Homeಮುಖಪುಟಬೀಳಗಿಯಲ್ಲಿ ನಿರಾಣಿಯ ಹಣದ ಹೊಳೆ; ಕೈ-ಕಮಲದ ನಡುವೆ ತೀವ್ರ ಪೈಪೋಟಿ

ಬೀಳಗಿಯಲ್ಲಿ ನಿರಾಣಿಯ ಹಣದ ಹೊಳೆ; ಕೈ-ಕಮಲದ ನಡುವೆ ತೀವ್ರ ಪೈಪೋಟಿ

- Advertisement -
- Advertisement -

ಆಲಮಟ್ಟಿ ಮುಳುಗಡೆಯ ಸಂತ್ರಸ್ತರ ಕ್ಷೇತ್ರ ಎನಿಸಿಕೊಂಡಿರುವ ಬೀಳಗಿ ಮತಕ್ಷೇತ್ರ, ಬಾಗಲಕೋಟೆ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಹಿಂದೆ ಜಮಖಂಡಿಯ ಉಪತಾಲ್ಲೂಕಾಗಿದ್ದ ಬೀಳಗಿ, 1959ರಲ್ಲಿ ಪ್ರತ್ಯೇಕ ತಾಲ್ಲೂಕಾಗಿ ರಚನೆಯಾಗಿದೆ. ಕಂಬಳಿ ತಯಾರಿಕೆಗೆ ಬೀಳಗಿ ತಾಲೂಕಿನ ಕುಂದರಗಿ ಗ್ರಾಮ ಬಹಳ ಖ್ಯಾತಿ ಪಡೆದಿದೆ.

ಘಟಪ್ರಭಾ ನದಿ ದಡದಲ್ಲಿರುವ ಬೀಳಗಿ ಕ್ಷೇತ್ರದಲ್ಲಿ ಚಾಲುಕ್ಯ ಶಿಲ್ಪ ಶೈಲಿಯಲ್ಲಿರುವ ರಾಮಲಿಂಗೇಶ್ವರ, ಕಲ್ಮೇಶ್ವರ ಹಾಗೂ ರಾಮಲಿಂಗಪ್ಪ ದೇವಾಲಯಗಳಿವೆ. ಇಲ್ಲಿ ಕ್ರಿ.ಶ.12ನೇ ಶತಮಾನದ ಜೋಪರಾರ ಎಂಬುವವನಿಗೆ ಸಂಬಂಧಿಸಿದ ಶಿಲಾ ಶಾಸನವೊಂದು ದೊರೆತಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಬರುವ ತುಳಸಿಗಿರಿಯ ಹನಮಂತ ದೇವರ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಬರುತ್ತಾರೆ.

ಇನ್ನು ಈ ಬೀಳಗಿ ತಾಲೂಕಿನ ಹೆಚ್ಚಿನ ಭೂಪ್ರದೇಶ ಎರೆಮಣ್ಣಿನಿಂದ ಕೂಡಿದೆ. ನೀರಾವರಿ ಸೌಲಭ್ಯ ಹೇರಳವಾಗಿರುವುದರಿಂದ ತಾಲ್ಲೂಕಿನ ಬಹಳಷ್ಟು ಜನರು ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ. ಅದರಲ್ಲೂ ಈ ತಾಲೂಕಿನಾದ್ಯಂತ ಕಬ್ಬು ಬೆಳೆಗಾರರು ಹೆಚ್ಚಿದ್ದಾರೆ. ಅದೇ ರೀತಿ ತಾಲ್ಲೂಕಿನಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ಇವೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 2 ಟಿಎಂಸಿ ನೀರನ್ನು ಬಳಸಿಕೊಂಡು ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿರುವುದರಿಂದ ಇಲ್ಲಿಯ ರೈತಾಪಿ ವರ್ಗದ ಜನರಿಗೆ ಅನಕೂಲವಾಗಲಿದೆ.

ರಾಜಕೀಯ ಇತಿಹಾಸ:

ಬೀಳಗಿ ಮತಕ್ಷೇತ್ರದಲ್ಲಿ 1957ರಿಂದ 2018ರವರೆಗೆ ಒಟ್ಟು 14 ವಿಧಾನಸಭೆಯ ಚುನಾವಣೆಗಳು ನಡೆದಿವೆ. ಇದರಲ್ಲಿ 9 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಉಳಿದಂತೆ ಬಿಜೆಪಿ ಮೂರು ಬಾರಿ, ಜನತಾ ಪಕ್ಷ ಮತ್ತು ಜನತಾ ದಳ ತಲಾ ಒಂದೊಂದು ಬಾರಿ ಗೆದ್ದಿವೆ.

ಬೀಳಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 1957ರಿಂದ 1983ರ ವರೆಗೂ ಸತತವಾಗಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಕ್ಷೇತ್ರದಲ್ಲಿ ದೇಸಾಯಿ ಕುಟುಂಬದ ಹೆಸರು ಅಂದಿನಿಂದ ಇಂದಿನವರೆಗೂ ಜನಮಾನಸದಲ್ಲಿ ಉಳಿದಿದೆ. ಈ ಕುಟುಂಬದ ರಾಚಪ್ಪ ಮಲ್ಲಪ್ಪ ದೇಸಾಯಿ ಅವರು 1957, 1962, ಹಾಗೂ 1967ರ ಚುನಾವಣೆಗಳಲ್ಲಿ ಹ್ಯಾಟ್ರಿಕ್‌ ಗೆಲುವು ಕಂಡಿದ್ದಾರೆ. 1972ರ ಚುನಾವಣೆಯಲ್ಲಿ ಬಿಜೆ ಮರಿಸಿದ್ದಪ್ಪ ಎನ್ನುವವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು. 1978 ಮತ್ತು 1983 ರಲ್ಲಿ ಸಿದ್ದನಗೌಡ ಸೋಮನಗೌಡ ಪಾಟೀಲ ಎಂಬುವವರು ಸತತ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು.

ಕಾಂಗ್ರೆಸ್‌ನ ಈ ಗೆಲುವಿಗೆ ಮೊದಲ ಬ್ರೇಕ್ ಬಿದ್ದದ್ದು 1985ರ ಚುನಾವಣೆಯಲ್ಲಿ. ಅದೇ ರೀತಿ ಸಿದ್ದನಗೌಡ ಸೋಮನಗೌಡ ಪಾಟೀಲ ಅವರ ಹ್ಯಾಟ್ರಿಕ್ ಗೆಲುವನ್ನು ತಪ್ಪಿಸಿದ ಚುನಾವಣೆ ಇದಾಗಿತ್ತು. ಕಾಂಗ್ರೆಸ್‌ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತದೆ. ಜನತಾ ಪಕ್ಷದಿಂದ ಅಭ್ಯಥಿಯಾಗಿದ್ದ ವೆಂಕಪ್ಪ ಬಾಬುರೆಡ್ಡಿ ತುಂಗಳ ಅವರು ಗೆಲುವು ಸಾಧಿಸಿದರು.

1989ರ ಚುನಾವಣೆಯಲ್ಲಿ ಯಳ್ಳಿಗುತ್ತಿ ಗಂಗಾಧರಪ್ಪ ಗುರುಸಿದ್ದಪ್ಪ ಅವರು ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. ಆ ಬಳಿಕ 1994ರ ಚುನಾವಣೆಯಲ್ಲಿ ಜೆ ಟಿ ಪಾಟೀಲ ಅವರ ಗೆಲುವಿನ ಮೂಲಕ ಕಾಂಗ್ರೆಸ್‌ ಪಕ್ಷ ಬೀಳಗಿಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. 1999ರ ಚುನಾವಣೆಯಲ್ಲೂ ಅವರು ಕಾಂಗ್ರೆಸ್‌ ಗೆಲುವನ್ನು ಮುಂದುವರಿಸಿದರು. ಈ ವೇಳೆಗೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸಂಘಟನೆಯನ್ನು ಚೆನ್ನಾಗಿಯೇ ಕಟ್ಟಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್‌ ಕುಲಕರ್ಣಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಮುಂದೆ 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮುರಗೇಶ ನಿರಾಣಿ, ಕಾಂಗ್ರೆಸ್ ಹುರಿಯಾಳು ಜೆಟಿ ಪಾಟೀಲ್ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದರು. ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಿರಾಣಿ, ಜೆಟಿ ಪಾಟೀಲ್ ವಿರುದ್ಧ 17,325 ಮತಗಳ ಅಂತರಿಂದ ಗೆಲುವು ಕಂಡರು.

2008ರ ಚುನಾವಣೆಯಲ್ಲಿ ಮತ್ತೆ ಮುರುಗೇಶ ನಿರಾಣಿ ಬಿಜೆಪಿ ಪಕ್ಷದಿಂದ ಗೆಲುವು ಕಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿದ್ದ ಅಜಯ್‌ ಕುಮಾರ್‌ ಸರನಾಯಕ ಅವರು ಪ್ರಬಲ ಪೈಪೋಟಿ ನೀಡಿ ಕೇವಲ 3,124 ಮತಗಳ ಅಂತರದಿಂದ ನಿರಾಣಿ ವಿರುದ್ಧ ಸೋಲುಣಬೇಕಾಯಿತು. ಗೆದ್ದ ನಿರಾಣಿ ಮಂತ್ರಿಯಾದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಜೆ.ಟಿ ಪಾಟೀಲ ಅವರನ್ನು ಕಣಕ್ಕಿಳಿಸಿದರು. ಈ ವೇಳೆ ನಿರಾಣಿಯ ಹ್ಯಾಟ್ರಿಕ್‌ ಗೆಲುವಿಗೆ ಜೆ.ಟಿ ಪಾಟೀಲ ಬ್ರೇಕ್ ಹಾಕಿದರು. ನಿರಾಣಿ ವಿರುದ್ಧ 11,238 ಮತಗಳ ಅಂತರದಿಂದ ಗೆದ್ದ ಜೆಟಿ ಪಾಟೀಲ್ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುರುಗೇಶ ನಿರಾಣಿ 85,135 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ ಪಾಟೀಲ್ ತೀವ್ರ ಪೈಪೋಟಿ ನೀಡಿ ಕೇವಲ 4,811 ಮತಗಳ ಅಂತರದಿಂದ ಸೋಲುಂಡರು. ಬಿಜೆಪಿ ಸರ್ಕಾರದಲ್ಲಿ ನಿರಾಣಿ ಎರಡನೇ ಬಾರಿ ಮಂತ್ರಿಯಾದರು. ಈ ಇಬ್ಬರು ಅಭ್ಯರ್ಥಿಗಳು ಈಗಾಗಲೇ ಮೂರು ಬಾರಿ ಶಾಸಕರಾಗಿದ್ದು, ಮತ್ತೆ ಈ ಬಾರಿಯೂ ಕಣದಲ್ಲಿದ್ದಾರೆ. ಮತ್ತೆ ಇಬ್ಬರ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.

ಜಾತಿ ಲೆಕ್ಕಾಚಾರ:

ಬೀಳಗಿ ಮತ ಕ್ಷೇತ್ರದಲ್ಲಿ ಒಟ್ಟು 2,23,560 ಮತದಾರರಿದ್ದಾರೆ. ಪುರುಷ ಮತದಾರರು- 1,11,025, ಮಹಿಳೆಯರು-1,12,520 ಹಾಗೂ ಇತರೆ 15 ಮತದಾರರಿದ್ದಾರೆ.

ಬೀಳಗಿ ಮತಕ್ಷೇತ್ರದಲ್ಲಿ 2,23,560 ಮತದಾರರಿದ್ದು, ಲಿಂಗಾಯತ, ರಡ್ಡಿ, ಕುರುಬ, ಗಾಣಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಈವರೆಗಿನ ಚುನಾವಣೆಗಳಲ್ಲಿ ಬಹುತೇಕರು ಲಿಂಗಾಯತ ಹಾಗೂ ರಡ್ಡಿ ಸಮುದಾಯದವರೇ ಗೆಲುವು ಸಾಧಿಸಿದ್ದಾರೆ. ಇನ್ನು ಪರಿಶಿಷ್ಟ ಜಾತಿ, ಪಂಗಡ, ವಾಲ್ಮೀಕಿ, ಲಂಬಾಣಿ, ಮರಾಠ ಸಮುದಾಯದ ಮತಗಳೂ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ.

ಸಾಂಪ್ರದಾಯಕ ಎದುರಾಳಿಗಳ ನಡುವೆಯೇ ಮತ್ತೊಂದು ಬಿಗ್ ಫೈಟ್

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಈ ಬಾರಿಯೂ ಬಿಜೆಪಿಯಿಂದ ಮುರಗೇಶ್ ನಿರಾಣಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್‌ನಲ್ಲಿ ಜೆಟಿ ಪಾಟೀಲ್, ಹಾಗೂ ಎಸ್‌ಆರ್‌ ಪಾಟೀಲ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಜೆಟಿ ಪಾಟೀಲ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್ ಪಕ್ಷದಿಂದ ರುಕ್ಮುದ್ದೀನ್‌ ಸೌದಗಲ್‌ ಎನ್ನುವವರಿಗೆ ಟಿಕೆಟ್ ನೀಡಲಾಗಿದೆ.

ನಿರಾಣಿಯ ಹಣದ ಹೊಳೆಗೆ ಮರುಳಾಗುವರೇ ಮತದಾರರು?

ಬೀಳಗಿ ಮತಕ್ಷೇತ್ರದಿಂದ ಮುರಗೇಶ್ ನಿರಾಣಿ ಅವರು ಈಗಾಗಲೇ ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲೂ ನಿರಾಣಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಅವರು ಈ ಬಾರಿ ಬೀಳಗಿ ಕ್ಷೇತ್ರದಿಂದ ಗೆಲುವು ಸಾಧಿಸುವುದು ಅಷ್ಟು ಸುಲಭವಿಲ್ಲ. ಏಕೆಂದರೆ, ಕ್ಷೇತ್ರದಲ್ಲಿ ಆಡಳೀತ ವಿರೋಧಿ ಅಲೆ ಜೋರಾಗಿಯೇ ಇದೆ.

ಕ್ಷೇತ್ರದ ಬಹಳಷ್ಟು ಹಳ್ಳಿಗಳ ಮತದಾರರು ಹೇಳುವುದೊಂದೇ ಮಾತು, ‘ನಿರಾಣಿ ಸಾಹೇಬ್ ಓಟ್ ಕೇಳಾಕ್ ಅಷ್ಟೇ ನಮ್ಮೂರಿಗೆ ಬರ್ತಾನ ರೀ, ಆರಿಸಿ ಬಂದ್ಮೇಲೆ ಇತ್ಲಾಗ ತಲೆನೇ ಹಾಕಲ್ಲ, ಇನ್ನ ನಮ್ಮ ಕಷ್ಟ ಯಾವಾಗ ಕೇಳತಾನ್ರೀ ಅಂವಾ” ಎನ್ನುತ್ತಾರೆ. ಇನ್ನು ನಿರಾಣಿ ರಾಜಕಾರಣಿ ಮಾತ್ರ ಅಲ್ಲ ಉದ್ಯಮಿಯೂ ಹೌದು. ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಅನೇಕ ಕಾರ್ಖಾನೆಗಳಿವೆ. ಕ್ಷೇತ್ರದ ರೈತರೊಂದಿಗೆ ಒಳ್ಳೆಯ ಸಂಬಂಧ ಹೊಂದಿರಬೇಕಾಗಿದ್ದ ಉದ್ಯಮಿ ನಿರಾಣಿ, ಸ್ಥಳಿಯ ರೈತ ಮುಖಂಡರ ವಿರೋಧ ಕಟ್ಟಿಕೊಂಡಿದ್ದಾರೆ.

ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದವರು 2ಎ ಮೀಸಲಾತಿಗಾಗಿ ಹೋರಾಟ ನಡೆಸಿದರು. ಆದರೆ ನಿರಾಣಿ ಅವರು ಮಂತ್ರಿ ಸ್ಥಾನಕ್ಕಾಗಿ ಸಮುದಾಯವನ್ನು ಹಾಗೂ ಸಮುದಾಯದ ಸ್ವಾಮೀಜಿಗಳನ್ನು ಬಳಸಿಕೊಂಡರೆ ಹೊರತು, ಸಮುದಾಯದ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಲಿಲ್ಲ ಎನ್ನುವ ಆರೋಪ ಅವರ ಮೇಲಿದೆ. ಕೂಡಲಸಂಗಮದ ಗುರುಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಜೊತೆಗಿನ ಗುದ್ದಾಟದಲ್ಲಿ ಸ್ವಾಮೀಜಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸಮುದಾಯ ಅವರ ಮೇಲೆ ಕೋಪಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಕ್ಷೇತ್ರದಲ್ಲಿ ಕುರುಬ ಸಮುದಾಯ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಈ ಸಮುದಾಯದ ಅತಿಹೆಚ್ಚು ಮತಗಳನ್ನು ಸೆಳೆದರೆ ಮಾತ್ರ ನಿರಾಣಿಗೆ ಗೆಲುವಿನ ಸಾಧ್ಯತೆ ಇದೆ. ಪ್ರತಿಸ್ಪರ್ಧಿ ಅಭ್ಯರ್ಥಿ ರೆಡ್ಡಿ ಸಮುದಾಯಕ್ಕೆ ಸೇರಿರುವುದರಿಂದ ಆ ಜಾತಿಯ ಮತಗಳು ಹೆಚ್ಚು ಸೆಳೆಯಲು ಸಾಧ್ಯವಾಗದೇ ಹೋಗಬಹುದು.

ಒಳ ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ಬಂಜಾರ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಬೀಳಗಿ ಕ್ಷೇತ್ರದಲ್ಲೂ ಅದರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿ ಸಮುದಾಯಗಳ ಮತಗಳನ್ನಾದರೂ ಅತಿಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಾಗುತ್ತದೆ.

ಇಷ್ಟೆಲ್ಲಾ ಸೋಲಿನ ಭೀತಿ ಎದುರಿಸುತ್ತಿರುವ ಮುರಗೇಶ್ ನಿರಾಣಿ ಅವರು ಗೆಲ್ಲಲೇ ಬೇಕು ಎನ್ನುವ ಹಠದಿಂದ ಹಣದ ಹೊಳೆ ಹರಿಸಲು ಸಿದ್ದರಾಗಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಖಾನೆ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ನಿರಾಣಿಗೆ ಸಂಬಂಧಿಸಿದ 21.45 ಲಕ್ಷ ಮೌಲ್ಯದ 963 ಸಾಂಪ್ರದಾಯಿಕ ಬೆಳ್ಳಿ ದೀಪಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಚಾರವಾಗಿ ಮುರುಗೇಶ್ ನಿರಾಣಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಕೆಲವಡೆ ಆಮಿಷ ಒಡ್ಡುವ ಮೂಲಕ ಮತ ಗಳಿಸಲು ನಿರಾಣಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ; ಜೆ.ಟಿ ಪಾಟೀಲ್ ಗೆಲುವು ಸಾಧ್ಯವೇ?

ಕಾಂಗ್ರೆಸ್‌ನ ಹಿರಿಯ ಹುರಿಯಾಳು ಜೆಟಿ ಪಾಟೀಲ್ ಅವರು ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ, ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1994ರಲ್ಲಿಯೇ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಜೆಟಿ ಪಾಟೀಲ್ ಆ ಬಳಿಕ ಮತ್ತೆ ಎರಡು ಬಾರಿ ಶಾಸಕರಾದರು. ಎದುರಾಳಿಯ ಹಣಬಲದ ಎದುರು ಅವರು ಎರಡು ಬಾರಿ ಸೋಲುಣಬೇಕಾಯಿತು. ಈ ಬಾರಿಯೂ ಎದುರಾಳಿ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಗೆಲ್ಲಲು ಜೆ.ಟಿ ಪಾಟೀಲ್ ಏನೇನು ಕಾರ್ಯತಂತ್ರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಜೆ.ಟಿ ಪಾಟೀಲ್ ಅವರು ಕ್ಷೇತ್ರದ ಜನರೊಟ್ಟಿಗೆ ಬೆರೆಯುವ ರೀತಿ ವಿಶಿಷ್ಟವಾದದು. ಒಬ್ಬ ಜನನಾಯಕ ಜನರೊಟ್ಟಿಗೆ ಹೇಗೆ ಬೆರೆಯಬೇಕು ಎನ್ನುವುದನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಜನರು ಅವರನ್ನು ಊರ ಮಗನಂತೆ ಕಾಣುತ್ತಾರೆ. ಪ್ರತಿಹಳ್ಳಿಗಳಲ್ಲೂ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಬಗ್ಗೆ ನೆನೆಯುತ್ತಾರೆ. ಇದು ಅವರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.

ಇನ್ನು ಜಾತಿಯಿಂದ ಜೆ.ಟಿ ಪಾಟೀಲ್ ಅವರು ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತಗಳನ್ನು ಕ್ರೂಡೀಕರಿಸುವಲ್ಲಿ ಅವರ ಜೊತೆ ಕಾಂಗ್ರೆಸ್ ಹಿರಿಯ ಮುಖಂಡ ಎಸ್‌.ಆರ್ ಪಾಟೀಲ್ ಅವರು ಕೈಜೋಡಿಸಲಿದ್ದಾರೆ. ಪಂಚಮಸಾಲಿ ಲಿಂಗಾಯತ ಮತಗಳನ್ನು ಸೆಳೆಯುವದರಲ್ಲಿ ಎಸ್ ಆರ್ ಪಾಟೀಲ್ ಅವರಿಗೆ ಕಾಂಗ್ರೆಸ್‌ನ ಯುವ ಮುಖಂಡ ಬಸವಪ್ರಭು ಸರನಾಡಗೌಡ ಸಹಾಯವಾಗಬಲ್ಲರು. ಇನ್ನು ಕ್ಷೇತ್ರದಲ್ಲಿ ಅತಿಹೆಚ್ಚು ಕುರುಬ ಸಮುದಾಯದ ಮತಗಳಿರುವುದರಿಂದ ಆ ಸಮುದಾಯದ ಮತಗಳು ಯಾರ ಕಡೆ ವಾಲುತ್ತವೆ ಎನ್ನುವುದಿನ್ನು ಅಸ್ಪಷ್ಟ. ಇನ್ನುಳಿದ ಸಮುದಾಯಗಳು ಕಾಂಗ್ರೆಸ್‌ನತ್ತ ಒಲವು ಹೊಂದಿವೆ ಎನ್ನುವ ಮಾತುಗಳಿದ್ದರೂ, ಆ ಮತಗಳನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳಲು ಮುಂದಿನ ಕೆಲವು ದಿನಗಳಲ್ಲಿ ಜೆಟಿ ಪಾಟೀಲ್ ಯಾವ ತಂತ್ರ ರೂಪಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕೈ-ಕಮಲದ ನಡುವಿನ ಜಿದ್ದಜಿದ್ದಿನಲ್ಲಿ ಸ್ಪರ್ಧೆಗಿಳಿದವರು..

ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳು ಎದುರಾಳಿಯ ಮತ ವಿಂಗಡನೆ ಮಾಡಲು ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಸುವುದು ಮೊದಲಿನಿಂದಲೂ ವಾಡಿಕೆ ಇದೆ. ಈ ಬಾರಿಯೂ ಅದು ಮುಂದುವರೆಯಲಿದೆ. ಜೆಡಿಎಸ್ ಅಭ್ಯರ್ಥಿ ಮುಸ್ಲಿಂ ಸಮುದಾಯದ ರುಕ್ಮುದ್ದೀನ್‌ ಸೌದಗಲ್‌ ಎನ್ನುವವರು ಕಣದಲ್ಲಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ 2 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗದೇ ಹೋಗಬಹುದು.

ರೈತ ಸಂಘಟನೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಯಲ್ಲಪ್ಪ ನಿಂಗಪ್ಪ ಹೆಗಡೆ ಸ್ಪರ್ಧಾಳುವಾಗಿ ಕಣದಲ್ಲಿದ್ದಾರೆ. ಇವರು ಸಚಿವ ಮುರಗೇಶ್ ನಿರಾಣಿ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಅವರ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಈ ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಿ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ ಮಾಡುತ್ತ ಮತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...