ಇಂಗ್ಲಿಷಿನ ಈ ಬಿಲಾಂಗಿಂಗ್ ಎಂಬ ಪದ ’ಸೇರಿದ, ಗುರುತಿಸಿಕೊಳ್ಳಬಹುದಾದ, ತನ್ನದಾದ ಅಥವಾ ಸಲ್ಲುವ’ ಎಂಬ ಅರ್ಥಕೊಡಬಹುದು. ಇವ್ಯಾವೂ ಈ ಪದಕ್ಕೆ ಸಂಪೂರ್ಣ ನ್ಯಾಯಕೊಡಲಾರವು. ಇಂತಹ ಪದಗಳು ಒಂದೇ ಸಲಕ್ಕೆ ಪೂರ್ಣಪ್ರಮಾಣದಲ್ಲಿ ಅರ್ಥವಾಗುವುದಿಲ್ಲ. ಅವುಗಳೊಂದಿಗೆ ಒಡನಾಡಿ ಒಂದಿಷ್ಟು ಸಮಯ ಕಳೆದ ನಂತರವೇ ಸರಿಯಾಗಿ ತಿಳಿಯುವುದು. ಹಾಲಿವುಡ್ ಚಿತ್ರಗಳಲ್ಲಿ ಹಲವಾರು ಬಾರಿ ಪಾತ್ರಗಳು, ’ಐ ಡೋಂಟ್ ಬಿಲಾಂಗ್ ಹಿಯರ್’, ಅಥವಾ ’ಐ ಫೀಲ್ ಸೆನ್ಸ್‌ಆಫ್ ಬಿಲಾಂಗಿಂಗ್’ ಎಂದು ಹೇಳುವುದನ್ನು ಕೇಳಿ ಈ ಪದದ ಬಗ್ಗೆ ಕುತೂಹಲ ಮೂಡಿತು. (ನಾನು ಇಂಗ್ಲಿಷ್ ಕಲಿತದ್ದೇ ಸಿನೆಮಾ ನೋಡಿ.)

ಕಲೆಯ ಮೂಲ ಉದ್ದೇಶ ಏನು ಎಂಬುದನ್ನು ಕೆದಕಿದಾಗ, ಈ ಬಿಲಾಂಗಿಂಗ್‌ನ ಭಾವನೆ ನೀಡುವುದೇ ಎಂದು ನನಗೆ ಅನಿಸಿದೆ. ರಸ್ತೆಯಲ್ಲಿ ಬದುಕುವ ಒಬ್ಬ ನಿರ್ಗತಿಕನಿಗೆ ಅವನನ್ನು ಕೇಳುವವರು ಯಾರೂ ಇಲ್ಲ ಅನ್ನಿಸಬಹುದು, ಅದು ನಿಜವೂ ಇರಬಹುದು. ಆ ನಿರ್ಗತಿಕಳಿ/ನಿಗಷ್ಟೇ ಅಲ್ಲ, ನಮ್ಮಲ್ಲಿ ಅನೇಕರಿಗೆ ಆ ಭಾವನೆ ಬರಬಹುದು. ಆದೇ ಆ ನಿರ್ಗತಿಕ ವ್ಯಕ್ತಿಯು ಚಾರ್ಲಿ ಚಾಪ್ಲಿನ್‌ನ ಸಿನೆಮಾದಲ್ಲಿ ತನ್ನ ಕಥೆಯನ್ನು ನೋಡಿದಾಗ ಮೂಡುವ ಭಾವನೆ ಯಾವುದು? ನನ್ನ ಕಥೆಯನ್ನೂ ಯಾರೋ ಹೇಳುತ್ತಿದ್ದಾರೆ, ನನ್ನನ್ನು ಜಗತ್ತು ಮರೆತಿಲ್ಲ, ನಾನೂ ಒಬ್ಬ ಸಾಮಾನ್ಯ ಅಥವಾ ವಿಶೇಷ ವ್ಯಕ್ತಿ, ನನ್ನ ಅಸ್ತಿತ್ವವನ್ನೂ ಪರಿಗಣಿಸಲಾಗುತ್ತಿದೆ ಎಂದೆನಿಸಬಹುದು. ಅದನ್ನೇ ನಾನು ಬಿಲಾಂಗಿಂಗ್‌ನ ಭಾವನೆ ಎಂದು ತಿಳಿಯುತ್ತೇನೆ.

 

ಹಾಗೂ ಇದು ಕೇವಲ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, 30ರ ದಶಕದಲ್ಲಿ ಉಂಟಾದ ಆರ್ಥಿಕ ಹಿಂಜರಿತದಿಂದ ಬೀದಿಗೆ ತಳ್ಳಲ್ಪಟ್ಟ, ಮುಂಚೆಯಿಂದಲೂ ಬೀದಿಯಲ್ಲಿದ್ದ ನಿರ್ಗತಿಕರ ಇಡೀ ಸಮುದಾಯಕ್ಕೇ ಚಾಪ್ಲಿನ್‌ನ ಚಿತ್ರಗಳು ಸೆನ್ಸ್ ಆಫ್ ಬಿಲಾಂಗಿಂಗ್ ನೀಡಿರುವ ಸಾಧ್ಯತೆ ಇದೆ. ಆದರೆ ಆ ಚಿತ್ರಗಳನ್ನು ಭಾರತದಲ್ಲಿ ನೋಡಿದ್ದು ಕಾಮೆಡಿ ಚಿತ್ರಗಳನ್ನಾಗಿ. ತದನಂತರ ಅವುಗಳನ್ನು ಅತ್ಯಂತ ಇಂಟಲೆಕ್ಚುವಲ್ ಆಗಿ, ಜೀವನದ, ಸಮಾಜದ ಒಳನೋಟಗಳನ್ನು ಹುಡುಕುವ ರೀತಿಯಲ್ಲಿ ನೋಡಿದೆವು. (ನಾವು ಆ ಸಿನೆಮಾಗಳು ಬಂದ ಕಾಲದಲ್ಲಿ ನೋಡದೇ ನಂತರ ನೋಡಿದೆವು, ಅದು ಆ ಕಾರಣಕ್ಕೂ ಇರಬಹುದು ಹಾಗೂ ಆಗ ಚಿತ್ರಮಂದಿರಗಳೂ ಅಷ್ಟಿದ್ದಿಲ್ಲ. ಅದು ಮತ್ತೊಂದು ವಿಷಯ).

ನಮ್ಮ ಸಾಹಿತ್ಯ ಕೂಡ ಈ ಭಾವನೆಯನ್ನು ಮೂಡಿಸುತ್ತದೆಯೇ? ನಮ್ಮ ಚಿತ್ರಗಳು, ನಮ್ಮ ಸಾಹಿತ್ಯ ಈ ’ಬಿಲಾಂಗಿಂಗ್’ಅನ್ನು ಉದ್ದೀಪಿಸುವ ಉದ್ದೇಶವನ್ನು ಈಡೇರಿಸಿವೆಯೇ? ಮೊದಲನೆಯ ಪ್ರಶ್ನೆ ತಪ್ಪು ಅನಿಸುತ್ತೆ. ನಾವು ನಮ್ಮ ನಮ್ಮದೇ ಆದ ಕಥೆಗಳನ್ನು ಹೇಳಿದಾಗ, ಆ ಬಿಲಾಂಗಿಂಗ್‌ನ ಭಾವನೆಯನ್ನು ಖಂಡಿತ ಅವು ನೀಡುತ್ತವೆ. ಅಲ್ಲಿ ನೈಜತೆಯ ಪ್ರಶ್ನೆ ಮೂಡುತ್ತದೆ. ಹೀಗೊಂದು ಮಾತಿದೆ, ’ನಮ್ಮ ಜೀವನಕ್ಕೆ ಸಾಹಿತ್ಯ/ಕಲೆ ಪ್ರೇರೇಪಣೆಯಾಗಿರಬೇಕು ಹಾಗೆಯೇ ನಾವು ರಚಿಸುವ ಕಲೆ/ಸಾಹಿತ್ಯಕ್ಕೆ ನಮ್ಮ ಜೀವನ ಪ್ರೇರೇಪಣೆಯಾಗಿರಬೇಕು’. ನಮ್ಮಲ್ಲಿ ಅನೇಕ ಸಲ ಇದಕ್ಕೆ ವ್ಯತಿರಿಕ್ತವಾಗಿ, ಕಲೆಗೆ ಕಲೆಯೇ ಪ್ರೇರೇಪಣೆಯಾಗಿರುವುದು ಕಾಣಿಸುತ್ತದೆ, ಅದರಲ್ಲೂ ವಿಶೇಷವಾಗಿ ಸಿನೆಮಾ ಕ್ಷೇತ್ರದಲ್ಲಿ ಸುಮಾರು ಚಿತ್ರಗಳಿಗೆ, ಅವುಗಳ ಕಥೆಗಳಿಗೆ, ಪಾತ್ರಗಳಿಗೆ ಪ್ರೇರೇಪಣೆ ಸುತ್ತಲ ಸಮಾಜವಾಗದೇ ಇತರ ಚಿತ್ರಗಳಾಗಿರುತ್ತವೆ. ಆ ಚಿತ್ರಗಳು ಬಿಲಾಂಗಿಂಗ್‌ನ ಭಾವನೆ ಕೊಡುವುದು ಸಾಧ್ಯವಿಲ್ಲ. ಅದರರ್ಥ ಅವೆಲ್ಲವುಗಳೂ ಕೆಟ್ಟ ಚಿತ್ರಗಳ ಅಂತೇನಿಲ್ಲ.

ಒಬ್ಬ ವ್ಯಕ್ತಿಯ ಆಂತರಿಕ ತೊಳಲುಗಳು, ಸಂಘರ್ಷಗಳೊಂದಿಗೆ ಆಯಾ ಸಂದರ್ಭದ ಸಮಾಜ, ಸಮುದಾಯಗಳೂ ಹಲವಾರು ಸಂಘರ್ಷ, ತೊಳಲುಗಳೊಂದಿಗೆ ಹಾದುಹೋಗುತ್ತಿರುತ್ತವೆ. ಕೆಲವು ಸಮುದಾಯ ಅಥವಾ ವರ್ಗಗಳ ಸಂಘರ್ಷ, ಸಮಸ್ಯೆಗಳು ಹಲವರಿಗೆ ಆಕರ್ಷಕವೆನಿಸದೇ ಇರಬಹದು. ಹಾಗಾಗಿ ಅವರ ಕಥೆಗಳನ್ನು ಹೇಳಲು ಹಿಂಜರಿಯಬಹುದು. ಜೊತೆಗೆ, ತಮ್ಮ ಸುತ್ತ ಇರುವ ಜನರ, ಸಮಾಜದ ಕಥೆಗಳು ಆಕರ್ಷಕವೆನಿಸದಿರುವುದಷ್ಟೇ ಅಲ್ಲ, ಅವುಗಳಿಗೆ ಕುರುಡರಾಗಿಯೂ ಇರಬಹುದು. ಇದು ಹಿಂದಿ ಚಿತ್ರರಂಗದಲ್ಲಿ ಆಗಿದ್ದನ್ನು ನಾವು ಕಾಣುತ್ತೇವೆ. ಕೆಳವರ್ಗದ, ಸ್ಲಮ್ ನಿವಾಸಿಗಳ ಕಥೆಗಳು ಹಿಂದಿ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ. ಹೌದು, ಕಾಣಿಸಿದಾಗ ಅಲ್ಲಿ ಆ ಚಿತ್ರಹಿಂಸೆ ಆಧಾರಿತ ಚಿತ್ರವಾಗಿರುತ್ತದೆಯೇ ಹೊರತು, ಅಲ್ಲಿ ನಡೆಯುವ ಲವ್‌ಸ್ಟೋರಿಗಳು ಅಥವಾ ಯಾವುದೇ ಅಪರಾಧಕ್ಕೆ ತಳುಕುಹಾಕಿಕೊಳ್ಳದೇ ಇರುವಂತಹ ಚಿತ್ರಗಳು ನನಗಂತೂ ಇತ್ತೀಚೆಗೆ ಕಂಡಿಲ್ಲ.

ಭಾರತೀಯ ಚಿತ್ರರಂಗಕ್ಕೆ ನೂರು ವರ್ಷಗಳಾಗಿವೆ. ಹಿಂದಿ ಚಿತ್ರರಂಗದವರ ಎಲ್ಲರೂ ಅನ್ನಬಹುದಾದಷ್ಟು ಬಹುತೇಕ ಜನರು ನೆಲೆಸಿದ್ದು ಮುಂಬಯಿಯಲ್ಲಿ. ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಮರಾಠಿಗರ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚು. ಆದರೆ, ಮಹಾರಾಷ್ಟ್ರದ, ಮರಾಠಿಗರು ಪ್ರೊಟಾಗನಿಸ್ಟ್ ಆಗಿರಿವ, ಮರಾಠಿ ಸಂಸ್ಕೃತಿಯನ್ನು ಆಧಾರವಾಗಿಸಿಕೊಂಡ ಚಿತ್ರಗಳ ಸಂಖ್ಯೆ ಎಷ್ಟು? ಅವರೆಲ್ಲರೂ ಈ ಕಪೂರ್, ಖಾನ್‌ನಂತಹ ದಿಗ್ಗಜರ ಅಕ್ಕಪಕ್ಕವೇ ಇದ್ದರಲ್ಲವೇ? ಅವರಿಗೇಕೆ ಈ ಸಂಸ್ಕೃತಿ ಕಾಣಲಿಲ್ಲ? (ನೆನಪಿಡಿ ಸಿನೆಮಾಗೆ ಭಾಷೆ ಇರುವುದಿಲ್ಲ, ಪಾತ್ರಗಳು ಸಂಭಾಷಣೆಗಳಿಗೆ ಮಾತ್ರ ಭಾಷೆ ಇರುತ್ತೆ, ಹಾಗಾಗಿ ಅವರ ಕಥೆಗಳನ್ನು ಮರಾಠಿ ಚಿತ್ರರಂಗ ಹೇಳಲಿ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.) ಮುಂಬಯಿಯ ಮರಾಠಿಗರಿಗೆ ಹಿಂದಿ ಚಿತ್ರರಂಗ ಆ ಬಿಲಾಂಗಿಂಗ್‌ನ ಭಾವನೆ ಕೊಡಲಿಲ್ಲ. (ಇನ್ನು, ಹಿಂದಿ ಚಿತ್ರರಂಗಗಳಲ್ಲಿ ಮೇಲ್ಜಾತಿಗೆ ಸೇರಿದ ಪ್ರೊಟಗನಿಸ್ಟ್ ಎಷ್ಟು ಜನ, ಇತರ ಸಮುದಾಯಕ್ಕೆ ಸೇರಿದ ಪಾತ್ರಗಳ ಸಂಖ್ಯೆ ಎಷ್ಟು ಎಂಬುದನ್ನು ಕೇಳುವುದೇ ಬೇಡ, ಉತ್ತರ ಅತ್ಯಂತ ನಿರಾಶಾದಾಯಕ ಹಾಗೂ ಅದಕ್ಕೆ ಪ್ರತ್ಯೇಕ ಚರ್ಚೆ ಬೇಕಿದೆ.) ನನ್ನ ಪ್ರಶ್ನೆ; ಒಂದುವೇಳೆ ಮರಾಠಿ ಸಂಸ್ಕೃತಿಗೂ ಹಿಂದಿ ಚಿತ್ರರಂಗದಲ್ಲಿ ಅಷ್ಟೇ ಸ್ಥಾನ ಸಿಕ್ಕಿದ್ದರೆ, ಶಿವಸೇನೆ ಎಂಬ ಸಂಘಟನೆ ಅಷ್ಟು ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತಿತ್ತಾ? ಬಹುತೇಕ ಮರಾಠಿ ಜನರನ್ನು ಶಿವಸೇನೆ ಸೆಳೆಯಲು ಈ ಬಿಲಾಂಗಿಂಗ್‌ನ ಭಾವನೆ ಸಿಗದೇ ಇರುವುದು ಕೂಡ ಒಂದು ಕಾರಣವೇ?

 

ಸಾಹಿತ್ಯದಲ್ಲಿ, ಕಲೆಯಲ್ಲಿ ಹಾಗೂ ಅದರ ಜೊತೆಗೆ ರಾಜಕೀಯದಲ್ಲಿ ನನ್ನ ಸಂಸ್ಕೃತಿಗೆ ಮನ್ನಣೆ ಸಿಗದೇ ಇರುವಾಗ, ಅದನ್ನು ಗುರುತಿಸದೇ ಇರುವಾಗ ಅನಾಥ ಪ್ರಜ್ಞೆ ಕಾಡುವುದು ಸಹಜ. ಮನುಷ್ಯ ಸದಾಕಾಲ ಆ ಬಿಲಾಂಗಿಂಗ್‌ನ ಹುಡುಕಾಟದಲ್ಲಿರುತ್ತಾಳೆ/ನೆ. ಅದು ಕೆಲವು ಸಲ ಸಕಾರಾತ್ಮಕವಾಗಿದ್ದರೆ, ಕೆಲವು ಸಲ ನಕಾರಾತ್ಮಕ ತಿರುವನ್ನೂ ತೆಗೆದುಕೊಳ್ಳಬಹುದು. ತಮ್ಮ ಹಳ್ಳಿಗಾಡನ್ನು ಬಿಟ್ಟು ಬೆಂಗಳೂರಿಗೆ, ಅಥವಾ ಇನ್ನೊಂದು ಮೆಟ್ರೋ ನಗರಕ್ಕೆ ಬಂದು ಕೆಲಸ ಮಾಡುತ್ತಿರುವ ಯುವಕ-ಯುವತಿಯರಿಗೆ ಯಾವ ಬಿಲಾಂಗಿಂಗ್‌ನ ಸಿಗುತ್ತಿದೆ? ಆಗ ಅವರಲ್ಲಿ ಮಡುಗಟ್ಟಿರುವ ದ್ವೇಷದ ಭಾವನೆಯು, ಇತರರಲ್ಲಿ, ಒಂದು ಸಾಮಾಜಿಕ ರಾಜಕೀಯ ಶಕ್ತಿಯಲ್ಲಿ ಕಾಣಿಸಿಕೊಂಡಾಗ, ಅದಕ್ಕೇ ಜೋತು ಬೀಳುವಂತೆ ಆಗಲು ಸಾಧ್ಯ. ಆ ಸಾಮಾನ್ಯ ದ್ವೇಷವೇ ಆ ಬಿಲಾಂಗಿಂಗ್‌ನ ಭಾವನೆ ನೀಡಲು ಸಾಧ್ಯ. ತನ್ನ ಅಸ್ತಿತ್ವವೇ ಇತರ ಯಾರಿಗೂ ಕಾಣಿಸುವುದಿಲ್ಲ ಎಂದು ಅವಳಿ/ನಿಗೆ ಅನಿಸಿದಾಗ ಅವರಿಂದ, ಸೃಜನಾತ್ಮಕವಾದ ಏನನ್ನಾದರೂ ಅವರ ಅಸ್ತಿತ್ವಕ್ಕೆ ಕುರುಡಾಗಿರುವ ಸಮಾಜವು ಅಪೇಕ್ಷಿಸುವುದು ಎಷ್ಟು ಸರಿ?

ಇಲ್ಲಿ ಸರಿತಪ್ಪುಗಳ ಪ್ರಶ್ನೆ ಹುಟ್ಟುವುದಿಲ್ಲ. ನನ್ನ ಬಾಲ್ಯದ ಅತ್ಯಂತ ಪ್ರೀತಿಯ, ಅತ್ಯಂತ ಎಕ್ಸೈಟಿಂಗ್ ಆದ ನೆನಪುಗಳು ಯಾವುವು ಎಂದು ಕೆದಕಿದರೆ, ದೀಪಾವಳಿಯ, ಗಣೇಶ ಚತುರ್ಥಿಯ, ದಸರಾದ, ಮಣ್ಣೆತ್ತಿನ ಅಮಾವಾಸ್ಯೆಯ ಹಾಗೂ ಇಂತಹ ಹಬ್ಬದ ನೆನಪುಗಳೇ ಮುಂಚೂಣಿಯಲ್ಲಿರುತ್ತವೆ. ಅವುಗಳು ನನ್ನ ಬೆಳವಣಿಗೆಯ ಭಾಗ. ಹಾಗಾಗಿ, ಮಣ್ಣೆತ್ತುಗಳನ್ನು ಮಾಡುವ ದೃಶ್ಯ ಅಥವಾ ಎತ್ತುಗಳನ್ನು ಸಿಂಗರಿಸುವ ದೃಶ್ಯ ನೋಡಿದರೆ ನನಗೆ ಸ್ವಾಭಾವಿಕವಾಗಿಯೇ ಇವು ನನ್ನ ಕಥೆಗಳು ಎನಿಸುತ್ತೆ. ಹೌದು, ಈ ಹಬ್ಬಗಳ ಸಂಭ್ರಮಗಳಲ್ಲಿ ಹೆಣ್ಣುಮಕ್ಕಳ ಪಾತ್ರ ಪುರುಷರಿಗಿಂತ ಅತ್ಯಂತ ಭಿನ್ನವಾಗಿರುತ್ತಿತ್ತು, ಆಯಾ ಹಬ್ಬಗಳಿಗೆ ಇದ್ದ ಮೂಲಕಾರಣಗಳನ್ನು ಅಥವಾ ಅವುಗಳ ಪೌರಾಣಿಕ ಕಾರಣಗಳನ್ನು ಹುಡುಕಹೊರಟರೆ ಹಲವಾರು ಸಮಸ್ಯೆಗಳು ಕಂಡುಬರಬಹುದು. ಆದರೆ, ಆ ಸಮಸ್ಯೆಗಳು ನನ್ನ ವಾಸ್ತವ ಅಲ್ಲ, ಆ ಸಮಸ್ಯಾತ್ಮಕ ಪೌರಾಣಿಕ ಅಂಶಗಳು ನನ್ನ ಕಥೆಗಳಲ್ಲ. ನನ್ನ ಬಾಲ್ಯದ ಕಥೆಗಳಲ್ಲಿ ಒಂದಿಷ್ಟು ಘಟನೆಗಳಾದವು, ಒಂದಿಷ್ಟು ನೆನಪುಗಳು ಸೃಷ್ಟಿಯಾದವು, ಒಂದಿಷ್ಟು ಕಥೆಗಳು ಹುಟ್ಟಿಕೊಂಡವು; ಅದೇ ನನ್ನ ಸತ್ಯ. ಅವುಗಳನ್ನು ಯಥಾವತ್ತಾಗಿ ಹೇಳಿದರೆ ನನಗೆ ಆ ಬಿಲಾಂಗಿಂಗ್‌ನ ಭಾವನೆ ಸಿಗುತ್ತೆ. ಹಾಗೂ ಆ ಕಥೆಗಳನ್ನೇ ಇನ್ನಷ್ಟು ಆಳವಾಗಿ ಅಭ್ಯಸಿಸಿ, ನೈಜತೆಯಿಂದ ಹೊರಬಂದರೆ, ಅಲ್ಲಿರುವ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ ಆದರೆ ಆ ಸಮಸ್ಯೆಗಳಿಗೋಸ್ಕರ ನನ್ನ ನೆನಪುಗಳನ್ನು ಮತ್ತು ಸಂಸ್ಕೃತಿಯನ್ನು ನನಗೆ ನಿರಾಕರಿಸುವಂತಿಲ್ಲ.

ಹಾಗೂ, ನನಗೆ ಬಿಲಾಂಗಿಂಗ್‌ನ ಭಾವನೆ ಮೂಡಿಸಬೇಕೆಂದರೆ ಅದು ನನ್ನ ಸಂಸ್ಕೃತಿಯದ್ದೇ ಕಥೆ-ಸಿನಿಮಾಗಳಿಂದ ಆಗಬೇಕಿಲ್ಲ. ಇತರ ಸಂಸ್ಕೃತಿಯನ್ನು ನೈಜವಾಗಿ ಚಿತ್ರಿಸಿದರೆ, ಅವುಗಳನ್ನು ನಾನು ನನ್ನ ಸಂಸ್ಕೃತಿಗೆ ಹೋಲಿಸಿಯೂ ಆ ಬಿಲಾಂಗಿಂಗ್ ಭಾವನೆಯನ್ನು ಪಡೆಯಬಲ್ಲೆ. ಇತ್ತೀಚಿಗೆ ಗೆಳೆಯರೊಬ್ಬರು ಬಾಗಿನದ (ಹೆಣ್ಣುಮಕ್ಕಳಿಗೆ ತವರುಮನೆಯಿಂದ ಕೊಡುವ ಅರಿಶಿಣ, ಕುಂಕುಮದ ಜೊತೆಗೆ ಕೊಡುವ ಉಡುಗೊರೆ ಸಂಪ್ರದಾಯ ಅನ್ನಬಹುದು.) ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದರು. ಅದಕ್ಕೆ ಹಲವಾರು ಪ್ರಗತಿಪರರು ಇದೊಂದು ಪ್ರತಿಗಾಮಿ ಪದ್ಧತಿ ಎಂದೂ, ಅದನ್ನು ವೈಭವೀಕರಿಸಬೇಡಿ ಎಂದರು. ನನಗೆ ಬಾಗಿನ ಎಂಬುದೇನು ಎಂದು ಗೊತ್ತಿರಲಿಲ್ಲ, ಆದರೂ ಅಲ್ಲಿ ನನಗೆ ಬಿಲಾಂಗಿಂಗ್‌ನ ಭಾವನೆ ಬಾಗಿನದ ಕಥೆಗಳಲ್ಲಿ ಸಿಕ್ಕಿತು. ಬಾಗೀನದ ಕಥೆ ಹೇಳುವಾಗ ಅದು ಸರಿ ತಪ್ಪು ಎಂದು ಶರಾ ಹಾಕುವ ಅವಶ್ಯಕತೆ ಇಲ್ಲ, ಹಾಗೆ ಶರಾ ಹಾಕುವುದು ತಪ್ಪೂ ಕೂಡ. ಸುಮ್ಮನೇ ಬಾಗಿನದ ಕತೆ ಹೇಳಿ. ಅಲ್ಲೇನಾಗುತ್ತೆ ಎಂದು ವಿವರವಾಗಿ, ನೈಜತೆಯಿಂದ ಹೇಳಿ ಸಾಕು. ಆ ವಿವರಗಳೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಸರಿಯೋ ತಪ್ಪೋ ಎಂಬುದನ್ನು ನೋಡುಗರೇ ತೀರ್ಮಾನಿಸಲಿ.

ನನ್ನ ವಯಸ್ಕ ಜೀವನದ ಬಹುಪಾಲು ಸಮಯ ಮುಂಬಯಿಯಲ್ಲಿ ಕಳೆದಿದ್ದರಿಂದ ನನಗೆ ದಕ್ಷಿಣದ ಸಿನೆಮಾಗಳ ಪರಿಚಯ ಅಷ್ಟಕ್ಕಷ್ಟೇ. ಯಾವುದೋ ಒಂದು ತಮಿಳು ಸಿನೆಮಾ ನೋಡುತ್ತಿದ್ದಾಗ ದಂಗಾಗಿಬಿಟ್ಟೆ. ಅವರ ಬಟ್ಟೆ, ಅವರ ಮುಖಗಳು, ಅವರ ಮನೆ, ಪರಿಸರ ಎಲ್ಲವೂ ಎಷ್ಟು ನೈಜವಾಗಿತ್ತೆಂದರೆ, ನಾನು ಬೆಳೆದ ಗ್ರಾಮೀಣ ಕರ್ನಾಟಕಕ್ಕೂ ಆ ಚಿತ್ರದಲ್ಲಿಯ ತಮಿಳುನಾಡಿಗೂ ಹೆಚ್ಚಿನ ವ್ಯತ್ಯಾಸ ಕಾಣಿಸಲಿಲ್ಲ. ಅಲ್ಲಿನ ಇನ್ನಷ್ಟು ಸಿನೆಮಾಗಳನ್ನು ನೋಡಿದಾಗ, ಅವರು ಇತರರಾಗಲು ಬಯಸದೇ ತಮ್ಮ ಕಥೆಗಳನ್ನೇ ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ತಿಳಿಯಿತು.

ಹಿಂದಿ ಚಿತ್ರರಂಗದಲ್ಲಿ ಕರಣ್‌ಜೋಹರ್ ಮುಂತಾದವರು ಬಂದ ಸಮಯದಲ್ಲಿ, ಎನ್‌ಆರ್‌ಐಗಳ, ಅವರ ತೋರಿಕೆಯ ಸಂಸ್ಕೃತಿಯ, ಅತೀ ಶ್ರೀಮಂತರ, ಅವರ ಮದುವೆಗಳ ನೂರಾರು ಚಿತ್ರಗಳು ಬಂದವು. ನಿಜಾರ್ಥದಲ್ಲಿ ಅವುಗಳು ಯಾರಿಗೂ ಬಿಲಾಂಗಿಂಗ್‌ನ ಭಾವನೆ ಕೊಡಲಿಲ್ಲ. ಅವುಗಳು ನಮ್ಮೊಳಗೆ ಅಡಗಿದ್ದ, ಮೇಲ್ಮನೆಯ ಅಪೇಕ್ಷೆಯ ಭಾವನೆಗಳನ್ನು ಬಳಸಿಕೊಂಡಿದ್ದರು. ನಮ್ಮದಲ್ಲವಾದರೂ ನಾವು ಬಯಸುವ ಸಂಸ್ಕೃತಿಯ ಚಿತ್ರಣವನ್ನು ನೀಡಿದ್ದರು. ಆದರೆ ಎಲ್ಲರಿಗೂ ಅವುಗಳೊಂದಿಗೆ ರಿಲೇಟ್ ಮಾಡಲು ಸಾಧ್ಯವಾಗಲಿಲ್ಲ. ಈ ಬಿಲಾಂಗಿಂಗ್‌ನ ಹುಡುಕಾಟದಲ್ಲಿಯೇ ಭೋಜಪುರಿ ಸಿನೆಮಾ ಹುಟ್ಟಿಕೊಂಡಿತು. ಆದರೆ, ದುರದೃಷ್ಟವಶಾತ್ ಅವುಗಳು ಹಿಂದಿ ಸಿನೆಮಾದ ಬಡ ಕಸಿನ್‌ನಂತೇ ಬಂದವೇ ಹೊರತು, ತಮ್ಮದೇ ಸಂಸ್ಕೃತಿಯ ಕಥೆಗಳನ್ನು ಹೇಳಲಿಲ್ಲ.

ಒಬ್ಬ ವ್ಯಕ್ತಿ ಹೇಗೆ ಸರಿತಪ್ಪುಗಳ ಮಧ್ಯೆ, ನೆನಪು ಕನಸುಗಳ ಮಧ್ಯೆ ತೊಳಲಾಡುತ್ತಾಳೋ/ನೋ, ನಮ್ಮ ಸಮಾಜವೂ, ಸಮುದಾಯಗಳೂ ಅಂತಹ ಘಟ್ಟಗಳ ಮೂಲಕ ಸಾಗುತ್ತಿರುತ್ತದೆ. ಅದನ್ನು ಸರಿ ತಪ್ಪುಗಳ ಕನ್ನಡಕವನ್ನು ತೆಗೆದುಹಾಕಿ, ನಮ್ಮ ಸುತ್ತ ನಡೆಯುತ್ತಿರುವ ಎಲ್ಲವನ್ನೂ ನೋಡುತ್ತ, ನಮ್ಮೆಲ್ಲರ ಕಥೆಗಳನ್ನು ಹೇಳಬೇಕಿದೆ. ಬಹುಶಃ ಅದು ನಮ್ಮ ಬದುಕನ್ನು ಸಹ್ಯಗೊಳಿಸಬಹುದೇನೋ.

  • ರಾಜಶೇಖರ್ ಅಕ್ಕಿ

ಸಿನೆಮಾ ಮತ್ತು ರಂಗಭೂಮಿ ಹಿನ್ನೆಲೆಯವರಾದ ಅಕ್ಕಿ, ಸದಾ ಹೊಸದನ್ನು ಹುಡುಕುವ ಆಕ್ಟಿವಿಸ್ಟ್ ಸಹಾ ಹೌದು..


ಇದನ್ನೂ ಓದಿ: ಈ ತಿಂಗಳು ಒಟಿಟಿಯಲ್ಲಿ ದೊರಕುವ ಕೆಲ ಸಿನಿಮಾ ಮತ್ತು ವೆಬ್‌ ಸರಣಿಗಳಿವು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜಶೇಖರ್ ಅಕ್ಕಿ
+ posts

LEAVE A REPLY

Please enter your comment!
Please enter your name here