ಅಸ್ಸಾಂನ ಧೋಲ್ಪುರ್ ಗ್ರಾಮದಲ್ಲಿ ಗುರುವಾರ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆದಿತ್ತು. ಈ ಸಂದರ್ಭ ಬನಿಯನ್ ಮತ್ತು ಲುಂಗಿ ಧರಿಸಿದ್ದ ವ್ಯಕ್ತಿಯೊಬ್ಬರು ಕೋಲು ಹಿಡಿದುಕೊಂಡು ಪೊಲೀಸರನ್ನು ಬೆನ್ನಟ್ಟಿದ್ದರು. ಆದರೆ ಅವರನ್ನು ಪೊಲೀಸರು ಗುಂಡಿಟ್ಟು, ಅಮಾನವೀಯವಾಗಿ ಥಳಿಸಿ, ತುಳಿದು ಕೊಲೆ ಮಾಡಲಾಗಿದೆ. ಅವರನ್ನು 28 ವರ್ಷದ ಮೊಯಿನುಲ್ ಹಕ್ ಎಂದು ಗುರುತಿಸಲಾಗಿದೆ.
ಮೂವರು ಮಕ್ಕಳ ತಂದೆಯಾಗಿರುವ ಮೊಯಿನುಲ್ ಹಕ್, ಒಂದು ತುಂಡು ಭೂಮಿಯಲ್ಲಿ ತರಕಾರಿ ಬೆಳೆದು ಕುಟುಂಬವನ್ನು ಮುನ್ನಡೆಸುತ್ತಿದ್ದರು. ಆದರೆ ಸರ್ಕಾರ ಈ ಭೂಮಿ ಅವರದ್ದಲ್ಲ ಎಂದು ಪ್ರತಿಪಾದಿಸಿ ಅವರನ್ನು ಸ್ಥಳಾಂತರ ಮಾಡಲು ಹೊರಟಿತ್ತು. ಇದನ್ನು ವಿರೋಧಿಸಿ ಅವರು ಪೊಲೀಸರ ವಿರುದ್ದ ಪ್ರತಿಭಟಿಸಿದ್ದರು.
“ಅವರು ನನ್ನ ಮಗನನ್ನು ಕೊಂದಿದ್ದಾರೆ. ನಾವು ಬಾಂಗ್ಲಾದೇಶಿಯರೇ? ಹಾಗಾದರೆ ನಮ್ಮನ್ನು ಅಲ್ಲಿಗೆ ಕಳುಹಿಸಿ” ಎಂದು ತನ್ನ ಮಗನ ಸಾವಿನ ಬಗ್ಗೆ ಮೊಯಿನುಲ್ ಅವರ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಯಿನುಲ್ ಹಕ್ ಅವರ ಪತ್ನಿ ಮತ್ತು ತಾಯಿ ಅಸಮಾಧಾನದಿಂದ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ: ಮನೆ ತೆರವು ವಿರೋಧಿಸಿ ಪ್ರತಿಭಟಿಸಿದ ವ್ಯಕ್ತಿಗೆ ಶೂಟ್ ಮಾಡಿ, ಅಮಾನವೀಯವಾಗಿ ಥಳಿಸಿದ ಅಸ್ಸಾಂ ಪೊಲೀಸ್
ಮುಯೀನುಲ್ ಅವರ ಹತ್ಯೆಯ ಬಗ್ಗೆ ದೇಶದಾದ್ಯಂತ ಆಕ್ರೋಶ ಹೆಚ್ಚುತ್ತಿದ್ದಂತೆ ಅವರನ್ನು ಬಾಂಗ್ಲಾದೇಶದಿಂದ ಅತಿಕ್ರಮವಾಗಿ ದೇಶಕ್ಕೆ ಬಂದವರು ಎಂದು ಬಿಂಬಿಸಲಾಗಿತ್ತು. ಆದರೆ ಮೊಯೀನುಲ್ ಅವರ ಹೆಸರು ಎನ್‌ಆರ್‌ಸಿಯಲ್ಲಿದೆ ಎಂದು ಪತ್ರಕರ್ತರು ದೃಢೀಕರಿಸಿದ್ದು, ಅವರು ಅಕ್ರಮ ನಿವಾಸಿಯಲ್ಲ ಎಂದು ತಿಳಿಸಿದ್ದಾರೆ. ಅವರು ಆಧಾರ್ ಕಾರ್ಡ್ ಕೂಡಾ ಹೊಂದಿದ್ದರು. ಅವರ ಪೌರತ್ವ ಪ್ರಮಾಣಪತ್ರಗಳ ಹೊರತಾಗಿಯೂ ಅವರನ್ನು ಕ್ಯಾಮರಾ ಮುಂದೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪತ್ರಕರ್ತರು ಉಲ್ಲೇಖಿಸಿದ್ದಾರೆ.
Moinul’s name is in the NRC and had an Aadhaar card, the lack of which has left lakhs of residents in Assam feeling dispossessed.
He was shot point blank on camera despite his citizenship credentials. pic.twitter.com/G8rB4GEaSo
— Makepeace Sitlhou (@makesyoucakes) September 24, 2021
ಅಸ್ಸಾಂನಲ್ಲಿ ಕಳೆದ ಸೋಮವಾರದಿಂದ ಸುಮಾರು 800 ಕುಟುಂಬಗಳನ್ನು ಅವರ ಮನೆಗಳಿಂದ ಹೊರಹಾಕಿ ತಾತ್ಕಾಲಿಕ ಪರಿಹಾರ ಶಿಬಿರದಲ್ಲಿ ಕೂಡಿಹಾಕಲಾಗಿದೆ ಎಂದು ಎನ್‌ಡಿಟಿವಿ ಹೇಳಿದೆ.
ಇದನ್ನೂ ಓದಿ: ಅಸ್ಸಾಂ: ಪೋಲೀಸರ ಗುಂಡಿಗೆ ಮೃತಪಟ್ಟ ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಛಾಯಾಗ್ರಾಹಕನ ಬಂಧನ
7 ಮತ್ತು 2 ವರ್ಷದ ಇಬ್ಬರು ಹುಡುಗರು ಮತ್ತು ಐದು ವರ್ಷದ ಹೆಣ್ಣು ಮಗುವಿನ ತಂದೆಯಾಗಿರುವ ಮುಯಿನುಲ್ ಹಕ್ ಅವರ ಮೃತದೇಹವನ್ನು ಸಿಪಾಜಾರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪರಿಹಾರ ಘೋಷಿಸುವವರೆಗೂ ಸ್ಥಳೀಯರು ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ತಿಳಿಸಿವೆ.
What protocol orders firing to the chest of a lone man coming running with a stick @DGPAssamPolice @assampolice ? Who is the man in civil clothes with a camera who repeatedly jumps with bloodthirsty hate on the body of the fallen (probably dead) man? pic.twitter.com/gqt9pMbXDq
— Kavita Krishnan (@kavita_krishnan) September 23, 2021
ಗೋರುಖುಟಿ ಮತ್ತು ಧೋಲ್ಪುರ್ 1, 2 ಮತ್ತು 3 ಒಟ್ಟು ನಾಲ್ಕು ಪ್ರದೇಶಗಳಿಂದ ಗ್ರಾಮಸ್ಥರನ್ನು ಪೋಲಿಸರು ಹೊರಹಾಕಿದ್ದಾರೆ. ಮೊಯಿನುಲ್ ಹಕ್ ಅವರ ಹತ್ಯೆಯ ಘಟನೆಯು ಧೋಲ್ಪುರ-3 ನೇ ಗ್ರಾಮದಲ್ಲಿ ನಡೆದಿದೆ. ಪ್ರದೇಶಗಳನ್ನು ಖಾಲಿ ಮಾಡುವ ಬಗ್ಗೆಗಿನ ನೋಟಿಸ್ ಅನ್ನು ಬುಧವಾರ ರಾತ್ರಿ ನೀಡಲಾಗಿದ್ದು, ಗುರುವಾರ ಬೆಳಿಗ್ಗೆ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಆರಂಭವಾಗಿದೆ. ವರದಿಗಳ ಪ್ರಕಾರ ಎರಡು ಮಸೀದಿಗಳನ್ನು ಈಗಾಗಲೆ ನೆಲಸಮ ಮಾಡಲಾಗಿದೆ.
ಗುರುವಾರ ನಡೆದ ಹಿಂಸಾಚಾರದ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಪೊಲೀಸರ ಜೊತೆಗೆ ಹಲ್ಲೆ ನಡೆಸಿದ್ದ ಛಾಯಾಚಿತ್ರಗಾಹಕ ಬಿಜಯ್ ಬೋನಿಯಾ ಬಂಧನಕ್ಕೆ ಒಳಗಾಗಿದ್ದಾರೆ. ಸ್ಥಳೀಯ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದು ಕೂಡಾ ‘ಜಿಹಾದ್’ – ಅಸ್ಸಾಂ ಸಿಎಂ
ದಾಳಿಯನ್ನು ವಿರೋಧಿಸಿ, ‘ಅಖಿಲ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟ’ (AAMSU) ಅಸ್ಸಾಂನ ಹಲವಾರು ಭಾಗಗಳಲ್ಲಿ ಪ್ರತಿಟನೆ ನಡೆಸಿದೆ. ಜೊತೆಗೆ ದಾರ್‍ರಾಂಗ್ ಜಿಲ್ಲೆಯಲ್ಲಿ ಮುಂಜಾನೆಯಿಂದ ಮುಸ್ಸಂಜೆವರೆಗೂ ಬಂದ್‌ಗೆ ಕರೆ ನೀಡಲಾಗಿದೆ.
ರಾಜ್ಯದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡಾ ದರ್ರಾಂಗ್ ಜಿಲ್ಲಾ ಕೇಂದ್ರವಾದ ಮಂಗಳದೈನಲ್ಲಿ ಪ್ರತಿಭಟನೆ ನಡೆಸಿದೆ. ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಬೋರಾಹ್ ಸೇರಿದಂತೆ ಪಕ್ಷದ ನಾಯಕರು ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಘಟನೆಯನ್ನು ಖಂಡಿಸಿದ್ದು, “ಅಸ್ಸಾಂ ರಾಜ್ಯವು ಪ್ರಭುತ್ವ ಪ್ರಾಯೋಜಿತ ಬೆಂಕಿಯಲ್ಲಿದೆ. ನಾನು ರಾಜ್ಯದ ನಮ್ಮ ಸಹೋದರ ಸಹೋದರಿಯರ ಪರವಾಗಿ ನಿಲ್ಲುತ್ತೇನೆ. ಭಾರತದ ಯಾವುದೇ ಮಕ್ಕಳು ಈ ಕ್ರೂರತೆಗೆ ಅರ್ಹರಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಎಲ್ಲದರ ನಡುವೆ, ಅಸ್ಸಾಂ ಸಿಎಂ ಹಿಮಾಂತ ಅವರು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ನೀವು ಒಂದು ವೀಡಿಯೊದಿಂದ ರಾಜ್ಯ ಸರ್ಕಾರವನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. 1983 ರಿಂದ ಆ ಪ್ರದೇಶವು ಕೊಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲದಿದ್ದರೆ, ಸಾಮಾನ್ಯವಾಗಿ ಜನರು ದೇವಾಲಯದ ಭೂಮಿಯನ್ನು ಅತಿಕ್ರಮಿಸುವುದಿಲ್ಲ. ನಾನು ಅಲ್ಲಿನ ಅತಿಕ್ರಮಣಗಳನ್ನು ನೋಡಿದ್ದೇನೆ. ಶಾಂತಿಯುತ ಎತ್ತಂಗಡಿಗೆ ಒಪ್ಪಿಕೊಳ್ಳಲಾಗಿತ್ತು, ಆದರೆ ಅವರನ್ನು ಪ್ರಚೋದಿಸಿದವರು ಯಾರು?” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಆಡಳಿತದ ಅಸ್ಸಾಂನ ಮುಖ್ಯಮಂತ್ರಿ ವಿರುದ್ದ ಎಫ್‌ಐಆರ್ ದಾಖಲು!