Homeಮುಖಪುಟಹೊಸ ಚುನಾವಣಾ ಆಯುಕ್ತರ ನೇಮಕ: ಅನುಮಾನಗಳಿಗೆ ಕಾರಣವಾದ ಮೋದಿ ಸರ್ಕಾರದ ನಡೆ

ಹೊಸ ಚುನಾವಣಾ ಆಯುಕ್ತರ ನೇಮಕ: ಅನುಮಾನಗಳಿಗೆ ಕಾರಣವಾದ ಮೋದಿ ಸರ್ಕಾರದ ನಡೆ

- Advertisement -
- Advertisement -

ಅರುಣ್ ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ಭಾರತೀಯ ಚುನಾವಣಾ ಆಯೋಗದಲ್ಲಿ ಎರಡು ಖಾಲಿ ಹುದ್ದೆಗಳು ಸೃಷ್ಟಿಯಾಗಿದ್ದು, ಮಾರ್ಚ್ 15 ರೊಳಗೆ ಈ ಹುದ್ದೆಗಳು ಭರ್ತಿಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಒಬ್ಬರು ಕೇಂದ್ರ ಸಚಿವರನ್ನು ಒಳಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿಯು, ಮಾರ್ಚ್ 14 ರಂದು ಸಭೆ ಸೇರಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ ಎನ್ನಲಾಗಿದೆ.

ಫೆಬ್ರವರಿ 14 ರಂದು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ನಿವೃತ್ತರಾಗಿದ್ದಾರೆ. ಈ ಹುದ್ದೆ ಭರ್ತಿ ಮಾಡಲು ಮಾರ್ಚ್ 15ರಂದು ಮೋದಿ ನೇತೃತ್ವದ ಸಮಿತಿ ಸಭೆ ಸೇರಲು ನಿರ್ಧರಿಸಿತ್ತು. ಈ ನಡುವೆ ಚುನಾವಣಾ ಆಯುಕ್ತ ಅರುಣ್ ಗೋಯಲ್ ಹಠಾತ್ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಚುನಾವಣಾ ಆಯೋಗದಲ್ಲಿ ಉಳಿದಿರುವುದು ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತ್ರ. ಹಾಗಾಗಿ, ಮಾರ್ಚ್ 14ರಂದೇ ಪ್ರಧಾನಿ ನೇತೃತ್ವದ ಸಮಿತಿ ಸಭೆ ನಡೆಸಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಚುನಾವಣಾ ಆಯುಕ್ತರ ಆಯ್ಕೆ ಹಿಂದೆ ಹಲವು ಅನುಮಾನ:

ದೇಶ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿರುವಾಗ ಚುನಾವಣಾ ಆಯುಕ್ತರು ದಿಢೀರ್ ರಾಜೀನಾಮೆ ನೀಡಿರುವುದೇ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ನಡುವೆ ಹೊಸ ಚುನಾವಣಾ ಆಯುಕ್ತರ ಆಯ್ಕೆಗೆ ಪ್ರಧಾನಿ ನೇತೃತ್ವದ ಸಮಿತಿ ನಡೆಸುತ್ತಿರುವ ಪ್ರಕ್ರಿಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಟಿಎಂಸಿ ಸಂಸದ ಸಾಕೇತ್ ಗೋಖಲೆ, “2023ರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಅಂಗೀಕರಿಸಿದ ಹೊಸ ಕಾನೂನಿನ ಪ್ರಕಾರ, ಪ್ರತಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಹುಡುಕಾಟ (ಸರ್ಚ್ ಕಮಿಟಿ) ಸಮಿತಿಯು ಐದು ಹೆಸರುಗಳ ಕಿರುಪಟ್ಟಿಯನ್ನು ಸಿದ್ಧಪಡಿಸಬೇಕು. ಅರುಣ್ ಗೋಯೆಲ್ ಅವರ ದಿಢೀರ್ ರಾಜೀನಾಮೆ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿ ಆಗಿರುವುದರಿಂದ 10 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಬೇಕಾಗಿದೆ” ಎಂದಿದ್ದಾರೆ.

“10 ಹೆಸರುಗಳ ಈ ಶಾರ್ಟ್‌ಲಿಸ್ಟ್ ಅನ್ನು ಆಯ್ಕೆ ಸಮಿತಿಗೆ ನೀಡಬೇಕಾಗಿದೆ. ಅಲ್ಲಿ ಪ್ರಧಾನಿ ಮತ್ತು ಒಬ್ಬರು ಸಚಿವರನ್ನು ಒಳಗೊಂಡ ಸಮಿತಿ ಈ ಹೆಸರುಗಳಲ್ಲಿ ಇಬ್ಬರ ಹೆಸರು ಆಯ್ಕೆ ಮಾಡಲಿದ್ದಾರೆ. ಈ ಪ್ರಕ್ರಿಯೆ ನಡೆಯಲು ಹಲವು ದಿನಗಳು ಬೇಕು. ಆದರೆ, ಇಲ್ಲಿ ಕೇವಲ 4 ದಿನಗಳಲ್ಲಿ 10 ಮಂದಿಯ ಪಟ್ಟಿ ಸಿದ್ದಪಡಿಸಲಾಗಿದೆ. ಇದು ಹೇಗೆ ಸಾಧ್ಯ? ಅಂದರೆ 10 ಮಂದಿಯ ಹೆಸರು ಮೊದಲೇ ಸಿದ್ದಪಡಿಸಿ ಇಡಲಾಗಿತ್ತಾ?” ಎಂದು ಸಾಕೇತ್ ಗೋಖಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

“ಇದಂತು ಖಚಿತ, ಮೋದಿ ಮತ್ತು ಬಿಜೆಪಿ ಯಾರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಮೊದಲೇ ನಿರ್ಧರಿಸದ್ದಾರೆ. ಈ ಕಾರಣಕ್ಕಾಗಿಯೇ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ಅವರನ್ನು ಬಲವಂತವಾಗಿ ಹುದ್ದೆಯಿಂದ ಕೆಳಗಿಸಿ, ಇಬ್ಬರು ಮೋದಿ ನಿಷ್ಠರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡುವ ನೇರ ಮಾರ್ಗ ಇದು” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸಿಜೆಐ ಹೊರಕ್ಕೆ :

2023ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ ಮಸೂದೆ- 2023 ಅಂಗೀಕಾರಗೊಂಡಿತ್ತು. ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಿದೆ.

ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರು (EC)ಗಳ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಗುರಿಯನ್ನು ಹೊಸ ಕಾಯ್ದೆ ಹೊಂದಿದೆ. ಜೊತೆಗೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಕಾರ್ಯವಿಧಾನವನ್ನು ಇದು ವಿವರಿಸುತ್ತದೆ.

ಪ್ರಧಾನ ಮಂತ್ರಿ, ಕೇಂದ್ರ ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ನೇಮಿಸುವುದನ್ನು ಈ ಕಾಯ್ದೆ ಪ್ರತಿಪಾದಿಸುತ್ತದೆ.

ಗಮನಾರ್ಹವಾಗಿ, ಹೊಸ ಕಾಯ್ದೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಹೊರಗಿಟ್ಟಿದೆ. ಮಾರ್ಚ್‌ 2023ರಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸಂಸತ್ತು ಕಾನೂನು ರೂಪಿಸುವವರೆಗೆ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪೀಠವು ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಮಸೂದೆ ಮಂಡಿಸಿ ಕಾನೂನು ರೂಪಿಸಿದೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿಯನ್ನು ಸಮಿತಿಯಿಂದ ಹೊರಗಿಟ್ಟಿದೆ.

ಇದನ್ನೂ ಓದಿ : ಇವಿಎಂಗಳ ಪರಿಣಾಮಕಾರಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರಾ ಗೋಯೆಲ್? ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ IAS ಅಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜ್ಯದ 5,8,9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಶಿಕ್ಷಣ ಇಲಾಖೆ ಆದೇಶ

0
ರಾಜ್ಯದ ಎಲ್ಲಾ ಶಾಲೆಗಳ 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಆದೇಶ ಹೊರಡಿಸಿದ್ದು,...