ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಮಂಗಳವಾರ (ಮಾ.2) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಹಲವರು ಮಹಿಳಾ ಕಾರ್ಯಕರ್ತರು ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.
ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬೆಳಿಗ್ಗೆ 10:30ಕ್ಕೆ ಸಿಟಿ ರೈಲ್ವೆ ನಿಲ್ದಾಣದ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಪಾದಯಾತ್ರೆ ಹೊರಟು, ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆವರೆಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆಗೆ ವ್ಯಂಗ್ಯ: ಚಾಕೋಲೆಟ್ ಹಂಚಿ, ಟ್ರ್ಯಾಕ್ಟರ್ ಎಳೆದು ವಿಭಿನ್ನ ಪ್ರತಿಭಟನೆ!
ಪ್ರತಿಭಟನೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಎತ್ತಿಕೊಂಡ ಮಹಿಳೆಯರು, ಕೊರಳಿಗೆ ತರಕಾರಿ ಹಾರಗಳನ್ನು ಹಾಕಿಕೊಂಡು ಘೋಷಣೆಗಳನ್ನು ಕೂಗುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ರಸ್ತೆ ಮಧ್ಯದಲ್ಲಿ ಒಲೆ ಉರಿಸಿ ಇಡ್ಲಿ ಪಾತ್ರೆಯಿಟ್ಟು, ರಸ್ತೆಯಲ್ಲೆ ಕುಳಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಿಳೆಯರೊಂದಿಗೆ ಅಡುಗೆ ಮಾಡುತ್ತಾ, ಸರ್ಕಾರ ಇಂಧನ ದರ ಹೆಚ್ಚಿಸಿರುವುದನ್ನು ಖಂಡಿಸಿದ್ದಾರೆ. ಪ್ರತಿಭಟನೆ ಆಯೋಜಿಸಿದ್ದ ಮಹಿಳಾ ಘಟಕವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಕುರಿ, ಮೇಕೆಗಳು ಸತ್ತರೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆ ಮರುಜಾರಿಗೊಳಿಸಿ: ಸಿದ್ದರಾಮಯ್ಯ
ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಗೌರವ ಧನ ಹೆಚ್ಚಳ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿದ್ದಾರೆ. ಇದರ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಗಳ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಇಂದು ಏಕಕಾಲದಲ್ಲಿ ಒಂದು ಕಡೆ ಸಾರಿಗೆ ನೌಕರರ ಪ್ರತಿಭಟನೆ, ಮತ್ತೊಂದು ಕಡೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ನಡೆಯುತ್ತಿದೆ. ಇದು ಬಿಜೆಪಿ ದುರಾಡಳಿತಕ್ಕೆ ಹಿಡಿದ ಕನ್ನಡಿ. ಬೇಜವಾಬ್ದಾರಿ ಬಿಜೆಪಿಯಿಂದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದಿದೆ.
ಇದನ್ನೂ ಓದಿ: ಮತ್ತೆ 25 ರೂ ಹೆಚ್ಚಳ: ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ