ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬೆಲ್ಲದಮಡಗು ಗ್ರಾಮದ ತೋಟವೊಂದರಲ್ಲಿ ವೃದ್ಧ ದಂಪತಿಯನ್ನು ಕೂಡಿ ಹಾಕಿ, ಮಾಲೀಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಕಳೆದ ಒಂದು ವರ್ಷದಿಂದ ಬಂಧನದಲ್ಲಿದ್ದ ದಂಪತಿಯನ್ನು ಅಧಿಕಾರಿಗಳು ಬಂಧಮುಕ್ತಗೊಳಿಸಿದ್ದಾರೆ.
ದಬ್ಬೇಘಟ್ಟ ಗ್ರಾಮದ ಹನುಮಂತರಾಯಪ್ಪ ಮತ್ತು ರಾಮಕ್ಕ ದಂಪತಿಯನ್ನು ಬೆಲ್ಲದಮಡಗು ಗ್ರಾಮದಲ್ಲಿರುವ ಲಕ್ಷ್ಮಿನಾರಾಯಣ ಎಂಬವರ ತೋಟದಲ್ಲಿ ಕೂಡಿ ಹಾಕಿ, ಕೆಲಸ ಮಾಡಿಸಲಾಗುತ್ತಿತ್ತು ಎಂದು ವರದಿಯಾಗಿದೆ.
ವೃದ್ಧ ದಂಪತಿಯನ್ನು ಕೂಡಿ ಹಾಕಿ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಡಾ.ಬಿ ಆರ್ ಅಂಬೇಡ್ಕರ್ ದಂಡು ತುಮಕೂರು ಜಿಲ್ಲಾಧ್ಯಕ್ಷ ಎನ್ ಕುಮಾರ್ ತೋಟಕ್ಕೆ ಹೋಗಿ ನೋಡಿದಾಗ ತೋಟದ ಗೇಟಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಕುಮಾರ್ ಅವರಲ್ಲಿ ದಂಪತಿ ತಮ್ಮ ನೋವು ತೋಡಿಕೊಂಡಿದ್ದಾರೆ.
ದಂಪತಿಯ ಅಳಲು ಆಲಿಸಿದ ಕುಮಾರ್ ಮತ್ತು ಸಂಘಟನೆಯ ಇತರ ಪದಾಧಿಕಾರಿಗಳು, ತೋಟದ ಮಾಲೀಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಗ್ರಾಮಸ್ಥರೂ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ದೂರು ಬಂದ ತಕ್ಷಣ ಮಧುಗಿರಿ ತಹಶೀಲ್ದಾರ್ ಶಿರಿನ್ ತಾಜ್, ಸಿಡಿಪಿಒ ಕಮಲಾ, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದಿನೇಶ್ ಬುಧವಾರ ತೋಟಕ್ಕೆ ತೆರಳಿ ದಂಪತಿಯನ್ನು ಬಂಧಮುಕ್ತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
“ತಿಂಗಳಿಗೆ ತಲಾ 14 ಸಾವಿರ ಸಂಬಳ ನೀಡುವುದಾಗಿ ತೋಟದ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ, ಕೊಡುತ್ತಿರುವುದು ತಲಾ 7 ಸಾವಿರ ರೂ. ಕಳೆದ ಎರಡು ತಿಂಗಳಿನಿಂದ ಅದನ್ನೂ ಕೊಟ್ಟಿಲ್ಲ. ತೋಟದ ಗೇಟ್‌ಗೆ ಬೀಗ ಹಾಕಲಾಗಿದೆ. ಒಳಗೆ ಇರುವ ಶೆಡ್‌ಗೂ ಬೀಗ ಜಡಿಯಲಾಗಿದೆ. ಇಲ್ಲಿ ಕುಡಿಯಲು ನೀರು, ತಿನ್ನಲು ಏನೂ ಇಲ್ಲ. ಈಗ ಒಬ್ಬರಿಗೆ ಮಾತ್ರ ಸಂಬಳ ಕೊಡುವುದು, ಇಬ್ಬರಿಗೆ ಕೊಡಲು ಆಗಲ್ಲ” ಎನ್ನುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಮುಂದೆ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ದಂಪತಿ ಬಂಧಮುಕ್ತರಾಗಿದ್ದಾರೆ. ಅವರಿಗೆ ಜೀತಮುಕ್ತ ಪತ್ರ ನೀಡಲಾಗಿದೆ. ತೋಟದ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆ ಅಧಿಕಾರಿಗಳಿಗೆ ಒತ್ತಾಯಿಸಿದೆ.
ಇದನ್ನೂ ಓದಿ : ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆಯಲು ಸಂಪುಟ ಸಭೆಯಲ್ಲಿ ನಿರ್ಧಾರ