು?

ಒಂದು ನಿದರ್ಶನದೊಂದಿಗೆ ಮುಕ್ತಾಯ

   ಭಿನ್ನ ಕೋಮಿನ ಇಬ್ಬರು ವ್ಯಕ್ತಿಗಳ ನಡುವೆ ಆಸ್ತಿಯ ವಿಚಾರವಾಗಿ ಜಗಳವಾಗುತ್ತದೆ. ಒಬ್ಬ ಇನ್ನೊಬ್ಬನನ್ನು ಕೊಲ್ಲುತ್ತಾನೆ. ಇದಕ್ಕೆ ಕೋಮುಬಣ್ಣವನ್ನು ಬಳಿದು, ಕೋಮುಗಲಭೆ ಉಂಟುಮಾಡುವಲ್ಲಿ ಸಂಘಟನೆಯೊಂದು ಯಶಸ್ವಿಯಾಗುತ್ತದೆ. ಈ ಗಲಭೆಯಲ್ಲಿ ಕೊಂದವನ ಕೋಮಿನ ಒಬ್ಬಳು ಯುವತಿ ಹತಳಾಗುತ್ತಾಳೆ. ಈ ಎರಡೂ ಕೊಲೆಗಳನ್ನು ಹೇಗೆ ನೋಡಬೇಕೆಂಬುದು ಎಡಪಂಥೀಯರಿಗೆ ಗೊತ್ತಿರುತ್ತದೆ. ಯಾರನ್ನು ಎಡಪಂಥೀಯರು ಬಲಪಂಥೀಯರೆಂದು ಗುರುತಿಸುತ್ತಾರೋ ಅಂಥವರಿಗೂ ಗೊತ್ತಿರುತ್ತದೆ. ಎರಡೂ ಪಂಥಗಳನ್ನು ನಿರಾಕರಿಸುವ ಸೋ ಕಾಲ್ಡ್ ʼಸೆಕ್ಯುಲರ್ʼ ಪಂಥೀಯರಿಗೂ ಗೊತ್ತಿರಬೇಕು, ಅಲ್ಲವೇ?

ಅಮರ್ ಹೊಳೆಗದ್ದೆ

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...