Homeಮುಖಪುಟ100ನೇ ದಿನಕ್ಕೆ ಕಾಲಿಟ್ಟ ಭಾರತ ಐಕ್ಯತಾ ಯಾತ್ರೆ: ಪಾದಯಾತ್ರೆಯ 10 ಮುಖ್ಯ ಸಂಗತಿಗಳು

100ನೇ ದಿನಕ್ಕೆ ಕಾಲಿಟ್ಟ ಭಾರತ ಐಕ್ಯತಾ ಯಾತ್ರೆ: ಪಾದಯಾತ್ರೆಯ 10 ಮುಖ್ಯ ಸಂಗತಿಗಳು

ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ಚಿಂತಕ ಯೋಗೇಂದ್ರ ಯಾದವ್, ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಖ್ಯಾತ ಬಾಲಿವುಡ್ ನಟಿ ಸ್ವರ ಭಾಸ್ಕರ್ ಸೇರಿದಂತೆ ನೂರಾರು ಗಣ್ಯರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ

- Advertisement -
- Advertisement -

ಸೆಪ್ಟಂಬರ್ 07 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯು ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ. ದ್ವೇಷ ಮತ್ತು ವಿಭಜನೆಯ ವಿರುದ್ಧ ನಮ್ಮ ರಾಷ್ಟ್ರವನ್ನು ಒಗ್ಗೂಡಿಸುವುದು ಮತ್ತು ಅತ್ಯಧಿಕ ನಿರುದ್ಯೋಗ, ದಾಖಲೆಯ ಬೆಲೆ ಏರಿಕೆ ವಿರುದ್ಧ ಹೋರಾಡುವ ಆಶಯದೊಂದಿಗೆ ನಡೆಯುತ್ತಿರುವ ಯಾತ್ರೆಯ ಇದುವರೆಗೂ 8 ರಾಜ್ಯಗಳಲ್ಲಿ ಸಂಚರಿಸಿ ಸುಮಾರು 2,800 ಕಿ.ಮೀಗಳನ್ನು ಕ್ರಮಿಸಿದೆ.

ಸದ್ಯಕ್ಕೆ ರಾಜಸ್ಥಾನದಲ್ಲಿರುವ ಯಾತ್ರೆಯ 100ನೇ ದಿನದ ಅಂಗವಾಗಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ಪಕ್ಷದ ಅಧ್ಯಕ್ಷೆ ಪ್ರತಿಭಾ ಪಾಟೀಲ್ ಮುಂತಾದವರು ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಆರಂಭದಿಂದಲೂ ಜನಮನ್ನಣೆ ಗಳಿಸುತ್ತಾ ಬಂದಿರುವ ಭಾರತ್ ಜೋಡೋ ಯಾತ್ರೆ ಇದೇ ಡಿಸೆಂಬರ್ 24 ರಂದು ದೆಹಲಿ ಪ್ರವೇಶಿಸಲಿದೆ. ಒಂದು ವಾರಗಳ ವಿರಾಮದ ಬಳಿಕ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮೂಲಕ ಜಮ್ಮು ಕಾಶ್ಮೀರ ಪ್ರವೇಶಿಸಲಿದ್ದು, ಶ್ರೀನಗರದಲ್ಲಿ ಸಮಾರೋಪ ನಡೆಯಲಿದೆ ಎನ್ನಲಾಗಿದೆ. ಒಟ್ಟು 150 ದಿನಗಳಲ್ಲಿ 3570 ಕಿ.ಮೀ ಸಂಚರಿಸುವ ಗುರಿ ಹೊಂದಲಾಗಿದೆ. ಜನಸಾಮಾನ್ಯರೊಂದಿಗೆ ಚಿಂತಕರು, ಹೋರಾಟಗಾರರು, ನಟ-ನಟಿಯರು, ಕ್ರೀಡಾ ಸಾಧಕರು, ಆರ್ಥಿಕ ತಜ್ಞರು ಇದುವರೆಗೆ ಯಾತ್ರೆಯ ಭಾಗವಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಗಮನ ಸೆಳೆದ ಪ್ರಮುಖ 10 ಸಂಗತಿಗಳನ್ನು ಪಟ್ಟಿ ಮಾಡುವ ಪ್ರಯತ್ನ ಇಲ್ಲಿದೆ.

  1. ಬರಿಗಾಲಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಮಗ

ಕನ್ಯಾಕುಮಾರಿಯಿಂದ ಯಾತ್ರೆಯು ಕೇರಳ ಪ್ರವೇಶಿಸಿದಾಗ ಭವ್ಯ ಸ್ವಾಗತ ದೊರೆತಿದೆ. ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿಯವರ ಮಗ ಚಾಂಡಿ ಉಮ್ಮನ್ ರಾಹುಲ್ ಗಾಂಧಿ ಜೊತೆ ಬರಿಗಾಲಿನಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕಾಶ್ಮೀರದವರೆಗೂ ನಡೆಯುವ ಗುರಿ ಹೊಂದಿದ್ದಾರೆ.

2. ಎರಡು ಸಮುದಾಯಗಳನ್ನು ಒಗ್ಗೂಡಿಸಿದ ಯಾತ್ರೆ: ಬದನವಾಳುವಿನಲ್ಲಿ ಒಂದಾದ ದಲಿತರು-ವೀರಶೈವರು

ಯಾತ್ರೆಯು ಕರ್ನಾಟಕ ಪ್ರವೇಶಿಸಿದ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ದೇವನೂರು ಮಹಾದೇವರವರು ಸಂವಿಧಾನದ ಪುಸ್ತಕವನ್ನು ರಾಹುಲ್ ಗಾಂಧಿಗೆ ನೀಡಿ ಸ್ವಾಗತಿಸಿದರು. ಆನಂತರ ಜಾತಿ ಸಂಘರ್ಷದಿಂದ ಬೇರೆ ಬೇರೆಯಾಗಿದ್ದ ದಲಿತರು ಮತ್ತು ವೀರಶೈವರು ರಾಹುಲ್ ಗಾಂಧಿಯವರ ಭಾರತ ಐಕ್ಯತಾ ಯಾತ್ರೆಯ ಸಮಯದಲ್ಲಿ ಒಂದಾದರು. ಒಟ್ಟಿಗೆ ಸಹಭೋಜನ ಮಾಡಿದ್ದಲ್ಲದೆ ಆ ಊರಿನ ಒಂದು ರಸ್ತೆಗೆ ಭಾರತ ಜೋಡೊ ರಸ್ತೆ ಎಂದು ಹೆಸರಿಡಲಾಗಿದೆ!

3. ನಾವು ನಿಲ್ಲುವುದಿಲ್ಲ: ಮಳೆಯಲ್ಲಿ ರಾಹುಲ್ ಭಾಷಣ ವೈರಲ್

ಯಾತ್ರೆಯು ಕರ್ನಾಟಕ ಪ್ರವೇಶಿಸಿದ ನಂತರ ಮೈಸೂರಿನಲ್ಲಿ ಸಾರ್ವಜನಿಕ ಸಭೆ ನಡೆಯುವಾಗ ಧಾರಾಕಾರ ಮಳೆ ಸುರಿಯಿತು. ಅದನ್ನು ಲೆಕ್ಕಿಸದೇ ಸುರಿವ ಮಳೆಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ವೈರಲ್ ಆಯ್ತು. ಬಹುತೇಕ ಜನರೂ ಸಹ ಸುರಿವ ಮಳೆಯಲ್ಲಿಯೇ ನಿಂತು ಭಾಷಣ ಆಲಿಸಿದ ಫೋಟೊಗಳು ಎಲ್ಲೆಡೆ ಹರಿದಾಡಿದವು. “ನಾವು ನಿಲ್ಲುವುದಿಲ್ಲ, ಬಿಜೆಪಿ ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ಮತ್ತು ಹಿಂಸೆಯನ್ನು ಹಿಮ್ಮೆಟ್ಟಿಸುವುದು ಈ ಯಾತ್ರೆಯ ಉದ್ದೇಶ. ಈಗ ಮಳೆ ಬರುತ್ತಿದೆ. ಆದರೆ ಮಳೆಗೆ ಈ ಯಾತ್ರೆ ನಿಲ್ಲುವುದಿಲ್ಲ. ಬಿಸಿಲು, ಸಿಡಿಲು, ಚಳಿಗೂ ಕೂಡ ಈ ಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ. ನದಿಯ ರೀತಿ ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹರಿಯುತ್ತದೆ. ಈ ನದಿಯಲ್ಲಿ ನೀವು ಹಿಂಸೆ ಮತ್ತು ದ್ವೇಷವನ್ನು ಕಾಣುವುದಿಲ್ಲ. ಕೇವಲ ಪ್ರೀತಿ ಮತ್ತು ಭಾತೃತ್ವವಷ್ಟೆ ನೋಡುತ್ತೀರಿ. ಏಕೆಂದರೆ ಇದು ಭಾರತದ ಇತಿಹಾಸವಾಗಿದೆ, ಇದು ಭಾರತದ ಡಿಎನ್ಎ ಆಗಿದೆ” ಎಂದು ರಾಹುಲ್ ಮಾತನಾಡಿದ್ದರು.

4. ರಾಹುಲ್ ಜೊತೆ ಹೆಜ್ಜೆ ಹಾಕಿದ ಇಂದಿರಾ ಲಂಕೇಶ್, ರಾಧಿಕ ವೇಮುಲಾ

ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ನೂರಾರು ಸೆಲೆಬ್ರೆಟಿಗಳು ನಡೆದಿದ್ದಾರೆ. ಆದರೆ ದ್ವೇಷ ರಾಜಕಾರಣದ ಸಂತ್ರಸ್ತರಾದ ಇಂದಿರಾ ಲಂಕೇಶ್ ಮತ್ತು ರಾಧಿಕ ವೇಮುಲಾರವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದು ಮಹತ್ವದ್ದಾಗಿತ್ತು. ಕೋಮುವಾದಿಗಳ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ಮತ್ತು ಜಾತಿವಾದಕ್ಕೆ ಪ್ರಾಣ ತೆತ್ತ ರೋಹಿತ್ ವೇಮುಲಾರನ್ನು ರಾಹುಲ್ ಸ್ಮರಿಸಿದರು.

5. ಯಾತ್ರೆಗೆ ಬೆಂಬಲ ಸೂಚಿಸಿದ ಶಿವಸೇನೆ ಮುಖಂಡರು

ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರ ರಾಜ್ಯ ಪ್ರವೇಶಿಸುವ ಸಂದರ್ಭದಲ್ಲಿ ಶಿವಸೇನೆಯ ಮುಖಂಡ ಆದಿತ್ಯ ಠಾಕ್ರೆ ಹಾಜರಿದ್ದರು. ಕೆಲ ವರ್ಷಗಳ ಕಾಲ ಕೋಮುವಾದಿ ಸಿದ್ದಾಂತವನ್ನು ಪ್ರೋತ್ಸಾಹಿಸಿದ್ದ ಶಿವಸೇನೆಯು ರಾಹುಲ್ ಗಾಂಧಿ ಜೊತೆ ಸೇರಿ ಶಾಂತಿ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯಲು ಮುಂದಾಯಿತು.

6. ಯಾತ್ರೆಯಲ್ಲಿ ಸಾವರ್ಕರ್ ವಿವಾದ

ಕೇರಳ ಮತ್ತು ಕರ್ನಾಟಕದ ಕೆಲವೆಡೆ ಯಾತ್ರೆಯ ಬ್ಯಾನರ್‌ಗಳಲ್ಲಿ ಸಾವರ್ಕರ್ ಫೋಟೊ ನುಸುಳಿ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಆನಂತರ ‘ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದು ಪಿಂಚಣಿ ಸ್ವೀಕರಿಸಿದ ಸಾವರ್ಕರ್‌ ಜೀ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಆರಾಧ್ಯ ದೈವವಾಗಿದ್ದಾರೆ’ ಎಂದು ರಾಹುಲ್ ಗಾಂಧಿ ಮಹಾರಾಷ್ಟ್ರದ ಭಾಷಣವೊಂದರಲ್ಲಿ ಹೇಳಿದರು. ಇದನ್ನು ವಿವಾದವನ್ನಾಗಿಸಿದ ಬಿಜೆಪಿ ಪಕ್ಷವು ರಾಹುಲ್ ಜೊತೆಗಿರುವ ಶಿವಸೇನೆಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿತ್ತು. “ವಿಡಿ ಸಾವರ್ಕರ್ ಬಗ್ಗೆ ಅಪಾರ ಗೌರವವಿದೆ ಎಂದ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ರಾಹುಲ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ, ಅದೇ ಸಮಯದಲ್ಲಿ ಬಿಜೆಪಿಯನವರು ನಮಗೆ ಪಾಠ ಹೇಳಲು ಬರಬೇಕಿಲ್ಲ” ಎಂದಿದ್ದರು.

ಈ ಹೇಳಿಕೆಗಳು ಕಾಂಗ್ರೆಸ್ ಮತ್ತು ಶಿವಸೇನೆ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಿಸಬಹುದು ಎಂಬ ಚರ್ಚೆಗಳಾಗಿದ್ದವು. ಆದರೆ ಸಂಜಯ್ ರಾವತ್ ರಾಹುಲ್ ಗಾಂಧಿಯವರನ್ನು ಹೊಗಳುವ ಮೂಲಕ ವಿವಾದಕ್ಕೆ ಇತ್ಯರ್ಥವಾಡಿದ್ದರು. “ಕೆಲವು ವಿಷಯಗಳ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳ ನಡುವೆಯೂ, ನಿಮ್ಮ ರಾಜಕೀಯ ಸಹೋದ್ಯೋಗಿಯನ್ನು ವಿಚಾರಿಸುವುದು ಮಾನವೀಯತೆಯ ಸಂಕೇತವಾಗಿದೆ. ರಾಜಕೀಯದ ಕಹಿ ಗಳಿಗೆಯಲ್ಲಿ ಇಂತಹ ಕ್ರಿಯೆಗಳು ಅಪರೂಪವಾಗುತ್ತಿವೆ. ರಾಹುಲ್‌ಜಿ ತಮ್ಮ ಯಾತ್ರೆಯನ್ನು ಪ್ರೀತಿ ಮತ್ತು ಸಹಾನುಭೂತಿಯ ಮೇಲೆ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಯಾತ್ರೆಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿದೆ” ಎಂದು ಟ್ವೀಟ್ ಮಾಡಿದ್ದರು.

7. ರಾಹುಲ್ ಗಾಂಧಿ ಕೈ ಹಿಡಿದು ನಡೆದ ನಟಿ ಪೂನಂ ಕೌರ್; ಬಿಜೆಪಿ ಆಕ್ಷೇಪ – ಪಾಠ ಹೇಳಿದ ನೆಟ್ಟಿಗರು

ಯಾತ್ರೆಯಲ್ಲಿ ನಟಿ ಹಾಗೂ ಖಾದಿ ಮೇಲಿನ ಜಿಎಸ್‌ಟಿ ತೆರವಿಗಾಗಿ ಹೋರಾಡುತ್ತಿರುವ ಪೂನಂ ಕೌರ್ ಅವರು ರಾಹುಲ್ ಗಾಂಧಿ ಕೈ ಹಿಡಿದು ನಡೆದಿದ್ದರು. ಇದಕ್ಕೆ ಬಿಜೆಪಿ ನಾಯಕಿ ಪ್ರೀತಿ ಗಾಂಧಿಯವರು “ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಟ್ವೀಟ್ ಮಾಡಿದ ಪೂನಂ ಕೌರ್, “ಇದು ನಿಮಗೆ ಸಂಪೂರ್ಣವಾಗಿ ಅವಮಾನಕರವಾಗಿದೆ, ಪ್ರಧಾನಿ ನಾರಿಶಕ್ತಿ ಬಗ್ಗೆ ಮಾತನಾಡಿದ್ದು ನೆನಪಿರಲಿ” ಎಂದು ಹೇಳಿದ್ದರು. ಇನ್ನು ಕಾಂಗ್ರೆಸ್​ನ ಜೈರಾಮ್ ರಮೇಶ್ ಅವರು ವಿಕೃತ ಮತ್ತು ಅನಾರೋಗ್ಯದ ಮನಸ್ಸು ಎಂದು ಪ್ರೀತಿ ಗಾಂಧಿಯನ್ನು ಟೀಕಿಸಿದ್ದರು.

ಯಾವುದೇ ಮಹಿಳೆಯು ತನ್ನನ್ನು ಗೌರವಿಸುವವರೊಂದಿಗೆ ಮಾತ್ರ ಕೈ ಹಿಡಿದು ನಡೆಯುತ್ತಾರೆ. ಅವರ ಮೇಲಿನ ನಂಬಿಕೆ ಅದಕ್ಕೆ ಕಾರಣ. ಆದರೆ ಬಿಜೆಪಿಯವರು ಎಲ್ಲದರಲ್ಲಿಯೂ ಕೆಟ್ಟದ್ದು ಹುಡುಕುತ್ತಾರೆ ಎಂದು ನೆಟ್ಟಿಗರು ಪಾಠ ಮಾಡಿದ್ದರು.

8. ಯಾತ್ರೆಯಲ್ಲಿ ಪಾಕ್ ಪರ ಘೋಷಣೆ ಎಂದು ನಕಲಿ ವಿಡಿಯೋ ಹಂಚಿಕೆ: ಬಿಜೆಪಿ ಮುಖಂಡನ ಮೇಲೆ FIR

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಮಧ್ಯ ಪ್ರದೇಶದಲ್ಲಿ ಸಂಚರಿಸುವಾಗ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ತಿರುಚಿದ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡನ ಮೇಲೆ ಛತ್ತೀಸ್‌ಘಡ ಪೊಲೀಸರು FIR ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, “ವಿಡಿಯೋ ತಿರುಚಲ್ಪಟ್ಟಿದೆ. ಭಾರತ್ ಜೋಡೋ ಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾಗಿರುವುದರಿಂದ ಬಿಜೆಪಿ ಪಕ್ಷಕ್ಕೆ ಹತಾಶೆಯಾಗಿದೆ. ಹಾಗಾಗಿ ಅದು ತಿರುಚಿದ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ಕುರಿತು ಕೂಡಲೇ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಬಿಜೆಪಿಯ ಕುತಂತ್ರಗಳಿಗೆ ತಿರುಗೇಟು ನೀಡಲು ಸಿದ್ದರಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

9. ಭಾರತ್ ಜೋಡೋ ಯಾತ್ರೆಗೆ ಪ್ರಧಾನಿ ಮೋದಿಯವರ ಮೊದಲ ಪ್ರತಿಕ್ರಿಯೆ: ಮೇಧಾ ಪಾಟ್ಕರ್‌ ಜೊತೆ ನಡೆದಿದ್ದಕ್ಕೆ ಆಕ್ಷೇಪ

ಭಾರತ್‌ ಜೋಡೋ ಯಾತ್ರೆಯಲ್ಲಿ ದೇಶದ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಭಾಗವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೂರು ದಶಕಗಳವರೆಗೆ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದರು.

‘ಸರ್ದಾರ್ ಸರೋವರ್ ಅಣೆಕಟ್ಟು’ ವಿರುದ್ಧ ಮೇಧಾ ಪಟ್ಕರ್ ಅವರು ‘ನರ್ಮದಾ ಬಚಾವೊ ಆಂದೋಲನ್’ ಎಂಬ ಬೃಹತ್ ಅಭಿಯಾನವನ್ನೆ ನಡೆಸಿದ್ದರು. ಈ ಅಣೆಕಟ್ಟಿನಿಂದಾಗಿ ಸಾವಿರಾರು ಬುಡಕಟ್ಟು ಸಮುದಾಯದ ಮನೆಗಳು ಮುಳಗಲಿದ್ದು, ಆ ಕುಟುಂಬಗಳು ನೆಲೆ ಕಳೆದುಕೊಳ್ಳಲಿವೆ ಎಂದು ಅವರು ಪ್ರತಿಪಾದಿಸಿದ್ದರು. ಅವರ ಧೀರ್ಘ ಹೋರಾಟವನ್ನೇ ಮೋದಿಯವರು ಟೀಕಿಸಿದ್ದರು.

10. ರಘುರಾಮ್ ರಾಜನ್, ಪ್ರಶಾಂತ್ ಭೂಷಣ್, ಸ್ವರ ಭಾಸ್ಕರ್ ಭಾಗಿ

ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ಚಿಂತಕ ಯೋಗೇಂದ್ರ ಯಾದವ್, ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಖ್ಯಾತ ಬಾಲಿವುಡ್ ನಟಿ ಸ್ವರ ಭಾಸ್ಕರ್, ಸ್ಡ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಯಾತ್ರೆಯನ್ನು ಬೆಂಬಲಿಸಿದ್ದಾರೆ. ಅಲ್ಲದೆ ಖ್ಯಾತ ಚಿತ್ರ ನಟ ಅಮೋಲ್ ಪಾಲೇಕರ್, ಚಿತ್ರನಟಿಯರಾದ ರಮ್ಯಾ ದಿವ್ಯಸ್ಪಂದನ, ಪೂನಂ ಕೌರ್, ರಿಯಾಸೇನ್, ಅಭಿನೇತ್ರಿ ರಶ್ಮಿ ದೇಸಾಯಿ ಮತ್ತು ಆಕಾಂಕ್ಷಾ ಪುರಿ ಸೇರಿದಂತೆ ಹಲವರು ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read