Homeಕರ್ನಾಟಕಗೌರವಾನ್ವಿತ ಜಸ್ಟೀಸ್‌ ದಾಸ್ ವಿರುದ್ಧ ದ್ವೇಷ ಕಾರಿದ ಮತೀಯವಾದಿ ಸಂಘಟನೆ; ಕ್ರಮಕ್ಕೆ ಆಗ್ರಹ

ಗೌರವಾನ್ವಿತ ಜಸ್ಟೀಸ್‌ ದಾಸ್ ವಿರುದ್ಧ ದ್ವೇಷ ಕಾರಿದ ಮತೀಯವಾದಿ ಸಂಘಟನೆ; ಕ್ರಮಕ್ಕೆ ಆಗ್ರಹ

ದಲಿತರಿಗೆ ಮೀಸಲಾತಿ ಹೆಚ್ಚಿಸುವಂತೆ ಶಿಫಾರಸ್ಸು ನೀಡಿರುವ ಜಸ್ಟೀಸ್‌ ಎಚ್.ಎನ್‌.ನಾಗಮೋಹನ್‌ ದಾಸ್‌ ವರದಿಯನ್ನು ಮತೀಯವಾದಿ ಸಂಘಟನೆ ವಿರೋಧಿಸಿದೆ.

- Advertisement -
- Advertisement -

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಸಮಿತಿಯು ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡುವಂತೆ ಸಲ್ಲಿಸಿರುವ ವರದಿಗೆ ಮತೀಯವಾದಿ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.

ವಿಚಾರವಾದಿಗಳ ಹತ್ಯೆಗಳನ್ನು ನಡೆಸಿರುವ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆಯ ಸ್ಥಳೀಯ ಅವತರಣಿಕೆಯಾದ ಹಿಂದೂ ಜನಜಾಗೃತಿ ಜಾಗೃತಿ ವೇದಿಕೆಯ ರಾಜ್ಯ ವಕ್ತಾರ ಮೋಹನ್‌ಗೌಡ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಚಾರ್ಜ್‌‌ಶೀಟ್‌ನಲ್ಲಿ ಉಲ್ಲೇಖಗೊಂಡಿರುವ ಮೋಹನ್‌ಗೌಡ ಎಂಬ ವ್ಯಕ್ತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಜಸ್ಟೀಸ್‌ ನಾಗಮೋಹನ್ ದಾಸ್ ಅವರನ್ನು ಹಿಂದೂ ವಿರೋಧಿ, ದೇಶದ್ರೋಹಿ” ಎಂದು ಜರಿದಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗೌರಿ ಹತ್ಯೆಯಲ್ಲಿ ಆರೋಪಿಯವಾಗಿರುವ ಕೆ.ಟಿ.ನವೀನ್‌ಕುಮಾರ್‌ ಮತ್ತು ಮೋಹನ್‌ಗೌಡನಿಗೂ ಇದ್ದ ಸಂಪರ್ಕವನ್ನು ಪ್ರಕರಣದ ಚಾರ್ಜ್‌‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆ.ಟಿ.ನವೀನ್‌ಕುಮಾರ್‌ ಮತ್ತು ಕೊಲೆಯ ಷಡ್ಯಂತ್ರ ನಡೆಸಿದ ಗುಂಪಿಗೆ ಕೊಂಡಿಯಾಗಿದ್ದವನು ಮೋಹನ್‌ಗೌಡ ಎಂಬುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಗೊಂಡಿದೆ (ಆದರೆ ಆರೋಪಿಯಲ್ಲ). ಕರಾಳ ಹಿನ್ನೆಲೆಯ ಮತೀಯವಾದಿಯು ಗೌರವಾನ್ವಿತ ಜಸ್ಟೀಸ್ ದಾಸ್ ಅವರ ವಿರುದ್ಧ ಹೇಳಿಕೆ ನೀಡಿದ್ದಾನೆ. ಇಂತಹ ಕೋಮುವಾದಿಗಳನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯಲ್ಲಿ ನವೆಂಬರ್‌ 1ರಂದು ಪ್ರಕಟವಾಗಿರುವ ವರದಿ ಹಿನ್ನೆಲೆಯಲ್ಲಿ ಮೋಹನ್‌ಗೌಡ ಹೇಳಿಕೆ ಹೊರಬಿದ್ದಿದೆ.

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಆಧರಿಸಿ, ಚಾರಿತ್ರಿಕ ಹಿನ್ನೆಲೆಗಳನ್ನು ಉಲ್ಲೇಖಿಸಿ ಮೀಸಲಾತಿ ಹೆಚ್ಚಳ ಕುರಿತಂತೆ ವರದಿಯನ್ನು ಜಸ್ಟೀಸ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರ ಅನ್ವಯ ಬಿಜೆಪಿ ಸರ್ಕಾರ ವರದಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ.

“ವೈದಿಕ ತತ್ವವು ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಬೆಳೆಸಿದೆ” ಎಂದಿರುವ ಜಸ್ಟೀಸ್ ದಾಸ್ ಅವರು ಸಾಮಾಜಿಕ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ಮೂಲಗಳನ್ನು ದಾಖಲಿಸಿದ್ದಾರೆ. ‘ಜಾತಿಗಳ ಮೂಲ’ ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ, ಪ್ರತಿಜಾತಿಯು ಜನಾಂಗೀಯ ಗುಣವನ್ನು ಹೊಂದಿದೆ ಎಂದು ಬರೆದಿದ್ದಾರೆ.

“ಇವೆಲ್ಲವೂ ಬ್ರಾಹ್ಮಣರಿಂದ, ಉಪನಿಷತ್‌, ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳಿಂದಾಗಿ ಸಂಭವಿಸಿದವು…” ಎಂಬ ಸಾಲು ಇರುವುದಾಗಿ ‘ಡೆಕ್ಕನ್ ಹೆರಾಲ್ಡ್‌’ ವರದಿ ಮಾಡಿದೆ.

ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾವನ್ನು ಉಲ್ಲೇಖಿಸಿರುವ ವರದಿಯು, “ಭಾರತವು 4,635 ಜನಾಂಗೀಯ ಸಮುದಾಯಗಳಿಗೆ ನೆಲೆಯಾಗಿದೆ. ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆನುವಂಶಿಕ ಲಕ್ಷಣಗಳು, ಭಾಷೆಗಳು, ಆಹಾರ ಪದ್ಧತಿ ಇವೆ. ಸತ್ಯವೆಂದರೆ ಜಾತಿ ವ್ಯವಸ್ಥೆಯ ಆಗಮನದೊಂದಿಗೆ ಜನಾಂಗೀಯ ವ್ಯವಸ್ಥೆಯು ಶಿಥಿಲಗೊಂಡಿದೆ” ಎಂದಿದೆ.

ಪ್ರಾಣಿಬಲಿ, ಬಾಲ್ಯವಿವಾಹ, ವಿಧವಾ ವಿವಾಹ ನಿಷೇಧ, ಮರಣದ ಆಚರಣೆಗೆ ಸಂಬಂಧಿಸಿದ ವಿಧಿವಿಧಾನಗಳು, ಪಿತೃಪ್ರಭುತ್ವ ಮತ್ತು ಇತರ “ವೈದಿಕ ವಿಧಿಗಳು ಮತ್ತು ಆಚರಣೆಗಳು” ಕರ್ನಾಟಕಕ್ಕೆ ಬಂದವು ಎಂದು ವರದಿಯಲ್ಲಿ ಹೇಳಲಾಗಿದೆ. “ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಜಾತಿ ವ್ಯವಸ್ಥೆ” ಎಂದು ಉಲ್ಲೇಖಿಸಲಾಗಿದೆ. “ಭಾರತದಲ್ಲಿ, ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ಜಾತಿ ಸಮುದಾಯಗಳಾಗಿ ಪರಿವರ್ತಿಸುವಲ್ಲಿ ಆರ್ಯನ್ ಸಂಸ್ಕೃತಿ ಪ್ರಮುಖ ಪಾತ್ರ ವಹಿಸಿದೆ” ಎಂದು ದಾಖಲಿಸಲಾಗಿದೆ.

“ಆರ್ಯನ್ನರು, ಪರ್ಷಿಯನ್ನರು, ಗ್ರೀಕರು, ತುರ್ಕರು, ಮಂಗೋಲಿಯನ್ನರು, ಯುರೋಪಿಯನ್ನರು ಮುಂತಾದ ಅನೇಕ ವಿದೇಶಿ ಆಕ್ರಮಣಕಾರರು ಬಂದು ಸ್ಥಳೀಯ ಜನರ ವಿರುದ್ಧ ಹೋರಾಡಿದರು. ಸ್ಥಳೀಯರು ಮತ್ತು ಹೊರಗಿನವರ ನಡುವೆ ಘರ್ಷಣೆಗಳು ನಡೆದವು. ಯುದ್ಧವನ್ನು ಗೆದ್ದವರು ಸ್ಥಳೀಯ ಮಹಿಳೆಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡರು. ಪರಿಣಾಮವಾಗಿ ಮಿಶ್ರ ಜನಾಂಗದವರು ಹೊರಹೊಮ್ಮಿದರು. ಈ ಮಿಶ್ರ ಜನಾಂಗಗಳು ವಿಭಿನ್ನ ಗುಂಪುಗಳಾಗಿ ಮಾರ್ಪಟ್ಟವು” ಎಂದು ವಿವರಿಸಲಾಗಿದೆ.

‘ಜಾತಿ ಅಸಮಾನತೆ’ ಎಂಬ ಶೀರ್ಷಿಕೆಯ ಇನ್ನೊಂದು ಅಧ್ಯಾಯದಲ್ಲಿ ಜಸ್ಟೀಸ್ ದಾಸ್‌ ಸಮಿತಿಯು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಬಹುತೇಕ ಕಡೆ ಉಲ್ಲೇಖಿಸಿದೆ. “ಶಿಕ್ಷಣ ಮತ್ತು ಜ್ಞಾನವನ್ನು ಬ್ರಾಹ್ಮಣರ ಏಕಸ್ವಾಮ್ಯವನ್ನಾಗಿ ಮಾಡಲಾಗಿದೆ” ಎಂದು ವಿಷಾದಿಸಿದೆ.

“ಸೇನೆ ಮತ್ತು ಆಡಳಿತವು ಕ್ಷತ್ರಿಯರಿಗೆ ಮೀಸಲಾಗಿತ್ತು. ವ್ಯಾಪಾರ ಮತ್ತು ವಾಣಿಜ್ಯವು ವೈಶ್ಯರಿಗೆ, ಶೂದ್ರರಿಗೆ ಕಠಿಣ, ಅಸಭ್ಯ ಮತ್ತು ಹೊಲಸು ಕೆಲಸಗಳನ್ನು ನೀಡಲಾಯಿತು. ಶೂದ್ರರನ್ನು ಸಾಮಾಜಿಕ ಕ್ರಮದ ಅತ್ಯಂತ ಕೆಳಮಟ್ಟದಲ್ಲಿ ಇರಿಸಲಾಯಿತು. ಚಾತುರ್ವರ್ಣವನ್ನು ಮೀರಿ, ಅಸ್ಪೃಶ್ಯ ವರ್ಗದ ಜನರನ್ನು ಸೃಷ್ಟಿಸಲಾಯಿತು. ಜಾತಿ ಆಧಾರಿತ ಅಸಮಾನತೆ ಸಮಾಜದಲ್ಲಿ ಸರ್ವವ್ಯಾಪಿಯಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಸಮಾನತೆ ಇದೆ” ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ವಿವರಿಸಲಾಗಿದೆ.

‘ಡೆಕ್ಕನ್‌ ಹೆರಾಲ್ಡ್‌’ ಮಾಡಿದ ವರದಿಯನ್ನು ಉಲ್ಲೇಖಿಸಿ ಮತೀಯವಾದಿ ಸಂಘಟನೆ ಹೇಳಿಕೆ ನೀಡಿದ್ದು, ಜಸ್ಟೀಸ್ ದಾಸ್ ಅವರನ್ನು ಹಿಂದೂ ವಿರೋಧಿ, ದೇಶದ್ರೋಹಿ ಎಂದು ಬಿಂಬಿಸಲು ಹೊರಟಿದೆ.

ಚಿಂತಕರಾದ ಶಿವಸುಂದರ್‌ ಅವರು ಹಿಂದೂ ಜನಜಾಗೃತಿ ಸಮಿತಿ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, “ಈ ಹಿಂದುತ್ವವಾದಿಗಳು ಬಿಜೆಪಿ ಸರ್ಕಾರದ ವಿರುದ್ಧ ಮೊದಲು ಹೋರಾಟ ಮಾಡಬೇಕು. ಸಚಿವ ಸಂಪುಟವು ಈ ವರದಿಯನ್ನು ಇಡಿಯಾಗಿ ಒಮ್ಮತದಿಂದ ಒಪ್ಪಿರುವುದಾಗಿ ಪದೇಪದೇ ಬಿಜೆಪಿ ಹೇಳಿಕೆ ನೀಡಿದೆ. ಕೇವಲ ಶಿಫಾರಸ್ಸನ್ನು ಮಾತ್ರ ಅವರು ಒಪ್ಪಿಕೊಂಡಿಲ್ಲ. ಅದಕ್ಕೆ ನೀಡಿರುವ ಕಾರಣಗಳನ್ನೂ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಈ ಕುರಿತು ಇವರು ಪ್ರಶ್ನಿಸಬೇಕು. ಕೇವಲ ಪತ್ರಿಕಾ ವರದಿಯನ್ನು ಆಧರಿಸಿ ಜಸ್ಟೀಸ್ ದಾಸ್ ಅವರನ್ನು ಟೀಕಿಸುತ್ತಿದ್ದಾರೆ. ಆದರೆ ವರದಿಯನ್ನು ಬಹಿರಂಗಪಡಿಸಲು ಸರ್ಕಾರವನ್ನು ಒತ್ತಾಯಿಸಬೇಕು” ಎಂದರು.

“ಜಾತಿ ವ್ಯವಸ್ಥೆಯ ಕುರಿತು ಜಸ್ಟೀಸ್ ದಾಸ್ ಅವರಷ್ಟೇ ಅಲ್ಲದೇ ಅನೇಕರು ಮಾತನಾಡಿದ್ದಾರೆ. ಇದು ಹೊಸ ವಿಚಾರವೇನೂ ಅಲ್ಲ. ಆರ್‌.ಎಸ್.ಎಸ್. ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಳ್ವಲ್ಕರ್‌ ತಮ್ಮ ‘ಚಿಂತನೆಯ ಗೊಂಚಲು’ ಕೃತಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಇರುವುದರಿಂದಲೇ ಹಿಂದೂ ಧರ್ಮ ಉಳಿದುಕೊಂಡಿದೆ. ಈಶಾನ್ಯ ಹಾಗೂ ವಾಯುವ್ಯ ಭಾರತದಲ್ಲಿ ಜಾತಿ ವ್ಯವಸ್ಥೆ ಕುಸಿದಿದ್ದರಿಂದಲೇ ಪರಧರ್ಮಗಳು ಪ್ರಭಾವ ಬೀರಿದವು. ಆದ್ದರಿಂದ ನಾವು ಭಾರತವನ್ನು ಕೇವಲ ನೂರಿನ್ನೂರು ವರ್ಷಗಳ ಹಿಂದಕ್ಕಲ್ಲ, ಸಾವಿರ ವರ್ಷಗಳ ಹಿಂದಕ್ಕೆ ಕೊಂಡೊಯ್ಯಬೇಕು ಎಂದು ಗೋಳ್ವಲ್ಕರ್‌ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ಜನಜಾಗೃತಿ ವೇದಿಕೆಯವರು ಗೋಳ್ವಲ್ಕರ್‌ರನ್ನು ವಿರೋಧಿಸಬೇಕು” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿರಿ: ಗುಜರಾತ್‌ ಸೇತುವೆ ದುರಂತ: ಸುಮಾರು 80 ಜನರನ್ನು ರಕ್ಷಿಸಿದ ಮುಸ್ಲಿಂ ಈಜುಗಾರರು

“ಬಿಜೆಪಿ ಸರ್ಕಾರ ರೂಪಿಸಿರುವ ಶಿಕ್ಷಣ ನೀತಿಯ ಪೊಸಿಷನ್‌ ಪೇಪರ್‌ನಲ್ಲಿ ಜಾತಿ ವ್ಯವಸ್ಥೆ ಕುರಿತು ಉಲ್ಲೇಖಿಸಲಾಗಿದೆ. ಇತಿಹಾಸಕ್ಕೆ ಸಂಬಂಧಿಸಿದ ಪೇಪರ್‌ನಲ್ಲಿ ಜಾತಿ ವ್ಯವಸ್ಥೆಯು ಗುಪ್ತರ ಕಾಲದಲ್ಲಿ ಸ್ಥಿರಸಮಾಜವನ್ನು ತಂದುಕೊಟ್ಟಿತು ಎಂದು ಬರೆಯಲಾಗಿದೆ. ಗುಪ್ತರ ಕಾಲದಲ್ಲಿ ಸಾಮಾಜಿಕ ಸ್ಥಿರತೆ ಹುಟ್ಟಲು ಕಾರಣವೇನೆಂದರೆ- ವರ್ಣವ್ಯವಸ್ಥೆಯು ಜಾತಿ ವ್ಯವಸ್ಥೆಗೆ ರೂಪಾಂತರಗೊಂಡು ಸ್ಥಿರತೆ ಮತ್ತು ಶಾಂತಿ ಸಮೃದ್ಧಿ ಸಾಧ್ಯವಾಯಿತು ಎಂದು ಬರೆಯಲಾಗಿದೆ. ಇದನ್ನು ಹೇಳುತ್ತಿರುವವರಲ್ಲಿ ನಾಗಮೋಹನ್ ದಾಸ್ ಅವರು ಕೊನೆಯವರು. ಮೊದಲಿಗರು ಗೋಳ್ವಲ್ಕರ್‌. ಈ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿದ ಬೌದ್ಧಧರ್ಮವನ್ನು ಸಾವರ್ಕರ್‌ ದೇಶದ್ರೋಹಿ ಧರ್ಮ ಎಂದು ಬರೆದಿದ್ದಾರೆ. Six Glorious Epochs of Indian History ಪುಸ್ತಕದಲ್ಲಿ 28 ಕಡೆ ಬುದ್ಧಧರ್ಮವನ್ನು ದೇಶದ್ರೋಹಿ ಎಂದು ನಿಂದಿಸಿದ್ದಾರೆ. ಬ್ರಾಹ್ಮಣ್ಯ ಹಾಗೂ ವೈದಿಕ ವ್ಯವಸ್ಥೆಯೇ ದೇಶವನ್ನು ಉಳಿಸುತ್ತೆ, ಬೌದ್ಧಧರ್ಮವು ಸಮಾಜದಲ್ಲಿ ಅಸ್ಥಿರತೆ ತರುತ್ತದೆ ಎಂದು ಸಾವರ್ಕರ್‌‌ ಹೇಳಿದ್ದಾರೆ. ಇವರು ವಿರೋಧಿಸುವುದಾದರೆ ಸಾವರ್ಕರ್‌‌ ವಿಚಾರಗಳನ್ನು ವಿರೋಧಿಸಬೇಕು” ಎಂದು ಒತ್ತಾಯಿಸಿದರು.

ಕನ್ನಡಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಹರೀಶ್‌ ಭೈರಪ್ಪ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಗೌರವಾನ್ವಿತ ಜಸ್ಟೀಸ್ ನಾಗಮೋಹನ್ ಅವರ ವಿರುದ್ಧ ಈ ರೀತಿಯ ಹೇಳಿಕೆ ಕೊಡುವ ಪಾತಕಿಗಳನ್ನು ಸರ್ಕಾರ ಜೈಲಿಗೆ ಕಳುಹಿಸಬೇಕು. ನಾಗಮೋಹನ ದಾಸ್ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿ ನಾಡಿಗೆ ಘನತೆ ತಂದವರು. ಸರ್ಕಾರಗಳು ಆಯಾ ಕಾಲಕ್ಕೆ ಅನೇಕ ಜವಾಬ್ದಾರಿಗಳನ್ನು ದಾಸ್ ಅವರಿಗೆ ವಹಿಸಿವೆ. ಅವರು ನೀಡುವ ನ್ಯಾಯ ಹಾಗೂ ನಿಷ್ಪಕ್ಷಪಾತ ಸಲಹೆ, ಮಾರ್ಗದರ್ಶನಗಳನ್ನು ಸರ್ಕಾರಗಳು ಸ್ವೀಕರಿಸಿವೆ. ಸಂವಿಧಾನ ಓದು ಅಭಿಯಾನದ ಮೂಲಕ ನಾಡಿನ ಮಕ್ಕಳಲ್ಲಿ ಜಾತ್ಯತೀತತೆ, ಧರ್ಮನಿರಪೇಕ್ಷತೆ, ಸೌಹಾರ್ದತೆ, ಸಮಾನತೆ, ಬಹುತ್ವದ ಆಶಯಗಳು ಬೆಳೆಯಲು ಅವರು ಕಾರಣವಾಗಿದ್ದಾರೆ. ಇಂಥವರನ್ನು ದೇಶದ್ರೋಹಿ, ಹಿಂದೂ ವಿರೋಧಿ ಎನ್ನುವ ಮತೀಯವಾದಿಗಳ ವಿರುದ್ಧ ತುರ್ತಾಗಿ ಸರ್ಕಾರ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

“ದಾಸ್ ಅವರ ವ್ಯಕ್ತಿತ್ವದ ಕುರಿತು ಹಗುರವಾಗಿ ಮಾತನಾಡುವ ಹಿಂದುತ್ವ ಭಯೋತ್ಪಾದಕರನ್ನು ಕೂಡಲೇ ಬಂಧಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...