HomeUncategorizedಸಾಣೆಹಳ್ಳಿ ಶ್ರೀ ಗುರಿಯಾಗಿಸಿ ಬಸವ ತತ್ವದ ಮೇಲೆ ದಾಳಿ: ಪ್ರಜ್ಞಾವಂತರ ವೇದಿಕೆ

ಸಾಣೆಹಳ್ಳಿ ಶ್ರೀ ಗುರಿಯಾಗಿಸಿ ಬಸವ ತತ್ವದ ಮೇಲೆ ದಾಳಿ: ಪ್ರಜ್ಞಾವಂತರ ವೇದಿಕೆ

- Advertisement -
- Advertisement -

ಸಾಣೆಹಳ್ಳಿ ಶ್ರೀ ಸೇರಿದಂತೆ ರಾಜ್ಯದ ಧಾರ್ಮಿಕ ಗುರುಗಳು, ಚಿಂತಕರು, ಸಾಹಿತಿಗಳು ಮತ್ತು ಹೋರಾಟಗಾರರ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ದಾಳಿಯು ಬಸವತತ್ವದ ಮೇಲಾದ ದಾಳಿಯ ಮುಂದುವರಿಕೆ ಎಂದು ಕರ್ನಾಟಕ ಪ್ರಜ್ಞಾವಂತರ ವೇದಿಕೆ ಹೇಳಿತು.

ಗಣೇಶನ ಕುರಿತ ಹೇಳಿಕೆ ಮುಂದಿಟ್ಟುಕೊಂಡು ಸಾಣೆಹಳ್ಳಿ ಶ್ರೀ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ದಾಳಿಯನ್ನು ಖಂಡಿಸಿ ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು (ನ.22) ಪ್ರಗತಿಪರರು ಮತ್ತು ಹೋರಾಟಗಾರರಿಂದ ಕರ್ನಾಟಕ ಪ್ರಜ್ಞಾವಂತರ ಅನುಭವ ಮಂಟಪ ಎಂಬ ಹೆಸರಿನಲ್ಲಿ ಖಂಡನಾ ಸಭೆ ನಡೆಯಿತು. ಸಾಣೆಹಳ್ಳಿ ಶ್ರೀ, ಬಸವ ಪ್ರಕಾಶ ಸ್ವಾಮೀಜಿ ಬೆಳಗಾವಿ, ಶಿವಯೋಗಿ ಸ್ವಾಮೀಜಿ ಬೆಂಗಳೂರು ಸೇರಿದಂತೆ ಪ್ರಮುಖರು ಹಾಜರಿದ್ದರು.

ಅನುಭವ ಮಂಟಪ ಸಭೆ ಬಳಿಕ ಪ್ರಜ್ಞಾವಂತರ ವೇದಿಕೆಯ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ಬಸವತ್ವವನ್ನು ಪಸರಿಸಲು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಡಾ. ಸಿದ್ದನಗೌಡ ಪಾಟೀಲ, ವೈದಿಕ ಚಿಂತನೆಯ ಪ್ರತಿಪಾದಕರು ನಾಡಿನ ಪ್ರಗತಿಪರರು, ಬಸವತ್ವ ಪ್ರತಿಪಾದಕರ ಮೇಲೆ ಬಹಳ ವ್ಯವಸ್ಥಿತವಾಗಿ ದಾಳಿ ನಡೆಸುತ್ತಿದ್ದಾರೆ. ಇದೇ ವೈದಿಕ, ಸನಾತನ ಚಿಂತನೆ ಗೌರಿ, ಕಲಬುರಗಿಯನ್ನು ಹತ್ಯೆ ಮಾಡಿದೆ. ಹಾಗಂತ, ನಾವು ಸರ್ಕಾರದ ಕಡೆಯಿಂದ ಯಾವುದೇ ರಕ್ಷಣೆ ಕೇಳುತ್ತಿಲ್ಲ. ನಮ್ಮ ಉದ್ದೇಶ ಬಸವಾದಿ ಶರಣರ ಚಿಂತನೆಯ ಕ್ರಾಂತಿ ಎಂದರು.

ದೇಶದಲ್ಲಿ ಮತ ಧಾರ್ಮಿಕ ರಾಜಕಾರಣ ನಡೆಯುತ್ತಿದೆ. ಗೋಲ್ವಾಲ್ಕರ್‌ ‘ಒಂದು’ ಎಂಬ ಕಲ್ಪನೆ ತಂದರು. ಪ್ರಸ್ತುತ ಮೋದಿ ಸರ್ಕಾರ ಕೂಡ ಒಂದು ದೇಶ- ಒಂದು ಚುನಾವಣೆ, ಒಂದು ಕಾರ್ಡ್ ಇತ್ಯಾದಿಗಳ ಮೂಲಕ ಬಹುತ್ವದ ಮೇಲೆ ದಾಳಿ ಮಾಡುತ್ತಿದೆ. ದೇವಾಲಯವನ್ನು ಖಾಸಗೀಕರಿಸಿ ಅನ್ನವನ್ನು ಸಾಮಾಜಿಕವಾಗಿ ಮಾಡಿದ ಕಾಲವಿತ್ತು. ಆದರೆ, ಕಾರ್ಪೋರೇಟ್ ಜಗತ್ತು ಅನ್ನವನ್ನು ಖಾಸಗೀಕರಿಸಿ ದೇವಾಲಯವನ್ನು ಸಾಮಾಜಿಕ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಮಾತನಾಡಿ, ಅನುಭವ ಮಂಟಪ ಕನ್ನಡ ನೆಲದಲ್ಲಿ ಹುಟ್ಟಿದ ಸಂಘಟನಾ ಶಕ್ತಿಯ ಅಡಿಪಾಯ. ಕನ್ನಡದ ಧರ್ಮ ಶರಣ ಧರ್ಮ. ಶರಣ ಚಿಂತನೆ ಅಪಾಯದಲ್ಲಿದೆ. ಈ ನೆಲದ ಬೆವರಿನ ಬೆಲೆಯ ಶೂದ್ರ ವರ್ಗದ ಮೇಲೆ ಆಶೂದ್ರ ವರ್ಗ ದಾಳಿ ಮಾಡುತ್ತಿದೆ. ದೇಶದ ಸಾಂಸ್ಕೃತಿಕ ಲೋಕ ಪಾರತಂತ್ರ್ಯದ ಒಳಗೆ ನರಳುತ್ತಿದೆ ಎಂದರು.

ಬಸವತತ್ವದ ಮೇಲೆ ಮುಂದುವರಿದ ದಾಳಿಯನ್ನು ವಿರೋಧಿಸಿ ಅನುಭವ ಮಂಟಪ ಸಭೆ ನಡೆಸಲಾಗಿದೆ. ಅನುಭವ ಮಂಟಪ ಯಾವತ್ತೂ ಸ್ಥಾವರವಲ್ಲ ಜಂಗಮ ಎಂದು ಹೇಳಿದರು.

ಸಂಸ್ಕತಿ ಚಿಂತಕ ಡಾ. ಜಯಪ್ರಕಾಶ್ ಬಂಜಗೆರೆ ಮಾತನಾಡಿ, ಚಾತುರ್ವರ್ಣ ವ್ಯವಸ್ಥೆ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸಿ ಮಹಿಳೆಯರು ಮತ್ತು ವೈಚಾರಿಕ ಚಿಂತನೆಯನ್ನು ವಿರೋಧಿಸುತ್ತಿದೆ. ಬಸವ ಪ್ರಜ್ಞೆಯ ಧಮನದ ವಿರುದ್ಧ ಕಾರ್ಯಕ್ರಮ ರೂಪಿಸಲು ನಾವು ನಿರ್ಣಯಿಸಿದ್ದೇವೆ. ಅದಕ್ಕಾಗಿ ಸಮಿತಿ ರಚನೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ ಸಾಣೆಹಳ್ಳಿ ಶ್ರೀ ಮೇಲಿನ ಸೈದ್ದಾಂತಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ವಿದ್ಯಾವಂತರು ವೈಚಾರಿಕ ಚಿಂತನೆಯನ್ನು ವಿರೋಧಿಗಳಾಗುತ್ತಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಸುಳ್ಳು, ಮೌಢ್ಯವನ್ನು ತುಂಬಲಾಗ್ತಿದೆ. ಚರಿತ್ರೆಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ. ಬಾಯಲ್ಲಿ ಮಾತ್ರ ಬಸವಣ್ಣನ ಜಪ ಮಾಡಿ ಅದಕ್ಕೆ ತದ್ವಿರುದ್ದವಾಗಿ ನಡೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾನವ ಬಂದುತ್ವ ವೇದಿಕೆಯ ಲೀಲಾ ಮಾತನಾಡಿ, ಸಾಣೆಹಳ್ಳಿ ಶ್ರೀ ಕೇವಲ ಸಾಂಕೇತಿಕ. ಕೋಮುವಾದಿ, ಸನಾತನವಾದಿಗಳು ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಹೆರಿಗೆ, ಮುಟ್ಟು, ಬಟ್ಟೆ ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಗುರಿಯಾಗಿಸುತ್ತಿದ್ದಾರೆ ಎಂದರು.

ಸಿರಿಗೆರೆ ಮೂಲ ಮಠ, ಸಾಣೆಹಳ್ಳಿ ಅದರ ಶಾಖಾ ಮಠ, ಸಿರಿಗೆರೆ ಸ್ವಾಮೀಜಿ ಮತ್ತು ಸಾಣೆಹಳ್ಳಿ ಸ್ವಾಮೀಜಿ ಗಣೇಶನ ಕುರಿತು ತದ್ವಿರುದ್ದ ಹೇಳಿಕೆ ನೀಡಿದ್ದಾರಲ್ಲ ಎಂದು ಪತ್ರಕರ್ತರು ಕೇಳಿದಕ್ಕೆ, ಆ ಕುರಿತು ಸಿರಿಗೆರೆ ಸ್ವಾಮೀಜಿಯನ್ನೇ ಕೇಳಿ. ಸಾಣೆಹಳ್ಳಿ ಶ್ರೀಗಳ ಮೇಲಿನ ದಾಳಿ ಸಂಬಂಧ ನಾವು ಯಾವುದೇ ಕಾನೂನು ಹೋರಾಟ ಮಾಡುವುದಿಲ್ಲ. ಬಸವತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿದ್ದವರು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರು: ಯತೀಂಖಾನಾ ವಿರುದ್ಧ ಎಫ್‌ಐಆರ್‌ಗೆ NCPCR ಸೂಚನೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...