Homeಮುಖಪುಟಬೆಳಗಾವಿ: ಬಿಜೆಪಿಯ ‘ಅಂಗಡಿ’ಗೆ ಬೀಳಲಿದೆಯಾ ಬೀಗ?

ಬೆಳಗಾವಿ: ಬಿಜೆಪಿಯ ‘ಅಂಗಡಿ’ಗೆ ಬೀಳಲಿದೆಯಾ ಬೀಗ?

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

15 ವರ್ಷಗಳಿಂದ ತೆರೆದೇ ಇದ್ದರೂ ಜನಸಾಮಾನ್ಯರ ಪಾಲಿಗೆ ಎಟುಕದ ‘ಅಂಗಡಿ’ಗೆ ಈ ಸಲ ಬೀಗ ಬೀಳಬಹುದೇ? ಎಂಬ ಮಾತುಗಳು ಬೆಳಗಾವಿ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಮೂರು ಸಲ ಬಿಜೆಪಿಯಿಂದ ಸಂಸದರಾಗಿರುವ ಸುರೇಶ ಅಂಗಡಿ ವಿರುದ್ಧ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇದ್ದೇ ಇದೆ. ಕಳೆದ ಸಲವೇ ಸೋಲಬೇಕಿದ್ದ ಅವರಿಗೆ ಸೃಷ್ಟಿತ ಮೋದಿ ಹವಾ ನೆರವಿಗೆ ಬಂದಿತ್ತು. 15 ವರ್ಷ ಸಂಸದರಾದ ಮೇಲೂ, ಈಗಲೂ ಅವರು ಮೋದಿ ಮುಖ ತೋರಿಸಿ ಮತ ಕೇಳುತ್ತಿರುವುದೇ ಅವರ ‘ವೀಕ್’ ಪಾಯಿಂಟ್. ಅಷ್ಟರಮಟ್ಟಿಗೆ ಆಡಳಿತ ವಿರೋಧಿ ಅಲೆ ಜೋರಾಗಿದೆ.


ಬೆಳಗಾವಿಯ ಕಾಂಗ್ರೆಸ್ 15 ವರ್ಷಗಳಿಂದ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಕುರುಹುಗಳಿಲ್ಲ. ಆದರೆ, ಈ ಸಲ ಇಲ್ಲಿ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಬೆಳಗಾವಿ ಸೀಟನ್ನು ಗೆಲ್ಲಿಸಿಕೊಡಲು ಸಚಿವ ಸತೀಶ ಜಾರಕಿಹೊಳಿಯವರಿಗೆ ಕಾಂಗ್ರೆಸ್ ತಾಕೀತು ಮಾಡಿದೆಯಂತೆ. ಸತೀಶ್ ಇಲ್ಲಿ ಸಕ್ರಿಯರಾಗಿದ್ದು, ‘ಅಂಗಡಿ’ಗೆ ಬೀಗ ಜಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಅವರ ಸಹೋದರ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಚುನಾವಣೆಯಿಂದ ಅಂತರ ಕಾಯ್ದುಕೊಂಡಿರುವುದು ಕಾಂಗ್ರೆಸ್‍ಗೆ ತಲೆನೋವಾಗಿದೆ.

ಕಾಂಗ್ರೆಸ್‍ನಿಂದ ಡಾ. ವಿರುಪಾಕ್ಷಪ್ಪ ಸಾಧುನವರ್‍ಗೆ ಟಿಕೆಟ್ ನೀಡಲಾಗಿದೆ. ಹಿಂದೊಮ್ಮೆ ಕಾಂಗ್ರೆಸ್‍ನಿಂದ ಬಂಡಾಯವೆದ್ದು ಎಂಎಲ್‍ಸಿ ಸೀಟಿಗೆ ಸ್ಪರ್ಧಿಸಿದ್ದ ಸಾಧುನವರ್‍ಗೆ ಈಗ ಸತೀಶ ಜಾರಕಿಹೊಳಿಯ ಸಪೋರ್ಟಿದೆ. ಜಾರಕಿಹೊಳಿಯ ಶಿಫಾರಸಿನ ಮೂಲಕವೇ ಸಾಧುನವರ್ ಟಿಕೆಟ್ ಪಡೆದಿದ್ದಾರೆ. ಬೈಲಹೊಂಗಲದ ಭಾಗದಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು, ಸಹಕಾರಿ ಬ್ಯಾಂಕುಗಳನ್ನು ನಡೆಸುತ್ತಿರುವ ಸಾಧುನವರ್ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.


8 ವಿಧಾನಸಭಾ ಕೇತ್ರಗಳನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಐವರು ಬಿಜೆಪಿ ಶಾಸಕರು, ಮೂವರು ಕಾಂಗ್ರೆಸ್ ಶಾಸಕರಿದ್ದಾರೆ. ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ಚಿಕ್ಕೋಡಿ ವ್ಯಾಪ್ತಿಗೆ ಬಂದರೆ ಅವರ ಸಹೋದರ ರಮೇಶರ ಗೋಕಾಕ್ ಕ್ಷೇತ್ರ ಬೆಳಗಾವಿಯ ವ್ಯಾಪ್ತಿಗೆ ಬರುತ್ತದೆ.

ಸಂಖ್ಯೆಯ ಆಧಾರದಲ್ಲಿ ಕ್ರಮವಾಗಿ ಲಿಂಗಾಯತರು, ಮರಾಠರು ಮತ್ತು ದಲಿತರಿದ್ದಾರೆ. ಇಲ್ಲಿವರೆಗೆ ಬಿಜೆಪಿಯ ಅಂಗಡಿಯವರ ಕೈ ಹಿಡಿದದ್ದು ಲಿಂಗಾಯತ ಮತ್ತು ಮರಾಠ ಮತಗಳು. ಅಂಗಡಿ ಬಣಜಿಗ ಸಮುದಾಯಕ್ಕೆ ಸೇರಿದ್ದು, ಈಗ ಕಾಂಗ್ರೆಸ್‍ನಿಂದ ಸ್ಪರ್ಧಿಸಿರುವ ಸಾಧುನವರ್ ಪಂಚಮಸಾಲಿ ಸಮುದಾಯದವರು. ಲಿಂಗಾಯತರಲ್ಲಿ ಬಹುಸಂಖ್ಯಾತರಾಗಿರುವ ಪಂಚಮಸಾಲಿಗಳು ಜಾತಿಪ್ರೀತಿಗಾಗಿ ಸಾಧುನವರ್ ಪರ ನಿಲ್ಲುವ ಸಾಧ್ಯತೆಗಳಿವೆ.

ಕಳೆದ ಸಲದ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರವು ಕಾಂಗ್ರೆಸ್ ಗೆ 50 ಸಾವಿರದಷ್ಟು ಲೀಡ್ ಕೊಟ್ಟಿತ್ತು. ಈ ಸಲ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ತಟಸ್ಥರಾಗಿ ಉಳಿದಿದ್ದು, ಅವರು ಸಕ್ರಿಯವಾಗಿತೊಡಗಿಕೊಂಡರೆ ಕಾಂಗ್ರೆಸ್ ಮುನ್ನಡೆಗೆ ಅನುಕೂಲ. ಆದರೆ ಅವರ ಇನ್ನೊರ್ವ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪರ ಫೀಲ್ಡಿಗಿಳಿದಿದ್ದಾರೆ. ಅಣ್ಣ ಸತೀಶ್ ಜಾರಕಿಹೊಳಿಯ ಮೇಲಿನ ಗೌರವದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಉಮೇದಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಸಲ ಲೋಕಸಭೆಯಲ್ಲಿ ಅಂಗಡಿ ವಿರುದ್ಧ ಸ್ಪರ್ಧಿಸಿ 60 ಸಾವಿರ ಚಿಲ್ಲರೆ ಮತಗಳಿಂದ ಸೋಲುಂಡಿದ್ದ ಹಾಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಾಧುನವರ್ ಪರವಾಗಿ ಬಿರುಸಾದ ಪ್ರಚಾರ ನಡೆಸುತ್ತಿದ್ದಾರೆ. ಸತೀಶ ಜಾರಕಿಹೊಳಿ ತಂತ್ರಗಳು ಜಾರಿಗೆ ಬರುತ್ತಿವೆ. ಇನ್ನೊಂದು ಕಡೆ ಸುರೇಶ ಅಂಗಡಿ ಮೋದಿ ಮುಖ ತೋರಿಸಿ ಮತ ಬೇಡುತ್ತಿದ್ದಾರೆ.
ಬೆಳಗಾವಿ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆ ಇವೆ. ಹಾಗೇ ಆದರೆ ಬಿಜೆಪಿ ‘ಅಂಗಡಿಗೆ ಬೀಗ ಬೀಳಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು ಹಸಿವಿನಿಂದ...