Homeಕರ್ನಾಟಕಪರಿಶಿಷ್ಟರ ಮತಬುಟ್ಟಿಗೆ ಕೈಹಾಕಿ ಬಿಜೆಪಿ ಎಡವಿದ್ದೆಲ್ಲಿ?

ಪರಿಶಿಷ್ಟರ ಮತಬುಟ್ಟಿಗೆ ಕೈಹಾಕಿ ಬಿಜೆಪಿ ಎಡವಿದ್ದೆಲ್ಲಿ?

- Advertisement -
- Advertisement -

ಚುನಾವಣೆಗಳನ್ನು ಯಾವ ಅಂಶಗಳು ಹೆಚ್ಚು ಪ್ರಭಾವಿಸುತ್ತವೆ? ಎಂದು ಕೇಳಿದರೆ- “ಜಾತಿ ಸಮೀಕರಣ” ಮತ್ತು “ಸಂಪತ್ತಿನ ಕ್ರೋಢೀಕರಣ” ಎಂಬ ಎರಡು ಅಂಶಗಳತ್ತ ಬಹುತೇಕ ಎಲ್ಲ ರಾಜಕೀಯ ವಿಶ್ಲೇಷಕರು ಬೊಟ್ಟು ಮಾಡುತ್ತಾರೆ. ಬಲವಾದ ಆಡಳಿತ ವಿರೋಧಿ ಅಲೆ ಇದ್ದಾಗ, ಸಮುದಾಯಗಳ ವಿಚಾರದಲ್ಲಿ ಉಡಾಫೆ ನಿಲುವುಗಳನ್ನು ತೆಗೆದುಕೊಂಡಾಗ ಆಡಳಿತಾರೂಢ ಪಕ್ಷಗಳ ಲೆಕ್ಕಾಚಾರಗಳು ತಲೆಕೆಳಗಾಗುವುದುಂಟು. ಬಿಜೆಪಿಯ ಸದ್ಯದ ಪರಿಸ್ಥಿತಿ ನೋಡಿದರೆ ಹಾಗೆನಿಸುತ್ತದೆ.

ಲಿಂಗಾಯತ ಸಮುದಾಯ ಸಂಪೂರ್ಣ ತನ್ನ ಹಿಡಿತದಲ್ಲಿದೆ ಎಂದು ಭಾವಿಸಿದ ಬಿಜೆಪಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರನ್ನು ತನ್ನತ್ತ ಸೆಳೆದರೆ ಬಹುಮತ ಸುಲಭವಾದೀತೆಂಬ ಲೆಕ್ಕಾಚಾರದಲ್ಲಿತ್ತು. ಅದಕ್ಕಾಗಿಯೇ ಪರಿಶಿಷ್ಟರ ಮತಗಳನ್ನು ಕೇಂದ್ರೀಕರಿಸುವ ರಾಜಕಾರಣವನ್ನು ಶುರು ಮಾಡಿತ್ತು. ಕಾಂಗ್ರೆಸ್‌ನ ಮತ ಬುಟ್ಟಿಗೆ ಕೈ ಹಾಕಿ ಮಾಡಿದ ತಂತ್ರಗಳೆಲ್ಲ ವಿಫಲವಾಗಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ.

ಇತ್ತ ಲಿಂಗಾಯತ ಮತದಾರರು ಕೈ ಹಿಡಿದಂತೆ ಕಾಣುತ್ತಿಲ್ಲ. ಕಾಂಗ್ರೆಸ್ 51 ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿ, 34ರಲ್ಲಿ ಗೆದ್ದರೆ, ಬಿಜೆಪಿ 68 ಕ್ಷೇತ್ರಗಳಲ್ಲಿ ಲಿಂಗಾಯತರನ್ನು ಕಣಕ್ಕಿಳಿಸಿ, 19ರಲ್ಲಿ ಮಾತ್ರ ಗೆದ್ದಿದೆ. ದಲಿತರನ್ನು ಸೆಳೆಯುವ ಎಲ್ಲ ತಂತ್ರಗಾರಿಕೆಗಳು ವಿಫಲವಾದಂತೆ ಕಾಣುತ್ತಿವೆ. 12 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೂ ಉಳಿದ ಸಾಮಾನ್ಯ ಕ್ಷೇತ್ರಗಳಲ್ಲಿನ ಭಾರಿ ಗೆಲುವು ನೋಡಿದರೆ ಕಾಂಗ್ರೆಸ್‌ನ ಸಾಂಪ್ರದಾಯಿಕ ದಲಿತ ಮತಗಳು ಈ ಚುನಾವಣೆಯಲ್ಲಿ ವಿಭಜನೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

36 ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆದ್ದರೂ 15 ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರಗಳಲ್ಲಿ ಒಂದರಲ್ಲೂ ಈ ಬಾರಿ ಖಾತೆ ತೆರೆದಿಲ್ಲ. ಪ.ಪಂ ಮೀಸಲು ಕ್ಷೇತ್ರಗಳಲ್ಲಿ 14 ಕಾಂಗ್ರೆಸ್ ಪಾಲಾದರೆ, 1 ಕ್ಷೇತ್ರ ಜೆಡಿಎಸ್‌ಗೆ ದಕ್ಕಿದೆ.

ಈ ಚುನಾವಣೆಯಲ್ಲಿ ಎಸ್‌ಸಿ ಮೀಸಲಿನ 21 ಕ್ಷೇತ್ರಗಳು ಕಾಂಗ್ರೆಸ್ಸಿಗೆ, 3 ಜೆಡಿಎಸ್‌ಗೆ ದಕ್ಕಿವೆ. ಹೊಲೆಯ (ಬಲ) ಸಮುದಾಯದ 13 ಅಭ್ಯರ್ಥಿಗಳು, ಮಾದಿಗ (ಎಡ) ಸಮುದಾಯದ 8, ಲಂಬಾಣಿ ಸಮುದಾಯದ 7, ಭೋವಿ ಸಮುದಾಯದ 7 ಅಭ್ಯರ್ಥಿಗಳು, ಇತರೆ ಎಸ್‌ಸಿ ಸಮುದಾಯದ ಒಬ್ಬರು ಶಾಸನಸಭೆಗೆ ಆಯ್ಕೆಯಾಗಿದ್ದಾರೆ.

2018ರಲ್ಲಿ ಹೊಲೆಯ ಸಮುದಾಯಕ್ಕೆ ಬಿಜೆಪಿ 7 ಟಿಕೆಟ್ ನೀಡಿದರೆ, ಕಾಂಗ್ರೆಸ್ 15 ಟಿಕೆಟ್ ನೀಡಿತ್ತು. ಎಡ ಸಮುದಾಯಕ್ಕೆ 11 ಟಿಕೆಟ್ ಬಿಜೆಪಿ ನೀಡಿದರೆ, 8ರಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಭೋವಿ ಸಮುದಾಯಕ್ಕೆ 9 ಬಿಜೆಪಿ, 7 ಕಾಂಗ್ರೆಸ್; ಲಂಬಾಣಿ ಸಮುದಾಯಕ್ಕೆ 6 ಬಿಜೆಪಿ, 5 ಕಾಂಗ್ರೆಸ್ ಟಿಕೆಟ್ ನೀಡಿದ್ದವು. ಇತರೆ ಎಸ್‌ಸಿಗಳಿಗೆ 3 ಕ್ಷೇತ್ರಗಳಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿದ್ದವು. ಫಲಿತಾಂಶ ಬಂದಾಗ- ಬಲ ಸಮುದಾಯದ 3 ಮಂದಿ ಬಿಜೆಪಿಯಿಂದ, ತಲಾ 6 ಮಂದಿ ಕಾಂಗ್ರೆಸ್, ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಎಡ ಸಮುದಾಯದ 5 ಮಂದಿ ಬಿಜೆಪಿಯಿಂದ, ಒಬ್ಬರು ಕಾಂಗ್ರೆಸ್‌ನಿಂದ ಗೆದ್ದಿದ್ದರು. ಭೋವಿ ಸಮುದಾಯದ ತಲಾ ಮೂವರು ಅಭ್ಯರ್ಥಿಗಳು ಕಾಂಗ್ರೆಸ್- ಬಿಜೆಪಿಯಿಂದ ಆಯ್ಕೆಯಾಗಿದ್ದರು. ಲಂಬಾಣಿ ಸಮುದಾಯದ 4 ಮಂದಿ ಬಿಜೆಪಿಯಿಂದ, 3 ಮಂದಿ ಕಾಂಗ್ರೆಸ್‌ನಿಂದ, ಒಬ್ಬರು ಜೆಡಿಎಸ್‌ನಿಂದ ಗೆದ್ದಿದ್ದರು. 16 ಕ್ಷೇತ್ರಗಳಲ್ಲಿ ಬಿಜೆಪಿ, 13ರಲ್ಲಿ ಕಾಂಗ್ರೆಸ್, 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದ್ದವು.

2023ರ ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಹೊಲೆಯ ಸಮುದಾಯಕ್ಕೆ 8, ಮಾದಿಗ ಸಮುದಾಯಕ್ಕೆ 11, ಭೋವಿಗಳಿಗೆ 6, ಲಂಬಾಣಿಗೆ 10, ಇತರೆ ಸಮುದಾಯಕ್ಕೆ 1 ಟಿಕೆಟ್ ಹಂಚಿಕೆ ಮಾಡಿತ್ತು. ಕಾಂಗ್ರೆಸ್- ಹೊಲೆಯರಿಗೆ 16, ಮಾದಿಗರಿಗೆ 9, ಭೋವಿಗೆ 5, ಲಂಬಾಣಿಗೆ 5, ಇತರೆ ಸಮುದಾಯಕ್ಕೆ 1 ಕ್ಷೇತ್ರದಲ್ಲಿ ಟಿಕೆಟ್ ನೀಡಿತ್ತು.

ಜೆಡಿಎಸ್‌ನಿಂದ ಗೆದ್ದ ಅಭ್ಯರ್ಥಿಗಳು: ಮುಳಬಾಗಿಲು- ಸಮೃದ್ಧಿ ಮಂಜುನಾಥ್ (ಬಲ); ಶಿವಮೊಗ್ಗ ಗ್ರಾಮಾಂತರ- ಶಾರದಾ ಪೂರ್ವ ನಾಯ್ಕ್ (ಲಂಬಾಣಿ); ಹಗರಿಬೊಮ್ಮನಹಳ್ಳಿ- ಕೆ.ನೇಮರಾಜ ನಾಯ್ಕ (ಲಂಬಾಣಿ).

ಮೇಲಿನ ಅಂಕಿಅಂಶಗಳ ಪ್ರಕಾರ ಬಿಜೆಪಿಯಿಂದ ಸ್ಪೃಶ್ಯ ಸಮುದಾಯಗಳಾದ ಭೋವಿ, ಲಂಬಾಣಿಯಿಂದ 8 ಮಂದಿ ಈ ಬಾರಿ ಆಯ್ಕೆಯಾದರೆ, ಅಸ್ಪೃಶ್ಯ ಮಾದಿಗ ಸಮುದಾಯದ ಇಬ್ಬರು, ಸುಳ್ಯದಲ್ಲಿ ಆದಿದ್ರಾವಿಡ ಮತ್ತು ಇತರೆ ಸಮುದಾಯದ ಒಬ್ಬರು ಮತ್ತು ಸಕಲೇಶಪುರದಲ್ಲಿ ಹೊಲೆಯ ಸಮುದಾಯದ ಒಬ್ಬರು ಗೆದ್ದಿದ್ದಾರೆ.

ಕಾಂಗ್ರೆಸ್‌ನಿಂದ ಪರಿಶಿಷ್ಟ ಜಾತಿ- ಎಡಗೈ 6, ಬಲಗೈ 11, ಭೋವಿ 3, ಲಂಬಾಣಿ, 1, ಪರಿಶಿಷ್ಟ ಜಾತಿ ಕೊರಚ- 1 ಅಭ್ಯರ್ಥಿಗಳು ಗೆದ್ದಿದ್ದಾರೆ.

ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು: ಯಮಕನಮರಡಿ- ಸತೀಶ್ ಜಾರಕಿಹೊಳಿ, ಸುರಪುರ- ರಾಜಾ ವೆಂಕಟಪ್ಪ ನಾಯಕ, ರಾಯಚೂರು ಗ್ರಾಮಾಂತರ- ಬಸವನಗೌಡ ದದ್ದಲ್, ಮಾನ್ವಿ- ಹಂಪಯ್ಯ ನಾಯಕ, ಮಸ್ಕಿ- ಬಸವನಗೌಡ ತುರ್ವಿಹಾಳ್, ಕಂಪ್ಲಿ- ಜೆ.ಎನ್.ಗಣೇಶ್, ಸಿರಗುಪ್ಪ- ಬಿ.ಎಂ.ನಾಗರಾಜ, ಬಳ್ಳಾರಿ ಗ್ರಾಮಾಂತರ- ನಾಗೇಂದ್ರ, ಸಂಡೂರು- ತುಕಾರಾಂ, ಮೊಳಕಾಲ್ಮೂರು- ವೈ.ಎನ್.ಗೋಪಾಲಕೃಷ್ಣ, ಚಳ್ಳಕೆರೆ- ಟಿ.ರಘುಮೂರ್ತಿ, ಜಗಳೂರು- ಬಿ.ದೇವೇಂದ್ರಪ್ಪ, ಕೂಡ್ಲಗಿ- ಡಾ.ಎನ್.ಟಿ.ಶ್ರೀನಿವಾಸ್, ಎಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು.

ಜೆಡಿಎಸ್ ಅಭ್ಯರ್ಥಿ ಜಿ.ಕರೆಮ್ಮ ಎಸ್‌ಟಿ ಮೀಸಲು ದೇವದುರ್ಗ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಬಿ.ಶ್ರೀರಾಮುಲು

2018ರ ಚುನಾವಣೆಯಲ್ಲಿ ಬಿಜೆಪಿ 6 ಎಸ್‌ಟಿ ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಕಳೆದುಕೊಳ್ಳುವುದಲ್ಲದೆ, ನಾಯಕ ಸಮುದಾಯದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಅವರೂ ಭಾರೀ ಅಂತರದಲ್ಲಿ (29,300) ಸೋತಿದ್ದಾರೆ.

ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಪೆಟ್ಟು ತಿಂದಿದ್ದೇಕೆ?- ಎಂಬುದನ್ನು ಅವಲೋಕಿಸುವ ಮುನ್ನ ಜನಸಂಖ್ಯೆಯ ಅಂಕಿಅಂಶಗಳತ್ತ ಒಮ್ಮೆ ನೋಡೋಣ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಎಂಬುದನ್ನು ಜನಸಂಖ್ಯಾ ಅಂಕಿಅಂಶಗಳೇ ಹೇಳುತ್ತವೆ. 2011ರ ಜನಗಣತಿಯ ಪ್ರಕಾರ ಜಿಲ್ಲಾವಾರು ಪ್ರಭಾವ ಹೀಗಿದೆ:

ಪರಿಶಿಷ್ಟ ಜಾತಿಗಳು: ಕೋಲಾರ 30.32%, ಚಾಮರಾಜನಗರ 25.42%, ಕಲಬುರಗಿ 25.28%, ಚಿಕ್ಕಬಳ್ಳಾಪುರ 24.90%, ಬೀದರ್ 23.47%, ಚಿತ್ರದುರ್ಗ 23.45%, ಯಾದಗಿರಿ 23.28%, ಚಿಕ್ಕಮಗಳೂರು 22.29%, ಬೆಂಗಳೂರು ಗ್ರಾಮಾಂತರ 21.57%, ಬಳ್ಳಾರಿ 21.10%, ರಾಯಚೂರು 20.79%, ಬಿಜಾಪುರ 20.34%, ದಾವಣಗೆರೆ 20.18%.

ಪರಿಶಿಷ್ಟ ಪಂಗಡ: ರಾಯಚೂರು 19.03%, ಬಳ್ಳಾರಿ 18.41%, ಚಿತ್ರದುರ್ಗ 18.23%, ಬೀದರ್ 13.85%, ಯಾದಗಿರಿ 12.51%, ಚಿಕ್ಕಬಳ್ಳಾಪುರ 12.47%, ದಾವಣಗೆರೆ 11.98%, ಕೊಪ್ಪಳ 11.82%, ಚಾಮರಾಜನಗರ 11.78%, ಮೈಸೂರು 11.15%, ಕೊಡಗು 10.47%.

ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಯಾದಗಿರಿ, ಬಿಜಾಪುರ, ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಜನರು ಶೇ.20ರಿಂದ 30ರವರೆಗೆ ಇರುವುದರಿಂದ ಇಲ್ಲಿ ನಿರ್ಣಾಯಕವಾಗಲಿದ್ದಾರೆ. ಹಾಗೆಯೇ ಪರಿಶಿಷ್ಟ ಪಂಗಡದ ಮತಗಳು ಕೊಡಗು, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಶೇ.10ರಿಂದ 20ರಷ್ಟಿವೆ. ಯಾವುದೇ ಸಮುದಾಯದ ಜನರು ಒಂದೆಡೆ ಶೇ.10ಕ್ಕಿಂತ ಹೆಚ್ಚಿದ್ದರೆ ಚುನಾವಣೆ ಮೇಲೆ ಪ್ರಭಾವ ಬೀರುವುದು ಸಾಮಾನ್ಯ.

ಇದನ್ನೂ ಓದಿ: ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ಚುನಾವಣೆ ಫಲಿತಾಂಶಗಳ ಇತಿಹಾಸವನ್ನು ನೋಡಿದರೆ ಎಸ್‌ಸಿ, ಎಸ್‌ಟಿ ಮತದಾರರು ರಾಜ್ಯದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಜೊತೆಯಲ್ಲಿದ್ದಾರೆ. ಅದನ್ನು ಒಡೆದರೆ ಮಾತ್ರ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬಹುದೆಂದು ಆರ್‌ಎಸ್‌ಎಸ್, ಬಿಜೆಪಿ ಊಹಿಸಿತು. ಅದಕ್ಕಾಗಿಯೇ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯವನ್ನು ಮುಖ್ಯವಾಗಿಟ್ಟುಕೊಂಡು 2018ರ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಯ ಭರವಸೆಯನ್ನು ಬಿಜೆಪಿ ನೀಡಿತು. ಪತ್ರಿಕೆಗಳಲ್ಲಿ ಜಾಹೀರಾತುಗಳೂ ಪ್ರಕಟವಾದವು. ಅತಿದೊಡ್ಡ ಪಕ್ಷವಾಗಿ ಹೊಮ್ಮಿದರೂ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂತಿಮವಾಗಿ ಆಪರೇಷನ್ ಕಮಲ ನಡೆದು ಬಿಜೆಪಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಿತು. ನಾಲ್ಕು ವರ್ಷ ಆಡಳಿತದಲ್ಲಿದ್ದ ಬಿಜೆಪಿ, ಪರಿಶಿಷ್ಟ ಸಮುದಾಯಕ್ಕೆ ವಿಶೇಷವಾಗಿ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿಲ್ಲ. ವರ್ಷವರ್ಷವೂ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಕಡಿತಗೊಂಡಿತು. ಹೀಗಿರುವಾಗ ಬಿಜೆಪಿ ಕೈ ಹಾಕಿದ್ದು ’ಮೀಸಲಾತಿ’ ವಿಚಾರಕ್ಕೆ.

ಜಸ್ಟೀಸ್ ಎನ್.ಎನ್.ನಾಗಮೋಹನ ದಾಸ್ ನೇತೃತ್ವದ ಸಮಿತಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೂ ಹೆಚ್ಚಿಸಬೇಕೆಂದು ಸಮಿತಿ ಶಿಫಾರಸು ಮಾಡಿತು. ಆದರೆ ಸಮ್ಮಿಶ್ರ ಸರ್ಕಾರ ವರದಿಯನ್ನು ಜಾರಿ ಮಾಡದಿದ್ದಾಗ, ಅದನ್ನು ಕೈಗೆತ್ತಿಕೊಂಡಿದ್ದು ಬಿಜೆಪಿ ಸರ್ಕಾರ. ನಾಗಮೋಹನದಾಸ್ ಕಮಿಟಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ನಂಬಿಸಲು ಪ್ರಯತ್ನಿಸಿತು. ಆದರೆ ಸಂಸತ್ತಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಈ ಕುರಿತು ಮಾತನಾಡಿ, “ಮೀಸಲಾತಿ ಹೆಚ್ಚಳದ ಪ್ರಸ್ತಾಪ ಕೇಂದ್ರದ ಮುಂದಿದೆಯೇ?” ಎಂದು ಕೇಳಿದರು. ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, “ಕೇಂದ್ರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಇಂತಹ ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟ ಮತ್ತೆ ಆರಂಭವಾಯಿತು. ಬಿಜೆಪಿಗೆ ದಲಿತರ ಮತಗಳು ಅನಿವಾರ್ಯವಾಗಿದ್ದವು. ನಾಲ್ಕು ವರ್ಷ ಸುಮ್ಮನಿದ್ದ ಸರ್ಕಾರ ಅಂತಿಮ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರ ಕೈಗೊಂಡಿತು. ಪರಿಶಿಷ್ಟ ಜಾತಿಯಲ್ಲಿನ ಮೀಸಲಾತಿ ವಿಂಗಡಣೆಗೆ ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ್ದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬದಿಗೆ ಸರಿಸಿ, ಜಾರಿಯೇ ಆಗದಿರುವ ಮೀಸಲಾತಿ ಹೆಚ್ಚಳದಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿರುವುದಾಗಿ ಸುಳ್ಳು ಹೇಳಿತು.

ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿತ್ತು. ಸಾರ್ವಜನಿಕವಾಗಿ ಲಭ್ಯವಾದ ಮಾಹಿತಿಯ ಪ್ರಕಾರ- ಶೇ.33.4ರಷ್ಟಿರುವ ಎಡಗೈ (ಮಾದಿಗ) ಸಮುದಾಯಕ್ಕೆ ಶೇ.6ರಷ್ಟು, ಶೇ.32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ.5ರಷ್ಟು, ಶೇ.23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ.3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಇದನ್ನು ಕಡೆಗಣಿಸಿದ ಬಿಜೆಪಿ ಶೇ.17 ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಹಂಚಿತು. ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.4.5, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿಯನ್ನು ಹಂಚಿಕೆ ಮಾಡುವ ನಿರ್ಣಯವನ್ನು ಸರ್ಕಾರ ಕೈಗೊಂಡಿತು. ಹೆಚ್ಚಳವಾದ 2% ಮೀಸಲಾತಿಯಲ್ಲಿ ಬರೋಬ್ಬರಿ ಒಂದೂವರೆ ಪರ್ಸೆಂಟ್ ಪಾಲನ್ನು ಸ್ಪೃಶ್ಯ ಸಂಬಂಧಿತ ಜಾತಿಗಳಿಗೆ ನೀಡಿದರೆ, ಅಸ್ಪೃಶ್ಯ ಹೊಲೆಯ ಸಮುದಾಯಕ್ಕೆ ಅರ್ಧ ಪರ್ಸೆಂಟ್ ನೀಡಿತು. ಮೀಸಲಾತಿ ಹೆಚ್ಚಳದಲ್ಲಿ ಮಾದಿಗ ಸಮುದಾಯಕ್ಕೆ ಯಾವುದೇ ಪಾಲು ಇಲ್ಲವಾಗಿತ್ತು.

ಸುಪ್ರೀಂಕೋರ್ಟಿನಲ್ಲಿ ಇದುವರೆಗೆ ಬಿದ್ದು ಹೋಗಿರುವ ಎಲ್ಲಾ ಮೀಸಲಾತಿ ಪ್ರಸ್ತಾಪಗಳ ಸಂದರ್ಭದಲ್ಲಿ ಕೋರ್ಟ್ ಕೇಳಿರುವುದು “ನಿಮ್ಮ ಈ ಪ್ರಸ್ತಾಪಕ್ಕೆ ಆಧಾರವಾಗಿ ಯಾವ ಗಣತಿ/ಅಧ್ಯಯನ/ಡೇಟಾ ಇದೆ ಹೇಳಿ” ಎಂದು. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ವಿಚಾರದಲ್ಲಿ ಆಗಿರುವುದು ಅದೇ ಎಂಬುದು ಕಣ್ಣಿಗೆ ಕಾಣುತ್ತಿತ್ತು. ಹೀಗಿರುವಾಗ ಸದಾಶಿವ ಆಯೋಗದ ವಿವರಗಳನ್ನು ಪಕ್ಕಕ್ಕಿಟ್ಟರೆ ಈಗ ಪ್ರಸ್ತಾಪ ಮಾಡಲಾಗಿರುವ ಮೀಸಲಾತಿಗೆ ಆಧಾರವೇನು? ಬಿಜೆಪಿಯ ಉದ್ದೇಶವೇನಾಗಿದೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ಮತ್ತೊಂದೆಡೆ ಒಳಮೀಸಲಾತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದ ಲಂಬಾಣಿ ಸಮುದಾಯ ಬೀದಿಗಿಳಿಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿತು. ಇದೆಲ್ಲದರ ಪರಿಣಾಮ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಕುಸಿತ ಕಂಡಿತು.

3 ರಿಂದ 7%ಗೆ ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದಾಗಿ ಹೇಳಿದರೂ ನಾಯಕ ಸಮುದಾಯ ಬಿಜೆಪಿಯನ್ನು ತಿರಸ್ಕರಿಸಿದ್ದೇಕೆ? ಎಂಬ ಆತ್ಮವಿಮರ್ಶೆಯನ್ನೂ ಬಿಜೆಪಿ ಮಾಡಿಕೊಳ್ಳಬೇಕಿದೆ.

“ಮೀಸಲಾತಿ ಹೆಚ್ಚಳವನ್ನು ಚುನಾವಣೆಯ ಉದ್ದೇಶದಿಂದಲೇ ಮಾಡಿದ್ದು ಸಮುದಾಯದಲ್ಲಿ ನಂಬಿಕೆ ತರಲಿಲ್ಲ. ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿದರೆ ಮಾತ್ರ ಮೀಸಲಾತಿ ಹೆಚ್ಚುತ್ತದೆ ಎಂಬುದು ಸಮುದಾಯಗಳಿಗೆ ಈಗಾಗಲೇ ಮನದಟ್ಟಾಗಿದೆ. ಈ ವಿಚಾರವನ್ನು ಎಸ್‌ಟಿ ಯುವಜನರು ಸಮುದಾಯದಲ್ಲಿ ತಿಳಿಸಿದರು. ಮೀಸಲಾತಿ ಹೆಚ್ಚಳಕ್ಕಾಗಿ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸುಮಾರು 250 ದಿನಗಳ ಕಾಲ ಧರಣಿ ಕುಳಿತ್ತಿದ್ದರು. ಅವರನ್ನು ಬಿಸಿಲಿನಲ್ಲಿ ಕೂರಿಸಿದ್ದು ಬಿಜೆಪಿ ಸರ್ಕಾರ. ಒಬ್ಬರೇ ಒಬ್ಬರು ಹೋಗಿ ಭರವಸೆ ನೀಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಶೇ.17 ಮೀಸಲಾತಿ ಹೆಚ್ಚಿಸುತ್ತೇವೆ ಎಂದರು. ನಾಯಕ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ಭಾರೀ ಅಂತರದಲ್ಲಿ ಸೋಲಲು ಇದು ಮುಖ್ಯ ಕಾರಣವಾಯಿತು. ಧರಣಿ ಕುಳಿತ್ತಿದ್ದ ಸ್ವಾಮೀಜಿಯವರನ್ನು ಶ್ರೀರಾಮುಲು ಭೇಟಿ ಮಾಡಲಿಲ್ಲ ಎಂಬ ಬೇಸರ ಸಮುದಾಯದಲ್ಲಿ ಮುಡುಗಟ್ಟಿತ್ತು. ಇದರ ಪರಿಣಾಮ ಈಗ ಬಿಜೆಪಿ ಮೇಲಾಗಿದೆ. ಈ ಮಾತುಗಳನ್ನು ಒಳಮೀಸಲಾತಿ ವಿಚಾರಕ್ಕೂ ಅನ್ವಯಿಸಿ ಹೇಳಬಹುದು” ಎನ್ನುತ್ತಾರೆ ರಾಜಕೀಯ ವಿಶ್ಲೇಷಕರಾದ ಸಾಕ್ಯ ಸಮಗಾರ.

ಡಾ.ಎಚ್.ವಿ.ವಾಸು

ರಾಜ್ಯದಲ್ಲಿ ಕಾಂಗ್ರೆಸ್ 132-140 ಸ್ಥಾನ ಪಡೆಯಲಿದೆ ಎಂದು ಕರಾರು ವಕ್ಕಾಗಿ ಭವಿಷ್ಯ ನುಡಿದಿದ್ದ ’ಈದಿನ’ ಕನ್ನಡ ಮಾಧ್ಯಮದ ಸಮೀಕ್ಷೆಯು ಬಿಜೆಪಿ ಸರ್ಕಾರದ ವಿರುದ್ಧ ಸಮುದಾಯಗಳಲ್ಲಿ ಇರುವ ಬೇಸರವನ್ನೂ ಬಯಲಿಗೆಳೆದಿತ್ತು. “ಪರಿಶಿಷ್ಟ ಪಂಗಡದ ಶೇ. 67, ಪರಿಶಿಷ್ಟ ಜಾತಿಯ ಶೇ.74 ಜನರು ಬೊಮ್ಮಾಯಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬಾರದು” ಎಂದಿರುವುದಾಗಿ ಸಮೀಕ್ಷೆ ತಿಳಿಸಿತ್ತು. ಈ ಕುರಿತು ಸಮೀಕ್ಷೆಯ ಯೋಜನಾ ಮುಖ್ಯಸ್ಥರಾದ ಡಾ.ಎಚ್.ವಿ.ವಾಸು ಅವರು ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿ, “ಪರಿಶಿಷ್ಟ ಸಮುದಾಯಗಳ ಮೀಸಲು ಕ್ಷೇತ್ರಗಳಲ್ಲಿ ಕೇವಲ ಎಸ್‌ಸಿ, ಎಸ್‌ಟಿಗಳಷ್ಟೇ ಇರುವುದಿಲ್ಲ. ಎಷ್ಟು ದಲಿತರು ವಿವಿಧ ಪಕ್ಷಗಳಿಗೆ ಮತ ಹಾಕಿದ್ದಾರೆಂದು ಸ್ಪಷ್ಟವಾಗಿ ತಿಳಿಯಲು ಸಮೀಕ್ಷೆಗಳನ್ನು ನಡೆಸಬೇಕು. ಇಂಡಿಯಾ ಡುಟೇ ಮೈ ಆಕ್ಸಿಸ್ ಚುನಾವಣೋತ್ತರ ಸಮೀಕ್ಷೆಯು ಈ ಕುರಿತು ಒಂದಿಷ್ಟು ಬೆಳಕು ಚೆಲ್ಲಿದೆ. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂದು ಹೇಳಿದೆ. ನಾವು ಚುನಾವಣಾ ಪೂರ್ವದಲ್ಲಿ ಬಲ ಮತ್ತು ಎಡ ಸಮುದಾಯಗಳೆರಡನ್ನೂ ಪ್ರತ್ಯೇಕಿಸಿ ಸಮೀಕ್ಷೆ ನಡೆಸಿದ್ದೆವು. ಹೊಲೆಯ ಸಮುದಾಯದ ಶೇ.55 ಮಂದಿ ಕಾಂಗ್ರೆಸ್‌ಗೆ ಮತ ಹಾಕುವುದಾಗಿಯೂ, ಮಾದಿಗ ಸಮುದಾಯದ ಶೇ.53ರಷ್ಟು ಮಂದಿ ಕಾಂಗ್ರೆಸ್ ಪರ ಇರುವುದಾಗಿ ಹೇಳಿದ್ದರು. ಉಳಿದ ಮತಗಳು ಇತರರಿಗೆ ಹಂಚಿಹೋಗಿವೆ” ಎಂದು ವಿವರಿಸಿದರು.

“ಬಿಜೆಪಿ ಮೀಸಲು ಕ್ಷೇತ್ರಗಳಲ್ಲಿ ಗೆದ್ದರೂ ಅಲ್ಲಿ ದಲಿತರೆಲ್ಲ ಬಿಜೆಪಿಯನ್ನು ಬೆಂಬಿಸಿದ್ದಾರೆಂದೂ ಅರ್ಥವಲ್ಲ. ಸ್ಪೃಶ್ಯ ಸಮುದಾಯದ ಅಭ್ಯರ್ಥಿಗಳು ಮತ ಕೇಳುವ ರೀತಿಯೂ ಭಿನ್ನವಾಗಿರುತ್ತದೆ. ಈ ಮಾತು ಕಾಂಗ್ರೆಸ್‌ಗೂ ಅನ್ವಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಒಳಮೀಸಲಾತಿ ಪರ ಯುವ ಹೋರಾಟ ಹನುಮೇಶ್ ಗುಂಡೂರ್ ಪ್ರತಿಕ್ರಿಯಿಸಿ, “ಕರ್ನಾಟಕದ ಜನತೆ ಹೇಗೆ ಇಡೀ ಬಿಜೆಪಿಯನ್ನು ತಿರಸ್ಕರಿಸಿದ್ದಾರೋ, ಅದರೊಳಗೆ ದಲಿತ ಸಮುದಾಯವೂ ಒಂದಾಗಿದೆ. ಬೆಲೆ ಏರಿಕೆ, ಬಿಜೆಪಿಯ ದುರಾಳಿತದಿಂದ ಎಲ್ಲರಂತೆ ದಲಿತರೂ ತತ್ತರಿಸಿದ್ದರು. ಮೀಸಲಾತಿ ವಿಚಾರ ಮುಖ್ಯವಾಗಲೇ ಇಲ್ಲ. ಒಳಮೀಸಲಾತಿ ಗೊಂದಲದ ಕುರಿತು ನಿರಂತರವಾಗಿ ನಾವೆಲ್ಲ ಮಾತನಾಡುತ್ತಿದ್ದೆವು. ಇದರಿಂದ ಸಮುದಾಯ ಜಾಗೃತಗೊಂಡಿತು” ಎಂದು ತಿಳಿಸಿದರು.

ಕೊನೆಯದಾಗಿ ಹೇಳುವುದಾದರೆ, ಪ್ರಾಮಾಣಿಕವಾಗಿ ಮತ್ತು ನಿಯಮಬದ್ಧವಾಗಿ ಯಾವುದೇ ಕ್ರಮವನ್ನು ಕೈಗೊಳ್ಳದಿದ್ದರೆ ಸರ್ಕಾರಗಳು ಜನಮನ್ನಣೆಯನ್ನು ಕಳೆದುಕೊಳ್ಳುತ್ತವೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಂತೆ ಕಣ್ಣಾಮುಚ್ಚಾಲೆ ಆಟವನ್ನು ಸಮುದಾಯಗಳೊಂದಿಗೆ ಆಡಿದರೆ, ಈಗ ಬಿಜೆಪಿಗೆ ಬಂದಿರುವ ಸ್ಥಿತಿಯೇ ಕಾಂಗ್ರೆಸ್‌ಗೂ ಬರುವುದು ಖಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read