Homeಮುಖಪುಟಜಾತಿಪದ್ಧತಿಯೆಂಬ ದೇಶದ್ರೋಹಿ; ಜಾತಿಗಣತಿಯೆಂಬ ದೇಶಪ್ರೇಮಿ

ಜಾತಿಪದ್ಧತಿಯೆಂಬ ದೇಶದ್ರೋಹಿ; ಜಾತಿಗಣತಿಯೆಂಬ ದೇಶಪ್ರೇಮಿ

- Advertisement -
- Advertisement -

ಬಿಹಾರ ಸರ್ಕಾರ ತನ್ನ ಜಾತಿಗಣತಿ ಅಥವಾ ಸಮೀಕ್ಷೆಯ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ) ವರದಿಯನ್ನು ಬಿಡುಗಡೆಗೊಳಿಸಿದೆ. ಇಡೀ ದೇಶಕ್ಕೆ ಜಾತಿಗಣತಿ ಯಾಕೆ ಬೇಕು ಎಂಬುದಕ್ಕೆ ಬಿಹಾರದ 216 ಪುಟಗಳ ಜಾತಿಗಣತಿ ವರದಿಯ ಅಂಕಿಅಂಶಗಳು ತಿಳಿಸುತ್ತವೆ. ಈ ಹಿಂದೆ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ಸರ್ಕಾರಗಳೂ ಸಹ ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದ್ದವು. ಆದರೆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿರಲಿಲ್ಲ. ಇದಕ್ಕೆ ಬಲಾಢ್ಯ ಜಾತಿಗಳ ವಿರೋಧವೇ ಕಾರಣವೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 1.0 ಜಾತಿಗಣತಿಯನ್ನು ಮಾಡಿತ್ತು. ಇದರ ನೇತೃತ್ವ ವಹಿಸಿದ್ದ ಕಾಂತರಾಜುರವರು ವರದಿಯನ್ನು ನೀಡಿದ್ದರು. ಆದರೆ ಮೇಲ್ಜಾತಿಗಳ ಒತ್ತಡದಿಂದ ವರದಿಯನ್ನು ಬಹಿರಂಗಗೊಳಿಸಲಿಲ್ಲ. ಈಗ ಬಿಹಾರದ ಜಾತಿಗಣತಿಯು, ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಅಗತ್ಯವಿರುವ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮತ್ತೆ ಮುನ್ನಲೆಗೆ ತಂದಿದೆ. ಹಾಗಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ 2.0 ಸರ್ಕಾರದ ಮೇಲೆ ಹಿಂದೆ ನಡೆಸಲಾಗಿದ್ದ ಜಾತಿಗಣತಿ ವರದಿಯನ್ನು ಬಹಿರಂಗಗೊಳಿಸುವ ಒತ್ತಡ ಹೆಚ್ಚಾಗಿದೆ. ದಲಿತರು, ಹಿಂದುಳಿದ ಜಾತಿಗಳು, ಆದಿವಾಸಿಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಜಾತಿಗಣತಿಯ ಪರವಿದ್ದರೆ, ಹಿಂದುಳಿದ ಜಾತಿಗಳಲ್ಲಿಯೇ ಬರುವ ಬಲಾಢ್ಯ ಜಾತಿಗಳಾದ ಹಾಗೂ ಕರ್ನಾಟಕದ ರಾಜಕೀಯ ರಂಗದಲ್ಲಿ ಅತಿಹೆಚ್ಚು ಪ್ರಾತಿನಿಧ್ಯ ಪಡೆಯುತ್ತಲೇ ಬಂದಿರುವ ಲಿಂಗಾಯತ ಹಾಗೂ ಒಕ್ಕಲಿಗ ಜಾತಿಯ ಸಂಘಗಳು, ಒಳಗೂ ಮತ್ತು ಹೊರಗೂ ಜಾತಿಗಣತಿಯ ವಿರುದ್ಧವಿರುವುದು ಎದ್ದು ಕಾಣುತ್ತಿದೆ. ಕಾಂತರಾಜು ನೇತೃತ್ವದ ಜಾತಿಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲವೆಂದು ವಾದಿಸುತ್ತಿರುವ ಈ ಬಲಾಢ್ಯ ಜಾತಿಗಳು ಪರ್ಯಾಯವಾದ ನಿಲುವನ್ನೇನು ಗಟ್ಟಿಯಾಗಿ ಪ್ರಕಟಿಸದಿರುವುದು ಮೇಲ್ನೋಟಕ್ಕೆ ಕಾಣುತ್ತದೆ; ತಮ್ಮ ಹೆಚ್ಚುವರಿ ಪ್ರಾತಿನಿಧ್ಯವನ್ನು ಇತರೆ ಹಿಂದುಳಿದ ಜಾತಿಗಳು ಪಡೆದುಕೊಂಡುಬಿಡುತ್ತಾರೆ ಎಂಬ ನಕಾರಾತ್ಮಕ ದೃಷ್ಟಿಕೋನವನ್ನೂ ಹಾಗೂ ತಮಗೆ ಸಿಕ್ಕಿರುವ ಈ ಸವಲತ್ತನ್ನು ಕಳೆದುಕೊಂಡುಬಿಡುತ್ತೇವೆ ಎಂಬ ಆತಂಕವನ್ನು ಈ ಬಲಾಢ್ಯ ಜಾತಿಗಳು ಹೊಂದಿವೆ. ಇದೇ ಮಾದರಿಯ ದೃಷ್ಟಿಕೋನ ಹಾಗೂ ಆತಂಕವನ್ನು ಒಳಮೀಸಲಾತಿ ವಿಚಾರದಲ್ಲಿ ಸ್ಪೃಶ್ಯ ಜಾತಿಗಳು ಅನುಭವಿಸುತ್ತಿವೆ. ಅದೇನೇ ಇರಲಿ, ಜಾತಿಗಣತಿಯು ಭಾರತ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ಜಾತಿಜನಗಣತಿಯ ಇತಿಹಾಸ

ಭಾರತದಲ್ಲಿ ಮೊದಲ ಸಾಮಾನ್ಯ ಜನಗಣತಿ ನಡೆದದ್ದು 1881ರಲ್ಲಿ. ಈ ಜನಗಣತಿಯು ವಿವಿಧ ಜಾತಿಗಳು ಮತ್ತು ಧಾರ್ಮಿಕ ಪಂಥಗಳನ್ನು ಗಣತಿ ಮಾಡಿ ಒಟ್ಟಾರೆ ಜನಸಂಖ್ಯೆಯನ್ನು ಮಾತ್ರ ನಮೂದಿಸಿತು. 1891ರಲ್ಲಿ ನಡೆದ ಜನಗಣತಿಯು ತುಸು ಮುಂದೆ ಹೋಗಿ ಮೊದಲ ಬಾರಿಗೆ ಜನಸಂಖ್ಯೆಯನ್ನು ಜಾತಿ, ಜನಾಂಗ ಮತ್ತು ಶ್ರೇಣಿಗಳ ಆಧಾರದ ಮೇಲೆ ವಿಂಗಡಿಸುವ ಪ್ರಯತ್ನ ಮಾಡಿತು. ಆದರೆ ನಿಖರವಾಗಿ ಶ್ರೇಣೀಕರಣಗೊಳಿಸಲಿಲ್ಲ. ಅಸ್ಪೃಶ್ಯರು ಮತ್ತು ಆದಿವಾಸಿಗಳನ್ನು ಕರಾರುವಾಕ್ಕಾಗಿ ಗುರುತಿಸಲಿಲ್ಲ. ಭಾರತದಲ್ಲಿ 1901ರಲ್ಲಿ ನಡೆದ ಮೂರನೇ ಜನಗಣತಿಯು, ಅಂಬೇಡ್ಕರ್‌ರವರು ಗುರುತಿಸಿರುವಂತೆ ’ಸಾರ್ವಜನಿಕ ಅಭಿಪ್ರಾಯದಂತೆ ಪರಸ್ಪರವಾಗಿ ಸಾಮಾಜಿಕ ಹಿರಿಮೆ ಯಾರಿಗಿದೆ ಎಂಬುದನ್ನು ಆಶ್ರಯಿಸಿ ವಿಂಗಡಣೆ’ ಮಾಡಿತು. 1911ರಲ್ಲಿ ಹಲವು ಪರೀಕ್ಷಾ ಪ್ರಶ್ನೆಗಳೊಂದಿಗೆ ಜನಗಣತಿ ಮಾಡಿದ ಬ್ರಿಟಿಷ್ ಸರ್ಕಾರದ ಆಯುಕ್ತರು ಅಸ್ಪೃಶ್ಯರ ಸಂಖ್ಯೆಯನ್ನು ನಿಖರವಾಗಿ 4ಕೋಟಿ 19ಲಕ್ಷವೆಂದು ನಮೂದಿಸಿತು. ಇದನ್ನು ಸಾಧ್ಯವಾಗಿಸಲು ಅದು ಜಾತಿವಾರು ಜನಗಣತಿ ಮೊರೆ ಹೋಗಿತ್ತು. ಇಲ್ಲಿಯವರೆಗೆ ಸುಮ್ಮನಿದ್ದ ಮೇಲ್ಜಾತಿ ಹಿಂದೂಗಳು ’ಜಾತಿವಾರು ಜನಗಣತಿ’ ಮಾಡಲಾಗಿದೆ ಎಂದು ತಿಳಿದು ಅದನ್ನು ಪ್ರಬಲವಾಗಿ ವಿರೋಧಿಸಲು ಆರಂಭಿಸಿದರು. 1920ರ ಹೊತ್ತಿಗೆ ಅಂದರೆ 1921ರಲ್ಲಿ ಮತ್ತೆ ಜನಗಣತಿಯು ನಡೆಯುವ ಸಂದರ್ಭದಲ್ಲಿ ಒಗ್ಗಟ್ಟಾದ ಮೇಲ್ಜಾತಿ ಹಿಂದೂಗಳು ಜಾತಿವಾರು ಜನಗಣತಿಯನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ಮುಂದೆ ನಿರ್ಣಯ ಮಂಡಿಸಿದರು. ಅದರಲ್ಲಿ, ’ಜಾತಿಯ ಆಧಾರದಲ್ಲಿ ಜನಗಣತಿ ಮಾಡುವುದು ಜಾತಿಪದ್ಧತಿಯನ್ನು ಶಾಶ್ವತಗೊಳಿಸುತ್ತದೆ. ಜೊತೆಗೆ ಈ ಗಣತಿಯು ನಿಖರವಾಗಿಲ್ಲ ಹಾಗೂ ನಿಷ್ಪ್ರಯೋಜಕವಾಗುತ್ತದೆ. ಹಾಗಾಗಿ ಇದು ಅಹಿತಕರ’ ಎಂಬ ಅಭಿಪ್ರಾಯವನ್ನು ಮಂಡಿಸಲಾಗಿತ್ತು. ಆದರೆ ಬ್ರಿಟಿಷ್ ಸರ್ಕಾರದ ಆಯುಕ್ತರು ’ಜಾತಿ ಜನಗಣತಿ’ ಕುರಿತು ನಿಖರವಾದ ಜ್ಞಾನ ಹೊಂದಿದ್ದರು. ಆದರೆ, ಬ್ರಿಟಿಷರಿಗೆ ’ಜಾತಿ ಜನಗಣತಿಯು’ ಯಾರಿಗೆ ’ಅಹಿತಕರ’ ಯಾರಿಗೆ ’ಹಿತಕರ’ ಎಂಬ ಮಾಹಿತಿಯು 1911ರ ಗಣತಿಯಲ್ಲಿಯೇ ಲಭ್ಯವಾಗಿತ್ತು. ಹಾಗಾಗಿ ಜಾತಿಗಣತಿ ವಿರೋಧಿ ಮೇಲ್ಜಾತಿ ಹಿಂದೂಗಳಿಗೆ ಈ ರೀತಿ ಉತ್ತರ ನೀಡಿದ್ದರು: ’ಒಂದು ಸಾಮಾಜಿಕ ಸಂಸ್ಥೆಯಾಗಿ ಜಾತಿಯ ಅನುಕೂಲ ಮತ್ತು ಪ್ರತಿಕೂಲಗಳು ಏನೆಂಬುದರ ಬಗ್ಗೆ ಯಾವುದೇ ಅಭಿಪ್ರಾಯವಿರಲಿ, ಭಾರತದಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸುವಾಗ ಜಾತಿಯು ಮುಖ್ಯವಾದ ಒಂದು ಅಂಗವಾಗಿ ಬರದಿದ್ದರೆ ಯಾವುದೇ ಉಪಯುಕ್ತವಾದ ಚರ್ಚೆ ಸಾಧ್ಯವಾಗುತ್ತದೆಂದು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಜಾತಿಯು ಈಗಲೂ ಸಹ ಭಾರತದ ಸಾಮಾಜಿಕ ಪಾತಳಿಯ ಅಡಿಗಲ್ಲು. ಆದ್ದರಿಂದ ಜಾತಿಯ ದಾಖಲಾತಿಯು ಭಾರತೀಯ ಸಮಾಜದ ವಿವಿಧ ಸಾಮಾಜಿಕ ಸ್ತರಗಳಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅತ್ಯುತ್ತಮವಾದ ಕೈಪಿಡಿಯಾಗಿದೆ’. ಹೀಗೆ ಮೇಲ್ಜಾತಿ ಹಿಂದೂಗಳ ವಾದಕ್ಕೆ ಸೊಪ್ಪು ಹಾಕದ ಬ್ರಿಟಿಷ್ ಸರ್ಕಾರ 1921, 1931ರವರೆಗೂ ಜಾತಿ ಜನಗಣತಿಯನ್ನು ಮಾಡಿತು. ಅದರ ಆಧಾರದಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ದಲಿತರಿಗೆ ನೀಡಿತು. 1931ರ ಗಣತಿಯ ಆಧಾರದಲ್ಲಿಯೇ ವಿವಿಧ ಸಂಸ್ಥಾನಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನೂ ನೀಡುತ್ತಾ ಬರಲಾಯಿತು. 1941ರಲ್ಲಿಯೂ ಸಹ ಜಾತಿವಾರು ಜನಗಣತಿ ನಡೆಯಿತು. ಆದರೆ ಅದರ ಅಂಕಿಅಂಶಗಳನ್ನು ಪ್ರಕಟಿಸಲು ಹಣಕಾಸಿನ ಕೊರತೆಯಾಗಿದೆ ಎಂದು ಬ್ರಿಟಿಷ್ ಸರ್ಕಾರದ ಆಯುಕ್ತರು ತೀರ್ಮಾನಿಸಿ ಅದನ್ನು ಬಹಿರಂಗಪಡಿಸಲಿಲ್ಲ. ಏಕೆಂದರೆ ಈ ಅವಧಿಯು ಎರಡನೇ ಮಹಾಯುದ್ಧದ ಅವಧಿಯಾಗಿತ್ತು. ಅಕ್ಟೋಬರ್ 26, 1947ರಲ್ಲಿ ಈ ಅನ್ಯಾಯದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದ ಅಂಬೇಡ್ಕರ್‌ರವರು ಹಲವು ದಶಕಗಳಿಂದ ಜನಗಣತಿಯಲ್ಲಿ ಜಾತಿಗಣತಿಯನ್ನು ಮಾಡಿಲ್ಲವೆಂಬುದನ್ನು ನೆನಪಿಸಿದ್ದರು. ನಂತರ ಸ್ವತಂತ್ರ ಭಾರತದಲ್ಲಿ ಯಾವುದೇ ಸರ್ಕಾರಗಳೂ ಸಹ ಜಾತಿಗಣತಿ ಮಾಡಲು ಮನಸ್ಸು ಮಾಡಲಿಲ್ಲ. ಹಾಗಾಗಿ ಎಲ್ಲಾ ಸರ್ಕಾರಿ ಪ್ರಾತಿನಿಧ್ಯದ ಸವಲತ್ತುಗಳನ್ನು 1931ರ ಜನಗಣತಿಯ ಆಧಾರದಲ್ಲಿಯೇ ನೀಡುತ್ತಾ ಬರಲಾಗಿದೆ. 1991ರ ಮಂಡಲ್ ವರದಿ ಮಾಡಿದ ಹಿಂದುಳಿದ ಜಾತಿಗಳ ಗಣತಿಯ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಲ್ಲೂ ಅನ್ಯಾಯವಾಗಿದೆ. ಶೇ.52ರಷ್ಟಿರುವ ಹಿಂದುಳಿದ ಜಾತಿಗಳಿಗೆ ಕೇವಲ ಶೇ.27ರಷ್ಟು ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಲಾಗುತ್ತಿದೆ. ಇಂದಿರಾ ಸಹಾನಿ ತೀರ್ಪನ್ನು ಮುಂದು ಮಾಡಿಕೊಂಡು ಈ ಅನ್ಯಾಯವನ್ನು ಮಾಡಲಾಗಿದ್ದು, ಬ್ರಾಹ್ಮಣರು, ಬನಿಯಾಗಳಿಗೆ ನೀಡುತ್ತಿರುವ ಶೇ.10ರಷ್ಟು ಇಡಬ್ಲುಎಸ್ ಮೀಸಲಾತಿಗೆ ಶೇ.50ರ ಮಿತಿಯನ್ನು ಅನ್ವಯಿಸದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲಾಗಿದೆ.

ಹೀಗೆ ಸುಮಾರು 92 ವರ್ಷಗಳ ಹಿಂದೆ ಮಾಡಿದ ಜಾತಿಜನಗಣತಿಯ ಅಂಕಿಅಂಶಗಳನ್ನು ಇಟ್ಟುಕೊಂಡು ಸರ್ಕಾರದ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ದಲಿತರ ಜಾತಿಗಣತಿಯನ್ನು ಮಾಡಲಾಗುತ್ತಿದೆ. ಆದರೆ 1931ರಿಂದ ಹಿಂದುಳಿದ ಜಾತಿಗಳು, ಮೇಲ್ಜಾತಿಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಜಾತಿಗಣತಿಯನ್ನೇ ಮಾಡಿಲ್ಲ. ಹಾಗಾಗಿ ಎಲ್ಲರಿಗಿಂತಲೂ ಹಿಂದುಳಿದ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತಲೇ ಇದೆ. ಆದಷ್ಟು ಬೇಗ ಜಾತಿಜನಗಣತಿಯ ವರದಿಯು ಬಹಿರಂಗಗೊಂಡರೆ ಜನಕಲ್ಯಾಣ ಕಾರ್ಯಕ್ರಮಗಳು ಕರಾರುವಾಕ್ಕಾದ ವೇಗ ಪಡೆದುಕೊಂಡು ಭಾರತದ ಪ್ರಗತಿಗೆ ಸುಗಮ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಬಿಹಾರ: ಬಡತನದಲ್ಲಿರುವ 94 ಲಕ್ಷಕ್ಕೂ ಹೆಚ್ಚು ಕುಟುಂಬಗಳು: ಜಾತಿಗಣತಿಯಲ್ಲಿ ಬಹಿರಂಗ

ಇಲ್ಲಿ ಬಿಹಾರ ಜಾತಿಗಣತಿಯು ಯಾವ ಅಂಶಗಳನ್ನು ಬಹಿರಂಗಪಡಿಸಿದೆ ಎಂಬುದನ್ನು ತಿಳಿದುಕೊಂಡರೆ ಕನ್ನಡಿಗರಿಗೂ ಸಹ ಜಾತಿಗಣತಿಯ ಮಹತ್ವ ತಿಳಿಯುತ್ತದೆ.

  1. ಬಿಹಾರದಲ್ಲಿ ಒಟ್ಟು 2.97 ಕೋಟಿ ಕುಟುಂಬಗಳಿದ್ದು ಅವುಗಳಲ್ಲಿ 94 ಲಕ್ಷದಷ್ಟು ಕುಟುಂಬಗಳು ಬಡತನದಲ್ಲಿವೆ. ಕೇವಲ 4.47% ಕುಟುಂಬಗಳು ಮಾತ್ರ ಮಾಸಿಕ 50,000 ರೂಗಿಂತಲೂ ಹೆಚ್ಚಿನ ಆದಾಯ ಹೊಂದಿವೆ.
  2. ಸಾಮಾನ್ಯ ವರ್ಗಕ್ಕೆ ಸಂಬಂಧಿಸಿದಂತೆ ಮೇಲ್ಜಾತಿ ’ಭೂಮಿಹಾರ್’ರಲ್ಲಿ ಅತಿ ಹೆಚ್ಚು ಪ್ರಮಾಣದ ಬಡವರಿದ್ದಾರೆ. ಒಟ್ಟು ಸಾಮಾನ್ಯ ವರ್ಗದವರಲ್ಲಿ ಭೂಮಿಹಾರರಲ್ಲಿ 27.58%, ಬ್ರಾಹ್ಮಣರಲ್ಲಿ 25.32%, ರಜಪೂತರಲ್ಲಿ 24.89% ಕುಟುಂಬಗಳು ಬಡತನ ರೇಖೆಗಿಂತ ಕಡಿಮೆ ಇವೆ. ಕಾಯಸ್ಥರ 13.38% ಕುಟುಂಬಗಳು ಬಡತನದಲ್ಲಿದೆ. ಒಟ್ಟಾರೆ ಸಾಮಾನ್ಯ ವರ್ಗದ ಮೇಲ್ಜಾತಿಗಳಲ್ಲಿ 25.09% ಬಡ ಕುಟುಂಬಗಳಿವೆ.
  3. ಇತರೆ ಹಿಂದುಳಿದ ವರ್ಗಗಳ 33.16% ಕುಟುಂಬಗಳು, ಅತಿ ಹಿಂದುಳಿದ ವರ್ಗಗಳ 33.58% ಕುಟುಂಬಗಳು, ಪರಿಶಿಷ್ಟ ಜಾತಿಗಳ 42.93% ಕುಟುಂಬಗಳು, ಪರಿಶಿಷ್ಟ ಪಂಗಡಗಳ 42.7% ಕುಟುಂಬಗಳು ಬಡತನದಲ್ಲಿವೆ.
  4. ಬಿಹಾರದ ಅತಿಹೆಚ್ಚು ಬಡವರು ದಲಿತರಾಗಿದ್ದು, ಅವರೊಳಗೆ ’ಮುಸಾಹರ್’ ದಲಿತರಲ್ಲಿ ಅತಿ ಹೆಚ್ಚಿನ ಪ್ರಮಾಣದ ಬಡತನವಿದೆ (54.06%).
  5. ಬಿಹಾರದ 22.67%ರಷ್ಟು ಜನರು ಮಾತ್ರ 1ರಿಂದ 5ನೇ ತರಗತಿವರೆಗೆ, 9.19%ರಷ್ಟು ಮಾತ್ರ ಪಿಯುಸಿವರೆಗೆ ವಿದ್ಯಾಭ್ಯಾಸ ಪಡೆದಿದ್ದಾರೆ. 14.33%ರಷ್ಟು ಮಾತ್ರ 6ರಿಂದ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದಾರೆ. ಕೇವಲ 7%ರಷ್ಟು ಬಿಹಾರಿಗಳು ಪದವಿ ಗಳಿಸಿದ್ದಾರೆ. 1%ರಷ್ಟು ಮಾತ್ರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೇಲ್ಜಾತಿಗಳಲ್ಲಿ 13.41%, ಬಿ.ಸಿಗಳಲ್ಲಿ 6.77%, ಇ.ಬಿಸಿಗಳಲ್ಲಿ 4.27%, ಎಸ್ಸಿಗಳಲ್ಲಿ 3.05% ಪದವೀಧರರಿದ್ದಾರೆ.
  6. ಬಿಹಾರದ 34.13% ಕುಟುಂಬಗಳು ಮಾಸಿಕ 6000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿವೆ. 29.61% ಕುಟುಂಬಗಳು ಮಾಸಿಕ 6000-10000 ರೂ ಆದಾಯ ಹೊಂದಿವೆ. ಸರಿಸುಮಾರು 63% ಬಿಹಾರಿಗಳು ಮಾಸಿಕ 10000ರೂ ಗಿಂತಲೂ ಹೆಚ್ಚಿನ ಆದಾಯ ಹೊಂದಿದ್ದಾರೆ. 4.47% ಕುಟುಂಬಗಳು ಮಾತ್ರ ಮಾಸಿಕ 50,000 ರೂಗಿಂತಲೂ ಹೆಚ್ಚಿನ ಆದಾಯ ಹೊಂದಿವೆ.
  7. ಇತರೆ ಹಿಂದುಳಿದ ವರ್ಗದವರು ಹೊಂದಿರುವ ಸರ್ಕಾರಿ ಹುದ್ದೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣ ಅಂದರೆ 1.55%ರಷ್ಟು ಉದ್ಯೋಗಗಳನ್ನು ಯಾದವ ಜಾತಿ ಹೊಂದಿದೆ. ತದನಂತರ ಕುರ್ಮಿಗಳು (1,17,171 ಉದ್ಯೋಗ), ಕುಶ್ವಾಹ (1,12,106) ಹೊಂದಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಅತಿಹೆಚ್ಚು 0.79%ರಷ್ಟು ಉದ್ಯೋಗಗಳನ್ನು ಶೇಖ್ ಸಮುದಾಯ ಹೊಂದಿದೆ. 112 ಜಾತಿಗಳಿರುವ ಅತಿ ಹಿಂದುಳಿದ ವರ್ಗಗಳಲ್ಲಿ ತೇಲಿ ಜಾತಿಯವರು 1.44% ರಷ್ಟು ಸರ್ಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ.
  8. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರ (0.44%) ಬಳಿ ನಾಲ್ಕು ಚಕ್ರ ವಾಹನಗಳಿವೆ. ಸುಮಾರು 50 ಲಕ್ಷದಷ್ಟು ಜನ ದ್ವಿಚಕ್ರ ವಾಹನವನ್ನು ಹೊಂದಿದ್ದಾರೆ. 95.5% ಬಿಹಾರಿಗಳ ಬಳಿ ಯಾವುದೇ ವಾಹನಗಳಿಲ್ಲ.
  9. ಬಿಹಾರದ ಬ್ರಾಹ್ಮಣ ಜಾತಿಯವರು ಅತಿ ಹೆಚ್ಚು ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಇಂಟರ್‌ನೆಟ್ ಸೌಲಭ್ಯ ಹೊಂದಿದ್ದಾರೆ. ಅವರ ನಂತರ ಭೂಮಿಹಾರರಿದ್ದಾರೆ.
  10. ಮೇಲ್ಜಾತಿಯ 11.44% ಜನರು ಮಾತ್ರ ಕೂಲಿಕಾರ್ಮಿಕರಾಗಿದ್ದಾರೆ. ಬಿ.ಸಿಗಳಲ್ಲಿ 13.74%, ಇ.ಬಿಸಿಗಳಲ್ಲಿ 18.62%, ಎಸ್ಸಿಗಳಲ್ಲಿ 21.38%, ಎಸ್ಟಿಗಳಲ್ಲಿ 18.51% ಕೂಲಿಕಾರ್ಮಿಕರಿದ್ದಾರೆ.
  11. ಬಿಹಾರ ವಿಧಾನಸಭೆಯಲ್ಲಿ 33% ಶಾಸಕರು ಇತರೆ ಹಿಂದುಳಿದ ವರ್ಗದವರಾದರೆ, 24.58% ಸಾಮಾನ್ಯ ವರ್ಗದಿಂದ ಬಂದಿದ್ದಾರೆ. ಕೇವಲ 11%ರಷ್ಟು ಅತಿಹಿಂದುಳಿದ ಜಾತಿಯ ಶಾಸಕರಿದ್ದಾರೆ. ಜೊತೆಗೆ 7% ಮುಸ್ಲಿಂ, 15% ಪರಿಶಿಷ್ಟ ಜಾತಿಗಳು ಹಾಗೂ 1% ಪರಿಶಿಷ್ಟ ಪಂಗಡದವರಿದ್ದಾರೆ.
  12. ಬಿಹಾರ ಜಾತಿಗಣತಿಯಿಂದಾಗಿ ಬಿಹಾರ ಸರ್ಕಾರ ದಲಿತರು ಮತ್ತು ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು 50%ರಿಂದ 65%ಗೆ ಏರಿಸುವ ಪ್ರಸ್ತಾಪ ಇಟ್ಟಿದೆ. ಚಳಿಗಾಲದ ಅಧಿವೇಶನದಲ್ಲಿ ಕಾನೂನು ಮಾಡುವುದಾಗಿ ಹೇಳಿದೆ. ಈ ಮೂಲಕ ಎಸ್ಸಿ-16%ನಿಂದ 20%, ಎಸ್ಟಿ-1% ನಿಂದ 2%, ಇತರೆ ಮತ್ತು ಅತಿ ಹಿಂದುಳಿದ ವರ್ಗ-27% ನಿಂದ 43%ಗೆ ಮೀಸಲಾತಿಯನ್ನು ಹೆಚ್ಚಿಸಲಾಗುತ್ತದೆ ಎಂದಿದೆ.

ಸರ್ಕಾರಗಳು ದೇಶದ ಪ್ರಗತಿಗೆ ಕೊಡುಗೆ ನೀಡಬೇಕೆಂದರೆ ತಳಮಟ್ಟದಲ್ಲಿರುವ ದೇಶವಾಸಿಗಳ ಪ್ರಗತಿಗೆ ಕ್ರಮಕೈಗೊಳ್ಳಬೇಕು. ಅದಕ್ಕೆ ದೇಶವಾಸಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಂಕಿಅಂಶಗಳು ಬೇಕು. ಅದಕ್ಕಾಗಿ ಜಾತಿಗಣತಿ ಬೇಕು. ಜಾತಿಪದ್ಧತಿಯು ದೇಶದ್ರೋಹಿಯಾದರೆ, ಜಾತಿಗಣತಿಯು ದೇಶಪ್ರೇಮಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...