Homeಮುಖಪುಟಸ್ಟಾರ್ ನಟನ ಸರಳ ಮತ್ತು ವಿಶೇಷ ವಿವಾಹ

ಸ್ಟಾರ್ ನಟನ ಸರಳ ಮತ್ತು ವಿಶೇಷ ವಿವಾಹ

ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸರಳವಾಗಿ ವಿವಾಹವಾಗಲು ಚೇತನ್‌ ಮತ್ತು ಮೇಘಾ ನಿರ್ಧರಿಸಿದ್ದು ಫೆಬ್ರವರಿ 02ರಂದು ಬೆಂಗಳೂರಿನಲ್ಲಿ ಬಾಳಸಂಗಾತಿಗಳಾಗುತ್ತಿದ್ದಾರೆ.

- Advertisement -
- Advertisement -

ಆ ದಿನಗಳು ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ಚೇತನ್, ಮೈನಾ ಚಿತ್ರದಲ್ಲಿ ಎಲ್ಲರ ಗಮನ ಸೆಳೆದರೂ ಜನರಿಗೆ ಪರಿಚಿತರಾಗಿದ್ದು ಮಾತ್ರ ತನ್ನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ. ಪೆರಿಯಾರ್ ಮತ್ತು ಅಂಬೇಡ್ಕರ್‌ವರ ಆದರ್ಶ, ಆಶಯಗಳೊಂದಿಗೆ ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದ ಚೇತನ್, ತನ್ನ ಸಿನಿಮಾ ಬದುಕಿಗಿಂತಲೂ ಹೆಚ್ಚು ಸಮಯ ಕಳೆದದ್ದು ಬಡವರ, ಹಿಂದುಳಿದವರ, ಆದಿವಾಸಿಗಳ ತಳಸಮುದಾಯದವರ ಪರವಾದ ಕೆಲಸಗಳಲ್ಲಿಯೇ.

ಸಿನಿಮಾಗಳು ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಸಿನಿ ಅಭಿಮಾನಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಮನ ಗೆದ್ದಿರುವ ಚೇತನ್ ಮುಂದಿನ ತಿಂಗಳ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನ ಮೇಘಾರವರು ಚೇತನ್ ಸಂಗಾತಿಯಾಗಲಿದ್ದಾರೆ. ಮೇಘಾ ಮೂಲತಃ ಇಂಜಿನಿಯರ್ ಆಗಿದ್ದರೂ ಅವರನ್ನು ಸೆಳೆದದ್ದು ಮಾನವ ಹಕ್ಕುಗಳ ಅಧ್ಯಯನ. ಅಧ್ಯಯನದ ಜೊತೆಗೆ ಲಿಂಗ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಬೇಕೆಂದು ನಿರ್ಧರಿಸಿದ ಮೇಘ, ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡಿದ್ದರು. ಸಾಮಾಜಿಕ ಕಳಿಕಳಿಯುಳ್ಳ ಈ ಇಬ್ಬರನ್ನು ಸಂದರ್ಭ ಭೇಟಿ ಮಾಡಿಸಿತು. ಈ ಎರಡೂ ಮಾನವೀಯ ಮನಸ್ಸುಗಳ ಸ್ನೇಹ ಈಗ ಪ್ರೀತಿಯ ಸಂಬಂಧಕ್ಕೆ ಕಾರಣವಾಗಿದೆ.

ದಿಡ್ಡಳ್ಳಿ ಆದಿವಾಸಿಗಳನ್ನು ಸ್ಥಳೀಯ ಆಡಳಿತ ನಿರಾಶ್ರಿತರನ್ನಾಗಿ ಮಾಡಿದ್ದಾಗ ಚೇತನ್‌ ದಿಟ್ಟ ಹೋರಾಟದಲ್ಲಿ ಪಾಲ್ಗೊಳ್ಳುವುದರೊಂದಿಗೆ ಆ ಜನರಿಗೆ ಪುನರ್ವಸತಿ ಸಿಗುವವರೆಗೂ ಹೋರಾಟ ನಡೆಸಿದ್ದರು.. ಅಂದಿನಿಂದ ನೂರಾರು ರಚನಾತ್ಮಕ ಚಟುವಟಿಕೆ ಮತ್ತು ಹೋರಾಟದಲ್ಲಿ ಅವರು ಭಾಗಿಯಾಗಿದ್ದಾರೆ.

2007ರಲ್ಲಿ ತೆರೆಕಂಡ ಆ ದಿನಗಳು ಹಿಟ್‌ ಆಗುವುದರೊಂದಿಗೆ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಸಿನಿಮಾ. ನಂತರ ಮೈನಾ ಶತದಿನೋತ್ಸವ ಆಚರಿಸಿತ್ತು. ಅವರ ಕೊನೆಯದಾಗಿ ಬಿಡುಗಡೆಯಾದ ಸಿನಿಮಾ ಅತಿರಥ (2017). ಈಗ ಅವರ ಮುಂದಿನ ಚಿತ್ರ ’ರಣಂ’ ಬಿಡುಗಡೆಗಡೆ ಸಿದ್ದವಾಗಿದೆ.

ಕಳೆದ ಐದು ವರ್ಷಗಳಿಂದ ಜೊತೆಯಾಗಿ ಹಲವಾರು ಕಡೆಗಳಲ್ಲಿ ಹಿಂದುಳಿದವರಿಗೆ ನೆರವು ನೀಡುತ್ತಾ ಬಂದಿರುವ ಈ ಜೋಡಿಗಳು ಸಾವಿತ್ರಿ ಬಾಯಿ ಫುಲೆ – ಜ್ಯೋತಿ ಬಾ ಫುಲೆ ಮತ್ತು ಪ್ರಕಾಶ್ ಅಮ್ಟೆ – ಮಂದಾಕಿನಿ ಅಮ್ಟೆ ದಂಪತಿಗಳು ನಮ್ಮ ಜೀವನದ ರೋಲ್ ಮಾಡಲ್‍ಗಳು ಎಂದು ಘೋಷಿಸಿಕೊಂಡಿದ್ದು, ಅವರಂತೆಯೇ ಆದರ್ಶದ ಬದುಕು ಸಾಗಿಸಬೇಕೆಂದು ನಿರ್ಧರಿಸಿದ್ದಾರೆ.

ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸರಳವಾಗಿ ವಿವಾಹವಾಗಲು ಚೇತನ್‌ ಮತ್ತು ಮೇಘಾ ನಿರ್ಧರಿಸಿದ್ದು ಫೆಬ್ರವರಿ 02ರಂದು ಬೆಂಗಳೂರಿನಲ್ಲಿ ಬಾಳಸಂಗಾತಿಗಳಾಗುತ್ತಿದ್ದಾರೆ. ಬಹುತ್ವದ ಸಂದೇಶ ಸಾರಲು ಅಂದು ವಚನ, ಸೂಫಿ ಗಾಯನ, ಸಿದ್ದಿ ನೃತ್ಯ, ಲಂಬಾಣಿ ನೃತ್ಯ, ಕೊರಗ ನೃತ್ಯದಂತಹ ಜನಪರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ, ನವಜೋಡಿಗಳು ಪ್ರತಿಜ್ಞೆ ಕೈಗೊಂಡು ಮನದ ಮಾತುಗಳನ್ನಾಡಲಿದ್ದಾರೆ. ಈ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನವೂ ನಡೆಯಲಿದೆ.

“ಆಡಂಬರದ ಆಚರಣೆಯಲ್ಲದ, ಸಮಾನತೆ ಮತ್ತು ಸೇವೆಯನ್ನು ಉತ್ತೇಜಿಸುವ ಸಾಮಾಜಿಕ ಪ್ರಜ್ಞೆಯ ವಿವಾಹಗಳ ಸ್ಫೂರ್ತಿಯೊಂದಿಗೆ” ಈ ಜೋಡಿಗಳು ಮಂತ್ರಮಾಂಗಲ್ಯದೊಂದಿಗೆ ಸರಳ ವಿವಾಹವಾಗುತ್ತಿದ್ದಾರೆ.  ಸಾಮಾಜಿಕ ಜವಾಬ್ದಾರಿಯೊಂದಿಗೆ ಜೀವನಸಂಗಾತಿಗಳಾಗುತ್ತಿರುವ ನವ ಜೋಡಿಗಳ ಭವಿಷ್ಯ ನೆಮ್ಮದಿ-ಸಂತೋಷದಿಂದಿರಲಿ ಎಂದು ಪ್ರೀತಿಯಿಂದ ಆಶಿಸೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...