Homeಮುಖಪುಟದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

ದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಒಂದು ಕಾಲದಲ್ಲಿ ಮಾಫಿಯಾ ರಾಜ್ಯ-ಜಂಗಲ್ ರಾಜ್ಯ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರ ಇಡೀ ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯ ಎಂಬ ಅಪಕೀರ್ತಿಗೂ ಪಾತ್ರವಾಗಿತ್ತು. ಜನರ ಜೀವನ ಮಟ್ಟ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಸಿಲುಕಿ ನಲುಗಿ ಹೋಗಿತ್ತು. ಬಡತನ, ನಿರುದ್ಯೋಗ, ಅನಕ್ಷರತೆ ಜನರನ್ನು ಅಕ್ಷರಶಃ ಕಿತ್ತು ತಿನ್ನುವ ಹಂತಕ್ಕೆ ತಲುಪಿತ್ತು. ಇವೆಲ್ಲಕ್ಕೂ ಬಿಹಾರದಲ್ಲಿ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಮತ್ತು ಆಳುವವರ ಅಸಡ್ಡೆಯೇ ಕಾರಣ ಎಂಬ ಮಾತುಗಳು ಪ್ರಚಾರದಲ್ಲಿದ್ದವು. ಹೀಗಾಗಿ ಈ ವ್ಯವಸ್ಥೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂಬ ವಾದ ಇಡೀ ದೇಶದಾದ್ಯಂತ ಮುಂಚೂಣಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಬಿಹಾರದಲ್ಲಿ ಹೊಸ ಮಿಂಚು ಹರಿಸಿದ್ದ ಪಕ್ಷವೇ ಜೆಡಿಯು (ಜನತಾದಳ).

ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ನೇತೃತ್ವದಲ್ಲಿ 2003ರಲ್ಲಿ ಸ್ಥಾಪನೆಯಾದ ಜನತಾದಳ ಬಿಹಾರದ ಜನರಲ್ಲಿ ಬದಲಾವಣೆಯ ಭರವಸೆ ನೀಡಿತ್ತು. ಪರಿಣಾಮ ಕೇವಲ ಎರಡು ವರ್ಷದಲ್ಲಿ ಅಂದರೆ 2005ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಯು ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಬರೋಬ್ಬರಿ 163 ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಭರ್ಜರಿ ಬಹುಮತ ನೀಡಿದ್ದರು. ನಿತೀಶ್ ಕುಮಾರ್ ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.

PC : Zee News, (ಶರದ್ ಯಾದವ್)

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಏಕೆಂದರೆ ನಿತೀಶ್ ಅವರ 15 ವರ್ಷಗಳ ಆಳ್ವಿಕೆಯಲ್ಲೂ ಬಿಹಾರದ ಜನರ ಬದುಕು ಹೇಳಿಕೊಳ್ಳುವಂತಹ ಬದಲಾವಣೆಯನ್ನೇನೂ ಕಂಡಿಲ್ಲ. ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಗುಳೆ ಹೊರಡುವವರ ಸಂಖ್ಯೆಯಲ್ಲಿ ಈಗಲೂ ಬಿಹಾರದ್ದೇ ಅಗ್ರಸ್ಥಾನ. ಈ ರಾಜ್ಯದ ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಯೂ ಅಷ್ಟಕ್ಕಷ್ಟೆ. ಹೀಗಾಗಿ ಬಿಹಾರದ ಮತದಾರ ದಶಕಗಳ ನಂತರ ಮತ್ತೆ ಬದಲಾವಣೆಯ ಕಡೆಗೆ ಮುಖ ಮಾಡಿದ್ದಾನೆ ಎನ್ನುತ್ತಿವೆ ಚುನಾವಣಾ ಕಣದ ವರದಿಗಳು.

ಎಡಬಿಡಂಗಿಯಾದ ನಿತೀಶ್ ಕುಮಾರ್

ಎನ್‍ಡಿಎ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರದ್ದು ಹಿರಿಯ ನಾಯಕತ್ವ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಿತೀಶ್ ಕುಮಾರ್ ಕೇಂದ್ರ ರೈಲ್ವೆ ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2005ರಲ್ಲಿ ಬಿಹಾರದ ಸಿಎಂ ಆದನಂತರ ಅವರು ಹಲವು ಗಮನಾರ್ಹ ಜನಪರ ಕೆಲಸಗಳ ಮೂಲಕ ಗಮನ ಸೆಳೆದದ್ದು ಸುಳ್ಳಲ್ಲ.

ಇದನ್ನೂ ಓದಿ: ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಂದ ಪ್ರತ್ಯೇಕ ಜಾಹೀರಾತು!

ಈ ನಡುವೆ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‍ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ನಿತೀಶ್ ಕನಲಿ ಕೆಂಡವಾಗಿದ್ದರು. ಗೋದ್ರಾ ಹತ್ಯಾಕಾಂಡದ ಸಮಯದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದವರು ಪ್ರಧಾನಿ ಹುದ್ದೆಗೆ ಏರುವುದು ಸರಿಯಲ್ಲ ಎಂದು ಹೇಳುವ ಮೂಲಕ ತನ್ನನ್ನು ಜಾತ್ಯತೀತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದರು. ನಂತರ ಎನ್‌ಡಿಎ ಮೈತ್ರಿಯಿಂದಲೇ ಹೊರನಡೆದು ತನ್ನ ಸಾಂಪ್ರದಾಯಿಕ ಎದುರಾಳಿ ಆರ್‌ಜೆಡಿ ಜೊತೆಗೆ ಮೈತ್ರಿ ಸಾಧಿಸಿ ಮತ್ತೆ ಅಧಿಕಾರ ಅನುಭವಿಸಿದ್ದರು. ನಿತೀಶ್ ಅವರ ಈ ನಡೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಆದರೆ, ಮಹಾಘಟಬಂಧನ್ ಜೊತೆ ಸೇರಿ ಅಧಿಕಾರ ನಡೆಸಿದ್ದ ನಿತೀಶ್ ಕುಮಾರ್ ಅರ್ಧದಲ್ಲೆ ಮೈತ್ರಿ ಮುರಿದು ಮತ್ತೆ ಬಿಜೆಪಿ ಜೊತೆಗೆ ಸಖ್ಯ ಬೆಳೆಸಿದ್ದರು. ಹಾಗಾಗಿ ಜನಾದೇಶಕ್ಕೆ ವಿರುದ್ಧವಾದ ಮೈತ್ರಿ ಅದಾಗಿತ್ತೆಂದು ಬಿಹಾರದ ಹಲವು ಮತದಾರರಿಗೆ ಅದು ಬೇಸರ ಉಂಟುಮಾಡಿರಬಹುದೆಂದು ಹಾಗೂ ಆಡಳಿತ ವಿರೋಧಿ ಅಲೆಯೂ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ ಎಂಬ ಅಭಿಪ್ರಾಯಗಳೂ ಚಾಲ್ತಿಯಲ್ಲಿವೆ.

ನಿತೀಶ್‍ಗೆ ಮುಳ್ಳಾಗಲಿದ್ದಾರೆಯೇ ತೇಜಸ್ವಿ-ಪಾಸ್ವಾನ್?

ಒಂದೆಡೆ ನಿತೀಶ್ ಕುಮಾರ್ ಐದನೇ ಬಾರಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದರೆ ಮತ್ತೊಂದೆಡೆ ಆರ್‌ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ಬಿಹಾರ ರಾಜಕೀಯದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ.

ತೇಜಸ್ವಿ ಯಾದವ್ ತಮ್ಮ ವಿಶಿಷ್ಟ ರಾಜಕೀಯ ಪರಿಭಾಷೆ ಮತ್ತು ತಂತ್ರಗಾರಿಕೆಯ ಮೂಲಕ ದಿಢೀರನೇ ಚುನಾವಣಾ ಪ್ರಚಾರಾಂದೋಲನದ ಕೇಂದ್ರಬಿಂದುವಾಗಿದ್ದಾರೆ. ಮತ್ತೊಂದು ಕಡೆ ದೆಹಲಿ ಮಟ್ಟದಲ್ಲಿ ಎನ್‍ಡಿಎ ಮೈತ್ರಿಯಲ್ಲಿ ಮುಂದುವರಿದಿದ್ದರೂ ರಾಜ್ಯ ಮಟ್ಟದಲ್ಲಿ ನಿತೀಶ್ ಕುಮಾರ್ ವಿರುದ್ಧ ಭರ್ಜರಿ ಸಮರ ಸಾರಿರುವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಐದನೇ ಬಾರಿ ಮುಖ್ಯಮಂತ್ರಿಯಾಗುವ ನಿತೀಶ್ ಕನಸಿಗೆ ಕೊಳ್ಳಿ ಇಡಲಿದ್ದಾರೆ ಎಂಬ ಮಾತುಗಳು ಬಿಹಾರದ ರಾಜಕೀಯ ಪಡಸಾಲೆಗಳಲ್ಲಿ ಚಾಲ್ತಿಯಲ್ಲಿವೆ.

ವಾಸ್ತವವಾಗಿ ಬಿಹಾರದ ಚುನಾವಣಾ ಕಣದಲ್ಲಿ ಕಳೆದ ಒಂದು ವಾರದಿಂದ ಇಡೀ ಪ್ರಚಾರ ವಾಗ್ವಾದದ ದಿಕ್ಕುದೆಸೆಯನ್ನು ನಿರ್ಧರಿಸುತ್ತಿರುವುದೇ ತೇಜಸ್ವಿ ಯಾದವ್ ಎಂದು ವರದಿಗಳು ಹೇಳುತ್ತಿವೆ. ನಿರುದ್ಯೋಗ, ಬಡತನ, ಉದ್ಯೋಗ ಸೃಷ್ಟಿಯ ಭರವಸೆ, ಬೆಲೆ ಏರಿಕೆ, ಕೊರೊನಾ ಲಾಕ್‍ಡೌನ್ ಮತ್ತು ಅದು ಸೃಷ್ಟಿಸಿದ ಅನಾಹುತಗಳ ಬಗ್ಗೆ ತಮ್ಮ ಪ್ರಚಾರದಲ್ಲಿ ಒತ್ತಿ ಒತ್ತಿ ಹೇಳುತ್ತಿರುವ ತೇಜಸ್ವಿ ರಾಜ್ಯದ ಜ್ವಲಂತ ವಿಷಯಗಳ ಜೊತೆಗೆ ರಾಜ್ಯ ಮತ್ತು ಕೇಂದ್ರ ನಾಯಕತ್ವಗಳ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ.

PC : India Today

ಅಭಿವೃದ್ಧಿ ಕುರಿತು ಬಹಿರಂಗ ಪ್ರಚಾರಕ್ಕೆ ಬನ್ನಿ ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಸವಾಲುಗಳನ್ನೆಸೆಯುತ್ತಿರುವ ತೇಜಸ್ವಿ ಅವರ ಬಿಹಾರಿ ಶೈಲಿಯ ಮಾತುಗಾರಿಕೆ, ಆ ಕ್ಷಣದಲ್ಲೇ ಎದುರಿನ ಜನಸಮೂಹದೊಂದಿಗೆ ತಮ್ಮನ್ನು ತಾವು ಬೆಸೆದುಕೊಳ್ಳುವ ತಮ್ಮ ತಂದೆ ಲಾಲೂ ಪ್ರಸಾದ್‍ರಿಂದ ಬಳುವಳಿಯಾಗಿ ಪಡೆದಿರುವಂತಹ ವಿಶಿಷ್ಟ ಮಾತುಗಾರಿಕೆಯ ವರಸೆ, ದಿಟ್ಟ ಮತ್ತು ನಿರ್ಭೀತಿಯ ಪ್ರಶ್ನೆಗಳನ್ನು ಎತ್ತುವ ರೀತಿ ಎಲ್ಲವೂ ಮತದಾರರ ಸಮೂಹದ ನಡುವೆ ತೇಜಸ್ವಿಗೆ ದೊಡ್ಡ ಮಟ್ಟದ ಬೆಂಬಲ ದಕ್ಕಿಸಿಕೊಟ್ಟಿವೆ ಎನ್ನಲಾಗುತ್ತಿದೆ. ಹಾಗಾಗಿಯೇ ಕಳೆದ ಒಂದು ವಾರದಿಂದ ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಕಿಕ್ಕಿರಿಯುತ್ತಿರುವ ಭಾರೀ ಜನಜಂಗುಳಿ ಸಹಜವಾಗೇ ಆಡಳಿತಾರೂಢ ಎನ್‍ಡಿಎ ಮೈತ್ರಿಯಲ್ಲಿ ದೊಡ್ಡ ಮಟ್ಟದ ಗಲಿಬಿಲಿಗೆ ಕಾರಣವಾಗಿದೆ. ಇದು ಮತಗಳಾಗಿ ಪರಿವರ್ತನೆ ಆಗಲಿದೆಯೇ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ನಗೆಪಾಟಲಿಗೀಡಾದ ಬಿಜೆಪಿ ಪ್ರಣಾಳಿಕೆ ಮತ್ತು ಅಪ್ರಬುದ್ಧ ಪ್ರಚಾರ

ಲಾಕ್‍ಡೌನ್‍ನಿಂದಾಗಿ ಬಿಹಾರದ ಸಾಕಷ್ಟು ಜನ ಅಕ್ಷರಶಃ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿದನ್ನು ಜನ ಗಮನಿಸಿದ್ದಾರೆ. ಜನರ ಅಗತ್ಯಗಳನ್ನು ಮರೆತು ಅದು ತನ್ನ ರಾಜಕೀಯದಲ್ಲಿಯೇ ಮುಳುಗಿತ್ತು. ಎನ್‍ಡಿಎ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಬಿಹಾರಿ ನೆಲದಲ್ಲಿ ನಿಂತು ರಾಮಮಂದಿರ, ಸೀತೆ, ಜಮ್ಮು ಕಾಶ್ಮೀರದ ಕುರಿತು ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಮತ ಹಾಕಿದರೆ ಎಲ್ಲಾ ಬಿಹಾರಿಗಳಿಗೂ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಈ ವಿಚಾರ ದೇಶದಾದ್ಯಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!

“ಬಿಹಾರ ಮಾತ್ರ ಭಾರತದಲ್ಲಿದೆಯೇ ಉಳಿದ ರಾಜ್ಯಗಳಿಗೆ ಲಸಿಕೆ ಇಲ್ಲವೇ?, ಕೊರೊನಾವನ್ನೂ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಸಹ ಜನ ಈ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಅಲ್ಲದೆ, “ಜಮ್ಮು ಕಾಶ್ಮೀರ ಪಾಕಿಸ್ತಾನದ ಉಲ್ಲೇಖ ನಮಗೇಕೆ, ನಮಗೆ ಕೆಲಸ ಕೊಡಿ ಸ್ವಾಮಿ” ಎಂಬಿತ್ಯಾದಿಯಾಗಿ ನಿತೀಶ್ ಕುಮಾರ್ ಪ್ರಚಾರ ನಡೆಸುವ ಕಡೆಯೆಲ್ಲಾ ಕಳೆದ ಒಂದು ತಿಂಗಳಿಂದ ಯುವ ಜನ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದ್ದವು. ಇನ್ನೂ ಕೆಲವೆಡೆ ಬೆಲೆ ಏರಿಕೆಯನ್ನು ವಿರೋಧಿಸಿ ನಿತೀಶ್ ವಿರುದ್ಧ ಈರುಳ್ಳಿಗಳನ್ನು ಎಸೆಯುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಎನ್‍ಡಿಎ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಬಿಜೆಪಿಗೆ ಬೆನ್ನುತೋರಿಸುತ್ತಿರುವ ಮೇಲ್ಜಾತಿ ಮತಗಳು

ರಾಜ್ಯ ಸರ್ಕಾರದ ಬಗ್ಗೆ ‘ಮೇಲ್ಜಾತಿ’ ಹಿಂದೂ ಮತದಾರರ ವರ್ತನೆ ಬಿಹಾರದ ವಿವಿಧ ಪ್ರದೇಶಗಳಲ್ಲಿ ಗಮನಾರ್ಹವಾಗಿ ಭಿನ್ನವಾಗಿದೆ. ದಕ್ಷಿಣ ಮತ್ತು ಮಧ್ಯ ಬಿಹಾರದಲ್ಲಿ, ಪ್ರಬಲ ಭೂಮಿಹಾರರು ಮತ್ತು ರಜಪೂತರು ಚದುರಿದ ಮತದಾರರ ಗುಂಪಾಗಿ ಕಾಣುತ್ತಾರೆ. ಇವರು ಹೆಚ್ಚಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಈಗ ಈ ಮತದಾರರು ಆಕ್ರೋಶಗೊಂಡಿದ್ದಾರೆ.

ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದರೆ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗಬಾರದು ಎಂಬುದು ಇವರ ನಿಲುವು. ಹೀಗಾಗಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವುದಾದರೆ ಎನ್‍ಡಿಎ ಮೈತ್ರಿಕೂಟದ ಸಖ್ಯವನ್ನೇ ತ್ಯಜಿಸಲು ನಾವು ಸಿದ್ಧ ಎಂಬಂತಹ ಮಾತುಗಳು ಮೇಲ್ಜಾತಿ ಮತದಾರರಿಂದ ಕೇಳಿಬರುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ, ವಿಶೇಷವಾಗಿ ಉತ್ತರ ಬಿಹಾರದಲ್ಲಿ ಪ್ರಭಾವಶಾಲಿ ಬ್ರಾಹ್ಮಣರು ನಿತೀಶ್ ಸರ್ಕಾರವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ, ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಅಭಿಯಾನವು ತೀವ್ರವಾಗಿ ಏರಿದಂತೆ, ಬ್ರಾಹ್ಮಣ ಸಮುದಾಯದ ಸದಸ್ಯರು ಬೀದಿಗಳಲ್ಲಿ ‘ಜಂಗಲ್‍ರಾಜ್‍ನ ಸ್ಥಾಪನೆಯಾಗಲು ಬಿಡಬೇಡಿ’ ಎಂಬ ಕೂಗಿನ ಜೊತೆಗೆ ಆಕ್ರಮಣಕಾರಿಯಾಗಿ ಪ್ರಚಾರ ಮಾಡಲು ಬೀದಿಗಿಳಿದಿದ್ದಾರೆ.

PC : Telegraph India, (ಲಾಲು ಪ್ರಸಾದ್ ಯಾದವ್)

ಬಿಜೆಪಿ ಮೈತ್ರಿಕೂಟವು ಆಡಳಿತ ಜನತಾದಳ (ಯುನೈಟೆಡ್), ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ನಡೆದ ಅವ್ಯವಹಾರವನ್ನು ಉಲ್ಲೇಖಿಸಲು ಜಂಗಲ್‍ರಾಜ್ ಪದದ ಪ್ರಚಾರ ಮಾಡುತ್ತಿದ್ದಾರೆ. ಆದರೂ, ಉತ್ತರ ಬಿಹಾರದ ಪ್ರಭಾವಿ ಸಮುದಾಯವಾದ ಭೂಮಿಹಾರರು ಮತ್ತು ರಜಪೂತರು ಜೆಡಿಯು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಬಗ್ಗೆ ಈವರೆಗೆ ಖಚಿತ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್ ಆರ್‌ಜೆಡಿ ಮೈತ್ರಿಕೂಟ ಅಧಿಕ ಕ್ಷೇತ್ರಗಳಲ್ಲಿ ಮೇಲ್ಜಾತಿ ಅಭ್ಯರ್ಥಿಗಳಿಗೆ ಟಿಕಟ್ ನೀಡಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಬಿಜೆಪಿ-ಜೆಡಿಯು ಪಕ್ಷದ ಸಂಪ್ರದಾಯಸ್ಥ ಮೇಲ್ಜಾತಿಯ ಮತಗಳು ಕಾಂಗ್ರೆಸ್- ಆರ್‌ಜೆಡಿ ಪಾಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಬಿಹಾರದಲ್ಲಿ ಮೇಲ್ಜಾತಿ ಸಮುದಾಯ ಒಟ್ಟಾಗಿ ರಾಜ್ಯದ ಜನಸಂಖ್ಯೆಯ ಶೇ.15 ರಷ್ಟನ್ನು ಹೊಂದಿವೆ. 1990ರ ದಶಕದಲ್ಲಿ ಮಂಡಲ್ ಯುಗ ಪ್ರಾರಂಭವಾದಾಗಿನಿಂದಲೂ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂಬ ಪುಕಾರನ್ನು ಎಬ್ಬಿಸಲಾಗಿದೆ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅವರ ಪ್ರಾಬಲ್ಯವನ್ನು ಪ್ರಶ್ನಿಸಲಾಗಿ, ತರುವಾಯದ ಅವಧಿಯಲ್ಲಿ ಹಿಂದುಳಿದ ವರ್ಗದ ರಾಜಕಾರಣ ನ್ಯಾಯಯುತವಾಗಿ ಸ್ಥಾಪನೆಗೊಂಡಿತು. ಇದು ಮೇಲ್ಜಾತಿಗಳಿಗೆ ಕಸಿವಿಸಿ ತಂದಿದೆ.

ಆರ್‌ಜೆಡಿ ತನ್ನ ಎರಡನೆಯ ಅಧಿಕಾರಾವಧಿಯಲ್ಲಿ 1995-2000ರ ಅವಧಿಯಲ್ಲಿ ಭೂಮಿಹಾರ್‌ಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಪ್ರಯತ್ನಿಸಿತು. ಅದರೆ ಯಶಸ್ವಿ ಆಗಲಿಲ್ಲ. ಈ ಗುಂಪುಗಳಲ್ಲಿ ನಿತೀಶ್ ಪರ ಹೆಚ್ಚಾಗಿ ಒಲವು ತೋರದ ಕಾರಣ, ಬ್ರಾಹ್ಮಣರ ಕೊನೆಯ ಸಂಘಟಿತ ಪ್ರಯತ್ನಗಳ ಹೊರತಾಗಿಯೂ ನೀತೀಶ್ ವಿರುದ್ಧ ಮನೋಭಾವ ಬಲವಾಗಿ ಬೆಳೆಯುತ್ತಿದೆ.

ಒಟ್ಟಾರೆ ಬಿಹಾರದಲ್ಲಿ ಕಳೆದ ಒಂದೂವರೆ ದಶಕಗಳಲ್ಲಿ ನಡೆದ ಯಾವ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಇದಕ್ಕೆ ನಾನಾ ಕಾರಣಗಳೂ ಇವೆ. ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲೂ ಜಾತಿ, ಧರ್ಮ ಮತ್ತು ಕೆಲವರ ಪ್ರತಿಷ್ಠೆಯ ಕಣವಾಗಷ್ಟೇ ಇದ್ದ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಅಭಿವೃದ್ಧಿ, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಹಾಗೂ ಆರ್ಥಿಕ ವಿಚಾರಗಳು ಚಾಲ್ತಿಗೆ ಬಂದಿವೆ.

ಈ ಹೊಸ ಬೆಳವಣಿಗೆಗಳನ್ನೇ ಮುಂದಿಟ್ಟು ಹಲವು ರಾಜಕೀಯ ತಜ್ಞರು ಫಲಿತಾಂಶದ ಕುರಿತು ನಾನಾ ವಿಶ್ಲೇಷಣೆಗಳನ್ನೂ ಮಾಡಿದ್ದಾರೆ, ಮಾಡುತ್ತಿದ್ದಾರೆ.

ನಿಜಕ್ಕೂ ಬಿಹಾರಿಗಳ ಆಯ್ಕೆ ಏನು? ಎಂಬ ನಿಖರ ಮಾಹಿತಿಗಾಗಿ ನವೆಂಬರ್ 10ರ ಫಲಿತಾಂಶದವರೆಗೆ ಕಾಯಲೇಬೇಕಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....