Homeಮುಖಪುಟತಮಿಳು ಮಹಿಳೆಗೆ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಸಿಐಎಸ್‌ಎಫ್‌ ಸಿಬ್ಬಂದಿ; ಸ್ಟಾಲಿನ್ ಆಕ್ರೋಶ

ತಮಿಳು ಮಹಿಳೆಗೆ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಸಿಐಎಸ್‌ಎಫ್‌ ಸಿಬ್ಬಂದಿ; ಸ್ಟಾಲಿನ್ ಆಕ್ರೋಶ

- Advertisement -
- Advertisement -

ತಮಿಳುನಾಡು ಮಹಿಳೆಗೆ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ವಿರುದ್ಧ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಆಕ್ರೋಶ ಹೊರಹಾಕಿದ್ದಾರೆ.

‘ನನಗೆ ಹಿಂದಿ ಗೊತ್ತಿಲ್ಲ ಎಂದು ಹೇಳಿದ ತಮಿಳು ಹುಡುಗಿಯೊಬ್ಬಳೊಂದಿಗೆ ಗೋವಾ ವಿಮಾನ ನಿಲ್ದಾಣದಲ್ಲಿ ಹಿಂದಿ ಮಾತನಾಡುವಂತೆ ಕೇಂದ್ರ ಕೈಗಾರಿಕೆ ಭದ್ರತಾ ಪಡೆ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ. ತಮಿಳುನಾಡು ಭಾರತದಲ್ಲಿದೆಯೇ? ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದಿ ಕಲಿಯಬೇಕು ಎಂದು ಅವರು ಹೇಳಿದ್ದು, ಇದು ಅತ್ಯಂತ ಖಂಡನೀಯ. ಹಿಂದಿ ಅಧಿಕೃತ ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ ಎಂದು ಇವರಿಗೆ ಹೇಳುವವರು ಯಾರು’ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

‘ಭಾರತವು ವಿವಿಧ ಭಾಷೆಗಳನ್ನು ಮಾತನಾಡುವ ಜನರ ಒಕ್ಕೂಟ ರಾಜ್ಯವಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಎಲ್ಲ ಭಾಷೆಗಳಿಗೆ ಸೂಕ್ತ ಮೌಲ್ಯ ಮತ್ತು ಗೌರವವನ್ನು ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ದಬ್ಬಾಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ: ಉದಯನಿಧಿ

‘ಗೋವಾ ವಿಮಾನ ನಿಲ್ದಾಣದಲ್ಲಿ ಸೈನಿಕರು ಹಿಂದಿಯಲ್ಲಿ ಮಾತನಾಡಿದ್ದು ನನಗೆ ಅರ್ಥವಾಗುತ್ತಿಲ್ಲ ಎಂದು ತಮಿಳುನಾಡಿನ ಮಹಿಳೆಯೊಬ್ಬರು ಹೇಳಿದ್ದಾರೆ. ಆಕೆ ಮಗುವಿನೊಂದಿಗೆ ಇದ್ದಾಳೆ ಎಂಬ ಅಂಶವನ್ನು ಲೆಕ್ಕಿಸದೆ, ‘ಹಿಂದಿ ರಾಷ್ಟ್ರ ಭಾಷೆ, ಇದು ನಿಮಗೆ ತಿಳಿದಿಲ್ಲವೇ?’ ಎಂದಿದ್ದಾರೆ. ದಬ್ಬಾಳಿಕೆ ಮತ್ತು ಬೆದರಿಕೆಯ ಈ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದು ಉದಯನಿಧಿ ಸ್ಟಾಲಿನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಇನ್ನುಮುಂದೆ ವಿಮಾನ ನಿಲ್ದಾಣಗಳಲ್ಲಿ ಇಂತಹ ಘಟನೆಗಳು ನಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಪಡೆ ಇರುವುದು ಭದ್ರತೆಗಾಗಿ; ಹಿಂದಿ ಪಾಠ ನಡೆಸಲು ಅಲ್ಲ. ಬಹುಭಾಷಾ ಭಾರತೀಯ ಒಕ್ಕೂಟದಲ್ಲಿ, ಇತರ ಭಾಷೆಗಳನ್ನು ಮಾತನಾಡುವ ಜನರ ಮೇಲೆ ಹಿಂದಿ ಹೇರಿಕೆಯನ್ನು ಮುಂದುವರಿಸುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ಇಂತಹ ಧೋರಣೆ ಅನುಸರಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಭಾಷೆಯ ಹಕ್ಕು ಕೂಡ ಮಾನವ ಹಕ್ಕು ಎಂಬುದನ್ನು ಫ್ಯಾಸಿಸ್ಟರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಭದ್ರತಾ ತಂಡ ನನ್ನನ್ನು ಅಣಕಿಸಿದರು: ಶರ್ಮಿಳಾ

ಚೆನ್ನೈನ ಇಂಜಿನಿಯರ್ ಶರ್ಮಿಳಾ ರಾಜಶೇಖರ್ ಸಿಐಎಸ್‌ಎಫ್ ಸಿಬ್ಬಂದಿಯಿಂದ ಕಿರುಕುಳ ಅನುಭವಿಸಿದ ಮಹಿಳೆಯಾಗಿದ್ದು, ‘ರಾತ್ರಿ 8.30ಕ್ಕೆ ಚೆನ್ನೈಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅದಕ್ಕೂ ಮುನ್ನ ಭದ್ರತಾ ತಪಾಸಣೆಗಾಗಿ ನನ್ನ ಬ್ಯಾಗ್‌ಗಳನ್ನು ಇಟ್ಟುಕೊಂಡು ಸರದಿಯಲ್ಲಿದ್ದೆ. ಇನ್ನೊಂದು ಟ್ರೇ ತೆಗೆದುಕೊಳ್ಳಿ ಎಂದು ಸಿಐಎಸ್‌ಎಫ್ ಸಿಬ್ಬಂದಿ ನನಗೆ ಹಿಂದಿಯಲ್ಲಿ ಹೇಳಿದ್ದು ಅರ್ಥವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಹಿಂದಿ ಗೊತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ, ಭದ್ರತಾ ಪಡೆ ನನ್ನನ್ನು ಅಣಕಿಸಿದರು. ನಾನು ಎಲ್ಲಿಂದ ಬಂದಿದ್ದು ಎಂದು ಪ್ರಶ್ನಿಸಿದ ಅವರು, ನಾನು ತಮಿಳುನಾಡಿನವಳು ಎಂದು ಉತ್ತರಿಸಿದಾಗ, ತಮಿಳುನಾಡು ಭಾರತದಲ್ಲಿದೆಯೇ ಎಂದು ಕೇಳಿದರು! ಹಿಂದಿ ರಾಷ್ಟ್ರ ಭಾಷೆ ಮತ್ತು ನೀವು ಕಲಿಯಲೇಬೇಕು ಎಂದು ಹೇಳಿದರು’ ಎಂದು ಶರ್ಮಿಳಾ ಹೇಳಿದರು.

‘ಕೂಡಲೇ ನಾನು ಗೂಗಲ್ ಮಾಡುವ ಮೂಲಕ ಹಿಂದಿ ಕೇವಲ ಅಧಿಕೃತ ಭಾಷೆಯಾಗಿದೆ; ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳಿದೆ. ಇಷ್ಟೆಲ್ಲಾ ನಡೆಯುವಾಗ ನಾನು ನನ್ನ ಮೂರು ವರ್ಷದ ಮಗಳ ಜೊತೆಯಲ್ಲಿದ್ದೆ. ಫೋನ್ ತೆಗೆದುಕೊಂಡು ಇಂಟರ್‌ನೆಟ್‌ನಲ್ಲಿ ಹುಡುಕಿದ ನಾನು, ಹಿಂದಿ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆ ಮಾತ್ರ ಎಂದು ತೋರಿಸಿದೆ. ಭದ್ರತಾ ಸಿಬ್ಬಂದಿ ನನ್ನನ್ನು ನಡೆಸಿಕೊಂಡ ರೀತಿ ಅತ್ಯಂತ ಅಮಾನವೀಯ ಹಾಗೂ ಸಂವೇದನಾರಹಿತವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ; ಲೋಕಸಭೆ ಭದ್ರತಾ ಲೋಪ: ‘ಶೂ’ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಗುರುತಿಸಿದ್ದ ಮನೋರಂಜನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...