Homeಚಳವಳಿಮೋದಿ ತನಿಖೆ ಮಾಡಿಸಲು ಸಿದ್ಧರೇ? ಪ್ರಧಾನಿಗೆ ಬಹಿರಂಗ ಸವಾಲು ಹಾಕಿದ ಮೇಧಾ ಪಾಟ್ಕರ್

ಮೋದಿ ತನಿಖೆ ಮಾಡಿಸಲು ಸಿದ್ಧರೇ? ಪ್ರಧಾನಿಗೆ ಬಹಿರಂಗ ಸವಾಲು ಹಾಕಿದ ಮೇಧಾ ಪಾಟ್ಕರ್

ಸರ್ದಾರ ಸರೋವರ ಅಣೆಕಟ್ಟಿನ ಕಾಮಗಾರಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ಪ್ರಧಾನಮಂತ್ರಿಗಳಿಗೆ ನರ್ಮದಾ ಬಚಾವೋ ಆಂದೋಲನದ ಪರವಾಗಿ ಹೋರಾಟಗಾರ್ತಿ ಮೇಧಾ ಪಾಟ್ಕರ್‍ ಅವರ ಬಹಿರಂಗ ಪತ್ರ

- Advertisement -
- Advertisement -

ಮಹಾರಾಷ್ಟ್ರದ ಮೇಧಾ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಚಳುವಳಿಗಳ ಬಗ್ಗೆ ಆಕರ್ಷಿತರಾದವರು. ‘ಟಾಟಾ ಇನ್ಸ್‍ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್’ (TISS) ನಲ್ಲಿ ಓದುವಾಗಲೇ ಹೋರಾಟದ ಕಣಕ್ಕಿಳಿದು, ಅತ್ಯಂತ ಶೋಷಿತ ಸಮುದಾಯಗಳೊಂದಿಗೆ, ಆದಿವಾಸಿಗಳು, ಸ್ಲಂನಿವಾಸಿಗಳು ಮತ್ತು ಇನ್ನಿತರ ಅಂಚಿಗೊತ್ತಲ್ಪಟ್ಟವರೊಂದಿಗೆ ಸೇರಿ ಅವರ ಹಕ್ಕುಗಳಿಗಾಗಿ ಹೋರಾಟಗಳಲ್ಲಿ ತೊಡಗಿದವರು.ಜನರ ಬದುಕು ಮತ್ತು ಪರಿಸರವನ್ನು ನಾಶಗೊಳಿಸಿ ನರ್ಮದಾ ಕಣಿವೆಯಲ್ಲಿ ಕಟ್ಟಲಾಗಿರುವ ಸರ್ದಾರ್ ಸರೋವರ ಆಣೆಕಟ್ಟಿನ ವಿರುದ್ಧ ಕಳೆದ 30 ವರ್ಷಗಳಿಂದ ಅಲ್ಲಿನ ಆದಿವಾಸಿಗಳ ಪರವಾಗಿ ‘ನರ್ಮದಾ ಬಚಾವ್ ಆಂದೋಲನ’ ಕಟ್ಟಿಕೊಂಡು ಸಂಘರ್ಷನಿರತರಾಗಿದ್ದಾರೆ. ನ್ಯಾಷನಲ್ ಅಲೆಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ಸ್‌ನ ರಚನೆಯಲ್ಲೂ ಪಾತ್ರವಹಿಸಿದವರು. ಈ ಲೇಖನವನ್ನು ಮಲ್ಲಿಗೆ ಸಿರಿಮನೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ

ಮಾನ್ಯ ಪ್ರಧಾನಮಂತ್ರಿಯವರೇ,

ನಿಮಗೆ ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆ. ನೀವು ಅಥವಾ ನಿಮ್ಮ ಪಿಎಂಓ ಕಛೇರಿ ನಮ್ಮ ಪತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಆದ್ದರಿಂದಲೇ ಅವುಗಳಿಗೆ ಉತ್ತರಿಸುವ ತೊಂದರೆ ತೆಗೆದುಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದರೂ, ಇನ್ನೊಮ್ಮೆ ನಿಮಗೆ ಪತ್ರ ಬರೆಯಬೇಕಾದ ಸಂದರ್ಭ ಬಂದಿದೆ. ಈ ಪತ್ರದ ಉದ್ದೇಶ ನರ್ಮದಾ ಕಣಿವೆಯ ಜನಸಾಮಾನ್ಯರ ದುಸ್ಥಿತಿಯನ್ನು ಮತ್ತು ಅಲ್ಲಿನ ವಾಸ್ತವಿಕತೆಯನ್ನು ನಿಮ್ಮ ಗಮನಕ್ಕೆ ತರುವುದು. ಏಕೆಂದರೆ, ಹಾಗೆ ಮಾಡದಿದ್ದರೆ ಮುಂದೆ ನೀವು ನಮ್ಮ ಮೇಲೆಯೇ ಆರೋಪ ಹೊರಿಸಬಹುದು- “ನರ್ಮದಾ ಕಣಿವೆಯ ಸಂತ್ರಸ್ತಲಾಗಲಿರುವ ಬಡಜನರ ನೈಜ ಪರಿಸ್ಥಿತಿಯನ್ನು ನಾವುಗಳು ನಿಮಗೆ ಸರಿಯಾಗಿ ತಿಳಿಸಲಿಲ್ಲ ಮತ್ತು ಮಾಹಿತಿಯ ಕೊರತೆಯಿಂದ ನಮ್ಮ ಸರ್ಕಾರ ಸಾವಿರಾರು ಆದಿವಾಸಿಗಳನ್ನೂ, ಬಡರೈತರನ್ನೂ ಯಾವುದೇ ಪುನರ್ವಸತಿಯನ್ನೂ ಕೊಡದೆ ಮುಳುಗಿಸಿಬಿಟ್ಟಿತು”- ಎಂದು. ಆ ಆರೋಪ ಬರಬಾರದೆಂದು ಈ ಪತ್ರ. ನನ್ನ ಮಾತುಗಳು ನಿಮಗೆ ಕಠೋರವೆನ್ನಿಸಬಹುದು; ಆದರೆ ನನ್ನ ಉದ್ದೇಶದಲ್ಲಿ ತಪ್ಪಿಲ್ಲ!

ಮೋದಿಯವರೇ, ನೀವು ಭಾರತದ ಪ್ರಜಾತಾಂತ್ರಿಕ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿ ಬಂದ ಪ್ರಧಾನಮಂತ್ರಿಯಾಗಿದ್ದೀರಿ. ಆದ್ದರಿಂದ, ನರ್ಮದಾ ಕಣಿವೆಯ ಜನರ ಮಾತುಗಳನ್ನು ನಿಮಗೆ ತಲುಪಿಸುವುದಕ್ಕಾಗಿ ನಿಮ್ಮ ಭೇಟಿಗೆ ಸಮಯ ನಿಗದಿಪಡಿಸಿ ತಿಳಿಸಲು ಕೋರಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ನಿಮ್ಮ ‘ಮನದ ಮಾತು (ಮನ್ ಕಿ ಬಾತ್)’ ಏನೆಂಬುದನ್ನು ನನಗೆ ಈಗಲೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇಷ್ಟಂತೂ ಅರ್ಥವಾಯಿತು- ನಿಮ್ಮನ್ನು ಬಿಟ್ಟು ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳ ಜೊತೆ ಮಾತುಕತೆ ಸಾಧ್ಯವಾಗಿತ್ತು, ಶ್ರೀ ವಾಜಪೇಯಿಯವರನ್ನೂ ಒಳಗೊಂಡು; ಆದರೆ ನಿಮ್ಮೊಂದಿಗೆ ಅದು ಸಾಧ್ಯವಿಲ್ಲ ಎಂದು. ಒಂದು ವೇಳೆ ನೀವು ನಮ್ಮ ಮಾತುಗಳನ್ನು ಕೇಳಿದ್ದರೆ, ನೀವು ಘೋಷಿಸಲು ಹೊರಟಿರುವ ಸರ್ದಾರ್ ಸರೋವರ ಅಣೆಕಟ್ಟಿನ ಯಶಸ್ಸಿನ ಬಾಜಾಬಜಂತ್ರಿ ಢೋಲು ವಾದ್ಯಗಳ ನಾದದ ಬದಲು, ಅಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಳ್ಳುತ್ತಿರುವ ನರ್ಮದಾ ಕಣಿವೆಯ ಮೂಲನಿವಾಸಿಗಳ ಆಕ್ರಂದನ ನಿಮ್ಮ ಕಿವಿತುಂಬುವ ಸಾಧ್ಯತೆಯಿತ್ತು. ಅಲ್ಲಿ ಮುಳುಗಡೆಯಾಗುತ್ತಿರುವ ಪ್ರತಿ ಮರ, ಪ್ರತಿ ಚದರ ಕಾಡು, ನರ್ಮದಾ ನದಿಯ ವಾಹನವಾದ ಮೊಸಳೆಗಳು, ಅಲ್ಲಿನ ಪ್ರತಿ ಜೀವಿಜಂತುಗಳು ಮತ್ತು ಅವುಗಳೊಂದಿಗೇನೆ ಪ್ರತಿ ನಿಮಿಷವೂ ಕೂಡಿ ಬದುಕುತ್ತಿರುವ ಆದಿವಾಸಿಗಳ ಧ್ವನಿ ಖಂಡಿತವಾಗಿ ನಿಮಗೆ ಕೇಳಿಬರುತ್ತಿತ್ತು.

ಸರ್ದಾರ್ ವಲ್ಲಭಾಯಿ ಪಟೇಲರ ಪ್ರತಿಮೆಗೆ ಬೆಟ್ಟಗುಡಗಳಲ್ಲಿ ಬದುಕುವ ನಾಲ್ಕು ಆದಿವಾಸಿ ಮಹಿಳೆಯರಿಂದ ಹಾರ ಹಾಕಿಸಿ ತೆಗೆಯಲಾದ ಫೋಟೋ ಇತ್ತೀಚೆಗೆ ನಮ್ಮ ಕಣ್ಣಿಗೆ ಬಿತ್ತು. ಹಾಗೆಯೇ, ಸರ್ದಾರ್ ಸರೋವರ ಅಣೆಕಟ್ಟಿನ ಗೇಟುಗಳಿಂದ ಹರಿಯುತ್ತಿರುವ ನೀರನ್ನು ಅದು ಪ್ರಾಕೃತಿಕ ಜಲಪಾತವೇನೋ ಎಂಬಂತೆ ‘ಬಹಳ ಸುಂದರವಾಗಿದೆ’ ಎಂದು ಹೊಗಳುತ್ತಾ ನೀವು ಆಡಿದ ಮಾತುಗಳೂ ಕಿವಿಗೆ ಬಿದ್ದವು. ಆದರೆ, ಇದೇ ಅಣೆಕಟ್ಟಿನ ಗೇಟುಗಳನ್ನು ಪೂರ್ಣ ತೆರೆದಾಗ ಸದ್ಯದಲ್ಲೇ ಮುಳುಗಡೆಯಾಗಲಿರುವ ಉತ್ತರ ಮತ್ತು ದತ್ತಾತ್ರೇಯ ಕ್ಷೇತ್ರದ ಮೇಲ್ಭಾಗದ ಗುಜರಾತ್, ಪಶ್ಚಿಮ ಮಹಾರಾಷ್ಟ್ರ, ಮಧ್ಯಪ್ರದೇಶದ ಒಂದು ಭಾಗ-ಇವೇ ಮೊದಲಾದೆಡೆಯ ಇಲ್ಲಿನ ಮೂಲನಿವಾಸಿಗಳ ಬದುಕು ಹೇಗಿರಬಹುದು? ಇದನ್ನು ವರ್ಣಿಸಿ ನೀವಾಡಿದ ಯಾವ ಮಾತುಗಳೂ ನಮಗೆ ಕೇಳಿಬರಲಿಲ್ಲ. ಅದು ನಿಮ್ಮ ಕಣ್ಣಿಗೆ ಕಾಣಲೆಂದೇ ನಾನು ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಈ ಬಾರಿ ದೆಹಲಿಯ ಗದ್ದುಗೆ ಹಿಡಿದ 17 ದಿನಗಳೊಳಗೆ ನೀವು ಸರ್ದಾರ್ ಸರೋವರ ಆಣೆಕಟ್ಟಿನ ಎತ್ತರವನ್ನು ಅದರ ಅತ್ಯಧಿಕ ಮಟ್ಟಕ್ಕೆ ಅಂದರೆ 308 ಮೀಟರ್-ಮುಟ್ಟಿಸುವ ನಿರ್ಧಾರ ಕೈಗೊಂಡಿರಿ. 2006ರಲ್ಲಿ ಸುಪ್ರೀಂ ಕೋರ್ಟ್ ಮನಮೋಹನ್ ಸಿಂಗ್ ಸರ್ಕಾರಕ್ಕೆ ‘ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವವರೆಗೂ ನಿಲ್ಲಿಸಬೇಕು’ ಎಂದು ಈ ಕೆಲಸಕ್ಕೆ ತಡೆಯಾಜ್ಞೆ ನೀಡಿದ್ದರೂ, ಅಷ್ಟೇಕೆ ನರ್ಮದಾ ಟ್ರಿಬ್ಯೂನಲ್ ಆದೇಶದ ಅವಕಾಶವನ್ನೂ ಕಾಲಡಿ ಹಾಕಿ ತುಳಿದು, ನೀವು ಅಣೆಕಟ್ಟಿನ ಎತ್ತರ ಹೆಚ್ಚಿಸಿ ಗೇಟು ಅಳವಡಿಸುವ ಕೆಲಸ ಮುಗಿಸಿಯೇ ಬಿಟ್ಟಿರಿ. ಅಷ್ಟು ಮಾತ್ರವಲ್ಲ, ಇತ್ತೀಚಿನ ನಿಮ್ಮ ಸಂಸದ್ ಭವನದ ಭಾಷಣದಲ್ಲಿ ಅದರ ಶ್ರೇಯಸ್ಸನ್ನೂ ಕೂಡಾ ನಿಮ್ಮದೇ ಎಂದು ಹೇಳಿದ್ದೀರಿ.

2005ರ ಚುನಾವಣೆಗಳ ಸಂದರ್ಭದಲ್ಲಿ ಸರ್ದಾರ್ ಸರೋವರ ಅಣೆಕಟ್ಟನ್ನು 110 ಅಡಿಗಳವರೆಗೇರಿಸಲು ಬೇಕಾದ ತಮ್ಮ ರಾಜ್ಯದ ಭಾಗದ ಜಮೀನನ್ನು ಮಧ್ಯಪ್ರದೇಶ ಸರ್ಕಾರ ಬಿಟ್ಟುಕೊಟ್ಟಿದ್ದೇ ಆದಲ್ಲಿ, ಇಡೀ ಮಧ್ಯಪ್ರದೇಶವನ್ನು ವಿದ್ಯುತ್ತಿನ ಬೆಳಕಿನಿಂದ ಫಳಫಳ ಹೊಳೆಸುವ ವಾಗ್ದಾನವನ್ನು ತಾವು ಮಾಡಿದ್ದನ್ನು ಮರೆತೇ ಬಿಟ್ಟೀದ್ದೀರೇನೋ…….! ಅಣೆಕಟ್ಟಿನ ಎತ್ತರ 110ರಿಂದ 120 ಮೀಟರುಗಳಿಗೆ, ಮತ್ತು ಅಲ್ಲಿಂದ ಹಲವು ಪಟ್ಟು ಹೆಚ್ಚುತ್ತಲೇ ಹೋಯಿತೇ ಹೊರತು, ವಾಸ್ತವದಲ್ಲಿ ಈ ಅಣೆಕಟ್ಟಿಗಾಗಿ ಹೆಚ್ಚು ‘ತ್ಯಾಗ’ ಮಾಡಿದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳೆರಡಕ್ಕೂ ತಮ್ಮ ಪಾಲಿನ ವಿದ್ಯುತ್ ಈ ತನಕ ಸಿಗಲಿಲ್ಲ. ನೀರೂ ಸಿಗಲಿಲ್ಲ. ಗುಜರಾತ್ ರಾಜ್ಯ ಈ ಯೋಜನೆಯಲ್ಲಿ ತನ್ನ ಪ್ರಾಥಮಿಕ ಪಾತ್ರವನ್ನು ಮುಂದುಮಾಡಿಕೊಂಡು ನೆರೆಹೊರೆ ರಾಜ್ಯಗಳಿಗೆ ಒಂದು ರೀತಿಯಲ್ಲಿ ಮೋಸವನ್ನೇ ಮಾಡಿತು.

ಇದು ಸರ್ಕಾರದ ಮಟ್ಟದಲ್ಲೇ ನಡೆದ ಭ್ರಷ್ಟಾಚಾರವಲ್ಲವೇ? ಅದೇ ರೀತಿ ನಿರಾಶ್ರಿತರಾದವರ ಅಂಕಿ-ಸಂಖ್ಯೆ ಮತ್ತು ಅವರಿಗೆ ನೀಡಬೇಕಾದ ಪುನರ್ವಸತಿ-ಪರಿಹಾರದ ಮೊತ್ತದ ಬಗ್ಗೆಯೂ ಎಲ್ಲ ರಾಜ್ಯಗಳ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನೇ ನೀಡುತ್ತಾ ಹೋದರು. ಈ ಬಗ್ಗೆ ಸತತವಾಗಿ ನಿಮ್ಮದೇ ಸರ್ಕಾರದ ಭಾಗವಾಗಿರುವ ಬೇರೆ ಬೇರೆ ಮಂತ್ರಿಗಳು ಹಲವು ಸಂದರ್ಭಗಳಲ್ಲಿ ಮಾತನಾಡಿದರೂ ಇದನ್ನೆಲ್ಲ ತಡೆಯಲು ಏನೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಬರೆದ ಪತ್ರಕ್ಕೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆಯ ಉತ್ತರ ಅತ್ಯಂತ ಆಘಾತಕರವಾಗಿತ್ತು. 2014ರಲ್ಲಾಗಲೇ ಅಣೆಕಟ್ಟಿನ ಸಂಪೂರ್ಣ ಮಟ್ಟಕ್ಕೆ ನೀರು ತುಂಬಿದೆ ಮತ್ತು ಅದರಿಂದ ಸಂತ್ರಸ್ತರಾಗುವ ಎಲ್ಲರಿಗೂ ಪರಿಹಾರ-ಪುನರ್ವಸತಿಯನ್ನು ಕಲ್ಪಿಸಿಯೂ ಆಗಿದೆ ಎಂದು ಇಲಾಖೆ ಉತ್ತರ ನೀಡಿದೆ. ಇಲಾಖೆಗಿರುವ ಇವೇ ತಪ್ಪು ಅಂಕಿ- ಅಂಶ ಆಧಾರಿತ ಮಾಹಿತಿಯನ್ನೇ ಸರ್ವೋಚ್ಛ ನ್ಯಾಯಾಲಯಕ್ಕೂ ನೀಡುವ ಮೂಲಕ ಅದನ್ನೂ ಕೂಡಾ ದಿಕ್ಕುತಪ್ಪಿಸಲಾಗಿದೆ.

ಮಧ್ಯಪ್ರದೇಶ ಸರ್ಕಾರವು ಪುನರ್ವಸತಿಯಲ್ಲಿ ಜಮೀನಿನ ಬದಲಿಗೆ ಅಕೌಂಟಿಗೆ ನಗದು ಹಾಕುವ ಯೋಜನೆ ಘೋಷಿಸಿದ ಕೂಡಲೇ, ದಿಢೀರನೇ 1600 ಸುಳ್ಳು ಫಲಾನುಭವಿಗಳ ರಿಜಿಸ್ಟ್ರೇಷನ್ ಅಧಿಕಾರಿಗಳ ಶಾಮೀಲುದಾರಿಕೆಯೊಂದಿಗೇ ನಡೆಯಿತು. ಈಗ ಅವರೆಲ್ಲರಿಗೂ ಪರಿಹಾರ ಕೊಡಬೇಕಾಗಿ ಬಂದುದಕ್ಕೆ ಕಾರಣರಾದ ಭ್ರಷ್ಟರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬಲ್ಲಿರೇ?

ಇಂತಹ ಭ್ರಷ್ಟಾಚಾರವೇ ಪುನರ್ವಸತಿಯ ಪ್ರತಿಯೊಂದು ಹೆಜ್ಜೆಯಲ್ಲಿ ಪ್ರತಿಯೊಂದು ನಿರ್ಮಾಣದಲ್ಲಿ ಅತಿದೊಡ್ಡ ಅಡ್ಡಿಯಾಗಿ ಪರಿವರ್ತನೆಯಾಗಿದೆ. ಬೇರೆಲ್ಲರ ಭ್ರಷ್ಟಾಚಾರದ ಬಗ್ಗೆ ದೊಡ್ಡ ಮಾತುಗಳಾಡುವ ನೀವು, ನಿಮ್ಮದೇ ಕಣ್ಣಳತೆಯಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟತೆಯ ಕುರಿತು ಯಾಕೆ ಎಲ್ಲೂ ಪ್ರಸ್ತಾಪವನ್ನೂ ಮಾಡಿಲ್ಲ? ಈ ಬಗ್ಗೆ ತನಿಖೆ ನಡೆಸಲು ನೀವು ಆದೇಶ ನೀಡಬಲ್ಲಿರೇ? ನೀಡಿದ್ದೇ ಆದರೆ, ಸಾಕ್ಷ್ಯಾಧಾರ ಸಮೇತ ನಾವು ಅವನ್ನು ಸಾಬೀತುಮಾಡಲು ಸಿದ್ಧರಿದ್ದೇವೆ.

ಇಡೀ ಯೋಜನೆಯಲ್ಲಿ ಇಂತಹ ಭಾರೀ ಹುಳುಕುಗಳಿವೆ. ಸ್ವಲ್ಪ ತಡೆಯಿರಿ ಪ್ರಧಾನಮಂತ್ರಿಗಳೇ, ಬಡವರ ಬದುಕಿನ ಜೊತೆಗೆ ಈ ಎಲ್ಲ ದಾಖಲೆಗಳನ್ನೂ ಮುಳುಗಿಸಿಬಿಡಬೇಡಿ. ಪುನರ್ವಸತಿ ಪೂರ್ಣಪ್ರಮಾಣದಲ್ಲಿ ಆಗುವವರೆಗೆ ಅಣೆಕಟ್ಟಿನಲ್ಲಿ ಪೂರ್ತಿ ನೀರು ತುಂಬಿಸಬೇಡಿ. ಹೀಗೆ ನಿಮ್ಮನ್ನು ಒತ್ತಾಯಿಸುತ್ತಾ ಮಹಾರಾಷ್ಟ್ರ ಮಧ್ಯಪ್ರದೇಶಗಳಲ್ಲಿ ಮಾತ್ರವಲ್ಲ, ನಿಮ್ಮ ಸ್ವಂತ ರಾಜ್ಯ ಗುಜರಾತಿನಲ್ಲೂ ಆದಿವಾಸಿಗಳು ಹೋರಾಟದಲ್ಲಿ ತೊಡಗಿದ್ದಾರೆ. ಅದನ್ನೂ ಸ್ವಲ್ಪ ಕೇಳಿಸಿಕೊಳ್ಳಿ. ಇದಿಷ್ಟೇ ಹೇಳಲಿಕ್ಕಿರುವುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...