Homeಕರ್ನಾಟಕಬಿಜೆಪಿ ಸರ್ಕಾರದ ಹೊಸ ವಿವಾದ: ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕೆ ವಿರೋಧ

ಬಿಜೆಪಿ ಸರ್ಕಾರದ ಹೊಸ ವಿವಾದ: ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕೆ ವಿರೋಧ

- Advertisement -
- Advertisement -

ಪಠ್ಯ ಪರಿಷ್ಕರಣೆ, ಆರ್‌ಎಸ್‌ಎಸ್‌ ಸ್ಥಾಪಕ ಹೆಡಗೆವಾರ್ ಭಾಷಣ ಸೇರ್ಪಡೆ, ಭಗವದ್ಗೀತೆ ಬೋಧನೆಗೆ ಆದೇಶ, ಕನ್ನಡದ ಮೇರು ಚಿಂತಕರಿಗೆ ಅವಮಾನ, ವೇದಗಣಿತ ಕಲಿಕೆ ದಲಿತರ ಹಣ ದುರ್ಬಳಕೆ, ಸರ್ಕಾರ ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ವಸೂಲಿ ಮತ್ತು ನಿತ್ಯ ಧ್ಯಾನ ಮಾಡಿಸಬೇಕೆಂಬ ನಿರ್ಧಾರಗಳಿಂದ ವಿವಾದಕ್ಕೆ ಕಾರಣವಾಗಿದ್ದ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಯೋಜನೆ ಘೋಷಿಸಿ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 8000 ಶಾಲಾ ಕೊಠಡಿಗಳೀಗೆ ವಿವೇಕ ಎಂದು ಹೆಸರಿಡಲಾಗಿದ್ದು, ಆ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಇಂದು ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಸರಿ ಬಣ್ಣವಲ್ಲವೇ? ಆರ್ಕಿಟೆಕ್ಟ್ ಏನಾದರೂ ಕೇಸರಿ ಬಣ್ಣ ಚೆನ್ನಾಗಿದೆ ಹಾಕಿ ಎಂದರೆ ನಾನು ಹಾಕುವವನೆ, ಅವರು ಕೊಡುವ ಡಿಸೈನ್ ಅನ್ನು ಹಾಕುತ್ತೇವೆ. ಒಂದಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲಿಯೂ ಕೇಸರಿ ಇದೆ. ಅದನ್ನು ಯಾಕೆ ಬಿಟ್ಟುಕೊಂಡಿದ್ದಾರೆ. ಅದನ್ನು ತೆಗೆದು ಹಾಕಿಬಿಡಲಿ” ಎಂದಿದ್ದಾರೆ.

ಇನ್ನೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿಯವರು ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ “ಎಲ್ಲದರಲ್ಲೂ ರಾಜಕಾರಣ ಮಾಡುವುದು ಬಹಳ ಕೆಳ ಮಟ್ಟದ್ದು. ಕೇಸರಿ ಕಂಡರೆ ಏಕೆ ಸಿಟ್ಟು? ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿಯೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು ಅವರೊಬ್ಬ ಸನ್ಯಾಸಿ. ಅವರು ತೊಟ್ಟಿದ್ದು ಕೇಸರಿ ಬಣ್ಣದ ಕಾವಿ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ. ಅದನ್ನು ಕಲಿಯಲಿ” ಎಂದಿದ್ದಾರೆ.

“ಇದೊಂದು ಕೇಸರಿಕರಣ ಮಾಡುತ್ತಿರುವ ಹುನ್ನಾರ. ಸರ್ಕಾರದ ಬಳಿ ಇರುವ ದುಡ್ಡು ಜನರ ದುಡ್ಡೇ ಹೊರತು, ಬಿಜೆಪಿಯ ದುಡ್ಡಲ್ಲ. ಜನರು ಕೇಸರಿಕರಣ ಮಾಡಲು ಇವರನ್ನು ಆಯ್ಕೆ ಮಾಡಿದ್ದಾರೆಯೇ? ಇವರು ಹಿಂಬಾಗಿಲಿನಿಂದ ಅಧಿಕಾರ ಹಿಡಿದವರು. ಜನರ ಪರವಾಗಿ ಕೆಲಸ ಮಾಡುವುದು ಬಿಟ್ಟು ಮನಸ್ಸಿಗೆ ಬಂದ ಹಾಗೆ ಮಾಡುತ್ತಿದ್ದಾರೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

“ಸರ್ಕಾರಿ ಶಾಲಾ-ಕಾಲೇಜುಗಳು ತೆರಿಗೆದಾರರ ಹಣದಿಂದ ನಡೆಯುತ್ತಿದ್ದು, ಅದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಕೆಲಸವನ್ನು ಶಿಕ್ಷಣ ಸಚಿವರು ಮಾಡುತ್ತಿದ್ದಾರೆ. ಅವರು ರಾಜ್ಯದಲ್ಲಿ ಶಿಕ್ಷಣವನ್ನು ಕೋಮುವಾದೀಕರಣ ಮಾಡಲು ಮತ್ತು ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಸ್ವೀಕಾರಾರ್ಹವಲ್ಲ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.


ಇದನ್ನೂ ಓದಿ: ಇನ್ನು ಮುಂದೆ ಶಾಲೆಗಳಲ್ಲಿ ನಿತ್ಯ 10 ನಿಮಿಷ ಧ್ಯಾನ ಕಡ್ಡಾಯ: ಸಚಿವ ಬಿ.ಸಿ ನಾಗೇಶ್ ಹೊಸ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕೇಸರಿ ಬಣ್ಣವನ್ನು ಬಳಿಯಲೇಬೇಕು ಎಂದಿದ್ದರೆ, ಕೇಸರಿ, ಬಿಳಿ ಮತ್ತು ಹಸಿರು, ಮೂರೂ ಬಣ್ಣಗಳನ್ನು ಬಳಿಯಲಿ. ಕೇಸರಿ ಒಂದೇ ಬೇಡ.

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...