Homeಮುಖಪುಟನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-29

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ

ಲೇಖನದ ಶೀರ್ಷಿಕೆ ಓದಿ ಚಕಿತರಾಗಬೇಡಿ. ಹೌದು, ನಮ್ಮೆಲ್ಲರೊಳಗೂ ಒಂದು ಮುಗ್ಧ ಮಗು ಇದೆ, ಇತ್ತು, ಇನ್ನೂ ಇರಬಹುದು. ಕೆಲವರು ಬೇಗನೇ ದೊಡ್ಡವರಾಗುವ ತವಕದಲ್ಲಿ ಆ ಮಗುವನ್ನು ತಿಳಿದೋ ತಿಳಿಯದೆಯೋ ಹತ್ಯೆಗೈದಿರುತ್ತಾರೆ ಅಥವಾ ಮಾರಣಾಂತಿಕವಾಗಿ ಘಾಸಿಗೊಳಿಸಿರುತ್ತಾರೆ. ಸಂತೋಷದ ಸಂಗತಿಯೆಂದರೆ ಈ ಮಗುವನ್ನು ದೃಢ ಪ್ರಯತ್ನದಿಂದ ಮತ್ತೆ ಜೀವಂತಗೊಳಿಸಬಹುದು.

“ನಿಮ್ಮ ಆತ್ಮಕ್ಕೆ ಸನಿಹದಲ್ಲಿರುವ ಈ ಮಗುವಿನ ಕೈ ಎಂದಿಗೂ ಬಿಡಬೇಡಿ, ಈಕೆಂದರೆ ಈ ಮಗುವಿಗೆ ಅಸಾಧ್ಯ ಎನ್ನುವುದು ಏನೂ ಇಲ್ಲ” ಎಂದು ಬ್ರಾಜಿಲ್ ದೇಶದ ಖ್ಯಾತ ಲೇಖಕ ಮತ್ತು ಕವಿ ಪಾವ್ಲೋ ಕೊಯಿಲ್ಹೋ ಹೇಳುತ್ತಾರೆ.

ಇಂದಿನ ಜೀವನದ ಭಯಾನಕ ಆತಂಕಗಳ ಮಧ್ಯೆ ಬದುಕಲು ಕೇವಲ ಮಕ್ಕಳಿಗೆ ಮಾತ್ರ ಸಾಧ್ಯ. ಸಿರಿಯಾ-ಇರಾಕ್ ನಂತಹ ಯುದ್ಧಗ್ರಸ್ಥ ಭಾಗದಲ್ಲೂ ಸಹ ಮಕ್ಕಳು ನಿಶ್ಚಿಂತೆಯಿಂದ ಆಟವಾಡಿಕೊಂಡಿರುವುದನ್ನು ನೀವು ದೃಶ್ಯ ಮಾಧ್ಯಮದಲ್ಲಿ ನೋಡಿರಬಹುದು. ಈ ಮಕ್ಕಳಿಗೆ ಯಾವುದೇ ಸರಹದ್ದು, ಬೇಲಿಗಳು ಇರುವುದಿಲ್ಲ. ಇದ್ದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ಯಾವಾಗಲೂ ಸಕಾರತ್ಮಕವಾಗಿ ಚಿಂತಿಸುತ್ತಾರೆ. ಇದೇ ಮಗು ನಿಮಗೆ ಮತ್ತೆ ಮುಕ್ತವಾಗಿ ಜೀವಿಸುವ ಪಾಠ ಕಲಿಸುವ ಸಾಧನವಾಗಬಹುದು. ದೊಡ್ಡವರೂ ಸಹ ಒಂದಲ್ಲ ಒಮ್ಮೆ ಮತ್ತೆ ತಮ್ಮ ಬಾಲ್ಯ ಹಿಂತಿರುಗಬೇಕು ಎಂದು ಹಂಬಲಿಸುವುದನ್ನು ನೀವು ನೋಡಿರಬಹುದು. ಆದ್ದರಿಂದ ಈ ಮಗುವನ್ನು ಕೊಲ್ಲಬೇಡಿ. ಅದರೊಂದಿಗೆ ಮಾತನಾಡಿ, ಅದು ಏನು ಹೇಳುತ್ತಿದೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.

ಈ ಮಗುವಿಗೆ ಸದಾ ಹಸಿವು. ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಹಸಿವು. ಆದ್ದರಿಂದ ಈ ಮಗುವನ್ನು ಉಪವಾಸ ಕೆಡವಬೇಡಿ. ಇದರ ಲಾಲನೆ ಪೋಷಣೆ ಸರಿಯಾಗಿ ಮಾಡಿ. ಹೇಗೆ ನಿಮ್ಮ ಸ್ವಂತ ಮಗು ಹಸಿದುಕೊಂಡಿದ್ದರೆ ನಿಮಗೆ ಸಹಿಸಲು ಸಾಧ್ಯವಿಲ್ಲವೋ, ಅದೇ ರೀತಿ ಈ ಮಗುವನ್ನೂ ಸರಿಯಾಗಿ ನೋಡಿಕೊಳ್ಳಿ. ಈ ಮಗು ತುಂಬ ಕುತೂಹಲವುಳ್ಳದ್ದು. ಎಲ್ಲವನ್ನೂ ಅರಿಯುವ ಈ ಕುತೂಹಲವೇ ಅದಕ್ಕೆ ದಿನನಿತ್ಯ ಹೊಸ ವಿಷಯ ಕಲಿಯುವಂತೆ ಪ್ರೇರೇಪಿಸುತ್ತದೆ.ಇದರ ಜ್ಞಾನಾರ್ಜನೆಗೆ ಸಹಕಾರಿಯಾಗಿ. ಕೌನ್ ಬನೇಗಾ ಕರೋಡಪತಿ ಎಂಬ ಟಿವಿ ಮಾಲಿಕೆಯೊಂದರಲ್ಲಿ ಅದರ ನಿರೂಪಕ ಅಮಿತಾಭ್ ಬಚ್ಚನ್ ಹೇಳಿದಂತೆ, “ಸೀಖನಾ ಬಂದ್ ತೋ ಜೀತನಾ ಬಂದ್” (ಕಲಿಯುವುದನ್ನು ನಿಲ್ಲಿಸಿದಾಗ ಗೆಲ್ಲುವುದೂ ನಿಲ್ಲುತ್ತದೆ).ಈ ಮಗುವಿಗೆ ಸಂರಕ್ಷಣೆ ಬೇಕು, ನಿಮ್ಮಂತೆ ದಿನಕ್ಕೆ 12 ತಾಸು ವಾರಕ್ಕೆ 7 ದಿನ ದುಡಿಯಲು ಇದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಹಾಯಾಗಿರಲು, ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಬೇಕು. ಅದನ್ನು ಈ ಮಗುವಿನಿಂದ ಕಿತ್ತುಕೊಳ್ಳಬೇಡಿ.

ಈ ಮಗುವಿಗೆ ಮಗುವಾಗಿ ಇರಲು ಇಷ್ಟ. ಆದ್ದರಿಂದ ನೀವು ನಿಮಗೆ ವಯಸ್ಸಾಯಿತು, ನಾವು ಹೇಗೆ ಮಕ್ಕಳಂತೆ ವರ್ತಿಸಬಹುದು ಎಂದು ಹೇಳಿಕೊಳ್ಳುವುದನ್ನು ಬಿಡಿ. ಮಗುವಿನಂತೆ ಜೀವನವನ್ನು ಆಸ್ವಾದಿಸುವುದನ್ನು ಕಲಿಯಿರಿ. ಕುಣಿದು ಕುಪ್ಪಳಿಸಿ. ನಿಮ್ಮ ದಿನ ನಿತ್ಯದ ಬಿಗುಪು ಕಡಿಮೆಯಾಗುತ್ತದೆ. ತಂದೆ-ತಾಯಿಗೆ ಮಗುವಿನೊಂದಿಗೆ ಸಂತೋಷದ ಸಮಯ ಹೆಚ್ಚಾಗಿ ಕಳೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಮಗುವಿನೊಂದಿಗೆ ಮಗುವಾಗಿರದೆ, ಪೋಷಕರಾಗುತಾರೆ, ಶಿಕ್ಷಕರಾಗುತ್ತಾರೆ. ಆದರೆ ಅಜ್ಜಿ-ತಾತ ಈ ಪೋಷಕ-ಶಿಕ್ಷಕ ಕಟ್ಟುಪಾಡಿನಿಂದ ಹೊರಗುಳಿದು ಮಕ್ಕಳೊಂದಿಗೆ ಮಕ್ಕಳಾಗಿ ತಾವೂ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಮಕ್ಕಳೂ ಸಹ ಅಜ್ಜಿ-ತಾತನ ಜೊತೆಯನ್ನು ಹೆಚ್ಚಾಗಿ ಬಯಸುತ್ತಾರೆ.

ಮಕ್ಕಳು ಮೂರ್ಖತನ ಮಾಡುತ್ತಾರೆ, ಅದು ಅವರ ಹಕ್ಕು. ಆ ಮೂರ್ಖತನ ಅವರಿಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸುತ್ತದೆ. ಆಪಲ್ ಕಂಪನಿಯ ಸಂಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ಅವರ ಒಂದು ಪ್ರಖ್ಯಾತ ಹೇಳಿಕೆ “ಸ್ಟೇ ಹಂಗ್ರೀ, ಸ್ಟೇ ಫೂಲಿಷ್” (ಸದಾ ಹಸಿದುಕೊಂಡಿರು, ಸದಾ ಮೂರ್ಖನಾಗಿರು) ಪ್ರಕಾರ ಈ ಹಸಿವು ನಮ್ಮನ್ನು ಏನಾದರೂ ಮಾಡಲು ಪ್ರಚೋದಿಸುತ್ತದೆ ಮತ್ತು ಈ ಮೂರ್ಖತನ ನಮಗೆ ಕಲಿಯಲು ಸಹಕಾರಿಯಾಗುತ್ತದೆ. ಒಟ್ಟಾಗಿ ಇವೆರಡು ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತವೆ. ಮಕ್ಕಳಿಗೆ ಯಾವುದು ಅಸಾಧ್ಯ ಎಂಬುದು ತಿಳಿದಿರುವುದಿಲ್ಲ, ಹಾಗಾಗಿ ಅವರು ಅಸಾಧ್ಯವಾದುದನ್ನು ಮಾಡಲು ಸದಾ ಪ್ರಯತ್ನಿಸುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗುತ್ತಾರೆ.

ಜೀವನದ ಎಲ್ಲಾ ಸನ್ನಿವೇಶಗಳೂ ಸಮಸ್ಯೆಗಳಲ್ಲ, ಅದನ್ನು ಪರಿಹರಿಸಲು ಯಾರೂ ನಮಗೆ ಗುತ್ತಿಗೆ ಕೊಟ್ಟಿಲ್ಲ. “ಲೋಕದ ಡೊಂಕ ನೀವೇಕೆ ತಿದ್ದುವಿರಿಯ್ಯಾ”ಎಂದು ಬಸವಣ್ಣನವರು ಹೇಳಿದ ಹಾಗೆ, ಜೀವನವನ್ನು ಬಂದಂತೆ ಸ್ವೀಕರಿಸಬೇಕು. ಏಕೆಂದರೆ ಯಾರ ಕೈಯಲ್ಲಿ ಸುತ್ತಿಗೆ ಇರುತ್ತದೋ ಅವರಿಗೆ ಎಲ್ಲವೂ ಮೊಳೆಯಂತೆ ಕಾಣುತ್ತದೆ; ಯಾರ ಕೈಯಲ್ಲಿ ಸ್ಪ್ಯಾನರ್ ಇರುತ್ತದೋ ಅವರಿಗೆ ಎಲ್ಲವೂ ಸಡಿಲವಾದ, ಬಿಗಿಯಾಗಿ ಭದ್ರಪಡಿಸಬೇಕಾಗಿರುವ, ನಟ್-ಬೋಲ್ಟಿನಂತೆ ಕಾಣುತ್ತದೆ. ಆ ಸುತ್ತಿಗೆ, ಆ ಸ್ಪ್ಯಾನರ್ ಬದಿಗಿಡಿ. ಜೀವನವನ್ನು ಮಗುವಿನ ದೃಷ್ಟಿಕೋನದಿಂದ ನೋಡಿ, ಅದರಿಂದ ಏನು ಕಲಿಯಬಹುದು, ಅದನ್ನು ಕಲಿಯಿರಿ.

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ನಿಮ್ಮ ಬಾಲ್ಯದ ನೆನಪನ್ನು ಭದ್ರವಾಗಿರಿಸಿಕೊಳ್ಳಿ. ನೀವು ಮಾಡಿದ ತಪ್ಪುಗಳು, ಚೇಷ್ಟೆಗಳು ಎಂದಿದ್ದರೂ ನಿಮಗೆ ಸಂತೋಷ ನೀಡುವ ಚಿಲುಮೆಗಳು. ಅದು ಬತ್ತದಂತೆ ಜಾಗೃತೆ ವಹಿಸಿ. ಅದೇ ರೀತಿ ಮಕ್ಕಳು ತಮಗೆ ಬೇಡವಾದುದನ್ನು ಎಸೆಯುತ್ತಿರುತ್ತವೆ, ನೀವೂ ಸಹ ಬೇಡವಾದ ಕಹಿ ನೆನಪುಗಳ, ಸಂಬಂಧಗಳ ಭಾರವಾದ ಮೂಟೆ ಜೀವನವಿಡೀ ಹೊರುವುದನ್ನು ಬಿಡಿ, ಅವನ್ನು ಎತ್ತೆಸೆಯಿರಿ.

ಮಿಕ್ಕ ಮಕ್ಕಳಂತೆ ಈ ಮಗುವಿಗೂ ಪ್ರೀತಿ ಬೇಕು. ಉಡುಗೊರೆ ಬೇಕು. ಆದ್ದರಿಂದ ನಿಮ್ಮ ಕಲ್ಪನಾಶಕ್ತಿ ಉಪಯೋಗಿಸಿ ಇದರ ಜೊತೆಗೂ ನಿಮ್ಮ ಅಮೂಲ್ಯವಾದ ಸಮಯ ಕಳೆಯಿರಿ, ನಿಮ್ಮ ಪ್ರೀತಿ ತೋರಿಸಿ, ಉಡುಗೊರೆಗಳನ್ನು ನೀಡಿ. ಆ ಮಗುವೂ ನಿಮ್ಮ ಭಾವನೆಗಳನ್ನು ಬಡ್ಡಿಯೊಂದಿಗೆ ಹಿಂತಿರುಗಿಸುತ್ತದೆ.

“ವಿಶ್ವದ ನಿಜವಾದ ಸಮಸ್ಯೆ ಎಂದರೆ (ವಿಶ್ವದ) ಬಹುತೇಕ ಜನ ಬೇಗ ವಯಸ್ಕರಾಗುತ್ತಾರೆ” ಎನ್ನುತ್ತಾರೆ ಮಕ್ಕಳ ಅಚ್ಚುಮೆಚ್ಚಿನ ಖ್ಯಾತ ಕಾರ್ಟೂನ್ ಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿ. ನೀವಾದರೂ ವಯಸ್ಕರಾಗದೇ ನಿಮ್ಮೊಳಗಿರುವ ಮಗುವನ್ನು ಸಂರಕ್ಷಿಸಿ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...