Homeಕರೋನಾ ತಲ್ಲಣಸರ್ಕಾರದ ಸಹಾಯಧನ ಕೇಂದ್ರ ಸರ್ಕಾರದ ಸಾಲಕ್ಕೆ ವಜಾ: ಬೀದಿ ಬದಿ ವ್ಯಾಪಾರಿಗಳನ್ನು ತಲುಪದ ಸರ್ಕಾರದ ನೆರವು

ಸರ್ಕಾರದ ಸಹಾಯಧನ ಕೇಂದ್ರ ಸರ್ಕಾರದ ಸಾಲಕ್ಕೆ ವಜಾ: ಬೀದಿ ಬದಿ ವ್ಯಾಪಾರಿಗಳನ್ನು ತಲುಪದ ಸರ್ಕಾರದ ನೆರವು

- Advertisement -
- Advertisement -

ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ, ಆಟೋರಿಕ್ಷಾ ಚಾಲಕರಿಗೆ, ಹೂವು ಹಣ್ಣು ಬೆಳೆಗಾರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವನ್ನು ನೀಡುವ 1250 ಕೋಟಿ ರೂ ಮೊತ್ತದ ಲಾಕ್‌ಡೌನ್ ಪ್ಯಾಕೇಜನ್ನು ಘೋಷಿಸಿತ್ತು. ಸರ್ಕಾರ ಮೊದಲ ಹಂತದ ಪ್ಯಾಕೇಜ್ ಘೋಷಿಸಿ ತಿಂಗಳು ಕಳೆದರು ಬಹುತೇಕರಿಗೆ ಸರ್ಕಾರದ ಆರ್ಥಿಕ ನೆರವು ಇದುವರೆಗೆ ತಲುಪಿಲ್ಲ. ಸರ್ಕಾರ ಘೋಷಿಸಿದ 2000 ರೂಪಾಯಿಗಳ ಆರ್ಥಿಕ ನೆರವು ಕೆಲವರ ಖಾತೆ ಜಾಮ ಆಗಿದೆ. ಜಮಾ ಆದ ಹಣ ಜನರ ಕೈಗೆ ಸೇರದೇ ಕೇಂದ್ರ ಸರ್ಕಾರದ ಹಲವು ಸಾಲ ಯೋಜನೆಗಳ ಕಂತಿಗೆ ಕಡಿತವಾಗಿಬಿಟ್ಟಿದೆ. ಸರ್ಕಾರದ ಆರ್ಥಿಕ ನೆರವಿನ ನೀರಿಕ್ಷೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳು ಕೈಗೆ ಬಂದ ತುತ್ತು ಬಾಯಿಗೆ ಬರದೆ ಕಷ್ಟಕ್ಕೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 1.9 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಇವರಲ್ಲಿ ಬಹುತೇಕರು ಇನ್ನೂ ಸರ್ಕಾರದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ 2000 ರೂಗಳನ್ನು ಜನರ ಖಾತೆಗೆ ಹಾಕುತ್ತಿದ್ದಂತೆಯೇ ವಿವಿಧ ಸಾಲಗಳ ಕಂತಿಗೆ ಸರ್ಕಾರದ ಹಣ ಕಡಿತವಾಗಿದೆ  ಎಂದು  ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಟಕ್ಕೆ ಗುರಿಯಾಗಿದ್ದೆ. ಸರ್ಕಾರ 2,000 ರೂಪಾಯಿಗಳ ಸಹಾಯವನ್ನು ಮಾಡುತ್ತದೆ ಎಂದು ಕೇಳಿ ಖುಷಿಯಾಯಿತು. ಸರ್ಕಾರ ಹಣ ಹಾಕಿದ ತಕ್ಷಣ ಬ್ಯಾಂಕ್‌ನವರು ಅದನ್ನು ಕಡಿತ ಮಾಡಿಕೊಂಡು ಬಿಟ್ಟರು. ಸರ್ಕಾರದ ಸಹಾಯ ಕೇವಲ ಹೆಸರಿಗಷ್ಟೆ ಸೀಮಿತವಾಯಿತು ಎಂದು ಬೀದಿಬದಿ ವ್ಯಾಪಾರಿ ನಾರಾಯಣ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬ್ಯಾಂಕ್ ಖಾತೆಗೆ ಹಣಬಂದಿರುವುದಾಗಿ ನನಗೆ ಎಸ್‌ಎಂಎಸ್‌ ಬಂತು. ಹಣ ಪಡೆದುಕೊಳ್ಳಲು ಬ್ಯಾಂಕ್‌ಗೆ ಹೋದರೆ ಸರ್ಕಾರ ಹಾಕಿದ ಹಣ ನಿಮ್ಮ ಪಿಎಂ ಸ್ವನಿಧಿ ಯೋಜನೆಯ ಸಾಲಕ್ಕೆ ಕಡಿತವಾಗಿದೆ ಎಂದು ಬ್ಯಾಂಕ್‌ನವರು ತಿಳಿಸಿದರು. ರಾಜ್ಯ ಸರ್ಕಾರದ ನೆರವು ಕೇಂದ್ರ ಸರ್ಕಾರದ ಯೋಜನೆಗೆ ಕಡಿತವಾದರೆ ನಮ್ಮಂತಹ ಬೀದಿ ಬದಿ ವ್ಯಾಪಾರಿಗಳು ಏನು ಮಾಡಬೇಕು ಎಂದು ಮತ್ತೊಬ್ಬ ಬೀದಿ ಬದಿ ವ್ಯಾಪಾರಿ ಶಿವಪ್ರಸಾದ್ ಸರ್ಕಾರಕ್ಕೆ ಪ್ರಶ್ನೆಯನ್ನು ಕೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯವರು ಕಳೆದ ವರ್ಷ ಅತಿಹೆಚ್ಚು ಪಿಎಂ ಸ್ವ ನಿಧಿ ಯೋಜನೆಯನ್ನು ವ್ಯಾಪಕವಾಗಿ ಜನರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಅನೇಕ ಬೀದಿ ಬದಿ ವ್ಯಾಪಾರಿಗಳಿಗೆ ಕೆಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಸಾಲವನ್ನು ನೀಡಿದರು. ಈಗ ಲಾಕ್‌ಡೌನ್‌ನಿಂದ ಜನ ಸಂಕಷ್ಟದಲ್ಲಿರಬೇಕಾದರೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ 2000 ರೂ. ಆರ್ಥಿಕ ನೆರವನ್ನು ನೀಡಿವುದಾಗಿ ಘೋಷಿಸಿದೆ. ಸರ್ಕಾರದ ನೆರವು ಬಹುತೇಕ ಬೀದಿ ಬದಿ ವ್ಯಾಪಾರಿಗಳಿಗೆ ಇದು ವರೆಗೆ ತಲುಪಿಲ್ಲ. ಸರ್ಕಾರ ನೆರವು ನೀಡುವಲ್ಲಿ ಕೂಡ ಬಿಪಿಎಲ್-ಎಪಿಲ್ ಗೊಂದಲ ಸೃಷ್ಟಿಯಾಗಿದೆ. ಕೇವಲ ಬೆರಳೆಣಿಕೆಯಷ್ಟು  ಬೀದಿ ಬದಿ ವ್ಯಾಪಾರಿಗಳ ಖಾತೆಗೆ ಹಣ ಜಮೆಯಾಗಿದೆ. ಜಮೆಯಾದ ಹಣವನ್ನು ಬ್ಯಾಂಕ್‌ಗಳು ಜನರಿಗೆ ತಿಳಿಸದೇ ಪಿಎಂ ಸ್ವಾಧೀನ ಯೋಜನೆಗೆ ಕಡಿತಗೊಳಿಸಿಕೊಂಡಿದ್ದಾರೆ ಎಂದು ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಯುಪಿ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಅಖಿಲೇಶ್ ಯಾದವ್‌

ಕರ್ನಾಟಕದಲ್ಲಿ ಸುಮಾರು 95,000 ಜನ ಬೀದಿ ಬದಿ ವ್ಯಾಪಾರಿಗಳು ಕೆಂದ್ರ ಸರ್ಕಾರದ ಸ್ವ ನಿಧಿ ಯೋಜನೆಯ ಅಡಿಯಲ್ಲಿ ಕಳೆದ ವರ್ಷದ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಾಲ ಪಡೆದಿದ್ದರು. ಇವರೆಲ್ಲರ ಖಾತೆಯಿಂದ ರಾಜ್ಯ ಸರ್ಕಾರ ಹಾಕಿದ 2000 ಸಹಾಯಧನ ಕೇಂದ್ರ ಸರ್ಕಾರದ ಯಜನೆಯ ಸಾಲಕ್ಕೆ ಕಡಿತವಾಗಿದೆ. ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಇವರಲ್ಲಿ ಕೇವಲ 1.9ಲಕ್ಷ ಜನರಿಗೆ ಮಾತ್ರ ಸರ್ಕಾರ ಆರ್ಥಿಕ ನೆರವನ್ನು ನೀಡಿದೆ. ಈ 1.9 ಲಕ್ಷ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರ ಖಾತೆಯಿಂದ ಸರ್ಕಾರ 2000 ರೂಪಾಯಿ ಹಣ ಹಾಕಿದ ಮರು ಕ್ಷಣ ಅದೇ ಹಣ ಕಡಿತಗೊಂಡಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿಯವರು ಮಾಹಿತಿ ನೀಡಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಸಂಘ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಈ ಸಂಬಂಧ ಮನವಿಯನ್ನು ಸಲ್ಲಿಸಿದೆ. ನೆರವಿನ ಹಣವನ್ನು ಕಡಿತಗೊಳಿಸದಂತೆ ಬ್ಯಾಂಕ್‌ಗಳಿಗೆ ಸೂಚಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ರಂಗಸ್ವಾಮಿಯವರು ತಿಳಿಸಿದ್ದಾರೆ.

ಒಂದು ಸಲ ಖಾತೆಗೆ ಹಣ ಜಮೆಯಾದರೆ ಅದು ಆಟೋಮೆಟಿಕ್ ಆಗಿ ಕಡಿತಗೊಳ್ಳುತ್ತದೆ. ಜಮೆಯಾದ ಹಣ ಸರ್ಕಾರದ ನೆರವು ಇರಬಹುದು ಅಥವಾ ಬೇರೆ ಹಣ ಇರಬಹುದು ಅದು ಯಾವುದೆಂದು ಮುಖ್ಯವಾಗುವುದಿಲ್ಲ. ಸಾಲದ ಕಂತುಗಳಿಗೆ ಹಣ ಕಡಿತವಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಂಕಷ್ಟದಲ್ಲಿ ನಲುಗಿದ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಆರ್ಥಿಕ ನೆರವಿನಿಂದ ಒಂದಷ್ಟು ನಿರಾಳರಾಗಿದ್ದರು. ರಾಜ್ಯ ಸರ್ಕಾರದ ಸಹಾಯಧನವನ್ನು ಬ್ಯಾಂಕ್‌ಗಳು ಕಡಿತಗೊಳಿಸಿಕೊಂಡ ಪರಿಣಾಮ ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ :ಅಬಕಾರಿ ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು: ವಲಸೆ ಸಚಿವರಿಗೆ ನಡುಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...