Homeಮುಖಪುಟಎಐಎಡಿಎಂಕೆ ಅಧಿಕಾರ ಕಿತ್ತಾಟ: ಇ.ಪಳನಿಸ್ವಾಮಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ

ಎಐಎಡಿಎಂಕೆ ಅಧಿಕಾರ ಕಿತ್ತಾಟ: ಇ.ಪಳನಿಸ್ವಾಮಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ

- Advertisement -
- Advertisement -

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತ ಅವರ ಪಕ್ಷವಾದ ಎಐಎಡಿಎಂಕೆ ನಾಯಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ ಬುಧವಾರ ತೀರ್ಪು ನೀಡಿದ್ದು, ಇ.ಪಳನಿಸ್ವಾಮಿ(EPS) ಅವರಿಗೆ ಹಿನ್ನಡೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಅವರ ನೇಮಕವು ಮಾನ್ಯವಾಗಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಪಳನಿಸ್ವಾಮಿ ಅವರ ವಿರುದ್ಧ ತೀವ್ರವಾದ ಅಧಿಕಾರದ ಹಗ್ಗಜಗ್ಗಾಟ ನಡೆಸಿದ್ದ ಓ.ಪನ್ನೀರಸೆಲ್ವಂ(OPS) ಅವರಿಗೆ ಈ ತೀರ್ಪು ಮುನ್ನಡೆಯಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ಪಕ್ಷದ ನಾಯಕತ್ವದ ವಿಷಯದ ಕುರಿತು ನೀಡಿರುವ ತೀರ್ಪಿನಲ್ಲಿ ಜೂನ್ 23 ರ ಮೊದಲಿನಂತೆಯೇ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಪಕ್ಷವು ಜಂಟಿ ನಾಯಕತ್ವದಲ್ಲಿ ಮುಂದುವರೆಯಲಿದ್ದು, ಪನ್ನೀರಸೆಲ್ವಂ ಸಂಯೋಜಕರಾಗಿ ಮತ್ತು ಪಳನಿಸ್ವಾಮಿ ಅವರ ಉಪಸಂಯೋಜಕರಾಗಿ ಇರಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಳನಿಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದ ಜನರಲ್ ಕೌನ್ಸಿಲ್ ಸಭೆಯು ಕಾನೂನುಬಾಹಿರವಾಗಿದೆ ಎಂದು ಪನ್ನೀರಸೆಲ್ವಂ ಅವರು ನ್ಯಾಯಾಲಯದ ಮುಂದೆ ವಾದಿಸಿದ್ದರು. ಅಂತಹ ಸಭೆಯನ್ನು ಜಂಟಿಯಾಗಿ ಕರೆಯಬೇಕು ಎಂಬ ಪಕ್ಷದ ಬೈಲಾಗಳನ್ನು ಉಲ್ಲಂಘಿಸಿ ಪಳನಿಸ್ವಾಮಿ ಅವರು ಸಭೆಯನ್ನು ಕರೆದಿದ್ದಾರೆ ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಿ: ಸುಪ್ರೀಂಗೆ ತಮಿಳುನಾಡು ಸಿಎಂ ಸ್ಟಾಲಿನ್ 

“ಪಳನಿಸ್ವಾಮಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವುದು ಅಪ್ರಸ್ತುತವಾಗುತ್ತದೆ. ಇಬ್ಬರು ನಾಯಕರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಪನ್ನೀರಸೆಲ್ವಂ ಪರ ವಕೀಲ ತಮಿಳ್‌ ಮಾರನ್ ಅವರು ಎನ್‌ಡಿಟಿವಿ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಓ.ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಲು ಪ್ರಯತ್ನಿಸಿದ ಇ.ಪಳನಿಸ್ವಾಮಿ ಅವರ ಬೆಂಬಲವನ್ನು ಮರಳಿ ಪಡೆಯಲು ಪನ್ನೀರ್‌ಸೆಲ್ವಂ ಮುಂದಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತಮಿಳ್‌ಮಾರನ್‌, “ಅವರು ಪಕ್ಷದ ದೊಡ್ಡ ಸಂಖ್ಯೆತ ಕಾರ್ಯಕರ್ತರ ಬೆಂಬಲವನ್ನು ಹೊಂದಿದ್ದಾರೆ. ಅವರು ಡಿಎಂಕೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

ಜೂನ್ 23 ರಂದು ನಡೆದ ಜನರಲ್ ಕೌನ್ಸಿಲ್ ಸಭೆಯು ಚುನಾವಣೆಯನ್ನು ಅನುಮೋದಿಸದ ಕಾರಣ ತಾನು ಮತ್ತು ಒ.ಪನ್ನೀರ್‌‌ಸೆಲ್ವಂ ಅವರು ಜಂಟಿ ನಾಯಕತ್ವದ ಹುದ್ದೆಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಇ.ಪಳನಿಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಹೇಳಿದ್ದರು. ಪ್ರಧಾನ ಕಚೇರಿಯ ಕಾರ್ಯದರ್ಶಿಯಾಗಿ ನಾಯಕತ್ವದ ಅನುಪಸ್ಥಿತಿಯಲ್ಲಿ ಸಭೆಯನ್ನು ಕರೆಯುವ ಅಧಿಕಾರವನ್ನು ತಾನು ಹೊಂದಿದ್ದಾಗಿ ಅವರು ಹೇಳಿದ್ದರು.

ಇದನ್ನೂ ಓದಿ: ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪವಿಲ್ಲ, ಆದರೆ ತಮಿಳರನ್ನು ವಿಭಜಿಸಲು ಧರ್ಮ ಬಳಸಿದರೆ ವಿರೋಧಿಸುತ್ತೇವೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್

ದಿವಂಗತ ಮುಖ್ಯಮಂತ್ರಿ, ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ನ್ಯಾಯಾಲಯದ ಶಿಕ್ಷೆಯ ನಂತರ ರಾಜೀನಾಮೆ ನೀಡಬೇಕಾಗಿ ಬಂದಾಗ ಎರಡು ಬಾರಿ ಓ.ಪನ್ನೀರಸೆಲ್ವಂ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರು. ಅಲ್ಲದೆ ಅವರು ಜಯಲಲಿತಾ ಸಾವಿಗೂ ಮುನ್ನ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

ಜಯಲಲಿತ ಸಾವಿನ ನಂತರ ಸ್ವಲ್ಪ ಸಮಯದವರೆಗೆ ಪಕ್ಷದ ನೇತೃತ್ವ ವಹಿಸಿದ್ದ, ಅವರ ಆಪ್ತ ಸಹಾಯಕಿ ಶಶಿಕಲಾ ಅವರು ಇ.ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಕುರ್ಚಿಗೆ ಆಯ್ಕೆ ಮಾಡಿದ್ದರು. ಜಯಲಲಿತಾ ಅವರು ಪ್ರಧಾನ ಆರೋಪಿಯಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರು ಜೈಲಿಗೆ ಹೋಗುವ ಮುನ್ನ ಮುಖ್ಯಮಂತ್ರಿಯಾಗುವ ಶಶಿಕಲಾ ಅವರ ಪ್ರಯತ್ನದ ವಿರುದ್ಧ ಓ.ಪನ್ನೀರಸೆಲ್ವಂ ಬಂಡಾಯವೆದ್ದಿದ್ದರು.

ಶಶಿಕಲಾ ಅವರು ಬೆಂಗಳೂರಿನ ಜೈಲಿನಲ್ಲಿದ್ದಾಗ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಓ.ಪನ್ನೀರಸೆಲ್ವಂ ಜೊತೆ ಹೊಂದಾಣಿಕೆ ಮಾಡಿಕೊಂಡು ಶಶಿಕಲಾ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ನಂತರ ಇಬ್ಬರು ನಾಯಕರು ಉಭಯ ನಾಯಕತ್ವದ ಮಾದರಿಯನ್ನು ರೂಪಿಸಿದರು. ಅದರಂತೆ ಇ.ಪಳನಿಸ್ವಾಮಿ ಸರ್ಕಾರದಲ್ಲಿ  ಓ.ಪನ್ನೀರಸೆಲ್ವಂ ಉಪ ಮುಖ್ಯಮಂತ್ರಿಯಾಗಿದ್ದರು. ಪಕ್ಷದ ಅಧಿಕಾರದಲ್ಲಿ ಓ.ಪನ್ನೀರಸೆಲ್ವಂ ಸಂಯೋಜಕರಾದರೆ ಇ.ಪಳನಿಸ್ವಾಮಿ ಜಂಟಿ ಸಂಯೋಜಕರಾದರು.

ಇದನ್ನೂ ಓದಿ: ತಮಿಳುನಾಡು: ಮೂವರು ದಲಿತರ ಹತ್ಯೆ ಪ್ರಕರಣ; 27 ಮಂದಿಗೆ ಜೀವಾವಧಿ ಶಿಕ್ಷೆ

ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಂಟಿ ನಾಯಕತ್ವದ ಎಐಎಡಿಎಂಕೆ ಸತತ ಮೂರು ಚುನಾವಣಾ ಸೋಲುಗಳನ್ನು ಅನುಭವಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...