Homeಮುಖಪುಟಫ್ಯಾಸಿಸ್ಟರ ನಿರಂಕುಶ ವರ್ತನೆ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ; ಸಂಸದರ ಅಮಾನತು ಆದೇಶಕ್ಕೆ ಉದಯನಿಧಿ ಕಿಡಿ

ಫ್ಯಾಸಿಸ್ಟರ ನಿರಂಕುಶ ವರ್ತನೆ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ; ಸಂಸದರ ಅಮಾನತು ಆದೇಶಕ್ಕೆ ಉದಯನಿಧಿ ಕಿಡಿ

- Advertisement -
- Advertisement -

15 ಜನ ಸಂಸದರ ಅಮಾನತು ಆದೇಶ ವಿರೋಧಿಸಿ ತಮಿಳುನಾಡು ಸಂಸದ ಉದಯನಿಧಿ ಸ್ಟಾಲಿನ್ ಕಿಡಿಕಾರಿದ್ದಾರೆ. ‘ಫ್ಯಾಸಿಸ್ಟರ ದುರಹಂಕಾರ ಮತ್ತು ನಿರಂಕುಶ ವರ್ತನೆಯು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಡಿಎಂಕೆ ಕನಿಮೊಳಿ ಮತ್ತು ಎಸ್‌ಆರ್‌ ಪಾರ್ಥಿಬನ್ ಸೇರಿದಂತೆ ಪ್ರತಿಪಕ್ಷಗಳ 15 ಸಂಸದರ ಅಮಾನತು ಮಾಡಲಾಗಿದೆ. ಕೇಂದ್ರದ ಈ ನಡೆ ಅತ್ಯಂತ ಖಂಡನೀಯವಾಗಿದೆ. ಫ್ಯಾಸಿಸ್ಟರ ದುರಹಂಕಾರ ಮತ್ತು ನಿರಂಕುಶ ವರ್ತನೆಯು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಸಂಸತ್ತಿನಲ್ಲಿ ಗಂಭೀರ ಭದ್ರತಾ ಲೋಪವನ್ನು ಪ್ರಶ್ನಿಸುವ ಜನಪ್ರತಿನಿಧಿಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ವಗಳ ಮೇಲಿನ ಸ್ಪಷ್ಟ ದಾಳಿಯಾಗಿದೆ. ಕೇಂದ್ರ ಸರ್ಕಾರ ತನ್ನ ಅಸಹಿಷ್ಣು ಧೋರಣೆ ಕೈಬಿಟ್ಟು ಸಂಸದರ ಅಮಾನತು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಲೋಪದ ಬಗ್ಗೆ ಮಾತನಾಡಲು ಯಾಕಿಷ್ಟು ಭಯ?

ತನ್ನ ಐದು ಜನ ಸಂಸದರನ್ನು ಅಮಾನತು ಮಾಡಿರುವುದಕ್ಕೆ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿ, ‘ಭದ್ರತಾ ಲೋಪದ ಬಗ್ಗೆ ಮಾತನಾಡಲು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಗೆ ಯಾಕಿಷ್ಟು ಭಯ? ಸಂಸತ್ತಿನ ಮೇಲೆ ದಾಳಿಯಾಗಲು ಸಹಕರಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡುವುದಿರಲಿ ಕನಿಷ್ಠ ವಿಚಾರಣೆಗೂ ಒಳಪಡಿಸಲಿಲ್ಲ. ಭದ್ರತಾ ಲೋಪವನ್ನು ಚರ್ಚಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್‌ನ 5 ಸಂಸದರನ್ನು ಕಲಾಪದಿಂದ ಅಮಾನಾತು ಮಾಡಲಾಗಿದೆ. ಭದ್ರತಾ ಲೋಪದ ಬಗ್ಗೆ ಮಾತನಾಡಲು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಹಾಗೂ ಲೋಕಸಭಾ ಸ್ಪೀಕರ್ ಗೆ ಯಾಕಿಷ್ಟು ಭಯ. ಇದು ಬಿಜೆಪಿ ಪ್ರಾಯೋಜಿತ ಘಟನೆಯೇ’ ಎಂದು ಪ್ರಶ್ನಿಸಿದೆ.

ಒಬ್ರಿಯಾನ್ ಮೌನ ಪ್ರತಿಭಟನೆ:

ರಾಜ್ಯಸಭೆಯ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಿದ್ದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಸಂಸತ್ತಿನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು. ‘ಮೌನ ಪ್ರತಿಭಟನೆ’ ಎಂದು ಮೂರು ಭಾಷೆಗಳಲ್ಲಿ ಬರೆದ ಕಾಗದವನ್ನು ಓಬ್ರಿಯಾನ್ ಕೈಯಲ್ಲಿ ಹಿಡಿದಿದ್ದರು; ಇನ್ನೊಂದು ಕಾಗದವನ್ನು ಅವರ ಬೆನ್ನಿಗೆ ಅಂಟಿಸಿಕೊಂಡಿದ್ದರು. ಒಬ್ರಿಯಾನ್ ಅವರ ನಡವಳಿಕೆ ಗಂಭೀರ ದುರ್ನಡತೆ ಮತ್ತು ನಾಚಿಕೆಗೇಡಿ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ನಿನ್ನೆ ಟೀಕಿಸಿದ್ದರು.

ಕಣ್ತಪ್ಪಿನಿಂದ ಪಾರ್ಥಿಬನ್ ಹೆಸರು ಸೇರ್ಪಡೆ!

ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಗುರುವಾರ ನಡೆದ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಂಡ 14 ಪ್ರತಿಪಕ್ಷಗಳ ಸಂಸದರಲ್ಲಿ ಡಿಎಂಕೆ ನಾಯಕ ಎಸ್‌ಆರ್ ಪಾರ್ಥಿಬನ್ ಅವರ ಹೆಸರೂ ಸೇರಿದೆ. ಪಾರ್ಥಿಬನ್ ಅವರ ಹೆಸರು ಕಣ್ತಪ್ಪಿನಿಂದ ಸೇರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ’13 ಜನ ವಿರೋಧ ಪಕ್ಷದ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಅಮಾನತುಗೊಂಡ ಸಂಸದರ ಪೈಕಿ ಎಸ್ ಆರ್ ಪಾರ್ಥಿಬನ್ ಅವರು ಸದನದಲ್ಲಿ ಇರಲಿಲ್ಲ (ಅವರು ಚೆನ್ನೈನಲ್ಲಿದ್ದಾರೆ) ಎಂದು ಉಳಿದ ಸಂಸದರು ದೂರಿದ್ದರು. ‘ಒಬ್ಬ ಸಂಸದರ ಹೆಸರನ್ನು ಕಣ್ತಪ್ಪಿನಿಂದ ಗುರುತಿಸಲಾಗಿದೆ. ತಪ್ಪಾಗಿ ನಮೂದಿಸಿರುವ ಸಂಸದರ ಹೆಸರನ್ನು ತೆಗೆದುಹಾಕುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿದ್ದು, ಸಭಾಧ್ಯಕ್ಷರು ಮನವಿ ಸ್ವೀಕರಿಸಿದರು’ ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಅಮಿತ್ ಶಾ ಉತ್ತರಕ್ಕೆ ಸಂಸದರ ಆಗ್ರಹ:

ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು. ಆಗ ಸದನದಲ್ಲಿ ತೀವ್ರ ಗದ್ದಲ ಉಂಟಾಗಿದೆ.

ಮಾಣಿಕ್ಕಂ ಠಾಗೋರ್, ಕನಿಮೋಳಿ, ಪಿಆರ್ ನಟರಾಜನ್, ವಿ.ಕೆ. ಶ್ರೀಕಾಂತಂ, ಬೇನಿ ಬಹನ್, ಕೆ. ಸುಬ್ರಮಣ್ಯಂ, ಎಸ್. ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಅವರನ್ನು ಲೋಕಸಭೆಯಿಂದ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ; ತಮಿಳು ಮಹಿಳೆಗೆ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಸಿಐಎಸ್‌ಎಫ್‌ ಸಿಬ್ಬಂದಿ; ಸ್ಟಾಲಿನ್ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...