Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಭಾಗ-1

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಭಾಗ-1

- Advertisement -
- Advertisement -

ಆಧುನಿಕ ಕಾಲದಲ್ಲಿ ಬೆಳೆದು ಬಂದಿರುವ ನೈತಿಕತೆಯ ಬೆಳಕಿನಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಪ್ರಸ್ತಾಪವಾಗಿರುವ ಹಲವಾರು ಅನೈತಿಕ ವಿಷಯಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಹಿಂದೂ ಮತಾಂಧರು ಬಹಳ ಮುಜುಗರ ಪಡುವಂತಾಗುತ್ತಿದೆ. ಇಂತಹ ವಿಷಯಗಳಲ್ಲಿ ಪ್ರಾಚೀನ ಹಿಂದೂ ಸಮಾಜದಲ್ಲಿ ಪ್ರಚಲಿತವಾಗಿದ್ದ ವಿವಿಧ ನಿಷಿದ್ಧ ಯೌನ ಸಂಬಂಧಗಳೂ ಒಂದು.

ನಂತರ ಭಾರತದ ಸಂಸತ್ತಾಗಿ ಪರಿವರ್ತನೆ ಹೊಂದಿದ ಭಾರತದ ಸಂವಿಧಾನ ನಡಾವಳಿ ಸಭೆಯಲ್ಲಿ, ಹಿಂದೂ ಕೋಡ್ ಮಸೂದೆಯಲ್ಲಿ ಸೋದರಸಂಬಂಧಿ ವಿವಾಹಗಳನ್ನು ನಿಷಿದ್ಧ ಯೌನ ಸಂಬಂಧಗಳು ಎಂದು ಪರಿಗಣಿಸಿ ಅವುಗಳಿಗೆ ಅನುಮತಿ ಕೊಡಬಾರದು ಎಂಬ ಬಗ್ಗೆ ಬಿಸಿಬಿಸಿಯಾದ ಚರ್ಚೆ ನಡೆದಿತ್ತು. ಈ ಚರ್ಚೆಯಲ್ಲಿ ಲಕ್ಷ್ಮಿಕಾಂತ ಮೈತ್ರಾ ಎಂಬುವವರು ಈ ಮಸೂದೆಯನ್ನು ವಿರೋಧಿಸುತ್ತ, “ಏನೇ ಆಗಲಿ, ಮನುಷ್ಯನ ದೇಹದ ಹಸಿವು ಇದ್ದೇ ಇರುತ್ತದೆ, ಮಾನವನಲ್ಲಿರುವ ಈ ನೈಸರ್ಗಿಕ ಹಾಗೂ ಶಕ್ತಿಯುತ ಪ್ರಚೋದನೆಯನ್ನು ಕಾನೂನಿನ ಮೂಲಕ, ಆ ಕಾನೂನು ಎಷ್ಟೇ ಸರ್ವಶಕ್ತವಾಗಿದ್ದರೂ, ತಡೆಯಲಾಗದು. ರಕ್ತ ಸಂಬಂಧಿಗಳಲ್ಲಿ- ಮನೆಯಲ್ಲಿರುವ ಅತ್ಯಂತ ನಿಕಟ ಸಂಬಂಧಿಗಳ ನಡುವೆ-ನೀವು ವೈವಾಹಿಕ ಸಂಬಂಧಗಳಿಗೆ ಅನುಮತಿ ನೀಡಿದರೆ, ಸಮಾಜದಲ್ಲಿ ಏನಾಗಬಹುದು ಎಂಬುದನ್ನು ಯೋಚಿಸಲೂ ನನಗೆ ಭಯವಾಗುತ್ತದೆ” ಎಂದಿದ್ದರು. ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಡಾ. ಅಂಬೇಡ್ಕರ ಅವರು ’ಏನೂ ಆಗುವುದಿಲ್ಲ’ ಎಂದು ಹೇಳಿದಾಗ, ಮೈತ್ರಾ ಅವರು “ನಿಮಗೆ ಸಮಾಜದ ಬಗ್ಗೆ ಯಾವ ಕಾಳಜಿಯೂ ಇಲ್ಲದಿದ್ದರೆ, ಅಲ್ಲಿಇಲ್ಲಿ ಮಕರಂದವನ್ನು ಹೀರುತ್ತ ಸುಖಿಸುವ ಸಾಮಾಜಿಕ ಬಣ್ಣದ ಚಿಟ್ಟೆಗಳಿರುವ ಸಮಾಜದಲ್ಲಿ ನಿಮಗೆ ನಂಬಿಕೆ ಇರುವುದಾದರೆ ಖಂಡಿತವಾಗಿಯೂ ಏನೂ ಆಗುವುದಿಲ್ಲ, ಆದರೆ ಜಗತ್ತಿನಲ್ಲೆಲ್ಲ ಗೌರವಕ್ಕೆ ಪಾತ್ರವಾಗುವಂತಹ ತನ್ನದೇ ಆದ ಸಮಾಜವೊಂದನ್ನು ಕಟ್ಟುವುದು ನನ್ನ ಬಯಕೆ. ನೀವು ಇವುಗಳನ್ನೆಲ್ಲ ಗಾಳಿಗೆ ತೂರುವುದಾದರೆ, ಸೋದರ-ಸಂಬಂಧಿಗಳೊಂದಿಗೆ, ರಕ್ತ-ಸಂಬಂಧಿಗಳೊಂದಿಗೆ ಎಲ್ಲಾ ರೀತಿಯ ವೈವಾಹಿಕ ಸಂಬಂಧಗಳಿಗೆ ಅನುವು ಮಾಡಿಕೊಡುವುದಾದರೆ, ನೀವು ಈ ಎಲ್ಲ ಅನೈತಿಕ ನಿಷಿದ್ಧ ಯೌನ ಸಂಬಂಧಗಳನ್ನು ಕಾನೂನುಬದ್ಧ ಮಾಡುವುದಾದರೆ ಸಮಾಜ ಒಂದು ನೈತಿಕ ಅಧಃಪತನದ ತಿಪ್ಪೆಗುಂಡಿಯಾಗುತ್ತದೆ” ಎಂದಿದ್ದರು.

ಬ್ರಾಹ್ಮಣರು ಮಾತ್ರ ಇವುಗಳ ಬಗ್ಗೆ ತಲೆಕೆಡಿಸಿಕೊಂಡು ನಿಷಿದ್ಧ ಯೌನ-ಸಂಬಂಧವನ್ನು ತಪ್ಪಿಸಲು ಗೋತ್ರ ಮತ್ತು ಪ್ರವರಗಳ ವಿಸ್ತಾರವಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಒಂದೇ ಗೋತ್ರಕ್ಕೆ ಸೇರಿದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹವನ್ನು ನಿಷೇಧಿಸಲಾಯಿತು ಏಕೆಂದರೆ ಅವರನ್ನು ಸಂಬಂಧಿಗಳು ಎಂದು ಪರಿಗಣಿಸಲಾಗಿತ್ತು ಮತ್ತು ಆ ಕಾರಣದಿಂದ ಅವರ ನಡುವಿನ ವಿವಾಹವನ್ನು ನಿಷಿದ್ಧ ಯೌನ-ಸಂಬಂಧ ಎಂದು ಪರಿಗಣಿಸಲಾಯಿತು. ಸಂಸತ್ತು ಹಿಂದೂ ವಿವಾಹಗಳನ್ನು ಕಾನೂನಿನ ಮೂಲಕ ನಿಯಂತ್ರಿಸಲು ಬಯಸಿದಾಗ, ಸಗೋತ್ರ ಮತ್ತು ಸಪಿಂಡ ವಿವಾಹಗಳನ್ನು ನಿಷೇಧಿಸಬೇಕೆಂದು ಹಿಂದೂ ಮತಾಂಧರು ಬಯಸಿದ್ದರು. ಹಿಂದೂ ವಿವಾಹ ಕಾಯ್ದೆ, 1956ರ ಸೆಕ್ಷನ್ 5ಅನ್ನು ಜಾರಿಗೆ ತಂದಾಗ, ಈ ನಿಷೇಧಕ್ಕೆ ಕಾನೂನಿನ ಮಾನ್ಯತೆ ದೊರೆಯಿತು. ಅದರ ಕೆಳಗೆ ಹಿಂದೂಗಳ ನಡುವೆ ವಿವಾಹವನ್ನು ಸಂಪನ್ನಗೊಳಿಸಲು ಪೂರೈಸಬೇಕಾಗಿರುವ ಷರತ್ತುಗಳನ್ನು ಹೇಳುವಾಗ ಗಂಡ ಹೆಂಡತಿ ಆಗುವವರು ನಿರ್ಬಂಧಿತ ಸಂಬಂಧಗಳನ್ನು ಹೊಂದಿರಬಾರದೆಂದು ಹಾಗೂ ಅವರು ಸಪಿಂಡಗಳಾಗಿರಬಾರದು ಎಂದು ಹೇಳಲಾಯಿತು.

ಆದರೆ ಮೈತ್ರಾ ಎಷ್ಟು ಸರಿಯಾಗಿ ಹೇಳಿದ್ದರಲ್ಲವೇ? “ಏನೇ ಆಗಲಿ, ಮನುಷ್ಯನ ದೇಹದ ಹಸಿವು ಇದ್ದೇ ಇರುತ್ತದೆ. ಮಾನವನಲ್ಲಿರುವ ಈ ನೈಸರ್ಗಿಕ ಹಾಗೂ ಶಕ್ತಿಯುತ ಪ್ರಚೋದನೆಯನ್ನು ಕಾನೂನಿನ ಮೂಲಕ, ಆ ಕಾನೂನು ಎಷ್ಟೇ ಸರ್ವಶಕ್ತವಾಗಿದ್ದರೂ, ತಡೆಯಲಾಗದು.” ಆದರೆ ಬ್ರಾಹ್ಮಣರನ್ನು ಹೊರತುಪಡಿಸಿ, ಇತರೆ ಹಿಂದೂಗಳಲ್ಲಿನ ಅನೇಕ ಸಮುದಾಯಗಳು ಗೋತ್ರ ಮತ್ತು ಪ್ರವರ ಇತ್ಯಾದಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುತ್ತಿರಲಿಲ್ಲವಾದುದರಿಂದ ಅಂತಹ ಸಮುದಾಯಗಳ ಪರಂಪರೆಗಳು ಮತ್ತು ಪದ್ಧತಿಗಳಿಗೆ ಅವಕಾಶ ಒದಗಿಸಲು ಸಂಸತ್ತು ಸಪಿಂಡ ಮತ್ತು ಸಗೋತ್ರ ವಿವಾಹಗಳನ್ನು ನ್ಯಾಯಸಮ್ಮತಗೊಳಿಸಲೇಬೇಕಾಯಿತು. ಗಂಡ ಹೆಂಡತಿ ಆಗುವವರು ನಿರ್ಬಂಧಿತ ಸಂಬಂಧಗಳನ್ನು ಹೊಂದಿರಬಾರದೆಂದು ಹಾಗೂ ಅವರು ಸಪಿಂಡಗಳಾಗಿರಬಾರದು ಎಂದು ಹೇಳಿದ್ದರೂ ಹಾಗೆ ವಿವಾಹವಾಗುವವರಲ್ಲಿ ಅಂತಹ ಪದ್ಧತಿ ಇದ್ದರೆ ಅಥವಾ ಅಂತಹ ರೂಢಿ ಬಳಕೆಯಲ್ಲಿದ್ದರೆ ಅಂತಹ ವಿವಾಹಗಳೂ ಸಿಂಧು ಎಂದು ಹೇಳಲಾಯಿತು.

ಪ್ರಾಚೀನ ಕಾಲದಲ್ಲಿ ಆರ್ಯರು ಈ ನಿಷಿದ್ಧ ಯೌನ-ಸಂಬಂಧಗಳನ್ನು ಕೀಳಾಗಿ ನೋಡುತ್ತಿದ್ದರು ಹಾಗೂ ಅವುಗಳನ್ನು ಪಾಪಗಳೆಂದು ಪರಿಗಣಿಸಿ ಅವುಗಳಿಗೆ ಕಠೋರ ಶಿಕ್ಷೆಗಳನ್ನೂ, ಪ್ರಾಯಶ್ಚಿತ್ತಗಳನ್ನೂ ನಿರ್ಧರಿಸಿದ್ದರು. ಈ ಶಿಕ್ಷೆ ಮತ್ತು ಪ್ರಾಯಶ್ಚಿತ್ತಗಳ ಅಸ್ತಿತ್ವಗಳೇ ಅಂದಿನ ಸಮಾಜದಲ್ಲಿ ನಿಷಿದ್ಧ ಯೌನ-ಸಂಬಂಧಗಳು ಅಸ್ತಿತ್ವದಲ್ಲಿ ಇದ್ದವೆಂದು ರುಜುವಾತುಪಡಿಸುತ್ತವೆ.

ಮನುಸ್ಮೃತಿಯ 11ನೆಯ ಅಧ್ಯಾಯದ 58, 103 ಮತ್ತು 104ನೆಯ ಶ್ಲೋಕಗಳು ಹೀಗೆ ಹೇಳುತ್ತವೆ: “ಒಬ್ಬ ವ್ಯಕ್ತಿ ಒಂದೇ ಗರ್ಭದಿಂದ ಆದರೆ ಬೇರೆ ತಂದೆಗೆ ಹುಟ್ಟಿದ ತನ್ನ ಸಹೋದರಿಯೊಂದಿಗೆ, ಅಥವಾ ಕನ್ಯೆಯರೊಂದಿಗೆ, ಅಥವಾ ಕೆಳ-ಜಾತಿಯ ಮಹಿಳೆಯರೊಂದಿಗೆ ಅಥವಾ ತನ್ನ ಸ್ನೇಹಿತನ ಅಥವಾ ಮಗನ ಹೆಂಡತಿಯೊಂದಿಗೆ ಸಂಭೋಗ ಮಾಡಿದರೆ ಇವೆಲ್ಲವನ್ನು ಅವನು ತನ್ನ ಗುರುವಿನ ಹೆಂಡತಿಯೊಂದಿಗೆ ಸಂಭೋಗ ಮಾಡಿದಂತೆ ಎಂದು ಜ್ಞಾನಿಗಳು ಪರಿಗಣಿಸುತ್ತಾರೆ. ತನ್ನ ಗುರುವಿನ ಹೆಂಡತಿಯೊಂದಿಗೆ ಸಂಭೋಗ ಮಾಡಿದವನು ತನ್ನ ಅಪರಾಧವನ್ನು ಒಪ್ಪಿಕೊಳ್ಳಬೇಕು ಹಾಗೂ ಬಿಸಿಯಾದ ಕಬ್ಬಿಣದ ಹಾಸಿಗೆಯ ಮೇಲೆ ಮಲಗಬೇಕು, ಅಥವಾ ಒಂದು ಸುಡುತ್ತಿರುವ ಮೂರ್ತಿಯನ್ನು ಅಪ್ಪಿಕೊಳ್ಳಬೇಕು ಅಥವಾ, ತನ್ನ ಶಿಶ್ನ ಮತ್ತು ವೃಷಣಗಳನ್ನು ಕತ್ತರಿಸಿಕೊಂಡು ಅವುಗಳನ್ನು ತನ್ನ ಜೋಡಿಸಿದ ಕೈಗಳಲ್ಲಿ ಹಿಡಿದುಕೊಂಡು ನೇರವಾಗಿ ಸಾವಿನ ಲೋಕದ ಕಡೆಗೆ ಬಿದ್ದು ಹೋಗುವವರೆಗೆ ನಡೆಯುತ್ತ ಹೋಗಬೇಕು. ಹೀಗೆ ಸಾಯುವ ಮೂಲಕವೇ ಆತ ಶುದ್ಧನಾಗುತ್ತಾನೆ.” (1) ಇದನ್ನು ಮನು ಮಾತ್ರ ಹೇಳುವುದಿಲ್ಲ. ಅವನ ಹಾಗೆಯೇ ಗೌತಮ, (23.8-11), ಬೌಧಾಯನ (2.1.13-15), ಆಪಸ್ತಂಬ, (1.25.1-2), ವಶಿಷ್ಠ (22.13-14), ವಿಷ್ಣು (34.1-2) ಹಾಗೂ ಯಾಜ್ಞವಲ್ಕ್ಯರೂ (3.259-260) ಹೇಳುತ್ತಾರೆ.

ನಿಷಿದ್ಧ ಯೌನ-ಸಂಬಂಧಗಳ ಬಗ್ಗೆ ಮೇಲೆ ನಮೂದಿಸಿದಂತಹ ಕಠಿಣ ಶಿಕ್ಷೆಗಳನ್ನೂ ಪ್ರಾಯಶ್ಚಿತ್ತಗಳನ್ನೂ ಹೇಳಿದ್ದರೂ ಆರ್ಯ ಜನಾಂಗದಲ್ಲಿ ನಿಷಿದ್ಧ ಯೌನ-ಸಂಬಂಧಗಳು ಪ್ರಚಲಿತವಾಗಿದ್ದವು ಎನ್ನುವುದರಲ್ಲಿ ಸಂದೇಹವಿಲ್ಲ. ಕೃಷ್ಣನ ಮಗ ಪ್ರದ್ಯುಮ್ನನಂತೆ ಹಲವರು ಬಹಿರಂಗವಾಗಿ ಮಾಡಿದರೆ ಇಂದ್ರನ ಮಗ ಕುತ್ಸ ಔರವನಂತಹವರು ಕಳ್ಳತನದಿಂದ ಮಾಡಿದ್ದರು.

ಇದನ್ನೂ ಓದಿ: ’ಮಾಂಸ ಭಕ್ಷಿಸುವ ಕಾಳಿಮಾತೆ’ ವಿವಾದದ ಹಿನ್ನೆಲೆ; ಸನಾತನ ಧರ್ಮದಲ್ಲಿ ಮಾಂಸ ಭಕ್ಷಣೆಯ ಕುರುಹುಗಳು

ಋಗ್ವೇದದ 10ನೆಯ ಮಂಡಲದ 10ನೆಯ ಸೂಕ್ತದಲ್ಲಿ ಬರುವ ಯಮ ಮತ್ತು ಅವನ ಸಹೋದರಿ ಯಮಿಯರ ನಡುವಿನ ಸಂವಾದ ಈ ನಿಷಿದ್ಧ ಯೌನ-ಸಂಬಂಧಗಳ ಒಳ ಪದರುಗಳನ್ನು ಬಿಚ್ಚಿಡುತ್ತದೆ. ತನ್ನ ಸಹೋದರ ಯಮನ ಜೊತೆಗೆ ಸಂಭೋಗಿಸಲು, ಒಬ್ಬ ಮಗನನ್ನು ಪಡೆಯಲು ತಾನು ಸಮುದ್ರದ ದಂಡೆಯ ಒಂದು ಏಕಾಂತ ಹಾಗೂ ಗುಪ್ತ ಸ್ಥಳಕ್ಕೆ ಬಂದಿರುವುದಾಗಿ ಹೇಳುತ್ತಾಳೆ. ’ನಮ್ಮ ಮೊದಲ ಮಿಲನವನ್ನು ಯಾರು ತಾನೆ ನೋಡುತ್ತಾರೆ, ಯಾರು ತಾನೇ ಅದರ ಬಗ್ಗೆ ಹೇಳುತ್ತಾರೆ, ಯಾರು ನನ್ನ ಗರ್ಭಧಾರಣೆಯನ್ನು ನೋಡುತ್ತಾರೆ?’ ಎನ್ನುತ್ತಾಳೆ. ಬಹುಶಃ ನೋಡುವವರು ಯಾರೂ ಇಲ್ಲದಿದ್ದರೆ ಯಮ ಆ ಅವಕಾಶವನ್ನು ಬಳಸಿಕೊಂಡು ತನ್ನ ಆಸೆಯನ್ನು ಪೂರೈಸುತ್ತಾನೆ ಎಂದುಕೊಂಡಿರಬೇಕು ಯಮಿ. ಸಹೋದರ ಸಹೋದರಿಯರು ಸಂಭೋಗಿಸುವುದು ನಿರ್ಬಂಧಿತ ಎಂದು ಹೇಳುವುದರ ಜೊತೆಗೆ ಯಮ ಕೂಡ ಸರಿಸುಮಾರು ಯಮಿ ಹೇಳುವ ಮಾತುಗಳನ್ನು ಒಪ್ಪಿಕೊಂಡ ಹಾಗೆ ಮಾತನಾಡುತ್ತಾನೆ. “ಇದೊಂದು ಏಕಾಂತ ಸ್ಥಳವಲ್ಲ, ಯಾಕೆಂದರೆ ಅಸುರರ ಶೂರ ಮಕ್ಕಳು ಇಲ್ಲಿ ಸದಾ ನಿಗಾ ಇಟ್ಟುಕೊಂಡಿರುತ್ತಾರೆ, ದೇವತೆಗಳ ಬೇಹುಗಾರರು ಹಗಲು ರಾತ್ರಿ ಇಲ್ಲಿ ಓಡಾಡಿಕೊಂಡಿರುತ್ತಾರೆ. ಅವರು ಎಲ್ಲಿಯೂ ನಿಲ್ಲುವುದಿಲ್ಲ, ಎಂದಿಗೂ ಕಣ್ಣುಗಳನ್ನು ಮುಚ್ಚಿಕೊಳ್ಳುವುದಿಲ್ಲ” ಎನ್ನುತ್ತಾನೆ ಯಮ.

ಹೀಗೆ ಋಗ್ವೇದದಿಂದ ಮೊದಲು ಮಾಡಿ ಬೃಹದಾರಣ್ಯಕ ಉಪನಿಷತ್ತು, ಶತಪಥ ಬ್ರಾಹ್ಮಣ, ಐತರೇಯ ಬ್ರಾಹ್ಮಣ, ಮತ್ಸ್ಯ ಪುರಾಣ ಮೊದಲಾದ ಹಿಂದೂ ಗ್ರಂಥಗಳು ಬ್ರಹ್ಮಾಂಡದ ಕರ್ತೃ ಸ್ವಯಂ ಬ್ರಹ್ಮನೇ ತನ್ನ ಪುತ್ರಿಯೊಂದಿಗೆ ನಿಷಿದ್ಧ ಯೌನ-ಸಂಬಂಧ ಹೊಂದಿದ್ದ ಬಗ್ಗೆ ಹೇಳುತ್ತವೆ. ಏಕಕೇಂದ್ರಿತ ಸೃಷ್ಟಿಯ ಪರಿಕಲ್ಪನೆಯನ್ನು ಹೊಂದಿರುವವರಿಗೆ ಸೃಷ್ಟಿಯ ವಿಸ್ತಾರವನ್ನು ವಿವರಿಸಬೇಕಾದರೆ ನಿಷಿದ್ಧ ಯೌನ-ಸಂಬಂಧದಿಂದ ಬಿಡುಗಡೆ ದೊರೆಯುವುದಿಲ್ಲ.

ಹಿಂದೂ ಗ್ರಂಥಗಳಲ್ಲಿ ಪ್ರಸ್ತಾಪವಾಗಿರುವ ನಿಷಿದ್ಧ ಯೌನ-ಸಂಬಂಧಗಳು ಹಲವು ವಿಧ. ಮಗಳೊಂದಿಗೆ ತಂದೆಯ ಸಂಬಂಧ, ತಾಯಿಯೊಂದಿಗೆ ಮಗನ ಸಂಬಂಧ, ಸಹೋದರಿಯೊಂದಿಗೆ ಸಹೋದರನ ಸಂಬಂಧ ಇತ್ಯಾದಿ.

ಬ್ರಹ್ಮ ತನ್ನ ಮಗಳನ್ನೇ ಮದುವೆಯಾದದ್ದು

ಮಗಳೊಂದಿಗಿನ ತಂದೆಯ ನಿಷಿದ್ಧ ಯೌನ-ಸಂಬಂಧಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ, ವಿವಾದಕ್ಕೆ ಒಳಗಾಗಿರುವುದು ಬ್ರಹ್ಮ ಅಥವಾ ಪ್ರಜಾಪತಿ ತನ್ನ ಮಗಳೊಂದಿಗೆ ಹೊಂದಿದ್ದ ನಿಷಿದ್ಧ ಯೌನ-ಸಂಬಂಧ. ಇದರ ಬಗ್ಗೆ, ಋಗ್ವೇದ, ಬೃಹದಾರಣ್ಯಕ ಉಪನಿಷತ್ತು, ಶತಪಥ ಬ್ರಾಹ್ಮಣ, ಐತರೇಯ ಬ್ರಾಹ್ಮಣ, ಮತ್ಸ್ಯ ಪುರಾಣ, ಸ್ಕಂದ ಪುರಾಣ, ಶಿವ ಪುರಾಣ ಮೊದಲಾದ ಗ್ರಂಥಗಳಲ್ಲಿ ಉಲ್ಲೇಖಗಳಿವೆ.

ಋಗ್ವೇದದ ಹತ್ತನೆಯ ಮಂಡಲದ 61ನೆಯ ಸೂಕ್ತದ 5ರಿಂದ 7ರ ವರೆಗಿನ ಋಕ್ಕುಗಳು ಮಗಳ ಜೊತೆಗಿನ ಬ್ರಹ್ಮನ ನಿಷಿದ್ಧ ಯೌನ-ಸಂಬಂಧದ ಬಗ್ಗೆ ಹೇಳುತ್ತವೆ. ಪ್ರೊ. ಗ್ರಿಫಿತ್ ಅವರು ಮಾಡಿದ ಋಗ್ವೇದದ ಇಂಗ್ಲಿಷ್ ಅನುವಾದದಲ್ಲಿ ಈ ಋಕ್ಕುಗಳನ್ನು ಕೈಬಿಡಲಾಗಿದೆ. ಮೈಸೂರಿನ ಮಹಾರಾಜರು ಋಗ್ವೇದದ ಕನ್ನಡ ಅನುವಾದವನ್ನು 36 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ ಮತ್ತು ಈ ಋಕ್ಕುಗಳನ್ನು ಹೊಂದಿರುವ ಸಂಪುಟ ಕಾಣೆಯಾಗಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವೆಬ್‌ಸೈಟ್ ’ವೈದಿಕ ಪರಂಪರೆ’ಯಲ್ಲಿ ಮಾತ್ರ ಈ ಋಕ್ಕುಗಳು ಸಿಕ್ಕುತ್ತವೆ. ಪದ್ಮಭೂಷಣ ಡಾ.ಶ್ರೀಪಾದ ದಾಮೋದರ ಸಾತವಲೇಕರ ಅವರು ಬರೆದಿರುವ ’ಋಗ್ವೇದ ಕಾ ಸುಬೋಧ ಭಾಷ್ಯ’ ಎಂಬ ಅವರ ಭಾಷ್ಯದಲ್ಲಿ ಈ ಋಕ್ಕುಗಳು ಸಿಕ್ಕುತ್ತವೆ.

ಸಾತವಲೇಕರ ಅವರು ಮಾಡಿರುವ ಈ ಋಕ್ಕುಗಳ ಹಿಂದೀ ಅನುವಾದವನ್ನು ಹೀಗೆ ಸರಳವಾಗಿ ಹೇಳಬಹುದು: “ಮಾನವರನ್ನು ಸೃಷ್ಟಿಸಲು ಅಪೇಕ್ಷಿಸಿದ ಪ್ರಜಾಪತಿ ತನ್ನ ಮಗಳೊಂದಿಗೆ ಸಂಭೋಗದ ಬಗ್ಗೆ ಯೋಚಿಸಿದನು ಮತ್ತು ಆ ಕಾರಣದಿಂದ ತನ್ನ ವೀರ್ಯವನ್ನು ಅವಳ ಗರ್ಭದಲ್ಲಿ ಸ್ಥಾಪಿಸಿದನು. ಅವಳೊಡನೆ ಸಂಭೋಗ ಮಾಡಿದ ಪ್ರಜಾಪತಿ ತನ್ನ ಆ ಸುಂದರ ಹಾಗೂ ಯುವ ಮಗಳ ಜನನಾಂಗದಲ್ಲಿ ತನ್ನ ವೀರ್ಯ ಹರಿಯುವಂತೆ ಮಾಡಿದನು”. ಆದರೆ ಹಲವು ಹಿಂದೂ ಭಾಷಾಂತರಕಾರರು ಹಾಗೂ ಬಾಷ್ಯಕಾರರು ಪ್ರಜಾಪತಿ ಹಾಗೂ ಅವನ ಮಗಳ ನಡುವಿನ ಸಂಭೋಗದ ಈ ಮಾತನ್ನು ಕೈಬಿಟ್ಟಿದ್ದಾರೆ ಮತ್ತು ಇನ್ನೂ ಹಲವರು ಈ ಋಕ್ಕುಗಳಿಗೆ ಬೇರೆಯೇ ಆದ ಅರ್ಥವಿವರಣೆ ನೀಡಲು ಪ್ರಯತ್ನಿಸಿದ್ದಾರೆ. ಬ್ರಹ್ಮಮುನಿಯ ಈ ಒಂದು ಋಕ್ಕಿನ ವ್ಯಾಖ್ಯಾನವನ್ನು ನೀವು ನೋಡಿದರೆ ಸಾಕು, ಇವರು ಹೇಗೆ ತಥ್ಯಗಳನ್ನು ತಿರುಚುತ್ತಾರೆ ಎನ್ನುವುದು ಅರ್ಥವಾಗುತ್ತದೆ. ಬ್ರಹ್ಮಮುನಿ ಈ ಋಕ್ಕನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: “ಗೃಹಸ್ಥನ ಉದ್ದೇಶ ಮಕ್ಕಳನ್ನು ಹೆರುವುದು ಆಗಿರುತ್ತದೆ. ಆ ಕಾರಣದಿಂದ ಆತ ವೀರ್ಯ ಹರಿಸಿದ ನಂತರ ಉತ್ತಮ ಮಕ್ಕಳನ್ನು ಹೆರುವ ಹೆಂಡತಿಯಲ್ಲಿ ಆತ ಮಗನ ರೂಪದಲ್ಲಿ ಹುಟ್ಟುತ್ತಾನೆ ಮತ್ತು ಯುವಕನಾಗುತ್ತಾನೆ. ಆಗ ತಂದೆಯಾದವನು ಅವನಿಗೆ ಪುತ್ರಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಪ್ರೋತ್ಸಾಹಿಸುತ್ತಾನೆ. ಆ ಮಗ ತಾನೇ ಮಕ್ಕಳನ್ನು ಪಡೆದಾಗ- ಆಗ ಆತನ ತಂದೆಯಾದವನು ಅನ್ಯ ಜನರ ಹಿತವನ್ನು ಸಾಧಿಸಲು ಗೃಹಸ್ಥವನ್ನು ತ್ಯಜಿಸಬೇಕು”. ಇಲ್ಲಿ ನಿಮಗೇನಾದರೂ ಈ ಹಿಂದೂ ಮತಾಂಧರ ಪಿತೂರಿಯ ವಾಸನೆ ಬರುತ್ತಿದೆಯೇ?

ಋಗ್ವೇದದ 10ನೆಯ ಮಂಡಲದ 10ನೆಯ ಸೂಕ್ತದಲ್ಲಿ ಬರುವ ಯಮ ಹಾಗೂ ಯಮಿಯರ ನಡುವೆ ನಡೆಯುವ ಸಂವಾದದಲ್ಲಿಯೂ ಬ್ರಹ್ಮನ ಈ ನಿಷಿದ್ಧ ಯೌನ-ಸಂಬಂಧದ ಪ್ರಸ್ತಾಪವಿದೆ. ಯಮ ಹಾಗೂ ಯಮಿ ಇವರು ವಿವಸ್ವನ್ ಹಾಗೂ ಸರಣ್ಯುವಿಗೆ ಹುಟ್ಟಿದ ಅವಳಿ ಮಕ್ಕಳು. ಈ ಸೂಕ್ತದಲ್ಲಿ ಯಮಿ ತನ್ನ ಸಹೋದರ ಯಮನ ಬಗೆಗಿನ ತನ್ನ ಯೌನ ಆಸಕ್ತಿಯನ್ನು ಹಾಗೂ ಅವನಿಂದ ಒಂದು ಮಗುವನ್ನು ಪಡೆಯುವ ಆಸೆಯನ್ನು ಪ್ರಕಟಿಸುತ್ತಾಳೆ. ಯಮ ಇದನ್ನು ತಿರಸ್ಕರಿಸಿದಾಗ ಯಮಿ, ದೇವರೇ ನಮ್ಮಿಬ್ಬರನ್ನು ನಮ್ಮ ತಾಯಿಯ ಒಂದೇ ಗರ್ಭದಲ್ಲಿ ಇರಿಸುವ ಮೂಲಕ ನಮ್ಮಿಬ್ಬರನ್ನು ಪತಿ-ಪತ್ನಿಯರನ್ನಾಗಿ ಮಾಡಿದ್ದಾನೆ ಹಾಗೂ ದೈವೇಚ್ಛೆಯನ್ನು ಮೀರಲಾಗದು ಎಂದು ಹೇಳಿ ತನ್ನ ಆಸಕ್ತಿಯನ್ನು ಸಮರ್ಥಿಸಿಕೊಳ್ಳುತ್ತಾಳೆ.(2) ಇದಲ್ಲದೇ ಅವಳು ಇಂಥ ನಿಷಿದ್ಧ ಯೌನ-ಸಂಬಂಧದಲ್ಲಿ ಪ್ರಜಾಪತಿಯೂ ಭಾಗಿಯಾಗಿದ್ದ ಎಂದು ಹೇಳುತ್ತಾಳೆ.(3) ಇಲ್ಲಿ ಬಳಸಲಾದ ಜನ್ಯುಃ ಶಬ್ದ ಪ್ರಜಾಪತಿ ತನ್ನದೇ ಮಗಳೊಂದಿಗೆ ಸಂಭೋಗದಲ್ಲಿ ತೊಡಗಿದ್ದನ್ನು ಸೂಚಿಸುತ್ತದೆ ಎಂದು ಸಾಯಣರು ಅಭಿಪ್ರಾಯ ಪಡುತ್ತಾರೆ. ಕೊನೆಗೂ ಯಮ ಯಮಿಯ ಆಸೆಯನ್ನು ಒಪ್ಪುವುದಿಲ್ಲ. ಇಲ್ಲಿ ನಿಷಿದ್ಧ ಯೌನ-ಸಂಬಂಧ ಏರ್ಪಡದೇ ಅದನ್ನು ಈ ಸೂಕ್ತದಲ್ಲಿ ತಪ್ಪಿಸಲಾಗಿದ್ದರೂ ಬ್ರಹ್ಮ ನಿಷಿದ್ಧ ಯೌನ-ಸಂಬಂಧವನ್ನು ಹೊಂದಿದ್ದ ಎಂಬುದನ್ನು ಈ ಸೂಕ್ತ ಧೃಢಪಡಿಸುತ್ತದೆ.

ಋಗ್ವೇದದಲ್ಲಿ ಹೇಳಲಾದ ಈ ನಿಷಿದ್ಧ ಯೌನ-ಸಂಬಂಧವನ್ನು ಬ್ರಹ್ಮ ಪ್ರತಿನಿಧಿಸುವ ಸೃಷ್ಟಿಕ್ರಿಯೆ ಮತ್ತು ಸರಸ್ವತಿ ಪ್ರತಿನಿಧಿಸುವ ಜ್ಞಾನಗಳ ಕೂಡುವಿಕೆಯೇ ಹೊರತು ಅದನ್ನು ತಾತ್ವಿಕವಾಗಿ ನೋಡಬೇಕೇ ಹೊರತು ದೈಹಿಕವಾಗಿಯಲ್ಲ ಎಂದು ಸಮರ್ಥಿಸಿಕೊಳ್ಳಲು, ವಿವರಣೆ ನೀಡಲು ಹಲವು ಹಿಂದೂ ಪಂಡಿತರು ಪ್ರಯತ್ನ ಪಡುತ್ತಾರೆ. ಆದರೆ ಇತರೆ ಹಲವಾರು ಹಿಂದೂ ಗ್ರಂಥಗಳು ಇದೊಂದು ಬರಿ ತಾತ್ವಿಕ ಸಂಬಂಧವಾಗಿರದೇ ದೈಹಿಕ ಸಂಬಂಧವೂ ಆಗಿತ್ತೆಂಬುದನ್ನು ಧೃಢೀಕರಿಸುತ್ತವೆ.

(1) ರೇತಃ ಸೆಕಃ ಸ್ವಯೋನಿಷು ಕುಮಾರೀಷ್ವನ್ತ್ಯಯಜಾಸು ಚ, ಸಖ್ಯುಃ ಪುತ್ರಸ್ಯ ಚ ಸ್ತ್ರೀಷು ಗುರುತಲ್ಪಸಮಂ ವಿದುಃ, 11.58. ಗುರುತಲ್ಪ್ಯಭಿಭಾಷೈನಸ್ತತ್ಪೆ ಸ್ವಪ್ಯಾದಯೊಮಯೆ, ಸೂರ್ಮೀ ಜ್ವಲಂತೀ ಸ್ವಾಶ್ಲಿಷ್ಯೇನ ಮೃತ್ಯುನಾ ಸ ವಿಶುಧ್ಯತಿ. 11.103. ಸ್ವಯಂ ವಾ ಶಿಷ್ಣವೃಷಣಾವುತ್ಕೃತ್ಯಾಧಾಯ ಚಾಂಚಲೌ, ನೈರೃತೀಂ, ದಿಶಮಾತಿಷ್ಠೆದಾ ನಿಪಾತಾದಜಿಹ್ನಗಃ. 11.104.

(2) ಗರ್ಭೇ ನು ನೌಂ ಜನಿತಾ ದಂಪತಿ ಕರ್ದೇವಸ್ತ್ವಷ್ಟಾಂ ಸವಿತಾ ವಿಶ್ವರೂಪಃ, ನಕಿರಸ್ಯ ಪ್ರ ಮಿನನ್ತಿ ವ್ರತಾನಿ ವೇದಂ ನಾವಸ್ಯ ಪೃಥಿವೀ ಉತ ಧ್ಯೌಃ.

(3) ಉಶಂತಿ ಘಾ ತೆ ಅಮೃತಾಸ ಎತದೇಕಸ್ಯ ಚಿತ್ಯಜಸಂ ಮರ್ತಸ್ಯ, ನಿ ತೆ ಮನೊ ಮನಸಿ ಧಾಯ್ಯಸ್ಮೇ ಜನ್ಯುಃ ಪತಿಸ್ತನ್ವಮಾ ವಿವಿಶ್ಯಾಃ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ-ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...