ಬಯಸಿ ಪಡೆದ ಹೆಣ್ಣು, ಹೊನ್ನು, ಮಣ್ಣು, ಅಧಿಕಾರಗಳು ಪೂರ್ಣ ಅನುಭವಿಸುವ ಮೊದಲೇ ಕೈತಪ್ಪಿದಾಗ ಉಂಟಾಗುವ ವ್ಯಥೆ, ವೇದನೆ, ಹಪಾಹಪಿ, ಅದು ತನಗೇ ‘ನ್ಯಾಯಯುತ’ವಾಗಿ ಸಲ್ಲಬೇಕಾದ್ದು ಎಂದು ಸೃಷ್ಟಿಸಿಕೊಳ್ಳುವ ನೈತಿಕ ಉದ್ಧಟತನ, ಅದನ್ನು ಮರಳಿ ಪಡೆಯಲು ತೊಡುವ ಹಟ, ಛಲ ಇವೆಲ್ಲ ಜಗತ್ತಿನ ಅನೇಕ ಮಹಾಕಾವ್ಯಗಳಲ್ಲಿ, ಮಹಾಕಥನಗಳಲ್ಲಿ ಕೆಲವೆಡೆ ಗಾಢವಾಗಿಯೂ, ಹಲವೆಡೆ ಗುಪ್ತಗಾಮಿನಿಯಾಗಿಯೂ ಗೋಚರಿಸುವ ಅಂಶ. ಸಮಕಾಲೀನ ರಾಜಕಾರಣದಲ್ಲಿಯೂ ಇದರ ಸೆಳಕುಗಳು ಕಂಡುಬರುತ್ತಲೇ ಇರುತ್ತವೆ. ಅದರಲ್ಲಿಯೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸುವ ಮತವನ್ನು ಒಡೆಯುವ, ಮತವನ್ನು ಸೆಳೆಯುವ ಆಟದಲ್ಲಿ ಇದು ಸರ್ವೇಸಾಮಾನ್ಯ.

ಒಂದು ತೆಳು ‘ನ್ಯಾಯಿಕ’ ಕಲ್ಪನೆಯನ್ನು ಜನರ ಮುಂದಿಟ್ಟು, ಸರಿ ಅಥವಾ ತಪ್ಪು ಎನ್ನುವಂತಹ ಎರಡು ಆಯ್ಕೆಗಳಲ್ಲಿ ಒಂದರ ಪರವಾಗಿ ನಿಲ್ಲುವಂತೆ ಜನರನ್ನು ಪ್ರೇರೇಪಿಸುವುದು ಈ ಆಟದ ಒಂದು ಪ್ರಮುಖ ಪಾಠ. ಈ ತಂತ್ರಗಾರಿಕೆಯ ಏಕೈಕ ಅಸ್ತ್ರ, ‘ಜನತಾ ಜನಾರ್ದನನ ಮುಂದೆ ನ್ಯಾಯಭಿಕ್ಷೆಯನ್ನು ಯಾಚಿಸುವುದು’ ಎನ್ನುವ ಚರ್ವಿತಚರ್ವಣ ಸಾಲು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಜೀವನದ ಮಹತ್ವದ ತಿರುವುಗಳು ಮೇಲೆ ಹೇಳಿದ ಅಂಶಗಳ ಸುತ್ತಲೇ ಹೆಚ್ಚು ಗಿರಕಿ ಹೊಡೆದಿರುವಂತಹವು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿನ ಪಲ್ಲಟಗಳ ಜೊತೆಗೇ, ಸ್ಥಳೀಯ ರಾಜಕಾರಣದ ಅದರಲ್ಲಿಯೂ ವಿಶೇಷವಾಗಿ ಲಿಂಗಾಯತ ರಾಜಕಾರಣದ ಏರಿಳಿತಗಳಿಗೆ ಒಡ್ಡಿಕೊಂಡೇ ಬೆಳೆದ ಯಡಿಯೂರಪ್ಪನವರು ಅಧಿಕಾರವನ್ನು ತಮ್ಮ ಮುಷ್ಟಿಯಲ್ಲಿ ಬಂಧಿಸಲು ಹೊರಟಷ್ಟೂ ಅದು ಉಸುಕಿನಂತೆ ಜಾರುವುದನ್ನು ವಿಶೇಷವಾಗಿ ಕಂಡವರು. ಒಂದು ಬಾರಿ ಅಲ್ಪ ಅವಧಿಗೆ ಮುಖ್ಯಮಂತ್ರಿಯಾಗಿ, ಮತ್ತೊಂದು ಬಾರಿ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶವಿದ್ದಾಗಲೂ ಬಣ ರಾಜಕೀಯದ ಮೇಲಾಟ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಎದುರಿಸಬೇಕಾದ ಕಾರಣಕ್ಕೆ ಮೂರು ವರ್ಷಕ್ಕೇ ಅವರ ಅಧಿಕಾರಾವಧಿ ಮೊಟಕುಗೊಂಡಿತು.

ಪ್ರಸಕ್ತ ಅಧಿಕಾರ ಗಾದಿಯಲ್ಲಿ ಒಂದು ತಿಂಗಳು ಕಳೆದಿರುವ ಯಡಿಯೂರಪ್ಪನವರಿಗೆ ತಾವು ಇಷ್ಟೆಲ್ಲ ಬಯಸಿ ಪಡೆದ ಅಧಿಕಾರದ ಲಗಾಮು ಯಾರ ಕೈಯಲ್ಲಿದೆ ಎನ್ನುವ ಪ್ರಶ್ನೆಗಳು ಈಗ ಮೂಡುತ್ತಿರಬಹುದು. ಈಗಿನ ಈ ಸನ್ನಿವೇಶವನ್ನು ಅರಿಯುವುದಕ್ಕೂ ಮುನ್ನ ತುರ್ತು ಪರಿಸ್ಥಿತಿಯ ನಂತರದ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ರಾಜಕಾರಣ ಸಾಗಿ ಬಂದ ಹಾದಿ, ವಹಿಸಿದ ಪಾತ್ರದ ಇತಿಹಾಸವನ್ನೊಮ್ಮೆ ಸ್ಥೂಲವಾಗಿ ಅವಲೋಕಿಸುವುದು ಇಲ್ಲಿ ಅಗತ್ಯ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶಾದ್ಯಂತ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟವು ಜನತಾ ರಂಗವನ್ನು ಅಧಿಕಾರಕ್ಕೆ ತಂದಿತು ಎಂದು ವ್ಯಾಖ್ಯಾನಿಸುವುದು ರಾಜಕೀಯ ನಾಣ್ಯದ ಒಂದು ಮುಖ. ಅದೇ ರೀತಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ವಿಕೇಂದ್ರೀಕರಣವನ್ನು ವ್ಯಾಪಕ ಮಾಡಿದುದರ ಪರಿಣಾಮವಾಗಿ, ಅನೇಕ ರಾಜ್ಯಗಳಲ್ಲಿ ಸ್ಥಳೀಯ ಮೇಲ್ವರ್ಗದ ಜಾತಿಗಳು, ಭೂಮಾಲೀಕರು ಕಾಂಗ್ರೆಸ್ ವಿರುದ್ಧ ಮುನಿದು, ಕಾಂಗ್ರೆಸ್ಸೇತರ ರಾಜಕಾರಣಕ್ಕೆ ಶಕ್ತಿ ತುಂಬಲು ಪ್ರಯತ್ನಿಸಿದ್ದು ಜನತಾ ಪರಿವಾರಕ್ಕೆ ದೇಶದುದ್ದಗಲಕ್ಕೂ ಸ್ಥಳೀಯಮಟ್ಟದಲ್ಲಿ ನೆಲೆ ಕಂಡುಕೊಳ್ಳಲು ಕಾರಣವಾಯಿತು ಎನ್ನುವುದು ಅದೇ ನಾಣ್ಯದ ಇನ್ನೊಂದು ಮುಖ.

ರಾಜಕಾರಣದಲ್ಲಿ ಶಕ್ತಿ ಸಂಚಯವಾಗುವುದು, ಅಧಿಕಾರ ಪಲ್ಲಟಗಳು ಸಂಭವಿಸುವುದು ಸಾಮಾನ್ಯವಾಗಿ, ‘ಒಂದು ಸಕಾರಣ ಹಾಗೂ ಹಲವು ವೈಯಕ್ತಿಕ ಹಿತಾಸಕ್ತಿಗಳು’ ಮುಪ್ಪರಿದಾಗ. ಈ ಅಂಶವನ್ನು ಇಲ್ಲಿ ನೆನೆಯುವುದರ ಉದ್ದೇಶ ಹೇಗೆ ಕರ್ನಾಟಕದಲ್ಲಿ ಅರಸು ಯುಗಾಂತ್ಯದ ನಂತರ ಹುಟ್ಟಿದ ಜನತಾ ಪರಿವಾರ, ಜನರ ಆಶೋತ್ತರಗಳೊಟ್ಟಿಗೇ ಎರಡು ಪ್ರಬಲ ಸಮುದಾಯಗಳ ನಡುವಿನ ಹಗ್ಗಜಗ್ಗಾಟದ ರಾಜಕಾರಣಕ್ಕೂ ವೇದಿಕೆಯಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳುವುದು. ಎರಡು ಪ್ರಮುಖ ಭೂಮಾಲೀಕ ವರ್ಗಗಳು ಹಾಗೂ ಆಗಷ್ಟೇ ಹಿಂದೂ ರಾಷ್ಟ್ರೀಯವಾದದ ಮೂಲಕ ರಾಜಕೀಯ ಶಕ್ತಿಯನ್ನು ಕಂಡುಕೊಳ್ಳಲು ಬಯಸುತ್ತಿದ್ದ ಒಂದು ಸಂಘಟನೆ ಮತ್ತು ಹೊಸ ಆಶೋತ್ತರಗಳನ್ನು ಧ್ವನಿಸುವಂತಹ ಹಲವು ಹೊಸ ಮುಖಗಳನ್ನು ಹೊತ್ತು ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪರಿವಾರ ಅಧಿಕಾರಕ್ಕೆ ಬಂತು. ದಿಟ್ಟ ಜನಪ್ರಿಯತೆಯನ್ನೂ ಗಳಿಸಿತು. ಮುಂದೆ, ಈ ಪಕ್ಷದೊಳಗೆ ಒಕ್ಕಲಿಗ – ಲಿಂಗಾಯತ ಶಕ್ತಿ ಧ್ರುವೀಕರಣದ ನಡುವಿನ ಹಗ್ಗ ಜಗ್ಗಾಟಗಳು ನಡೆದಾಗ ಲಿಂಗಾಯತ ಸಮುದಾಯವು ತಮ್ಮದೇ ಸಮುದಾಯದವರಂತೆ ಭಾವಿಸಿದ್ದ ಹೆಗಡೆಯವರ ಬೆನ್ನಿಗೆ ನಿಂತರೆ, ಒಕ್ಕಲಿಗ ಪಾರಮ್ಯವು ಪಕ್ಷದ ಮೇಲೆ ಹಿಡಿತ ಸಾಧಿಸಿ ಮುಂದೆ ಪಕ್ಷ ಹೋಳಾಯಿತು. ಇತ್ತ ಕಾಂಗ್ರೆಸ್ಸಿನಲ್ಲಿ ಒಮ್ಮೆ ವೀರೇಂದ್ರ ಪಾಟೀಲರ ಅಧಿಕಾರ ಅಂತ್ಯಗೊಂಡ ತರುವಾಯ, ಲಿಂಗಾಯತ ರಾಜಕಾರಣದ ಇಚ್ಛಾಶಕ್ತಿ ಮುಖ ಮಾಡಿದ್ದು ಕಾಂಗ್ರೆಸ್ ಹಾಗೂ ಜನತಾದಳಗಳೆರಡಕ್ಕೂ ಪರ್ಯಾಯವಾದ ರಾಜಕಾರಣದೆಡೆಗೆ.

ಇಂತಹ ಸನ್ನಿವೇಶದಲ್ಲಿ ಹಿಂದೂ ರಾಷ್ಟ್ರೀಯತೆ, ರೈತಪರ ಹೋರಾಟ, ನಿರ್ಭೀತ ಮಾತುಗಾರಿಕೆ, ಛಲತೊಟ್ಟು ಕಾರ್ಯ ಸಾಧಿಸಿಕೊಳ್ಳುವ ಗುಣವುಳ್ಳ ಯಡಿಯೂರಪ್ಪನವರಲ್ಲಿ ಲಿಂಗಾಯತ ಸಮುದಾಯ ಭವಿಷ್ಯದ ನಾಯಕನನ್ನು ಅರಸತೊಡಗಿತು ಹಾಗೂ ಬಿಜೆಪಿಯನ್ನು ಭವಿಷ್ಯದ ಪಕ್ಷವಾಗಿ ಆರಿಸಿಕೊಳ್ಳತೊಡಗಿತು. ಹೀಗೆ ರಾಜ್ಯದಲ್ಲಿ ಆರಂಭವಾದ ಲಿಂಗಾಯತ ರಾಜಕಾರಣ ಮತ್ತು ಹಿಂದೂ ರಾಷ್ಟ್ರೀಯವಾದದ ರಾಜಕಾರಣದ ನಡುವಿನ ಸಮೀಕರಣ ಹಲವು ಏರಿಳಿತಗಳ ನಡುವೆಯೂ ಇಲ್ಲಿಯವರೆಗೆ ಸಾಗಿ ಬಂದಿದೆ. ಕರ್ನಾಟಕದಲ್ಲಿ, ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಬೇರುಗಳು ಗಟ್ಟಿಯಾಗಲು ಲಿಂಗಾಯತ ಸಮುದಾಯ ನೀಡಿದ ಬಲ ದೊಡ್ಡದು.

ಈಗ ಪ್ರಸಕ್ತ ರಾಜ್ಯ ರಾಜಕಾರಣದ ಸನ್ನಿವೇಶಕ್ಕೆ ಮರಳುವುದಾದರೆ, ಹನ್ನೊಂದು ವರ್ಷದ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 2011ರಲ್ಲಿ ಅಧಿಕಾರದಿಂದ ಜಾರಿದ ಯಡಿಯೂರಪ್ಪನವರು 2019ರಲ್ಲಿ ಅಧಿಕಾರಕ್ಕೆ ಮರಳುವ ವೇಳೆಗೆ ರಾಷ್ಟ್ರ ರಾಜಕಾರಣದ ಚಿತ್ರಣವೇ ಬದಲಾಗಿದೆ. ಅಂದು ರಾಜ್ಯದ ಮಟ್ಟಿಗೆ ಬಿಜೆಪಿ ಎಂದರೆ ಯಡಿಯೂರಪ್ಪ ಎಂದಿದ್ದ ಭಾವನೆ ಇಂದು ಹಾಗೇ ಉಳಿದಿಲ್ಲ. ದೇಶದೆಲ್ಲೆಡೆ ಇಂದು ಬಿಜೆಪಿಯೆಂದರೆ ಮೋದಿ ಎನ್ನುವ ಭಾವನೆ ಗಟ್ಟಿಯಾಗಿದೆ. ರಾಜ್ಯವೂ ಇದಕ್ಕೆ ಹೊರತಲ್ಲ. ಹಾಗೆ ನೋಡಿದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ಕೇಂದ್ರದಲ್ಲಿದ್ದವರು ಮೋದಿಯೇ ಹೊರತು ಯಡಿಯೂರಪ್ಪನವರಲ್ಲ. ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿಯಬೇಕೆಂದರೆ ಮೋದಿಯವರ ಜನಪ್ರಿಯತೆಯ ಬಲ ಬಹಳವಾಗಿಯೇ ಬೇಕು ಎನ್ನುವ ಅರಿವು ಈ ಚುನಾವಣೆಯ ವೇಳೆ ನಡೆದ ಎಲ್ಲ ಬಹಿರಂಗ ಪ್ರಚಾರ ಸಮಾವೇಶಗಳಲ್ಲಿ ಯಡಿಯೂರಪ್ಪನವರ ಅನುಭವಕ್ಕೆ ಬಂದಿತ್ತು. ಲಿಂಗಾಯತ ರಾಜಕಾರಣವು ಹಿಂದೂ ರಾಷ್ಟ್ರೀಯತೆಯ ರಾಜಕಾರಣದ ಭಾಗವಾಗಿ ಹೆಚ್ಚೆಚ್ಚು ಹೊಂದಿಕೊಂಡಂತೆಲ್ಲಾ ಯಡಿಯೂರಪ್ಪನವರು ಸಹ ನಿಧಾನವಾಗಿ ಆ ಸಮುದಾಯದ ಮೇಲಿದ್ದ ಹಿಡಿತವನ್ನು ಕಳೆದುಕೊಳ್ಳುತ್ತಿರುವುದು ಕಾಣಿಸತೊಡಗಿತು. ಸದ್ಯದ ಸಂದರ್ಭದಲ್ಲಿ ಯಡಿಯೂರಪ್ಪನವರು ಗರ್ಭಗುಡಿಯ ಆಚೆಗಿರುವ ಉತ್ಸವಮೂರ್ತಿಯಂತೆ ಕಾಣುತ್ತಿದ್ದಾರೆ.

ಜಾರುತ್ತಿರುವ ವಯಸ್ಸು, ಒಂದೊಮ್ಮೆ ಸರೀಕರಾಗಿದ್ದವರೇ ಇಂದು ಬೃಹತ್ತಾಗಿ ಬೆಳೆದು ದೇಶದ ಶಕ್ತಿಪೀಠದಲ್ಲಿ ಕೂತಿರುವ ಚೋದ್ಯ, ಸುದೀರ್ಘ ರಾಜಕೀಯ ಪಗಡೆಯಾಟದ ಮೂಲಕ ಬಹುವಾಗಿ ಆಸೆಪಟ್ಟು ಗಳಿಸಿರುವ ಅಧಿಕಾರವನ್ನು ಶತಾಯಗತಾಯ ಕಾಪಾಡಿಕೊಳ್ಳಬೇಕು ಎನ್ನುವ ಹಠ, ಅಧಿಕಾರದ ತಕ್ಕಡಿಯಲ್ಲಿ ಕಪ್ಪೆಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ತಾವೇ ಆಹ್ವಾನಿಸಿಕೊಂಡಿರುವ ಸವಾಲು ಇದು ಯಡಿಯೂರಪ್ಪನವರ ಈಗಿನ ಸ್ಥಿತಿ.

ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರದ ಪ್ರಕರಣದಿಂದ ಅಧಿಕಾರ ಭಂಗ ಅನುಭವಿಸಿದ ನಂತರ ಯಡಿಯೂರಪ್ಪನವರು ತಾವು ಅಧಿಕಾರದಿಂದ ದೂರವಿರುವ ಹೊತ್ತಲ್ಲಿ ಭರತನಂತೆ ಯಾರಾದರೂ ತಮ್ಮ ಪರವಾಗಿ ರಾಜ್ಯಭಾರ ನಡೆಸಬೇಕು ಎಂದು ಆಶಿಸಿದಂತಿತ್ತು. ಇದಕ್ಕೆ ತಮ್ಮದೇ ಆದ ಕಾರಣವನ್ನು ಅವರು ಹೊಂದಿದ್ದರು. ಬಿಜೆಪಿ-ಜೆಡಿಎಸ್‍ನ ‘ಟ್ವೆಂಟಿ-ಟ್ವೆಂಟಿ’ ಸಮ್ಮಿಶ್ರ ಸರ್ಕಾರದ ವೇಳೆ ಪೂರ್ವ ನಿಗದಿಯಂತೆ ತಮ್ಮನ್ನು ಮುಖ್ಯಮಂತ್ರಿಯಾಗಲು ಜೆಡಿಎಸ್ ಬಿಡಲಿಲ್ಲ. ಹಾಗಾಗಿ ಜೆಡಿಎಸ್‍ನ ವಚನಭ್ರಷ್ಟತೆಯಿಂದಾದ ನಷ್ಟವನ್ನು ಜನತೆ ತಮ್ಮನ್ನು ಆರಿಸುವ ಮೂಲಕ ತುಂಬಿಕೊಟ್ಟಿದ್ದಾರೆ ಎನ್ನುವ ಭಾವನೆ ಅವರಲ್ಲಿ ಗಾಢವಾಗಿತ್ತು. ವಾಸ್ತವ ಕೂಡ ಇದಕ್ಕಿಂತ ತುಂಬಾ ಭಿನ್ನವಾಗಿಯೇನೂ ಇರಲಿಲ್ಲ. ಅಂದು ನಡೆದಿದ್ದ ಚುನಾವಣೆಯಲ್ಲಿ ‘ವಚನಭ್ರಷ್ಟತೆ’ಯ ಹೊರತಾದ ಬೇರಾವ ಚುನಾವಣಾ ವಿಷಯವೂ ಇರಲಿಲ್ಲ. ಇದೆಲ್ಲದರ ಪರಿಣಾಮ ಯಡಿಯೂರಪ್ಪನವರಿಗೆ ಬಿಜೆಪಿಗಿಂತ ಹೆಚ್ಚಾಗಿ ತಮಗೆ ಆಗಿರುವ ವೈಯಕ್ತಿಕ ನಷ್ಟವನ್ನು ಸರಿಪಡಿಸಲು ರಾಜ್ಯದ ಜನತೆ, ಅದರಲ್ಲಿಯೂ ವಿಶೇಷವಾಗಿ ಲಿಂಗಾಯತ ಸಮುದಾಯ ಅಧಿಕಾರ ನೀಡಿದೆ ಎನ್ನುವ ಭಾವನೆ ಹೊಂದಿದಂತೆ ಭಾಸವಾಗುತ್ತಿತ್ತು. ಹಾಗಾಗಿಯೇ ಐದು ವರ್ಷದ ಪೂರ್ಣ ಅವಧಿಗೆ ತಾವು ಮುಖ್ಯಮಂತ್ರಿಯಾಗಿರಬೇಕು ಎಂದು ಅವರು ಭಾವಿಸಿದ್ದರು. ಇದು ಸಾಧ್ಯವಾಗದೆ ಹೋದಾಗ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಬೆಂಬಲ ಇರುವ ಯಾರಾದರೂ ಹಂಗಾಮಿಯಾಗಿ ತಮ್ಮ ಪರವಾಗಿ ಅಧಿಕಾರ ಅನುಭವಿಸಬೇಕು ಎನ್ನುವಂತೆ ಅವರ ಅಂದಿನ ರಾಜಕೀಯ ನಡೆಗಳಿದ್ದವು.

ಆದರೆ, ಅವರು ಅಂದುಕೊಂಡಂತೆ ರಾಜಕೀಯ ಬೆಳವಣಿಗೆಗಳು ಘಟಿಸಲಿಲ್ಲ. ಭ್ರಷ್ಟಾಚಾರದ ಕಳಂಕ ಹೊತ್ತ ಅವರನ್ನು ಪಕ್ಷ ಮೂಲೆ ಗುಂಪು ಮಾಡಿತು. ಬಣ ರಾಜಕೀಯ ಅವರ ಅಸ್ತಿತ್ವವನ್ನು ಜರ್ಝರಿತವಾಗಿಸಿತು. ಹೈಕಮಾಂಡ್ ಅವರಿಂದ ಅಂತರ ಕಾಯ್ದುಕೊಂಡಿತು. ಇದೆಲ್ಲದರ ಪರಿಣಾಮ ತಾವಿಲ್ಲದೆ ರಾಜ್ಯದಲ್ಲಿ ಬಿಜೆಪಿ ಇಲ್ಲ ಎನ್ನುವುದನ್ನು ನಿರೂಪಿಸಲೆನ್ನುವಂತೆ ಅವರು ಕೆಜೆಪಿ ಪಕ್ಷ ಕಟ್ಟಿದರು. ರಾಜ್ಯದುದ್ದಗಲಕ್ಕೂ ತಿರುಗಿ ಬಿಜೆಪಿಯನ್ನು ತಾರಾಮಾರಾ ಜರಿದರು. ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ತಾವು ಅಗತ್ಯ ಮಾತ್ರವೇ ಅಲ್ಲ ಅನಿವಾರ್ಯ ಎನ್ನುವುದನ್ನು ನಿರೂಪಿಸಿ ತೋರಿಸಿದರು; ಇದೇ ವೇಳೆ, ಬಿಜೆಪಿಯಿಲ್ಲದೆ ತಮಗೂ ಸಹ ರಾಜಕಾರಣದಲ್ಲಿ ಹೆಚ್ಚು ದೂರ ಸಾಗಲಾಗದು ಎನ್ನುವ ಸತ್ಯದರ್ಶನವನ್ನೂ ಮಾಡಿಕೊಂಡರು. ಕಡೆಗೆ ಒಂದಷ್ಟು ರಾಜಕೀಯ ಪ್ರಹಸನದ ನಂತರ ತುದಿಗಾಲಲ್ಲಿ ನಿಂತು ಮರಳಿ ಪಕ್ಷವನ್ನು ಸೇರಿಕೊಂಡರು. ಇದೆಲ್ಲಾ ರಾಷ್ಟ್ರರಾಜಕಾರಣದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಸಿಕೊಳ್ಳುವುದಕ್ಕೂ ಮುನ್ನ ನಡೆದ ಘಟನಾವಳಿಗಳು.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತಂದ ತಾವು ಮೋದಿಯವರಿಗಿಂತ ಯಾವುದೇ ಮಟ್ಟದಲ್ಲಿಯೂ ಕಡಿಮೆ ಅಲ್ಲ ಎನ್ನುವ ಸರಿಸಮನಾದ ಭಾವನೆ ದಶಕದ ಹಿಂದೆ ಯಡಿಯೂರಪ್ಪನವರ ಹಾವಭಾವಗಳಲ್ಲಿ ಕಾಣುತ್ತಿತ್ತು. ಆದರೆ, ಇದೆಲ್ಲಾ ಇಂದು ತಿರುವುಮುರುವಾಗಿದೆ. ಈ ಹಿಂದೆ ರಾಜ್ಯ ರಾಜಕಾರಣದ ಮೇಲೆ ತಮಗಿದ್ದ ಹಿಡಿತವನ್ನು ಕುಂದಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬದಿಯಿಂದ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಲ್.ಸಂತೋಷ್ ಈಗ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯ ಬಿಜೆಪಿಯ ಆಗುಹೋಗುಗಳಲ್ಲಿ ಯಡಿಯೂರಪ್ಪನವರ ಮಾತಿಗೆ ಸರಿಸಮನಾಗಿ ಅಥವಾ ತುಸು ಹೆಚ್ಚೇ ಎನಿಸುವಷ್ಟು ಹಿಡಿತವನ್ನು ಸಂತೋಷ್ ಸಾಧಿಸುತ್ತಿದ್ದಾರೆ. ಅಮಿತ್ ಶಾ ಹಾಗೂ ಮೋದಿಯವರ ಬೆಂಬಲವಿಲ್ಲದೆ ಈ ಹಿಡಿತ ಸಂತೋಷ್ ಅವರಿಗೆ ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಚೆನ್ನಾಗಿಯೇ ತಿಳಿದಿದೆ.

ಅಸಲಿಗೆ, ಮೋದಿ ಮತ್ತು ಶಾ ಯಡಿಯೂರಪ್ಪನವರ ರೆಕ್ಕೆಗಳನ್ನು ಅವರು ಪಕ್ಷಕ್ಕೆ ಮರಳಿದ ನಂತರದ ಕಾಲದಿಂದಲೇ ವ್ಯವಸ್ಥಿತವಾಗಿ ಕತ್ತರಿಸುತ್ತಾ ಬಂದಿದ್ದಾರೆ. ದೇಶದ ಯಾವುದೇ ಭಾಗದಲ್ಲಿಯೂ ಬಿಜೆಪಿಯ ಮುಖ ಮೋದಿ ಮಾತ್ರ ಎನ್ನುವ ನಿಲುವಿಗೆ ಬದ್ಧರಾಗಿರುವ, ಈ ನಿಲುವನ್ನೇ ಗೆಲುವಾಗಿ ಪರಿವರ್ತಿಸುತ್ತಾ ಬಂದಿರುವ ಈ ಜೋಡಿ ರಾಜ್ಯದಲ್ಲಿಯೂ ಅದನ್ನೇ ಸಾಧಿಸಿ ತೋರಿಸಿತು. ಯಡಿಯೂರಪ್ಪನವರನ್ನು ಅಧಿಕಾರದ ಹೊಸ್ತಿಲಿನಲ್ಲಿ ನಿಲ್ಲಿಸಿ, ಅವರ ಅಧಿಕಾರದ ಆಸೆಗೆ ಅಗತ್ಯವಿರುವಷ್ಟು ಮಾತ್ರವೇ ಸ್ಪಂದಿಸುತ್ತಾ, ರಾಜ್ಯದಲ್ಲಿನ ಕಾಂಗ್ರೆಸ್ – ಜೆಡಿಎಸ್ ಸರ್ಕಾರವನ್ನು ಕೂಡಲೇ ಕೆಡವಬೇಕೆನ್ನುವ ತವಕವೇನೂ ತಮಗಿಲ್ಲ ಎನ್ನುವುದನ್ನು ಹಲವು ಬಾರಿ ಸೂಚಿಸಿತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ತಮ್ಮ ಆದ್ಯತೆಯ ವಿಷಯವೇನೂ ಅಲ್ಲ, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಬೇರೆಯದೇ ಆದ್ಯತೆಗಳಿರುವಾಗ, ರಾಜ್ಯ ಸರ್ಕಾರವೊಂದನ್ನು ಕೆಡವಲೇಬೇಕು ಎನ್ನುವ ಹಠ ತಮಗೆ ಇಲ್ಲ ಎನ್ನುವಂತೆ ವರ್ತಿಸಿತು. ಇದೆಲ್ಲವೂ ಶೀಘ್ರ ಅಧಿಕಾರ ನಿರೀಕ್ಷೆಯ ಬೇನೆಯಲ್ಲಿ ಯಡಿಯೂರಪ್ಪನವರು ಇನ್ನಿಲ್ಲದಂತೆ ಬೇಯುವಂತೆ ಮಾಡಿತ್ತು.

ವಾಸ್ತವದಲ್ಲಿ ಬಿಜೆಪಿಯ ಹೈಕಮಾಂಡ್ ರಾಜ್ಯದಲ್ಲಿ ಯಡಿಯೂರಪ್ಪನವರ ಹೊರತಾದ ರಾಜಕೀಯ ಸಾಧ್ಯತೆಗಳತ್ತ ಗಮನಹರಿಸಿದೆ. ಯಡಿಯೂರಪ್ಪನವರು ಯಾವಾಗ ಲಿಂಗಾಯತ ರಾಜಕಾರಣವನ್ನು ಬಿಜೆಪಿಯ ರಾಜಕಾರಣದಿಂದ ಬೇರೆ ಮಾಡುವ ಶಕ್ತಿ ಇದೆ ಎಂದು ನಿರೂಪಿಸಲು ಹೊರಟರೋ ಅಂದೇ ಬಿಜೆಪಿಯ ಹೈಕಮಾಂಡ್ ಕರ್ನಾಟಕದಲ್ಲಿ ಪ್ರಬಲ ಜಾತಿಯ ಪ್ರಬಲ ನಾಯಕನೊಬ್ಬನ ನೆರಳಿನಲ್ಲಿ ಹೆಚ್ಚು ದಿನ ಆತುಕೊಳ್ಳುವುದು ಅಪಾಯಕಾರಿ ಎಂದು ಅರಿತಿತ್ತು. ಆದರೆ, ಹಾಗೆಂದು ಯಾವುದೇ ದುಡುಕು ನಿರ್ಧಾರಗಳಿಗೆ ಮುಂದಾಗಲಿಲ್ಲ. ಬದಲಿಗೆ ಲಿಂಗಾಯತ ಸಮುದಾಯದ ವಿಶ್ವಾಸವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುತ್ತಲೇ ಯಡಿಯೂರಪ್ಪನವರನ್ನು ಕ್ರಮೇಣ ನೇಪಥ್ಯಕ್ಕೆ ಸರಿಸುವ ಯೋಜನೆ ಹಮ್ಮಿಕೊಂಡಿತು.

2018ರ ವಿಧಾನಸಭಾ ಚುನಾವಣೆ ಈ ಯೋಜನೆಯನ್ನು ಸಾವಕಾಶವಾಗಿ ಜಾರಿಮಾಡಲು ಬಿಜೆಪಿಗೆ ಸಹಾಯವಾಯಿತು. ಮೋದಿಯವರ ವರ್ಚಸ್ಸಿನ ಮುಂದೆ ಕಳಾಹೀನರಾಗಿದ್ದ ಯಡಿಯೂರಪ್ಪನವರನ್ನು ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಪ್ರಮುಖವಾಗಿ ಬಿಂಬಿಸುವ ಗೋಜಿಗೆ ಮೋದಿ – ಶಾ ಜೋಡಿ ಹೋಗಲಿಲ್ಲ. ಚುನಾವಣೆಯಲ್ಲಿನ ಬಿಜೆಪಿಯ ಸಾಧನೆಯನ್ನು, ಮೋದಿಯವರ ವರ್ಚಸ್ಸು, ಶಾ ತಂತ್ರಗಾರಿಕೆಯ ಸಾಧನೆ ಎಂದೇ ಬಿಂಬಿಸಿತು. ಈ ಬಿಂಬದ ನಡುವೆ ಸಿಲುಕಿರುವ ಯಡಿಯೂರಪ್ಪನವರು ಈಗ ಎಲ್ಲ ಶಸ್ತ್ರಗಳನ್ನೂ ಕೆಳಗೆ ಹಾಕಿರುವ ಯೋಧನಂತಾಗಿದ್ದಾರೆ. ಅಧಿಕಾರದ ರಥವನ್ನೇರಿದ್ದಾರಾದರೂ ಸಾರಥಿ ಯಾರು, ಎತ್ತ ಒಯ್ಯಲಿದ್ದಾನೆ ಎನ್ನುವ ಅರಿವೇ ಇಲ್ಲದಂತೆ ಗೊಂದಲದಲ್ಲಿದ್ದಾರೆ. ಇತ್ತ ದೆಹಲಿಯಲ್ಲಿ ಕೂತು ಲಗಾಮು ಎಳೆಯುತ್ತಿರುವವರು ಇನ್ನೇನಿದ್ದರೂ ಶೀಘ್ರ ‘ಮಾರ್ಗದರ್ಶಕ ಮಂಡಳಿ’ಯ ಕಡೆಗೆ ಎನ್ನುತ್ತಾ ಕುಹಕವಾಡುತ್ತಿದ್ದಾರೆ. ಯಡಿಯೂರಪ್ಪನವರನ್ನು ಬಿಜೆಪಿಯ ಹಿರಿಯರ ವಾನಪ್ರಸ್ಥಾಶ್ರಮ ಎಂದೇ ಪರಿಗಣಿತವಾದ ‘ಮಾರ್ಗದರ್ಶಕ ಮಂಡಳಿ’ಯತ್ತ ಒಯ್ಯುತ್ತಿರುವ ರಥದ ಚಕ್ರಗಳು ಅಲುಗಾಡದಂತೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನಿರ್ಮಿಸಿದೆ ಬಿಜೆಪಿ ಹೈಕಮಾಂಡ್‍.

ಯಡಿಯೂರಪ್ಪನವರು ಇಲ್ಲದೆ ಹೋದಾಗಲೂ ಲಿಂಗಾಯತರು ಅಸಮಾಧಾನಗೊಳ್ಳದಂತೆ ಮಾಡಲು ಹಾಗೂ ತಮ್ಮ ಅಣತಿಯನ್ನು ಮೀರದ ನಾಯಕನನ್ನು ಸೃಷ್ಟಿಸಲು ಲಕ್ಷ್ಮಣ ಸವದಿಯನ್ನು ಮುಂದೆ ತರಲಾಗಿದೆ. ಅದೇ ರೀತಿ ಒಕ್ಕಲಿಗ ಹಾಗೂ ದಲಿತರ ವಿಶ್ವಾಸವನ್ನು, ವಿಶೇಷವಾಗಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ ಬಿಜೆಪಿಯ ಪರ ನಿಂತ ಮಾದಿಗ ಸಮುದಾಯವನ್ನು ಓಲೈಸುವ ಬಗ್ಗೆಯೂ ಚಿಂತಿಸುತ್ತಿದೆ. ಗೋವಿಂದ ಕಾರಜೋಳ ಈ ಕಾರಣಕ್ಕೆ ಪ್ರಿಯರಾಗಿದ್ದಾರೆ. ಮತ್ತೊಂದೆಡೆ, ಹಿಂದುಳಿದ ವರ್ಗಗಳ ಪ್ರಾತಿನಿಧ್ಯಕ್ಕೆ ಈಶ್ವರಪ್ಪನವರ ಹೆಸರನ್ನೂ ತೇಲಿಬಿಡಲಾಗುತ್ತಿದ್ದರೂ ಡಾ.ಅಶ್ವತ್ ನಾರಾಯಣ್ ರವರನ್ನು ಪ್ರತಿಷ್ಠಾಪಿಸಲಾಗಿದೆ. ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು, ದಲಿತರು ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದರೆ ಮುಂದೆ ಬರಲಿರುವ ಭಾವಿ ಮುಖ್ಯಮಂತ್ರಿಗೆ ಅನುಕೂಲಕರವಾಗಲಿದೆ ಎನ್ನುವ ಆಂತರ್ಯ ಈ ರಾಜಕೀಯ ಸಮೀಕರಣದ್ದು. ಹಾಗಾದರೆ ಮುಂದೆ ಮುಖ್ಯಮಂತ್ರಿಯಾಗಿ ಯಾರು ‘ಮೇಲಿನಿಂದ ಇಳಿಯಬಹುದು’ ಎನ್ನುವ ಜಿಜ್ಞಾಸೆಯಲ್ಲಿ ಸಂತೋಷ್‍ರ ಹೆಸರು ಪದೇಪದೇ ಕೇಳಿಬರುತ್ತಿದೆ. ಇತ್ತ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗ್ರಹಣ ಮಾಡಿದ ಮೇಲೆ ದುಪ್ಪಟ್ಟು ಖುಷಿ ಅನುಭವಿಸುತ್ತಿರುವ ಕೇಶವಕೃಪದ ಸೇನಾನಿಗಳೆಲ್ಲರೂ ವರ್ಷವೊಪ್ಪತ್ತಲ್ಲಿ ಏನೇನು ಆಗಲಿದೆ ನೋಡಿ ಎಂದು ಕಣ್ಣುಮಿಟುಕಿಸುತ್ತಿದ್ದಾರೆ.

ಇತ್ತ ಈ ಸರ್ಕಾರದ ಅವಧಿ ಪೂರ್ಣವಾಗುವವರೆಗೂ ತಾನೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎನ್ನುವ ಹಟ ತೊಟ್ಟಿರುವ ಯಡಿಯೂರಪ್ಪನವರು ಯಾವೆಲ್ಲ ಅಸ್ತ್ರಗಳು ಇನ್ನೂ ತಮ್ಮ ಬತ್ತಳಿಕೆಯಲ್ಲಿವೆ, ಯಾವೆಲ್ಲಾ ಹೊಸ ದಾಳಗಳನ್ನು ಉರುಳಿಸಬಲ್ಲೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಕರ್ನಾಟಕದ ‘ನಾಟಕ’ ರಾಜಕಾರಣದ ಮತ್ತೊಂದು ಅಂಕ ಈಗ ಆರಂಭವಾಗಿದೆ.

LEAVE A REPLY

Please enter your comment!
Please enter your name here