Homeಮುಖಪುಟಪಂಜಾಬ್‌: ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಫೋನ್‌ ಕರೆ: ತಾನೇ ತೋಡಿದ ಖೆಡ್ಡಾದೊಳಗೆ ಬೀಳುತ್ತಿದೆಯೇ ಎಎಪಿ?

ಪಂಜಾಬ್‌: ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಫೋನ್‌ ಕರೆ: ತಾನೇ ತೋಡಿದ ಖೆಡ್ಡಾದೊಳಗೆ ಬೀಳುತ್ತಿದೆಯೇ ಎಎಪಿ?

ಭಗವಂತ್ ಮಾನ್‌ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲು 21,59,437 ಫೋನ್ ಕರೆಗಳನ್ನು ನಾಲ್ಕು ದಿನಗಳಲ್ಲಿ ಸ್ವೀಕರಿಸಲಾಗಿದೆ ಎಂದು ಎಎಪಿ ಹೇಳಿದೆ. ಎದುರಾಳಿ ಪಕ್ಷಗಳು ಎತ್ತಿರುವ ತಾಂತ್ರಿಕ ಪ್ರಶ್ನೆಗಳಿಂದಾಗಿ ಎಎಪಿ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ.

- Advertisement -
- Advertisement -

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಘೋಷಿಸಿದ್ದಾರೆ. ಮಾನ್‌ ಆಯ್ಕೆಗೆ 21,59,437 ಲಕ್ಷ ಫೋನ್ ಕರೆಗಳು ಬಂದಿವೆ ಎಂಬ ಎಎಪಿ ಪ್ರತಿಪಾದನೆಗೆ ಒಂದು ವಾರದ ಬಳಿಕ ಪ್ರತಿಪಕ್ಷ ನಾಯಕರು ತಿರುಗೇಟು ನೀಡಿದ್ದಾರೆ. ಫೋನ್‌ ಕರೆಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ.

ಆಮ್‌ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಕರೆ ಮಾಡಲು, ವಾಟ್ಸಾಪ್ ಅಥವಾ ಎಸ್‌ಎಂಎಸ್ ಮಾಡಿ ತಮ್ಮ ಆಯ್ಕೆಯ ವ್ಯಕ್ತಿಯನ್ನು ತಿಳಿಸಲು ಜನವರಿ 13ರಂದು ಪಂಜಾಬ್‌ನ ಜನರಲ್ಲಿ ಕೇಳಿಕೊಂಡಿತ್ತು. ಇದನ್ನು ‘ಜಂತಾ ಚುನೇಗಿ ಅಪ್ನಾ ಸಿಎಂ’ ಡ್ರೈವ್ ಎಂದು ಕರೆಯಲಾಗಿತ್ತು. ನಂತರ ಜನವರಿ 18ರಂದು ಕೇಜ್ರಿವಾಲ್ ಅವರು ಮಾನ್ ಅವರನ್ನು ಆಯ್ಕೆಯಾದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರು. ಶೇ. 93.3% ಜನರು ಮಾನ್ ಅವರನ್ನು ಬೆಂಬಲಿಸಿದ್ದಾರೆ ಎಂದು ಎಎಪಿ ಹೇಳಿಕೊಂಡಿದೆ.

ಎಎಪಿಯ ಸಮೀಕ್ಷೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್‌ ನಾಯಕ ಹಿಮಾಂಶು ಪಾಠಕ್, ‘ಎಎಪಿ ಕಾ ಸಿಎಂ ಸ್ಕ್ಯಾಮ್’ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. “ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಸಾರ್ವಜನಿಕರಿಂದ 21 ಲಕ್ಷ ಕರೆಗಳು ಬಂದಿವೆ ಎಂದು ಆಪ್ ಹೇಳಿದೆ. ಇದೊಂದು ಪ್ರಚಾರವಾಗಿದೆ. ಪಂಜಾಬ್‌ನಲ್ಲಿ ತಮಗೆ ಭರ್ಜರಿ ಬೆಂಬಲ ಸಿಗುತ್ತಿದೆ ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಎಎಪಿ ನಡೆಸಿದ ಪ್ರಯತ್ನ ಇದಾಗಿದೆ. ಪಂಜಾಬ್‌ನ ಜನರನ್ನು ಮರುಳು ಮಾಡಲು ಫೋನ್ ಕರೆ ವ್ಯವಸ್ಥೆಯನ್ನು ಸಾಧನವಾಗಿ ಆಪ್‌ನವರು ಬಳಸಿಕೊಂಡಿದ್ದಾರೆ” ಎಂದು ಅವರು ದೂರಿದ್ದಾರೆ.

ವಿಡಿಯೊದಲ್ಲಿ ಪಾಠಕ್ ಅವರು, “ಪಂಜಾಬ್ ಜನತೆಗೆ ಎಎಪಿ ವಂಚನೆ ಎಸಗಿದೆ. ಏಕೆಂದರೆ ಮತದಾನಕ್ಕಾಗಿ ಬಿಡುಗಡೆ ಮಾಡಲಾದ ಮೊಬೈಲ್ ಸಂಖ್ಯೆ – 7074870748 – ವಾಣಿಜ್ಯ ಸಂಖ್ಯೆ ಅಲ್ಲ, ಆದರೆ ಖಾಸಗಿಯದ್ದಾಗಿದೆ. ಖಾಸಗಿ ಸಂಖ್ಯೆಗೆ ನಾಲ್ಕು ದಿನಗಳಲ್ಲಿ 21 ಲಕ್ಷ ಫೋನ್ ಕರೆಗಳು, ಏಳು ಲಕ್ಷ ವಾಟ್ಸಾಪ್ ಸಂದೇಶಗಳು, ಧ್ವನಿ ಮೇಲ್‌ಗಳು ಮತ್ತು ಎಸ್‌ಎಂಎಸ್‌ಗಳನ್ನು ಬರುವುದು ಅಸಾಧ್ಯ. ಎಎಪಿ ಪಂಜಾಬ್ ಸಹ-ಪ್ರಭಾರಿ ರಾಘವ್ ಚಡ್ಡಾ ಅವರ ಹೆಸರಿನಲ್ಲಿ ಫೋನ್ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ಪಾಠಕ್ ಅವರು ಎಎಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. 2017ರಲ್ಲಿ ಕಾಂಗ್ರೆಸ್ ಸೇರುವ ಮೊದಲು ಪಂಜಾಬ್‌ ಎಎಪಿಯ ರಾಜ್ಯ ಐಟಿ ಸೆಲ್ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.

“21 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಬೇಕಾದರೆ, ಎಎಪಿ ಪ್ರತಿದಿನ ಕನಿಷ್ಠ 5.25 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಬೇಕಾಗುತ್ತದೆ” ಎಂದು ಪಾಠಕ್‌‌ ಹೇಳಿದ್ದಾರೆ.

“ಎಎಪಿ ನಾಯಕರು ಹಗಲು ರಾತ್ರಿ ಫೋನ್ ಕರೆಗಳು, ವಾಟ್ಸಾಪ್ ಸಂದೇಶಗಳು, ಎಸ್‌ಎಂಎಸ್ ಮತ್ತು ಧ್ವನಿ ಮೇಲ್‌ಗಳನ್ನು ಸ್ವೀಕರಿಸುತ್ತಿದ್ದರೂ, ಅವರು ಪ್ರತಿ ಸಂದೇಶಕ್ಕಾಗಿ ಕನಿಷ್ಠ 15 ಸೆಕೆಂಡುಗಳನ್ನು ಕಳೆಯುತ್ತಿದ್ದರು. ಈ ಲೆಕ್ಕಾಚಾರದ ಪ್ರಕಾರ, ಅವರು ದಿನಕ್ಕೆ ಕೇವಲ 5,760 ಸಂದೇಶಗಳನ್ನು ಸ್ವೀಕರಿಸಬೇಕಾಗಿತ್ತು. ಹೀಗಾದಾಗ ನಾಲ್ಕು ದಿನಗಳಲ್ಲಿ 23,040 ಸಂದೇಶಗಳನ್ನು ಸ್ವೀಕರಿಸಬೇಕಾಗಿತ್ತು” ಎಂದು ವಿಡಿಯೊ ಮೂಲಕ ವಿಶ್ಲೇಷಿಸಿದ್ದಾರೆ.

ಏಳು ಲಕ್ಷ ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಿರುವುದಾಗಿ ಎಎಪಿ ಹೇಳಿಕೊಂಡಿದ್ದು, ಪ್ರತಿದಿನ 1.75 ಲಕ್ಷ ಸಂದೇಶಗಳನ್ನು ಸ್ವೀಕರಿಸಬೇಕಾಗುತ್ತದೆ ಎಂದು ಪಾಠಕ್ ತಿಳಿಸಿದ್ದಾರೆ. “ಇಷ್ಟು ದೊಡ್ಡ ಮಟ್ಟದ ಸಂದೇಶಗಳನ್ನು ಓದಲು ಮತ್ತು ಕಾರ್ಯಾಚರಣೆ ಪೂರ್ಣಗೊಳಿಸಲು ಸಿಬ್ಬಂದಿಯ ಜೊತೆಗೆ ಸುಮಾರು 50 ಕಂಪ್ಯೂಟರ್‌ಗಳನ್ನು ಒಂದು ವರ್ಷ ಕಾಲ ಬಳಸಬೇಕಾಗುತ್ತದೆ. ಈ ಫೋನ್ ಕರೆ ಕಾರ್ಯಾಚರಣೆಯ ವೆಚ್ಚ ಎಷ್ಟು? ಈ ಸೆಟ್‌ಅಪ್ ಎಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎಎಪಿ ವಿವರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ದಿ ವೈರ್‌ನೊಂದಿಗೆ ಮಾತನಾಡಿರುವ ಪಾಠಕ್, “ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಸಾಮಾನ್ಯ ಸಂಖ್ಯೆಗಳಲ್ಲಿ 200 ಸಂದೇಶಗಳಿಗೆ ದಿನಕ್ಕೆ SMS ಕಳುಹಿಸುವ ಮಿತಿಯನ್ನು ನಿಗದಿಪಡಿಸಿದೆ. AAP ಬೃಹತ್ ಸಂದೇಶಗಳನ್ನು ಹೇಗೆ ಸ್ವೀಕರಿಸಬಹುದು? ಇದು ವಾಣಿಜ್ಯ ಅಥವಾ ಟೋಲ್-ಫ್ರೀ ಸಂಖ್ಯೆಯಾಗಿದ್ದಲ್ಲಿ, ಈ ಫೋನ್ ಕರೆಗಳು ಸಾಧ್ಯವಿತ್ತು. ವಾಣಿಜ್ಯ ಸಂಖ್ಯೆಗಳು ತಮ್ಮ ಪ್ರತಿಕ್ರಿಯೆಯನ್ನು ನೋಂದಾಯಿಸಲು ಕರೆ ಮಾಡುವವರಿಗೆ ಡಯಲ್ 1,2,3 ನಂತಹ ಆಯ್ಕೆಗಳನ್ನು ನೀಡುತ್ತವೆ” ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಈ ಮಿತಿಯು ಹೊರಹೋಗುವ ಸಂದೇಶಗಳಿಗೆ ಅನ್ವಯಿಸುತ್ತದೆ, ಒಳಬರುವಿಕೆಗಲ್ಲ ಎಂದೂ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭಾರತೀಯ ಚುನಾವಣಾ ಆಯೋಗ ಎಎಪಿಯ “ಪ್ರಚಾರ”ದ ಬಗ್ಗೆ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಅರವಿಂದ್ ಕೇಜ್ರಿವಾಲ್ ಫೋನ್ ಕರೆ ಕಾರ್ಯಚರಣೆ ಡೇಟಾವನ್ನು ಸಾಬೀತುಪಡಿಸಬೇಕು, ಇಲ್ಲದಿದ್ದರೆ ಪಂಜಾಬ್‌ನಲ್ಲಿ ಉಳಿಯಲು ಅವರಿಗೆ ಯಾವುದೇ ಇಂಟಿಗ್ರಿಟಿ ಇರುವುದಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೈತರ ರಾಜಕೀಯ ಸಂಸ್ಥೆಯಾದ ಸಂಯುಕ್ತ ಸಮಾಜ ಮೋರ್ಚಾವನ್ನು (ಎಸ್‌ಎಸ್‌ಎಂ)  ಬೆಂಬಲಿಸುತ್ತಿರುವ ಪಟಿಯಾಲದ ಮಾಜಿ ಎಎಪಿ ಸಂಸದ ಧರಂವೀರ್ ಗಾಂಧಿ ಕೂಡ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎಎಪಿಯ ನಡೆಸಿದ ಫೋನ್‌ ಕರೆಯ ತಂತ್ರವನ್ನು “ಹೈಪ್” (ಪ್ರಚೋದನೆ) ಎಂದು ಟೀಕಿಸಿದ್ದಾರೆ.

ಎಎಪಿಯ ಚಾಲನೆ ನಿಜವಲ್ಲ ಎಂದು ಧರಂವೀರ್‌‌ ಹೇಳಿದ್ದಾರೆ. “ಅರವಿಂದ್ ಕೇಜ್ರಿವಾಲ್ ಈವೆಂಟ್ ಮ್ಯಾನೇಜರ್ ಮತ್ತು ರಂಗಭೂಮಿ ರಾಜಕಾರಣಿ. ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ತಮಗೆ 21 ಲಕ್ಷ ಫೋನ್ ಕರೆಗಳು ಬಂದಿವೆ ಎಂದು ಎಎಪಿ ಹೇಳಿಕೊಂಡಿರುವುದು ತನಿಖೆಯ ವಿಷಯವಾಗಿದೆ. ತಾಂತ್ರಿಕವಾಗಿ ತರಬೇತಿ ಪಡೆದ ಕೆಲವು ಏಜೆನ್ಸಿಗಳು ಸತ್ಯವನ್ನು ಹೊರತರಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

ಎಎಪಿ ಕೇವಲ 7,000 ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಿದೆ ಎಂದು ಮಾಜಿ ಎಎಪಿ ಸಂಸದ ತಿಳಿಸಿದ್ದಾರೆ. “ಅವರ ಎಲ್ಲಾ ಪ್ರತಿಪಾದನೆಗಳು ಅವರ ರಾಜಕೀಯದಂತೆ ನಕಲಿ. ಆ ಫೋನ್ ನಂಬರ್ ರಾಘವ್ ಚಡ್ಡಾ ಅವರದ್ದು ಎಂದು ತಿಳಿದು ಬಂದಿದೆ. ಎಎಪಿಯ ಟೆಲಿವೋಟ್ ಡ್ರೈವ್ ಅನ್ನು ಪ್ರಶ್ನಿಸುವ ಸಂದೇಶಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿಹೋಗಿವೆ” ಎಂದು ಗಮನ ಸೆಳೆದಿದ್ದಾರೆ.

ಧರಂವೀರ್‌ ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ಎಎಪಿ ವಿರುದ್ಧ ಪ್ರಚಾರವನ್ನು ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಎಎಪಿ ಭದ್ರ ನೆಲೆಯನ್ನು ಹೊಂದಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 20 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಎಎಪಿ ಗೆದ್ದಿದೆ.

“ಕೇಜ್ರಿವಾಲ್ ಪ್ರತಿದಿನ ತರ್ಕಬದ್ಧವಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಪಂಜಾಬ್‌ಗೆ ಅವಮಾನ ಮಾಡುತ್ತಿದ್ದಾರೆ. ನಾನು ಮತದಾರರನ್ನು ಸಂಪರ್ಕಿಸುತ್ತಿದ್ದೇನೆ. ಹಿಂದುತ್ವದ ಅಜೆಂಡಾವನ್ನು ಓರೆಯಾಗಿ ಅನುಸರಿಸುತ್ತಿರುವ ಎಎಪಿಗೆ ಮತ ಹಾಕಬೇಡಿ ಎಂದು ಕೇಳುತ್ತಿದ್ದೇನೆ. ಕೇಜ್ರಿವಾಲ್ ಅವರಿಗೆ ಭಗವಂತ್‌ ಮಾನ್‌ ಅಧೀನವಾಗಿದ್ದರೆ, ಬಿಜೆಪಿ-ಆರ್‌ಎಸ್‌ಎಸ್‌ಗೆ ಅರವಿಂದ್ ಕೇಜ್ರಿವಾಲ್ ಅಧೀನವಾಗಿದ್ದಾರೆ. ಪಂಜಾಬ್ ಶ್ರೀಮಂತ ಮತ್ತು ಸುಸಂಸ್ಕೃತ ರಾಜ್ಯವಾಗಿದೆ. ಹಿಂದುತ್ವ ರಾಜಕೀಯ ಮತ್ತು ನಕಲಿ ರಾಷ್ಟ್ರೀಯತೆಯ ಈ ಹೊಸ ಅಪಾಯದಲ್ಲಿ ಜನರು ಬೀಳಬಾರದು” ಎಂದು ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಫೋನ್-ಇನ್ ಕಾರ್ಯಾಚರಣೆ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಯಾವುದೇ ಎಎಪಿ ಶಾಸಕರಿಗೆ ಸಾಧ್ಯವಾಗಲಿಲ್ಲ. ಆದರೆ, “ಪಂಜಾಬ್‌ನಲ್ಲಿ ಮುಂದಿನ ಸರ್ಕಾರವನ್ನು ಎಎಪಿ ರಚಿಸಲು ಸಿದ್ಧವಾಗಿರುವುದರಿಂದ ಕಾಂಗ್ರೆಸ್, ಎಸ್‌ಎಡಿ-ಬಿಎಸ್‌ಪಿ, ಬಿಜೆಪಿ ಮತ್ತು ಮೈತ್ರಿ ಪಾಲುದಾರರು ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದ್ದಾರೆ” ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

ರಾಘವ್ ಚಡ್ಡಾ ಅವರು ಪ್ರತಿಕ್ರಿಯೆಗಳಿಗೆ ಲಭ್ಯವಿಲ್ಲವಾಗಿಲ್ಲ. ಪಂಜಾಬ್ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಪ್ರತಿಕ್ರಿಯೆ ನೀಡಿದ್ದು, “ರಾಜ್ಯದಲ್ಲಿ ಎಎಪಿಯ ಏರುತ್ತಿರುವ ಗ್ರಾಫ್ ಬಗ್ಗೆ ಅವರು ಗೊಂದಲಕ್ಕೆ ಒಳಗಾಗಿರುವುದರಿಂದ ವಿರೋಧ ಪಕ್ಷದ ಪಾಳೆಯದಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ” ಎಂದಿದ್ದಾರೆ.

“ನಾವು ಟೆಲಿವೋಟ್‌ನಲ್ಲಿ ಜನರನ್ನು ತೊಡಗಿಸಿಕೊಂಡಿದ್ದೇವೆ. ಕಾನೂನುಬದ್ಧವಾಗಿ ಮತದಾನ ನಡೆಸಿದ್ದೇವೆ. ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಲು ಜನರಿಗೆ ಒಂದು ವಾರದ ಸಮಯವನ್ನು ನೀಡಲಾಯಿತು. ಪ್ರತಿಕ್ರಿಯೆ ಅಗಾಧವಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರು ವಿವರಗಳನ್ನು ಹಂಚಿಕೊಂಡಿದ್ದಾರೆ. ಭಗವಂತ್ ಮಾನ್ ಜನಸಾಮಾನ್ಯರ ವ್ಯಕ್ತಿಯಾಗಿದ್ದು, ಜನರು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ” ಎಂದು ಚೀಮಾ ಹೇಳಿದ್ದಾರೆ.

ಆದರೆ, ಫೋನ್-ಇನ್ ಡ್ರೈವ್‌ನ ತಾಂತ್ರಿಕ ವಿವರಗಳ ಬಗ್ಗೆ ಕೇಳಿದಾಗ, ‘ಅದರ ಬಗ್ಗೆ ನನಗೆ ತಿಳಿದಿಲ್ಲ’ ಎಂದು ಚೀಮಾ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕಿ ಸರ್ವಜಿತ್ ಕೌರ್ ಮನುಕೆ ಅವರು ಪ್ರತಿಕ್ರಿಯಿಸಿ, “ಫೋನ್-ಇನ್ ಡ್ರೈವ್ ಮತ್ತು ಈ ಪ್ರಚಾರಕ್ಕಾಗಿ ಕೆಲಸ ಮಾಡಿದ ಜನರ ಬಗ್ಗೆ ಯಾವುದೇ ತಾಂತ್ರಿಕ ವಿವರಗಳು ತಿಳಿದಿಲ್ಲ” ಎಂದಿದ್ದಾರೆ. ಆದರೆ ಅವರು, “ಕೇವಲ ಪಂಜಾಬ್‌ನ ಜನರು ಮಾತ್ರವಲ್ಲ, ಅನಿವಾಸಿ ಭಾರತೀಯರೂ ಭಗವಂತ್ ಮಾನ್‌ಗೆ ಬೆಂಬಲ ಘೋಷಿಸಲು ನಮಗೆ ಕರೆ ಮಾಡಿದ್ದರು. ನಮ್ಮ ಫೋನ್-ಇನ್ ಪ್ರಚಾರ ಡೇಟಾ ಸ್ಪಷ್ಟವಾಗಿದೆ. ವಿರೋಧ ಪಕ್ಷಗಳು ದುಡ್ಡಿಗಾಗಿ ಹೇಳಿಕೆಗಳನ್ನು ನೀಡುತ್ತಿವೆ” ಎಂದು ‌ಆರೋಪಿಸಿದ್ದಾರೆ.

ಪ್ರತಿಪಕ್ಷಗಳ ಆರೋಪಗಳ ವಿರುದ್ಧ ಪ್ರತಿಕ್ರಿಯಿಸಿದ ಎಎಪಿ ಪಂಜಾಬ್ ವಕ್ತಾರ ನೀಲ್ ಗಾರ್ಗ್, “ಇದನ್ನು ಎದುರಾಳಿ ಪಕ್ಷಗಳಿಂದ ನಿರೀಕ್ಷಿಸಲಾಗಿತ್ತು. ನಮ್ಮ ಪಕ್ಷದ ಮುಖ್ಯಮಂತ್ರಿಯ ಅಭ್ಯರ್ಥಿಯ ಆಯ್ಕೆಯು ತಂತ್ರಜ್ಞಾನ ಚಾಲಿತ ಮತ್ತು ಇಂಟರ್ನೆಟ್ ಆಧಾರಿತ ಕರೆಗಳನ್ನು ಆಧರಿಸಿತ್ತು. ಭಗವಂತ್ ಮಾನ್ ಅವರಿಗೆ ಬೆಂಬಲ ಘೋಷಿಸಲು ಜನರು ನಮ್ಮ ಫೋನ್ ಸಂಖ್ಯೆಗೆ ಕರೆ ಮಾಡದಿದ್ದರೆ, ಒಂದು ವಾರದೊಳಗೆ ಎಎಪಿ ಗ್ರಾಫ್ ಹೇಗೆ ಗಗನಕ್ಕೇರಿತು ಎಂಬುದನ್ನು ಪ್ರತಿಪಕ್ಷಗಳಿಗೆ ವಿವರಿಸಬೇಕೇ? ಮೇಲಾಗಿ, ಈ ದಿನಗಳಲ್ಲಿ ಎಲ್ಲಾ ಕರೆಗಳು ಸ್ವಯಂಚಾಲಿತವಾಗಿವೆ ಎಂದು ವಿರೋಧ ಪಕ್ಷದ ನಾಯಕರು ತಿಳಿದಿರಬೇಕು. ಕಂಪ್ಯೂಟರ್ ಚಾಲಿತ ತಂತ್ರಜ್ಞಾನದ ಮೂಲಕ, ಕರೆಗಳು ಸ್ವಯಂಚಾಲಿತವಾಗಿ ರೆಕಾರ್ಡ್ ಆಗುತ್ತವೆ. ಬದಲಿಗೆ, ನಾವು ಮೊದಲ ದಿನವೇ ಐದು ಲಕ್ಷ ಕರೆಗಳನ್ನು ಸ್ವೀಕರಿಸಿದ್ದೇವೆ, ಇದು ಜನರ ಪ್ರತಿಕ್ರಿಯೆಯನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಫೋನ್ ಸಂಖ್ಯೆ ಖಾಸಗಿ ಅಥವಾ ವಾಣಿಜ್ಯವಾಗಿದೆಯೇ ಎಂದು ಮತ್ತೊಮ್ಮೆ ಕೇಳಿದಾಗ, “ನನಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಈ ಆರೋಪಗಳು ಆಧಾರ ರಹಿತವಾಗಿವೆ” ಎಂದು ಗಾರ್ಗ್ ಪ್ರತಿಕ್ರಿಯೆ ನೀಡಿದ್ದಾರೆ.

ಸುನಮ್‌ನ ಎಎಪಿ ಶಾಸಕ ಅಮನ್ ಅರೋರಾ ಅವರು, “ಫೋನ್ ಕರೆಗಳ ಪ್ರಶ್ನೆಗಳ ಬಗ್ಗೆ ಅಥವಾ ಈ ವಿಷಯದ ಕುರಿತು ಬಿಡುಗಡೆಯಾದ ಯಾವುದೇ ವೀಡಿಯೊದ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

“ಇದು ತಾಂತ್ರಿಕ ವಿಷಯವಾಗಿರುವುದರಿಂದ ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಫೋನ್ ಕರೆಗೆ ಉಲ್ಲೇಖಿಸಲಾದ ಫೋನ್ ಸಂಖ್ಯೆ ರಾಘವ್ ಚಡ್ಡಾ ಅವರದ್ದಲ್ಲ ಎಂದು ನನಗೆ ತಿಳಿದಿದೆ. ರಾಘವ್ ಕಳೆದ ಐದಾರು ವರ್ಷಗಳಿಂದ ಒಂದೇ ಒಂದು ಫೋನ್ ನಂಬರ್ ಮಾತ್ರ ಬಳಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಮೂಲ: ದಿ ವೈರ್‌ (ಕುಸುಮಾ ಅರೊರಾ)


ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...