ಪಂಜಾಬ್‌ನ ಅಮೃತಸರದ ಮಜಿತಾ ಪ್ರದೇಶದ ಐದು ಹಳ್ಳಿಗಳಲ್ಲಿ ವಿಷಕಾರಿ ನಕಲಿ ಮದ್ಯ ಸೇವಿಸಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಪಂಜಾಬ್ ಪೊಲೀಸರು ಪ್ರಮುಖ ಮದ್ಯ ಸರಬರಾಜುದಾರ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ನಕಲಿ ಮದ್ಯದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.
ಗಂಭೀರ ಸ್ಥಿತಿಯಲ್ಲಿರುವವರನ್ನು ಅಮೃತಸರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಅಮೃತಸರದ ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ವಾಂಡಿ ಘುಮಾನ್ ಗ್ರಾಮಗಳ ಯುವಕರು ಸಾವಿಗೀಡಾಗಿದ್ದಾರೆ. ಭುಲ್ಲರ್, ತಂಗ್ರಾ ಮತ್ತು ಸಂಧಾ ಗ್ರಾಮಗಳ ನಿವಾಸಿಗಳೂ ನಕಲಿ ಮದ್ಯ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗ್ರಾಮಗಳ ಅನೇಕ ಮಂದಿ ಅಸ್ವಸ್ಥರಾಗಿದ್ದಾರೆ.
ಅಕ್ರಮ ಮದ್ಯ ವಿತರಣಾ ಜಾಲದ ಕಿಂಗ್‌ಪಿನ್ ಸಾಹಿಬ್ ಸಿಂಗ್ ಮತ್ತು ಮುಖ್ಯ ಪೂರೈಕೆದಾರ ಪ್ರಭ್ಜಿತ್ ಸಿಂಗ್, ಇತರ ಆರೋಪಿಗಳಾದ ಕುಲ್ಬೀರ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ನಿಂದರ್ ಕೌರ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹಿಬ್ ಸಿಂಗ್ ಅನ್ನು ಅಮೃತಸರದ ರಾಜಸಾನ್ಸಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಶಂಕಿತ ಅಕ್ರಮ ಮದ್ಯ ಪೂರೈಕೆದಾರರನ್ನು ಬಂಧಿಸಲು ಪೊಲೀಸ್ ತಂಡಗಳು ಅಕ್ಕ ಪಕ್ಕದ ರಾಜ್ಯಗಳಿಗೂ ತೆರಳಿವೆ ಎಂದು ವರದಿಯಾಗಿದೆ.
ಅಮೃತಸರ (ಗ್ರಾಮೀಣ) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್ ಮಾತನಾಡಿ, “ನಿನ್ನೆ (ಸೋಮವಾರ) ರಾತ್ರಿ 9:30ರ ಸುಮಾರಿಗೆ ಗ್ರಾಮಗಳ ಜನರು ನಕಲಿ ಮದ್ಯ ಸೇವಿಸಿದ್ದಾರೆ. ನಂತರ ಕೆಲವರಲ್ಲಿ ವಿಷ ಸೇವಿಸಿದ ಲಕ್ಷಣಗಳು ಕಂಡು ಬಂದಿವೆ. ಹಲವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಆರೋಪಿಗಳಿಗೆ ಯಾವ ಸಂಸ್ಥೆಗಳು ಮದ್ಯ ಪೂರೈಸಿವೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಅಕ್ರಮ ಮದ್ಯ ಪೂರೈಕೆದಾರರು ಆನ್‌ಲೈನ್‌ನಲ್ಲಿ ರಾಸಾಯನಿಕವನ್ನು ಆರ್ಡರ್ ಮಾಡಿದ್ದಾರೆ. ನಂತರ ಸ್ಥಳೀಯ ಪೂರೈಕೆದಾರರು ಅಕ್ರಮ ಮದ್ಯವನ್ನು ತಯಾರಿಸಿ ಪ್ಯಾಕೆಟ್‌ಗಳಲ್ಲಿ ಹಾಕಿ ದಿನಗೂಲಿ ಕಾರ್ಮಿಕರಿಗೆ ಮಾರಾಟ ಮಾಡಿದ್ದಾರೆ. ಮುಖ್ಯ ಪೂರೈಕೆದಾರರನ್ನು ಬಂಧಿಸಲು ನಮ್ಮ ತಂಡಗಳು ಇತರ ರಾಜ್ಯಗಳಿಗೆ ತೆರಳಿವೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಅಬಕಾರಿ ಕಾಯ್ದೆಯಡಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಅವರು ಮಣೀಂದರ್ ಸಿಂಗ್ ತಿಳಿಸಿದ್ದಾರೆ.
ಅಮೃತಸರದ ಉಪ ಆಯುಕ್ತ ಸಾಕ್ಷಿ ಸಾಹ್ನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
“ಮಜಿತಾ ಪ್ರದೇಶದಲ್ಲಿ ಒಂದು ದುರದೃಷ್ಟಕರ ದುರಂತ ಸಂಭವಿಸಿದೆ. ನಿನ್ನೆ ರಾತ್ರಿ ಐದು ಹಳ್ಳಿಗಳಲ್ಲಿ ಅಕ್ರಮ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ನಮಗೆ ಮಾಹಿತಿ ಬಂದಿತ್ತು. ತಕ್ಷಣ ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿದೆ. ಆ ತಂಡಗಳು ಇನ್ನೂ ಮನೆ ಮನೆಗೆ ತೆರಳಿ ಜನರಲ್ಲಿ ಏನಾದರು ಅಸ್ವಸ್ಥೆಯ ಲಕ್ಷಣಗಳು ಇದೆಯೇ? ಎಂಬುದನ್ನು ಪರಿಶೀಲಿಸುತ್ತಿವೆ. ಅಸ್ವಸ್ಥಗೊಂಡವರನ್ನು ಉಳಿಸಲು ನಾವು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ,” ಎಂದು ಸಾಹ್ನಿ ಹೇಳಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ ಮೃತರು ಭಾನುವಾರ ಸಂಜೆ ಒಂದೇ ಮೂಲದಿಂದ ಮದ್ಯ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ ಕೆಲವರು ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ತಡವಾಗಿ ಸಂಜೆ ನಮಗೆ ಮದ್ಯ ಸೇವಿಸಿ ಸಾವನ್ನಪ್ಪಿದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ” ಎಂದು ಮಜಿತಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಬ್ತಾಬ್ ಸಿಂಗ್ ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ಪಂಜಾಬ್‌ನ ತರಣ್ ತರಣ್, ಅಮೃತಸರ ಮತ್ತು ಗುರುದಾಸ್ಪುರ ಜಿಲ್ಲೆಗಳಲ್ಲಿ ಇದೇ ರೀತಿಯ ಕಳ್ಳಭಟ್ಟಿ ದುರಂತ ಸಂಭವಿಸಿತ್ತು. ಆ ಘಟನೆಯಲ್ಲಿ ಸುಮಾರು 130 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 10ಕ್ಕಿಂತ ಹೆಚ್ಚು ಜನರು ವಿಷಪೂರಿತ ಮದ್ಯ ಸೇವಿಸಿ ದೃಷ್ಟಿ ಕಳೆದುಕೊಂಡಿದ್ದರು.
ಈ ದುರಂತ ಘಟನೆಯು ಪಂಜಾಬ್‌ನ ಗ್ರಾಮೀಣ ಭಾಗಗಳಲ್ಲಿ ನಕಲಿ ಮದ್ಯದ ಅನಿಯಂತ್ರಿತ ಪೂರೈಕೆಯ ಬಗ್ಗೆ ಮತ್ತೊಮ್ಮೆ ಕಳವಳ ಹುಟ್ಟುಹಾಕಿದೆ.
2019 ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಲ್ಲಾ ಒಂಬತ್ತು ಆರೋಪಿಗಳು ದೋಷಿಗಳು ಎಂದು ತೀರ್ಪು