Homeಚಳವಳಿಬಿಜೆಪಿ ತನಗೆ ತಾನೇ ಮಸಿ ಬಳಿದುಕೊಂಡಿದೆ: ಪ್ರಕಾಶ್ ಕಮ್ಮರಡಿ ಆಕ್ರೋಶ

ಬಿಜೆಪಿ ತನಗೆ ತಾನೇ ಮಸಿ ಬಳಿದುಕೊಂಡಿದೆ: ಪ್ರಕಾಶ್ ಕಮ್ಮರಡಿ ಆಕ್ರೋಶ

ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ನಾಡಿನಾದ್ಯಂತ ರೈತ ಹೋರಾಟದ ವತಿಯಿಂದ 'ಕರಾಳ ದಿನ' ಆಚರಣೆ ನಡೆದಿದೆ.

- Advertisement -
- Advertisement -

ರಾಜ್ಯ ಬಿಜೆಪಿ ಸರ್ಕಾರ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿಯಲು ಹೋಗಿ ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಂಡಿದೆ ಎಂದು ಕೃಷಿ ಬೆಲೆ ನಿಗಧಿ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಯಾರ ಮಾತಿಗೂ ಮಣಿಯುವುದಿಲ್ಲ, ಅವರನ್ನು ಮಣಿಸಲು ಸಾಧ್ಯವಿಲ್ಲ ಎಂದೇ ಹೇಳುತ್ತಾರೆ. ಆದರೆ, ರೈತ ಹೋರಾಟದ ಎದುರು ಅವರು ತಲೆಬಾಗಲೇಬೇಕಿತ್ತು. ರೈತರು ಒಟ್ಟಾಗಿ ಮೋದಿಯನ್ನು ಮಣಿಸಿದ್ದರು. ಈ ಮೂಲಕ ದೇಶದ ರೈತ ಹೋರಾಟ ತನ್ನ ಪ್ರಾಮಾಣಿಕತೆಯನ್ನು ಮೆರೆದಿತ್ತು. ಆದರೆ, ಈ ಹೋರಾಟವನ್ನು ಮುನ್ನಡೆಸಿದ ನಾಯಕರ ಮೇಲೆ ಮಸಿ ದಾಳಿ ಮಾಡುವ ಮೂಲಕ ಬಿಜೆಪಿ ಸರ್ಕಾರ ತನ್ನ ಮುಖಕ್ಕೆ ತಾನೇ ಮಸಿ ಎರಚಿಕೊಂಡಿದೆ” ಎಂದು ಕಿಡಿಕಾರಿದರು.

“ಭಿನ್ನ ಅಭಿಪ್ರಾಯಗಳನ್ನೂ ಗೌರವಿಸುವುದು ಪ್ರಜಾಪ್ರಭುತ್ವದ ಸೌಂದರ್ಯ. ಆದರೆ, ಭಾರತೀಯ ಜನತಾ ಪಕ್ಷ ಭಿನ್ನ ಅಭಿಪ್ರಾಯಗಳನ್ನು ಗೌರವಿಸುವುದಿರಲಿ, ಪರಿಗಣಿಸುವುದೂ ಇಲ್ಲ. ಇದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ರಾಕೇಶ್ ಟಿಕಾಯತ್ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿನ ಹೆಸರಿಗೂ ಮಸಿ ಬಳಿದುಬಿಟ್ಟಿದೆ” ಎಂದು ವಿಷಾದಿಸಿದರು.

ಬಿಜೆಪಿ ಸರ್ಕಾರ ದೇಶದ ರೈತ ಹೋರಾಟವನ್ನು ಮುಗಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿದೆ. ರಾಕೇಶ್ ಟಿಕಾಯತ್ ಮೇಲಿನ ಮಸಿ ದಾಳಿಯೂ ಅದರ ಒಂದು ಭಾಗ. ಆದರೆ, ಬಿಜೆಪಿಗರ ಯಾವ ಸಂಚಿಗೂ ರೈತ ಹೋರಾಟ ಬಗ್ಗುವುದಿಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಎಚ್ಚರಿಸಿದ್ದಾರೆ.

“ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಕೇಶ್ ಟಿಕಾಯತ್‌ ನೇತೃತ್ವದಲ್ಲಿ ರೈತರು ಒಂದೂವರೆ ವರ್ಷ ದೆಹಲಿಯಲ್ಲಿ ಹೋರಾಟ ನಡೆಸಿದ್ದರು. ರೈತ ಹೋರಾಟದ ಎದುರು ಕೊನೆಗೂ ಕೇಂದ್ರ ಸರ್ಕಾರ ಮಂಡಿಯೂರಿತ್ತು. ಆ ಸೇಡನ್ನು ಬಿಜೆಪಿ ಈ ರೀತಿ ತೀರಿಸಿಕೊಳ್ಳುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

“ರಾಕೇಶ್‌ ಟಿಕಾಯತ್ ಮತ್ತು ರೈತರು ಹೋರಾಡಿದ್ದು, ಬಿಜೆಪಿ ಸರ್ಕಾರದ ವಿರುದ್ಧ. ಕರ್ನಾಟಕದಲ್ಲೂ ಅವರದ್ದೇ ಸರ್ಕಾರವಿದೆ. ಟಿಕಾಯತ್ ಮೇಲೆ ಹಲ್ಲೆ ನಡೆಸಿದವರೂ ಬಿಜೆಪಿ ಕಾರ್ಯಕರ್ತರೇ. ಇವನ್ನೆಲ್ಲ ಗಮನಿಸಿದರೆ ಬಿಜೆಪಿ ನಾಯಕರೇ ಮುಂದೆ ನಿಂತು ಹಲ್ಲೆ ನಡೆಸಿದೆ ಮತ್ತು ನಮ್ಮ ಹೋರಾಟವನ್ನು ಹತ್ತಿಕ್ಕಲು ಸರ್ಕಾರವೇ ಸಂಚು ರೂಪಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಇಂತಹ ಕಿಡಿಗೇಡಿತನಗಳಿಗೆ ರೈತರು ಎಂದಿಗೂ ಬಗ್ಗುವುದಿಲ್ಲ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, “ಇಂತಹ ಕಿಡಿಗೇಡಿ ದಾಳಿಗಳ ಮೂಲಕ ರೈತ ಹೋರಾಟದ ಸದ್ದಡಗಿಸಿಬಿಡಬಹುದು ಎಂದು ಬಿಜೆಪಿ ನಾಯಕರು ತಿಳಿದುಕೊಂಡಿದ್ದರೆ ಅದು ಭ್ರಮೆಯಷ್ಟೆ. ಬಿಜೆಪಿ ಸರ್ಕಾರಗಳ ನಡೆಯನ್ನು ಇಡೀ ನಾಡಿನ ಜನ ನೋಡುತ್ತಿದ್ದಾರೆ. ರೈತ ಹೋರಾಟ ಶೀಘ್ರದಲ್ಲೇ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲಿದೆ. ಇದರ ಫಲಿತಾಂಶವನ್ನು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಅನುಭವಿಸಲಿದೆ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರಗೋಡು, ಎಸ್.ಆರ್ ಹೀರೇಮಠ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಸೋಮವಾರ ರೈತ ನಾಯಕ ರಾಕೇಶ್ ಟಿಕಾಯತ್ ಪತ್ರಿಕಾಗೋಷ್ಠಿಗೆ ಸೂಕ್ತ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿತ್ತು. ಪರಿಣಾಮ ಟಿಕಾಯತ್ ಮೇಲೆ ಹಲ್ಲೆ ನಡೆದಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಸ್ವತಂತ್ರ ಉದ್ಯಾನದಲ್ಲಿ ನಡೆದಿದ್ದ ರೈತ ಪ್ರತಿಭಟನೆಗೆ ಬಿಗಿ ಪೊಲೀಸ್ ಭದ್ರತೆ ನೀಡಿತ್ತು. ರೈತರು ಪ್ರತಿಭಟನೆ ನಡೆಸಿದ ಜಾಗದ ಸುತ್ತಲೂ ಪೊಲೀಸ್ ಸರ್ಪಗಾವಲು ನೀಡಲಾಗಿತ್ತು. ಭದ್ರತೆಗೆ ಕನಿಷ್ಟ 50 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು.

ರಾಜ್ಯಾದ್ಯಂತ ಪ್ರತಿಭಟನೆ

ರಾಕೇಶ್ ಟಿಕಾಯತ್ ಮೇಲಿನ ದಾಳಿಯನ್ನು ಖಂಡಿಸಿ ಸಿಂಧನೂರು, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಇಂದು ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ‘ಕರಾಳ ದಿನ’ ಆಚರಿಸಿದರು. ಪ್ರತಿಭಟನೆಯಲ್ಲಿ ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...