ಹಿರಿಯ ಕಾಂಗ್ರೆಸ್ ನಾಯಕ ಮತ್ತು ಖ್ಯಾತ ವಕೀಲ ಸಲ್ಮಾನ್ ಖುರ್ಷಿದ್ ಅವರು ರಾಷ್ಟ್ರ ರಾಜಧಾನಿ ಪ್ರತಿಷ್ಠಿತ ಅಲ್ಪಸಂಖ್ಯಾತ ಸಂಸ್ಥೆ ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ (ಐಐಸಿಸಿ) ಯ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
ಇದರಿಂದ ಈ ಪ್ರಾತಿನಿಧಿಕ ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೊರಟಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕ್ಕೆ ಮುಖಭಂಗವಾಗಿದೆ. ಖುರ್ಷಿದ್ ಅವರು 721 ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದಾರೆ.
ಆರ್‌ಎಸ್‌ಎಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ)ನ ಸಂಚಾಲಕ ಮತ್ತು ಖ್ಯಾತ ಕ್ಯಾನ್ಸರ್ ತಜ್ಞ ಡಾ.ಮಜೀದ್ ಅಹ್ಮದ್ ತಾಳಿಕೋಟಿ ಸಂಸ್ಥೆಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದರು. ಐಐಸಿಸಿ ಮಾಜಿ ಅಧ್ಯಕ್ಷ ಸಿರಾಜುದ್ದೀನ್ ಖುರೇಷಿ ಅವರ ಬೆಂಬಲವೂ ತಾಳಿಕೋಟಿಯವರಿಗಿತ್ತು. ಆದರೆ, ಅವರು ಕೇವಲ 227 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಖುರ್ಷಿದ್ ಬಳಿಕ ಉದ್ಯಮಿ ದಾನಿ ಆಸೀಫ್ ಹಬೂಬ್ 278 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಒಟ್ಟು 13 ಸದಸ್ಯರ ಆಡಳಿತ ಮಂಡಳಿಯಲ್ಲಿ ಕನಿಷ್ಠ ಎಂಟು ಮಂದಿ ಖುರ್ಷಿದ್ ಬೆಂಬಲಿಗರು ಆಯ್ಕೆಯಾಗಿದ್ದಾರೆ. “ಐಐಸಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವುದು ನನಗೆ ಸಂದ ಅತಿದೊಡ್ಡ ಗೌರವ. ವಿಶ್ವಾಸ ಮತ್ತು ಬೆಂಬಲಕ್ಕಾಗಿ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಐಐಸಿಸಿ ಮೌಲ್ಯಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಜೊತೆಯಾಗಿ ಕಾರ್ಯ ನಿರ್ವಹಿಸೋಣ” ಎಂದು ಖುರ್ಷಿದ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
I am deeply honored to be elected as the President of IICC. Thank you to all the members for your trust and support. Congratulations to all the elected candidates! Together, we will work towards the betterment and preservation of IICC’s values. pic.twitter.com/qdpzwmTJAK
— Salman Khurshid (@salman7khurshid) August 14, 2024
ಆಗಸ್ಟ್ 11ರಂದು ಐಐಸಿಸಿ ಚುನಾವಣೆ ನಡೆದಿದ್ದು, ಮೂರು ದಿನಗಳ ಮತ ಎಣಿಕೆ ಬಳಿಕ ಬುಧವಾರ ಫಲಿತಾಂಶ ಪ್ರಕಟಿಸಲಾಗಿದೆ. ನಿವೃತ್ತ ಉನ್ನತಾಧಿಕಾರಿ ಅಬ್ರಾರ್ ಅಹ್ಮದ್ ಹಾಗೂ ಹಬೀಬ್ ಕಣಕ್ಕೆ ಇಳಿಯುವ ಮೂಲಕ ಅಧ್ಯಕ್ಷ ಹುದ್ದೆಗೆ ಬಹುಮುಖಿ ಸ್ಪರ್ಧೆ ಇತ್ತು.
ಐಐಸಿಸಿ ಜನರಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇಸ್ಲಾಂನ ನಿಜವಾದ ಸಂದೇಶವನ್ನು ಅತ್ಯಂತ ಸಹಿಷ್ಣು, ಉದಾರ, ಪ್ರಗತಿಪರ ಮತ್ತು ತರ್ಕಬದ್ಧವಾಗಿ ತಲುಪಿಸುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತದೆ. ಲೋಧಿ ರಸ್ತೆಯಲ್ಲಿ ಸರ್ಕಾರ ಮಂಜೂರು ಮಾಡಿರುವ ಜಮೀನಿನಲ್ಲಿ ಈ ಕೇಂದ್ರ ತಲೆ ಎತ್ತಿ ನಿಂತಿದೆ. ಐಐಸಿಸಿಯ ಆಡಳಿತ ಮಂಡಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ.
ಈ ಸಂಸ್ಥೆಯು ಎಲ್ಲಾ ವರ್ಗಗಳ 4,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಆದರೆ, ಇತ್ತೀಚಿನ ಚುನಾವಣೆಯಲ್ಲಿ ಸುಮಾರು 2,000 ಜನರು ಮಾತ್ರ ಮತ ಚಲಾಯಿಸಲು ಅರ್ಹರಾಗಿದ್ದರು. ಐಐಸಿಸಿಯ ಚುನಾವಣೆಗೆ ಆರ್‌ಎಸ್‌ಎಸ್ ಬೆಂಬಲಿತ ತಾಳಿಕೋಟಿಯ ಪ್ರವೇಶವನ್ನು ಮುಸ್ಲಿಂ ಸಂಸ್ಥೆಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಬಲಪಂಥೀಯ ಪ್ರಯತ್ನವೆಂದು ಬಣ್ಣಿಸಲಾಗಿದೆ.
ಇದನ್ನೂ ಓದಿ : ಮಾರಣಾಂತಿಕ ‘ಎಂಪಾಕ್ಸ್’ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ