ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ’ಕೇವಲ 200 ಜನರನ್ನು ಮಾತ್ರ ಪರೇಡ್‌ಗೆ ಆಹ್ವಾನಿಸಲಾಗಿದೆ, ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರವನ್ನು ಕಾಪಾಡುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ’ ಎಂದು ತಿಳಿಸಿದ್ದಾರೆ.
’ಪರೇಡ್‌ನಲ್ಲಿ ಭಾಗವಹಿಸುವವರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ಜೊತೆಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸತತ 3 ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ನಿಂದ ಕೇರಳ ಹೊರಕ್ಕೆ: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರಾಕರಣೆ
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ವಂದನೆ ಸ್ವೀಕರಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ಥಳ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಿಬಿಎಂಪಿ ವತಿಯಿಂದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 52 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಾಸ್ಟರ್ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಭದ್ರತೆಯ ಭಾಗವಾಗಿ 14 ತಂಡಗಳನ್ನು ರಚಿಸಲಾಗಿದೆ. ಈ ಬಾರಿ ಪರೇಡ್‌ನಲ್ಲಿ ಇತರ ರಾಜ್ಯಗಳ ಪೊಲೀಸ್ ತಂಡಗಳು ಪಾಲ್ಗೊಳ್ಳುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ. “ಈ ವರ್ಷ, ಆಂಧ್ರ ಪ್ರದೇಶ ಪೊಲೀಸ್ ತಂಡವು ನಮ್ಮ ಪರೇಡ್‌ನ ಭಾಗವಾಗಲಿದೆ” ಎಂದು ಹೇಳಿದ್ದಾರೆ.
“ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಕೊರೊನಾ ನಿಯಮಗಳನ್ನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು ಮಾರ್ಷಲ್‌ಗಳು ಸಹ ಇರುತ್ತಾರೆ. ಜನವರಿ 26 ರಂದು ಇನ್‌ಫೆಂಟ್ರಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ರಸ್ತೆ ಸೇರಿದಂತೆ ಮೈದಾನದ ಆಸುಪಾಸಿನಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾ: ಗಣರಾಜ್ಯೋತ್ಸವ ಪೂರ್ವಾಭ್ಯಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಪ್ರದರ್ಶನ