’ಬಿಜೆಪಿಯ ಹೈಕಮಾಂಡ್ ನಾಗಪುರದಲ್ಲಿದೆ, ಕಾಂಗ್ರೆಸ್‌ನ ಹೈಕಮಾಂಡ್ ದೆಹಲಿಯಲ್ಲಿದೆ; ಜೆಡಿಎಸ್‌ನ ಹೈಕಮಾಂಡ್ ಬಿಡದಿಯಲ್ಲಿದೆ’ ಎಂದು ಹೇಳಿ, ಜೆಡಿಎಸ್‌ನ ಪರಮೋಚ್ಚ ನಾಯಕ ಪದ್ಮನಾಭನಗರದಲ್ಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿರುವ ಎಚ್.ಡಿ.ಕುಮಾರಸ್ವಾಮಿಯವರು ಹೊಸ ಮನ್ವಂತರಕ್ಕೆ ಸಿದ್ಧರಾಗುತ್ತಿದ್ದಾರೆ. ಎಚ್‌ಡಿಕೆಯವರ ಹೊಸ ಮಾಧ್ಯಮ ಸಂಯೋಜಕರು ತಾವೇ ಸಿದ್ಧಪಡಿಸಿ ಮಾಧ್ಯಮಗಳಿಗೆ ಕಳಿಸುವ ಪತ್ರಿಕಾ ಹೇಳಿಕೆಯಲ್ಲೂ ’ಜೆಡಿಎಸ್ ಪಕ್ಷದ ವರಿಷ್ಠರೂ, ಮಾಜಿ ಮುಖ್ಯಮಂತ್ರಿಗಳೂ ಆದ ಕುಮಾರಸ್ವಾಮಿಯವರು’ ಎಂದು ತಾವೇ ಬರೆದು, ಗೊಂದಲಕ್ಕೆ ಅವಕಾಶವೇ ಇರದಂತೆ ಬಿತ್ತರಿಸುತ್ತಿದ್ದಾರೆ. ’ಕಾರ್ಪೊರೇಟ್ ಶೈಲಿ’ಯ ತರಬೇತಿ ಕಾರ್ಯಾಗಾರವನ್ನು ಕುಮಾರಸ್ವಾಮಿಯವರ ಅದೃಷ್ಟದ ತೋಟದಲ್ಲಿ ಮಾಡಿದ್ದಲ್ಲದೇ ಯಾರಿಗೇ ಆಗಲಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದು, ಕಾರ್ಯಾಗಾರದಲ್ಲಿ ನಡೆಸಿದಂತಹ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆಯೇ ಎಂದು ಅಭ್ಯರ್ಥಿಗಳಿಗೆ ಜಾಹೀರುಪಡಿಸಿದ್ದೂ ನಡೆದಿದೆ.

ಅದಕ್ಕೇ ಏನೋ ಈ ಪರೀಕ್ಷೆಯಲ್ಲಿ ಪಾಸಾಗುವುದು ನಮ್ಮ ಕೈಲಾಗುವುದಿಲ್ಲವೆಂದು ತುಮಕೂರಿನ ವಾಸಣ್ಣಾದಿಯಾಗಿ ಕೆಲವರ ಜೊತೆಗೆ ಮಂಡ್ಯಜಿಲ್ಲೆಯ ಇಬ್ಬರು ಮಾಜಿ ಸಚಿವರೂ, ಹಾಲಿ ಶಾಸಕರುಗಳೂ ಕಾಂಗ್ರೆಸ್ ಟಿಕೆಟ್‌ಗೆ ಈಗಾಗಲೇ ಪ್ರಯತ್ನ ಶುರು ಹಚ್ಚಿದ್ದಾರೆ. ಅವರಲ್ಲಿ ಒಬ್ಬ ಶಾಸಕರು ಬೀಗರೂ ಆಗಿದ್ದು, ಅವರಿಗೆ ಮಾತ್ರ ಜೆಡಿಎಸ್‌ನಲ್ಲೇ ಉಳಿಯುವ ಅನಿವಾರ್ಯತೆ ಉಂಟಾಗಿದೆ. ಏಕೆಂದರೆ ಅವರು ಪ್ರತಿನಿಧಿಸುವ ಮದ್ದೂರು ಕ್ಷೇತ್ರಕ್ಕೆ, ಹಾಲಿ ಸಂಸದರ ಏಕೈಕ ಸುಪುತ್ರನೇ ಮುಂದಿನ ಕಾಂಗೈ ಅಭ್ಯರ್ಥಿ ಎಂದು ಭವಿಷ್ಯದ ಮುಖ್ಯಮಂತ್ರಿಗಳಾಗಲು ಸಿದ್ಧರಾಗಿರುವ ಇಬ್ಬರು ನಾಯಕರೂ ತೀರ್ಮಾನಿಸಿದಂತಿದೆ ಎಂಬ ಸುದ್ದಿ ಆಗಲೇ ಹರಿದಾಡಿದೆ. ಹೀಗಾಗಿ ಕುಮಾರಣ್ಣನ ಪರೀಕ್ಷೆಯಲ್ಲಿ ಪಾಸಾಗಲು ಬೀಗರು ಕೂತರೆ ಒಳ್ಳೆಯದೋ ಅಥವಾ ಅವರ ಸುಪುತ್ರ ಬರೆದರೆ ಒಳ್ಳೆಯದೋ ಎಂಬುದನ್ನು ಇನ್ನೂ ತೀರ್ಮಾನಿಸಿದಂತಿಲ್ಲ.

PC :Deccan herald (ಶ್ರೀನಿವಾಸ ಗೌಡ)

ಬೆಂಗಳೂರಿನ ಹೃದಯ ಭಾಗಕ್ಕೆ ಅಂದರೆ ಕೇಂದ್ರದಿಂದ ಎಡಕ್ಕೆ ಇರುವ ತ್ರಿತಾರಾ ಹೋಟೆಲಿನಲ್ಲಿ ಮೇಲುಕೋಟೆಯ ಹಾಲಿ ಶಾಸಕರು ಭಾವಿ ಮುಖ್ಯಮಂತ್ರಿಗಳಲ್ಲೊಬ್ಬರಾದ ಕನಕಪುರದ ನಾಯಕರ ಜೊತೆಗೆ ಟಿಕೆಟ್ ಖಾತ್ರಿ ಪಡಿಸಿಕೊಂಡಿರುವುದಂತೂ ಖಚಿತವಾಗಿದೆ. ಅಲ್ಲಿ ಹೇಗೂ ಕಾಂಗ್ರೆಸ್ ಕ್ಯಾಂಡಿಡೇಟ್ ಇಲ್ಲ. ರೈತಸಂಘದ ಕ್ಯಾಂಡಿಡೇಟು ಕೊರೊನಾಕ್ಕೆ ಮುಂಚೆ ಅಮೆರಿಕಕ್ಕೆ ಹೋದವರು ಇಲ್ಲಿಯವರೆಗೂ ಈ ಕಡೆಗೆ ಮುಖ ಹಾಕಿಲ್ಲ; ಹೀಗಿರುವಾಗ ಹಾಲಿ – ಜೆಡಿಎಸ್ – ಶಾಸಕರೇ ಈ ಕಡೆಗೆ ಬಂದರೆ ಶ್ಯೂರ್ ಶಾಟ್ ಎಂಬುದು ಸಭೆಯಲ್ಲಿದ್ದವರ ಸರ್ವಾನುಮತದ ನಿರ್ಣಯವಾಗಿತ್ತು. ಮಂಡ್ಯಜಿಲ್ಲೆಯ ನಾಗಮಂಗಲದ ಮಾಜಿ ಸಚಿವರು ಬಾದಾಮಿಗೆ ಸೇರಿದ ಇನ್ನೊಬ್ಬ ಭಾವಿ ಮುಖ್ಯಮಂತ್ರಿಗಳ ಪರವೇ ಬ್ಯಾಟಿಂಗ್ ಮಾಡುವುದರಿಂದ, ತಮ್ಮ ಕಡೆಗೂ ಒಬ್ಬ ದೊಡ್ಡ ನಾಯಕ ಇರಲಿ ಎಂಬುದು ಇವರ ಇರಾದೆಯಿರಲೂಬಹುದು.

ಮೈಸೂರಿನಲ್ಲಾಗಲೇ ಒಬ್ಬ ಎಂಎಲ್‌ಎ ಹಾಗೂ ಒಬ್ಬ ಎಂಎಲ್‌ಸಿ ಜೆಡಿಎಸ್ ಖಾಲಿ ಮಾಡಲು ತೀರ್ಮಾನಿಸಿಯಾಗಿದೆ. ಹೊರಗೆ ಕಾಲಿಟ್ಟಿರುವ ಜಿಟಿಡಿಯವರ ಕಷ್ಟ ಒಂದೇ. ಹುಣಸೂರಿನಲ್ಲಿ ಮಗನಿಗೆ ಕಾಂಗ್ರೆಸ್ಸಂತೂ ಟಿಕೆಟ್ ಕೊಡುವ ಸಾಧ್ಯತೆ ಇಲ್ಲ. ಹಾಲಿ ಎಂಎಲ್‌ಎಗೆ ಬಿಟ್ಟು ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡಲ್ಲ ಅಂದಮೇಲೆ, ಚಾಮುಂಡೇಶ್ವರಿ ಒಂದೇ ಕಡೆ ಅಪ್ಪ ಮಗ ಇಬ್ಬರೂ ನಿಲ್ಲೋಕಾಗಲ್ಲ. ಹಾಗೆ ನೋಡಿದರೆ ಮುಂದಿನ ಚುನಾವಣೆ ಹೊತ್ತಿಗೆ ಹುಣಸೂರಿನಲ್ಲಿ ಬಿಜೆಪಿಗಂತೂ ಎಚ್.ವಿಶ್ವನಾಥ್ ಕ್ಯಾಂಡಿಡೇಟಲ್ಲ. ಈಗಾಗಲೇ ಒಂದು ಸಾರಿ ಹೋಗಿ ಬಂದಿರುವ ಅಲ್ಲಿಗೇ ಹೋಗೋದೋ ಅಥವಾ ಜೆಡಿಎಸ್‌ನವರಿಗೇ ತಾನು ಅನಿವಾರ್ಯವಾಗಬಹುದೋ ಎಂಬುದು ಬಗೆಹರಿದಿಲ್ಲ. ಇವೆಲ್ಲಾ ದೂರಾಲೋಚನೆಯನ್ನು ಅವರೊಬ್ಬರೇ ಮಾಡಿಲ್ಲ; ಪದ್ಮನಾಭನಗರದ ಹಳೆಯ ವರಿಷ್ಠರೂ ಮಾಡಿದ್ದಾರೆ. ಹಾಗಾಗಿಯೇ ’ಮೈಸೂರಿನ ಕಡೆಯವರ ಬಗ್ಗೆ ನನಗೆ ತಕರಾರಿಲ್ಲ. ಕೋಲಾರದ ಗೌಡರ ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳದೇ ಬಿಡಲ್ಲ’ ಅಂತ ಜೆಪಿ ಭವನದ ಪತ್ರಿಕಾಗೋಷ್ಠಿಯಿಂದ ಅಬ್ಬರಿಸಿದ್ದಾರೆ.

ಕೋಲಾರದ ಶ್ರೀನಿವಾಸ ಗೌಡರು ಶ್ರೀನಿವಾಸಪುರದವರ ಜೊತೆಗೆ ಓಡಾಡಲು ಶುರು ಮಾಡಿ ಕನಿಷ್ಠವೆಂದರೂ ಎರಡು ವರ್ಷವಾಗಿದೆ. ದೊಡ್ಡಗೌಡರಿಗೆ ಪ್ರೀತಿಪಾತ್ರರಾದ ಮಾಜಿ ರೈಲು ಮಂತ್ರಿ ಮುನಿಯಪ್ಪರನ್ನು ಸೋಲಿಸಲು, ಕಾಂಗ್ರೆಸ್‌ನ ಸ್ಪೀಕರ್ ಜೊತೆಗೆ ಕೈ ಜೋಡಿಸಿದ್ದ ಶ್ರೀನಿವಾಸಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಂದು ಇತಿಹಾಸ ಬರೆದಿದ್ದರು. ಯಾವುದಾದರೂ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನವರಿಬ್ಬರೂ ಸೇರಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಪ್ರಯತ್ನ ಪಟ್ಟು ಐಕ್ಯತೆ ಸಾಧಿಸಿದ್ದರೆ ಅದು ಅಲ್ಲೇ ಆಗಿತ್ತು.

ಆದರೆ ಅಷ್ಟಕ್ಕೇ ದೇವೇಗೌಡರು ಗುಟುರು ಹಾಕುತ್ತಿಲ್ಲವೆಂಬುದು ಬಲ್ಲವರಿಗೇ ಗೊತ್ತು. ಗೌಡರ ಕುಟುಂಬದ (ರೇವಣ್ಣರೊಬ್ಬರನ್ನು ಬಿಟ್ಟು) ಹಾಲಿ ಪರಮಶತ್ರುವಾದ ಬಾದಾಮಿ ಕ್ಷೇತ್ರದ ವಾಸಿ ಕೋಲಾರ ಕ್ಷೇತ್ರದಲ್ಲೇ ನಿಲ್ಲಬಹುದು ಎಂಬ ವಾಸನೆ ಅವರಿಗೆ ಸಿಕ್ಕಿದೆ. ಆ ಕ್ಷೇತ್ರದಲ್ಲಿರುವ ಜಾತಿ ಬಂಧುಗಳು ಹಾಗೂ ಅಲ್ಪಸಂಖ್ಯಾತ ಬಂಧುಗಳು ಕೈ ಹಿಡಿಯುವುದರಿಂದ ಸುರಕ್ಷಿತ ಕ್ಷೇತ್ರವೆಂದೂ, ಅಲ್ಲಿ ನಾಮಪತ್ರ ಹಾಕಿ ರಾಜ್ಯವೆಲ್ಲಾ ಸುತ್ತಾಡಿಕೊಂಡಿರಬಹುದೆಂದು ಚರ್ಚೆ ನಡೆದಿದೆ. ಚರ್ಚೆ ನಡೆದಿರುವುದು ಗಾಂಧಿಭವನದ ರಸ್ತೆಯಲ್ಲಾದರೂ, ಅದನ್ನು ಪದ್ಮನಾಭನಗರದವರೆಗೆ ಸಾಗಿಸುವ ವ್ಯವಸ್ಥೆ ಇರುವುದರಿಂದ ಗೌಡರಿಗೆ ಎಲ್ಲವೂ ಅರ್ಥವಾದಂತಿದೆ.

ಎಲ್ಲಕ್ಕಿಂತ ಮುಖ್ಯವೆಂದರೆ ಬಿಡದಿಯ ಸರಣಿ ಹೈಟೆಕ್ ಕಾರ್ಯಾಗಾರದಲ್ಲಿ ಆದ ಸೋಷಿಯಲ್ ಇಂಜಿನಿಯರಿಂಗ್‌ನ ಸಾರಾಂಶದ್ದು. ಮಹಿಳೆಯರಿಗೆ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂಬುದು ಈಗಾಗಲೇ ಘೋಷಣೆಯಾಗಿದೆ. ಅಲ್ಲಿಗೆ ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಇಬ್ಬರಿಗೂ ಅವಕಾಶ ಗಟ್ಟಿಯಾಯಿತು ಎಂಬುದಂತೂ ಖಚಿತ. ಉಳಿದಂತೆ ಯಾವ ಕಾರಣಕ್ಕೂ ಜೆಡಿಎಸ್ ಗೆಲ್ಲುವ ಸಾಧ್ಯತೆಯೇ ಇಲ್ಲದ ಕ್ಷೇತ್ರಗಳ ಪಟ್ಟಿ ಮಾಡಲಾಗುತ್ತಿದ್ದು, ಅಲ್ಲೂ ಅವಕಾಶ ಕೊಡಲಾಗುವುದು. ಹಾಗೆ ನೋಡಿದರೆ ಕಾಂಗ್ರೆಸ್ಸು ಅಥವಾ ಬಿಜೆಪಿಗಳು ಗೆಲ್ಲುವ ಸಾಧ್ಯತೆ ಇರದ ಸುಮಾರು 50 ಕ್ಷೇತ್ರಗಳಿದ್ದು, ಅಂತಹ ಕಡೆಯಲ್ಲೂ ಮಹಿಳೆಯರಿಗೆ ಅವಕಾಶ ಕೊಡದಿರುವಾಗ, ಜೆಡಿಎಸ್ ಕೊಡಲಿರುವ ಸೋಲುವ ಅವಕಾಶವನ್ನು ಲೇವಡಿ ಮಾಡುವುದು ಸರಿಯೇ ಎಂಬ ಜಿಜ್ಞಾಸೆಯು, ಜಾತ್ಯಸ್ಥರ ನಡುವೆ ಈಗಾಗಲೇ ನಡೆದಿದೆ.

ಜೆಡಿಎಸ್ ಇನ್ನು ಮುಂದೆ ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವುದು ಎಂಬ ಇನ್ನೊಂದು ನಿರ್ಣಯ ಮಾತ್ರ ಇನ್ನೂ ಹೊರಬಿದ್ದಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣರಿಗೆ ಕೊಟ್ಟಿರುವ ಅವಕಾಶವನ್ನು ಗಮನಿಸಿದರೆ ಆ ನಿಟ್ಟಿನಲ್ಲಿ ನಿರ್ಣಯ ಮಾಡುವ ಅಗತ್ಯವಿಲ್ಲ ಎಂಬ ಆಲೋಚನೆಯೂ ಇರಬಹುದು. ಚುನಾವಣೆಯಲ್ಲಿ ಆಗುವ ’ಅನಿವಾರ್ಯ’ ಖರ್ಚಿಗೆ ಹಣಕಾಸು ಒದಗಿಸುವ ಯುವ ತಲೆಮಾರು ಇದ್ದಲ್ಲಿ ಅಂತಹವರ ಪರವಾಗಿ ಜೆಡಿಎಸ್‌ನ ಹಳೆಯ ಮತ್ತು ಹೊಸ ವರಿಷ್ಠರು ಯಾವಾಗಲೂ ಇರುತ್ತಾರೆ ಎಂಬುದು ಎಲ್ಲರೂ ಬಲ್ಲ ಸತ್ಯವಾಗಿದೆ. ಹಾಗಾಗಿ ಯುವ ತಲೆಮಾರಿಗೂ ಜೆಡಿಎಸ್‌ನಲ್ಲಿ ಅವಕಾಶ ಧಾರಾಳವಾಗಿ ಸಿಗುವುದರಲ್ಲಿ ಸಂಶಯವೇ ಇಲ್ಲ.

ಇನ್ನು ದಲಿತ ಹಾಗೂ ಮುಸ್ಲಿಂ ಸಮುದಾಯದವರಿಗೆ ಜೆಡಿಎಸ್‌ನಲ್ಲಿ ಅವಕಾಶ ಕಲ್ಪಿಸುವ ಕುರಿತು ಎರಡೆರಡು ದಿನಗಳನ್ನು ಖರ್ಚು ಮಾಡಿದ್ದರ ಬಗ್ಗೆ ಎರಡೂ ಸಮುದಾಯದವರಿಗೆ ಬೇಸರವಾಗಿರುವುದು ಹೆಚ್ಚು ಸುದ್ದಿಯಾಗಿಲ್ಲ. ಏಕೆಂದರೆ ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷರೇ ದಲಿತರಾಗಿದ್ದಾರೆ. ಹಾಲಿ ರಾಜ್ಯಾಧ್ಯಕ್ಷರು ಸ್ವತಃ ಕುಮಾರಸ್ವಾಮಿಯವರಲ್ಲವೇ? ಅವರು ಒಕ್ಕಲಿಗರಲ್ಲವೇ ಎಂದು ಯಾರೂ ಗೊಂದಲಕ್ಕೀಡಾಗಬಾರದು. ಅವರು ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ. ಎಚ್.ವಿಶ್ವನಾಥ್ ಅಥವಾ ಇನ್ಯಾರೋ ಇದ್ದಾಗಲೂ ಜನರು ಎಚ್‌ಡಿಕೆಯವರೇ ರಾಜ್ಯಾಧ್ಯಕ್ಷರು ಎಂದು ಗೊಂದಲಕ್ಕೀಡಾಗುತ್ತಿದ್ದರು. ಅದನ್ನು ತಪ್ಪಿಸಲೆಂದೇ ಅದೇ ಹೆಸರಿನ ಕುಮಾರಸ್ವಾಮಿಯವರನ್ನು ರಾಜ್ಯಾಧ್ಯಕ್ಷರನ್ನಾಗಿಸುವ ನಿರ್ಣಯವನ್ನು ’ಪಕ್ಷವು’ ತೆಗೆದುಕೊಂಡಿತ್ತು. ಎಚ್.ಕೆ.ಕುಮಾರಸ್ವಾಮಿಯವರು ರಾಜ್ಯಾಧ್ಯಕ್ಷರಾಗಿರುವಂತೆಯೇ ಹಿಂದೆ ಮಿರಾಜುದ್ದೀನ್ ಪಟೇಲ್ ಎಂಬ ಮುಸ್ಲಿಮರನ್ನೂ ಅಧ್ಯಕ್ಷರನ್ನಾಗಿಸಲಾಗಿತ್ತು. ಹೀಗಾಗಿ ದಲಿತ ಮತ್ತು ಮುಸ್ಲಿಂ ಸಮುದಾಯಗಳಿಗೆ ಸಿಗುವ ಸ್ಥಾನಮಾನದ ಕುರಿತು ಆಯಾ ಸಮುದಾಯಗಳಿಗೆ ಅರಿವಿದ್ದು, ಇನ್ನೊಮ್ಮೆ ಎರಡು ದಿನಗಳ ಹೈಟೆಕ್ ಕಾರ್ಯಾಗಾರ ಮಾಡಬೇಕಿರಲಿಲ್ಲ ಎಂಬುದು ಘೋಷಣೆಯಾಗದ ಇನ್ನೊಂದು ಅನಿಸಿಕೆಯಾಗಿದೆ.

ಇಂತಹ ಎಲ್ಲಾ ಪ್ರಯತ್ನಗಳ ಮೂಲಕ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಈ ರಾಜ್ಯದಲ್ಲಿ 113 ಸೀಟುಗಳು ಸಾಕಾಗಿದ್ದರೂ, ’ಮಿಷನ್ 123’ ಏಕೆ ಮಾಡುತ್ತಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ. ಅಷ್ಟಕ್ಕೂ ಆಗ ವಿರೋಧ ಪಕ್ಷಗಳಾಗಿ ಕೂರಲಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡೂ ಸೇರಿ ಸರ್ಕಾರ ರಚಿಸುವ ಸಾಧ್ಯತೆಯಿಲ್ಲವಾದ್ದರಿಂದ ಆಪರೇಷನ್ ಕಮಲ ಅಥವಾ ಹಸ್ತ ಮಾಡಿ ಕೆಲವರನ್ನು ಸೆಳೆಯುವುದೂ ಇಲ್ಲ. 2014ರಲ್ಲಿ ಮೋದಿ ಅಮಿತ್ ಶಾ ಲೋಕಸಭಾ ಚುನಾವಣೆಯಲ್ಲಿ ಹಾಕಿಕೊಂಡಿದ್ದದ್ದು 272+ ಆಗಿತ್ತು. ಅದು ಸರಿಯಾಗಿ 543 ಸೀಟುಗಳಲ್ಲಿ ಅರ್ಧ+ ಮಾತ್ರ. ಹಾಗಿದ್ದರೂ ಜೆಡಿಎಸ್‌ನವರು ಮಾತ್ರ 10 ಸೀಟುಗಳು ಹೆಚ್ಚಿರಲಿ ಎಂದು ಆಲೋಚಿಸಿರುವುದರಲ್ಲಿ ಸಂಖ್ಯಾಶಾಸ್ತ್ರದ ಅಂದಾಜೇನಾದರೂ ಇರಬಹುದೇ ಎಂದು ಯಡಿಯೂರಪ್ಪನವರು ಚಿಂತಾಕ್ರಾಂತರಾಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

PC : News 18 Kannada (ದೇವೇಗೌಡ)

ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿರುವಾಗಲೇ ವಿರೋಧ ಪಕ್ಷಗಳು ಈ ಪಾಟಿ ಸಕ್ರಿಯವಾಗಿರುವುದು ಹಿಂದೆ ಯಾವಾಗಲಾದರೂ ನಡೆದಿತ್ತೇ ಎಂಬುದನ್ನು ಸ್ವಲ್ಪ ಕೆದಕಿ ನೋಡಬೇಕಿದೆ. ಆದರೆ, ಈ ಸಾರಿ ಆಗಲೇ ಕಾಂಗ್ರೆಸ್ಸಿನಲ್ಲಿ ಮೂವರು ಮುಖ್ಯಮಂತ್ರಿಗಳು ಸಿದ್ಧರಾಗಿರುವುದು (ಜೆಡಿಎಸ್‌ನಲ್ಲಿ ಎಷ್ಟು ಜನ ಎಂದು ಯಾರೂ ಕೇಳಲಾರರಲ್ಲವೇ?) ಯಾಕಾಗಿ ಎಂದು ನೋಡಿದರೆ ಬಿಜೆಪಿಯ ದುಸ್ಥಿತಿಯು ಎದ್ದು ಕಾಣುತ್ತದೆ.

ಯಡಿಯೂರಪ್ಪನವರ ಸ್ವಂತ ಶಕ್ತಿಯ ಮೇಲೆ 110 ಸೀಟು ಗೆದ್ದಿದ್ದ ಬಿಜೆಪಿಯು, ಮೋದಿ ಶಾ ಶಕ್ತಿ ಸೇರಿದ ಮೇಲೆ 105 ಸೀಟಿಗಿಳಿದಿತ್ತು. ಅತ್ಯಂತ ಬಲಿಷ್ಠ ಹೈಕಮಾಂಡ್ ಹೊಂದಿರುವ, ಜಗತ್ತಿನಲ್ಲೇ (ಖಗೋಳದ ಎಲ್ಲಾ ಗ್ರಹಗಳನ್ನೂ ಸೇರಿಸಿ ಬ್ರಹ್ಮಾಂಡದಲ್ಲೇ ಎಂದೂ ಓದಿಕೊಳ್ಳಬಹುದು) ಅತ್ಯಂತ ದೊಡ್ಡ ಪಕ್ಷವು ಯಡಿಯೂರಪ್ಪನವರನ್ನು ಇಳಿಸಲು ಅಷ್ಟೊಂದು ತಿಣುಕಾಡಿದ್ದಕ್ಕೆ ಕಾರಣವೂ ಅಲ್ಲೇ ಇದೆ. ಯಡ್ಡಿ ಹೊರಗೆ ಹೋಗಿ ಕೆಜೆಪಿ ಕಟ್ಟಿದ್ದಕ್ಕೆ ಮತಗಳಿಕೆಯಲ್ಲಿ 2013ರಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದ್ದ ಈ ಪಕ್ಷವು, 2018ಕ್ಕೆ ಸೀಟು ಗಳಿಕೆಯಲ್ಲಿ 2008ನ್ನು ಪುನರಾವರ್ತಿಸಲೂ ಸಾಧ್ಯವಾಗಲಿಲ್ಲ. ಹೀಗಾಗಿ ಯಾವುದಕ್ಕೂ ಇರಲಿ ಎಂದು ಜೆಡಿಎಸ್‌ನ ಭುಜದ ಮೇಲೆ ಒಂದು ಕೈ ಇಟ್ಟುಕೊಂಡೇ ಇದೆ ಎಂಬ ಗಾಳಿಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿಯೇ ಬೀಸುತ್ತಿದೆ. ಹಾಗಾಗಿಯೇ ವಿವಿಧ ವಲಯಗಳ ಪ್ರತಿಭೆಯನ್ನೆಲ್ಲಾ ಬಳಸಿ ನಡೆಸಿದ ಹೈಟೆಕ್ ಕಾರ್ಯಾಗಾರದ ನಂತರವೂ ’ಈ ಸಾರಿ ಜೆಡಿಎಸ್ ಮುಗಿಸಿಬಿಡ್ತೀವಿ’ ಎಂಬಂತೆ ಕಾಂಗ್ರೆಸ್‌ನ ಹುರಿಯಾಳುಗಳು ಮಾತಾಡಿಕೊಳ್ಳುವುದು ನಡೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟಿರುವ ಶಾಸಕರುಗಳು ಈ ಕಡೆ ತಿರುಗಿ ನೋಡದೇ ಗುಟ್ಟುಗುಟ್ಟಾಗಿ ಸಭೆಗಳನ್ನು ನಡೆಸುತ್ತಲೇ ಇದ್ದಾರೆ.

ಆದ್ದರಿಂದಲೇ ’ನಮ್ಮದು ಕಾರ್ಯಕರ್ತರ ಪಕ್ಷ, ಬಿಟ್ಟು ಹೋಗುವವರೆಲ್ಲಾ ಹೋಗಲಿ’ ಎಂದು ಪದ್ಮನಾಭನಗರ ಮತ್ತು ಬಿಡದಿ ಎರಡೂ ಕಡೆಯಿಂದ ತೊಡೆತಟ್ಟುತ್ತಿರುವುದು ರಾಜಕೀಯ ವಲಯಗಳಲ್ಲಿ ಒಂಥರಾ ಐಸೋಜಿಗ ಉಂಟು ಮಾಡುತ್ತಿದೆ.


ಇದನ್ನೂ ಓದಿ: ವೈರುಧ್ಯಗಳ ನಡುವೆ ’ಪರ್ಯಾಯವಾಗಲು ಹೆಣಗುತ್ತಿರುವ’ ಕಾಂಗ್ರೆಸ್; ’ಪ್ರಾದೇಶಿಕ ಪಕ್ಷವಾಗದ’ ಜೆಡಿಎಸ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಸಿಸುಮಗ

1 COMMENT

LEAVE A REPLY

Please enter your comment!
Please enter your name here