Homeಮುಖಪುಟಕರ್ನಾಟಕದಲ್ಲಿ ಒಕ್ಕಲಿಗ-ಮುಸ್ಲಿಂ ಒಗ್ಗಟ್ಟು ಮುರಿಯಲು ಬಿಜೆಪಿ ನಡೆಸುತ್ತಿರುವ ಕುತಂತ್ರಗಳು

ಕರ್ನಾಟಕದಲ್ಲಿ ಒಕ್ಕಲಿಗ-ಮುಸ್ಲಿಂ ಒಗ್ಗಟ್ಟು ಮುರಿಯಲು ಬಿಜೆಪಿ ನಡೆಸುತ್ತಿರುವ ಕುತಂತ್ರಗಳು

ಟಿಪ್ಪು ಮತ್ತು ಕೆಂಪೇಗೌಡರಿಬ್ಬರ ಹಾಸುಹೊಕ್ಕಾದ ಕೊಡುಗೆಗಳನ್ನು ಪ್ರತ್ಯೇಕಿಸಿ ಬೆಂಗಳೂರಿನ ಇತಿಹಾಸವನ್ನು ನೋಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಮಾಡುತ್ತಿರುವುದೇನು?

- Advertisement -
- Advertisement -

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಒಂದು ಭವ್ಯ ಥೀಮ್ ಪಾರ್ಕ್ ಕಟ್ಟಿ, ಬೆಂಗಳೂರಿನ ಸ್ಥಾಪಕನೆಂದು ವ್ಯಾಪಕವಾಗಿ ನಂಬಲಾಗುತ್ತಿರುವ 16ನೇ ಶತಮಾನದ ಒಕ್ಕಲಿಗ ಪಾಳೆಗಾರ ಕೆಂಪೇಗೌಡರ ಆಡಳಿತವನ್ನು ಸ್ಮರಿಸುವ ಕರ್ನಾಟಕದ ಬಿಜೆಪಿ ಸರಕಾರದ ಘೋಷಣೆಯು, ರಾಜ್ಯದ ಜನಸಂಖ್ಯೆಯಲ್ಲಿ ಸರಿಸುಮಾರು 14 ಶೇಕಡಾದಷ್ಟಿದೆ ಎಂದು ಅಂದಾಜಿಸಲಾಗಿರುವ ಮತ್ತು ಈ ತನಕ ಅದರ ಕೈಗೆ ಹತ್ತದಿರುವ ಒಕ್ಕಲಿಗ ಮತಗಳನ್ನು ಪಡೆಯಲು ಭಾರತೀಯ ಜನತಾ ಪಕ್ಷ ಮಾಡುತ್ತಿರುವ ಇನ್ನೊಂದು ಯತ್ನಕ್ಕಿಂತ ಹೆಚ್ಚೇನಿಲ್ಲ.

ಈ ಕಾರ್ಯತಂತ್ರ ಸ್ಪಷ್ಟವಾಗಿದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯು ರಾಜಕೀಯ ಅಧಿಕಾರದ ಪ್ರಮುಖ ಸ್ಪರ್ಧಿಯಾಗಿ ಮೂಡಿಬಂದಿದ್ದರೂ, ರಾಜ್ಯ ವಿಧಾನಸಭೆಯಲ್ಲಿ ಸ್ವಂತ ಬಲದಲ್ಲಿ ಸರಳ ಬಹುಮತವನ್ನು ಪಡೆಯಲು ಅದು ವಿಫಲವಾಗಿದೆ. 2008ರಲ್ಲಿ ಅದರ ಅತ್ಯಂತ ದೊಡ್ಡ ಸಾಧನೆಯ ಸಮಯದಲ್ಲೂ 224  ಸದಸ್ಯಬಲದ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು ಅದಕ್ಕೆ ಆರು ಸ್ಥಾನಗಳ ಕೊರತೆಯಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅದರ ಬೆಳವಣಿಗೆಗೆಗೆ ಕಾರಣಗಳೆಂದರೆ, ವೀರಶೈವ-ಲಿಂಗಾಯತರ ನಡುವೆ ಅದರ ಬೆಳೆಯುತ್ತಿರುವ ಸಾಮಾಜಿಕ ನೆಲೆಗಟ್ಟು, ದಲಿತ ಜನರ ನಡುವೆ ಸಂಖ್ಯಾಬಲದಲ್ಲಿ ದೊಡ್ಡದಾಗಿರುವ ಮಾದಿಗ ಸಮುದಾಯವನ್ನು- ವಿಶೇಷವಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಪ್ರಶ್ನೆಗೆ ಸಂಬಂಧಿಸಿ- ಒಲಿಸಿಕೊಳ್ಳಲು ಸಂಘ ಪರಿವಾರ ನಡೆಸಿದ ಚಾಣಾಕ್ಷತನದ ಕ್ರೋಢೀಕರಣ ಮತ್ತು ಹಿಂದೂ ರಾಷ್ಟ್ರದ ಬೇಡಿಕೆಯ ಆಧಾರದಲ್ಲಿ ಇಡೀ ಕರ್ನಾಟಕದಲ್ಲಿ- ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ- ಪ್ರಬಲ ಮತ್ತು ಹಿಂದುಳಿದ ಜಾತಿಗಳ ಮುಸ್ಲಿಂ ವಿರೋಧಿ ಕ್ರೋಢೀಕರಣ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದಕ್ಷಿಣ ಕರ್ನಾಟಕದಲ್ಲಿ ಮತ್ತು ಒಕ್ಕಲಿಗರ ನಡುವೆ ಹಲವಾರು ದಶಕಗಳಿಂದ ಸಕ್ರಿಯವಾಗಿಯೇ ಇದ್ದರೂ, ಒಕ್ಕಲಿಗರನ್ನು ಇಡಿಯಾಗಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹಿಂದೂ ರಾಷ್ಟ್ರ ಅಥವಾ ಸಾರಾಸಗಟು ಮುಸ್ಲಿಂ ವಿರೋಧಿ ಅಜೆಂಡಾಗಳೆರಡೂ ಇಲ್ಲಿ ಇಡಿಯಾಗಿ ಕೆಲಸ ಮಾಡಿಲ್ಲ.

ಹಳೆ ಮೈಸೂರು ಪ್ರದೇಶಗಳಲ್ಲಿ ಒಕ್ಕಲಿಗರ ಮೇಲೆ ಹಿಂದೂತ್ವವು ಉಳಿದ ಕಡೆಗಳಷ್ಟು ಪ್ರಭಾವ ಬೀರಲು ವಿಫಲವಾಗಿರುವುದಕ್ಕೆ ಒಂದು ಸಂಭಾವ್ಯ ಕಾರಣವೆಂದರೆ, ಒಕ್ಕಲುತನದಲ್ಲಿ ತೊಡಗಿದ್ದ ಒಕ್ಕಲಿಗ ಜಾತಿಗಳು ಮತ್ತು ವ್ಯಾಪಾರಿಗಳಾದ ಮುಸ್ಲಿಮರ ನಡುವೆ ಇರುವ ಐತಿಹಾಸಿಕ ಸಾಮರಸ್ಯ ಮತ್ತು ಈ ಪ್ರಾಂತ್ಯದಲ್ಲಿ ಈ ಸಂಬಂಧವನ್ನು ಟಿಪ್ಪು ಸುಲ್ತಾನ್ ಆಡಳಿತವು ಆರಂಭಿಸಿದ ಭೂಸುಧಾರಣಾ ಮತ್ತು ಪಾಳೇಗಾರಿ ವಿರೋಧಿ ಕ್ರಮಗಳು ಬಲಪಡಿಸಿದುದು. ಟಿಪ್ಪು ಸುಲ್ತಾನರ ಈ ಸುಧಾರಣೆಗಳ ಪ್ರಮುಖ ಫಲಾನುಭವಿಗಳೆಂದರೆ- ಬ್ರಾಹ್ಮಣ ಪಾಳೇಗಾರಿ ಧಣಿಗಳು ಮತ್ತು ದೇವಾಲಯಗಳು ಹೇರಿದ್ದ ಭಾರೀ ತೆರಿಗೆಗಳು ಮತ್ತು ಇತರ ಸಾಮಾಜಿಕ ಹೊರೆಗಳಿಂದ ಬಹುತೇಕ ವಿಮೋಚನೆಗೊಳಿಸಲಾದ- ಒಕ್ಕಲುತನದಲ್ಲಿ ತೊಡಗಿದ್ದ ಜಾತಿಗಳವರು. ಇದರಿಂದಾಗಿಯೇ ಒಕ್ಕಲಿಗರು ಮತ್ತು ದಲಿತರು ಸ್ವಂತ ಇಚ್ಚೆಯಿಂದ ಟಿಪ್ಪು ಸುಲ್ತಾನರ ಸೇನೆಯಲ್ಲಿ ಸೈನಿಕರಾದರು. ಅದು ಅವರಿಗೆ ಸಾಮಾಜಿಕ ಸ್ಥಾನಮಾನ ದೊರಕಿಸಿಕೊಟ್ಟದ್ದೇ ಅಲ್ಲದೆ, ಅವರಲ್ಲಿ ಬಲವಾದ ಬ್ರಿಟಿಷ್ ವಿರೋಧಿ ಮತ್ತು ಪಾಳೇಗಾರಿ ವಿರೋಧಿ ಆಶಯಗಳನ್ನು ತುಂಬಿತು. ಆದುದರಿಂದ, ಮರಾಠರು ಮತ್ತು ರಜಪೂತರಿಗೆ ವ್ಯತಿರಿಕ್ತವಾಗಿ ಟಿಪ್ಪು ಸುಲ್ತಾನರ ಸೇನೆ ಮಾತ್ರವೇ ಅವರು ಯುದ್ಧಭೂಮಿಯಲ್ಲಿ ವೀರೋಚಿತವಾಗಿ ಹುತಾತ್ಮರಾದ ನಂತರ ಬರಖಾಸ್ತುಗೊಂಡಿತು.

ನಂತರ ಮೈಸೂರು ಪ್ರಾಂತ್ಯವನ್ನು 20ನೇ ಶತಮಾನದ ಆರಂಭದಲ್ಲಿ ಅಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಪ್ರದಾಯವನ್ನು ಮುಂದುವರಿಸಿದರು. ಅವರು ಬ್ರಾಹ್ಮಣರ ಪ್ರಾಬಲ್ಯದ ವಿರುದ್ಧ ಒಕ್ಕಲಿಗರು ಮತ್ತು ಮುಸ್ಲಿಮರ ಮೈತ್ರಿಯ ಮುಖ್ಯ ಶಿಲ್ಪಿಯಾಗಿದ್ದರು. ಒಡೆಯರ್ 1920ರ ದಶಕದಲ್ಲಿ ಆರಂಭಿಸಿದ ಮೀಸಲಾತಿ ನೀತಿಗಳ ಜಂಟಿ ಫಲಾನುಭವಿಗಳು ಮುಸ್ಲಿಮರು ಮತ್ತು ಒಕ್ಕಲಿಗರಾಗಿದ್ದರು. ಅದು ಪ್ರಾಂತೀಯ ಆಡಳಿತದಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು.

ನಂತರದಲ್ಲಿ ಗ್ರಾಮೀಣ ಮೈಸೂರಿನಲ್ಲಿ ಒಕ್ಕಲಿಗರು ಪ್ರಬಲ ಜಾತಿಗಳಾದರೂ, ಸ್ವಾತಂತ್ರ್ಯದ ನಂತರ ರಾಜ್ಯ ರಾಜಕಾರಣದಲ್ಲಿ ಪ್ರಬಲರಾದರೂ, ಉತ್ತರದಲ್ಲಿ ಇನ್ನಷ್ಟು ಪ್ರಬಲರಾದ ಲಿಂಗಾಯತರ ಜೊತೆಗೆ ಏಗಬೇಕಾಯಿತು. ಅಲ್ಲಿಯೂ ಮುಸ್ಲಿಮರು ಅವರ ಮಿತ್ರರಾಗಿದ್ದರು.

ನಂತರದ ದಶಕಗಳಲ್ಲಿ, ಲಿಂಗಾಯತರಿಗೆ ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕೆ  ಪರ್ಯಾಯವನ್ನು ಒದಗಿಸಿದ ಉತ್ತರಕ್ಕೆ ವ್ಯತಿರಿಕ್ತವಾಗಿ, ದಕ್ಷಿಣದಲ್ಲಿ ಒಕ್ಕಲಿಗರು ಜನತಾ ದಳ (ಜಾತ್ಯತೀತ)ದ ಆಶ್ರಯ ಪಡೆದರು. ಅದು ಅಲ್ಲಿ ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ಬಲವಾದ ಚುನಾವಣಾ ಮೈತ್ರಿಯನ್ನು ಮೂಡಿಸಿತು.

ಹೀಗೆ, ಈ ಪ್ರದೇಶದಲ್ಲಿ ಆರೆಸ್ಸೆಸ್ ಕೂಡಾ ಬೆಳೆಯುತ್ತಿದ್ದರೂ, ತನ್ನ ಹೆಗ್ಗುರುತಾದ ಬಲವಾದ ಮುಸ್ಲಿಂ ವಿರೋಧಿ ಜನಮರುಳು ತಂತ್ರಗಳು ಇತ್ತೀಚಿನವರೆಗೂ ಹೆಚ್ಚು ಪ್ರಯೋಜನಕಾರಿಯಾಗಿ ಇರದಿರುವುದನ್ನು ಕಾಣಬೇಕಾಯಿತು. ಇದರಿಂದಾಗಿ, ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಬಿಜೆಪಿಯ ಒಕ್ಕಲಿಗ ನಾಯಕ ಆರ್. ಅಶೋಕ್ ಮುಂತಾದವರು ಟಿಪ್ಪು ಸುಲ್ತಾನ್ ಮಾದರಿಯ ಕಿರೀಟ ಧರಿಸಿ, ಕತ್ತಿ ಹಿಡಿದು ಟಿಪ್ಪು ಜಯಂತಿ ಆಚರಿಸುವುದು ಕಂಡುಬಂತು.

ಆದರೆ, ಇವೆಲ್ಲವೂ 2019ರಲ್ಲಿ ಮೋದಿತ್ವದ ಎರಡನೇ ವಿಜಯದ ಬಳಿಕ ಬದಲಾಗಿ, ಈಗ ಯಾವುದೇ ಕಲ್ಯಾಣ ಕಾರ್ಯಕ್ರಮಗಳ ಭರವಸೆಯ ಬದಲು, ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ಅಗತ್ಯ ಮತ್ತು ಬೇಡಿಕೆಯ ಆಧಾರದಲ್ಲಿ ಮತ ಕೇಳಲಾಗುತ್ತಿದೆ. ಮೇಲೇರುತ್ತಿರುವ ಸ್ಥಿತಿವಂತ ಒಕ್ಕಲಿಗರು ನಿಧಾನವಾಗಿ ಹಿಂದೂತ್ವದ ಹೆಮ್ಮೆಯಲ್ಲಿ ಮೆರೆಯಲು ಬಯಸುತ್ತಿದ್ದಾರೆ.

ಬೇಗನೇ ಪ್ರಮುಖ ವೆಬ್‌ಸೈಟುಗಳಲ್ಲಿ “ಮೋದಿ ದೇಶಕ್ಕೆ, ಕುಮಾರಣ್ಣ ಕರ್ನಾಟಕಕ್ಕೆ” ಎಂಬ ಘೋಷಣೆ ಮೊಳಗಲಾರಂಭಿಸಿತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಮುಸ್ಲಿಮರ ಓಲೈಕೆ ಮಾಡುವವರು, ದೇವೇಗೌಡರನ್ನೂ- ಆ ಮೂಲಕ ಒಕ್ಕಲಿಗರನ್ನೂ ವಿರೋಧಿಸುವವರು ಎಂದು ಅವಹೇಳನಕಾರಿ ಪ್ರಚಾರಾಭಿಯಾನ ನಡೆಸಲಾಯಿತು. ಪರಿಣಾಮವಾಗಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹೊರತಾಗಿಯೂ ಬಿಜೆಪಿಯು ಒಕ್ಕಲಿಗರ ಪ್ರದೇಶದಲ್ಲೂ ತುಂಬಾ ಒಳ್ಳೆಯ ಸಾಧನೆ ಮಾಡಿ, ಮತಗಳಿಕೆಯಲ್ಲಿ ಕಾಂಗ್ರೆಸನ್ನು ಮೀರಿ, 52 ಶೇಕಡಾ ತಲುಪಿತು. ಮುಸ್ಲಿಮರ ವಿರುದ್ಧ ವಿಷಕಾರಿದ ಎಲ್ಲಾ ಅಭ್ಯರ್ಥಿಗಳು ಕರ್ನಾಟಕದಲ್ಲೂ, ಭಾರತದಲ್ಲೂ ಭಾರೀ ಬಹುಮತದಿಂದ ಗೆದ್ದರು.

ಇದು ಬಿಜೆಪಿಗೆ ತನ್ನ ರಕ್ಷಣಾತ್ಮಕ ಕಾರ್ಯತಂತ್ರವನ್ನು ಬದಲಿಸಲು ಧೈರ್ಯ ತಂದುಕೊಟ್ಟಿತು. ಈ ಪ್ರಕ್ರಿಯೆಯಲ್ಲಿ ಮೈಸೂರು ಪ್ರದೇಶದ ಹಲವಾರು ಒಕ್ಕಲಿಗರು ಮತ್ತು ಸಮಾನ ಜಾತಿಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿ, 2019ರಲ್ಲಿ ಬಿಜೆಪಿಯು ರಾಜ್ಯದಲ್ಲಿ ಸರಕಾರ ರಚಿಸುವುದಕ್ಕೆ ನೆರವಾದರು. 2021ರಲ್ಲಿ ಪಕ್ಷ ಮತ್ತು ಆರೆಸ್ಸೆಸನ್ನು ಮೀರಿದ ಹಿಂಬಾಲಕರನ್ನು ಹೊಂದಿರುವ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಮಾಡಿ, ಆರೆಸ್ಸೆಸ್ಸಿನ ಆದೇಶಗಳ ನಿಷ್ಟಾವಂತ ಪಾಲಕ ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲಾಯಿತು.

ಆ ಹೊತ್ತಿನಿಂದ ಆರೆಸ್ಸೆಸ್ ಮತ್ತು ಬಿಜೆಪಿ, ಒಕ್ಕಲಿಗರನ್ನು ಓಲೈಸುವ ಮತ್ತು ಅವರನ್ನು ಮುಸ್ಲಿಮರ ಜೊತೆಗೆ ಅವರ ಪರಂಪರಾಗತ ಸಾಮಾಜಿಕ ಮೈತ್ರಿಯಿಂದ ದೂರ ಸೆಳೆಯುವ ಜಂಟಿ ಮತ್ತು ಬಹುಮುಖಿ ಕಾರ್ಯತಂತ್ರಗಳನ್ನು ಛೂಬಿಟ್ಟವು. ಟಿಪ್ಪುವನ್ನು ಕನ್ನಡ ವಿರೋಧಿ, ಒಕ್ಕಲಿಗರ ವಿರೋಧಿ, ಹಿಂದೂ ವಿರೋಧಿ, ಕರ್ನಾಟಕ ವಿರೋಧಿ ಎಂದು ನಿಂದಿಸಿ ಹೆಸರು ಕೆಡಿಸದೆ ಇದು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಆದುದರಿಂದ, ಟಿಪ್ಪುವನ್ನು ನಿಂದಿಸಿ, ಕೆಂಪೇಗೌಡರನ್ನು ಹೊಗಳಿ ಮೇಲಕ್ಕೇರಿಸುವುದನ್ನು ಪೂರಕ ರಾಜಕೀಯ ಯೋಜನೆಯನ್ನಾಗಿ ಮಾಡಲಾಯಿತು.

ಗೌರವದಿಂದ ನಾಡಪ್ರಭು ಎಂದು ಕರೆಯಲಾಗುವ ಕೆಂಪೇಗೌಡರು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ಮುಖ್ಯಸ್ಥರಾಗಿದ್ದರು. ಬೆಂಗಳೂರಿನ ಹುಟ್ಟಿಗೆ ಅವರ ದೂರದೃಷ್ಟಿಯ ಯೋಜನೆ ಕಾರಣ ಎಂದು ಹೇಳಲಾಗುತ್ತದೆ. ಆದರೆ, ಬೆಂಗಳೂರಿಗಿಂತ ಹೆಚ್ಚಾಗಿ, ಐತಿಹಾಸಿಕ ಕಾರಣ ಮತ್ತು ಆ ಪ್ರದೇಶಗಳ ಭೌಗೋಳಿಕತೆಗಳ ಕಾರಣದಿಂದಾಗಿ ಹತ್ತಿರದ ಯಲಹಂಕ ಮತ್ತು ಮಾಗಡಿಯಂತಾ ಜನವಸತಿಗಳು ಅವರ ಮರಣಾನಂತರ ಹೆಚ್ಚು ಬೆಳೆದವು. ಬೆಂಗಳೂರು ಒಂದು ಸೈನಿಕ ಠಾಣಾ ನಗರವಾಗುವುದಕ್ಕೆ ಹೊರತಾಗಿ, ಒಂದು ವಾಣಿಜ್ಯ ಮತ್ತು ಮಾದರಿ ಕೈಗಾರಿಕಾ ನಗರವಾಗಿ ಬೆಳೆದದ್ದು ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಾವಧಿಯಲ್ಲಿ. ಟಿಪ್ಪು ಸುಲ್ತಾನರು ಲಾಲ್‌ಬಾಗನ್ನು ಒಂದು ವಿಶ್ವದರ್ಜೆಯ ತೋಟಗಾರಿಕಾ ತಾಣವನ್ನಾಗಿ ಕೂಡಾ ಅಭಿವೃದ್ಧಿಪಡಿಸಿದರು.

ಹೀಗೆ, ಒಕ್ಕಲಿಗರು ಮತ್ತು ಮುಸ್ಲಿಮರ ನಡುವಿನ ಪರಂಪರಾಗತ ಸಾಮರಸ್ಯವು ಹಾಸುಹೊಕ್ಕಾಗಿ ಇರುವಂತೆಯೇ, ಟಿಪ್ಪು ಮತ್ತು ಕೆಂಪೇಗೌಡರಿಬ್ಬರ ಹಾಸುಹೊಕ್ಕಾದ ಕೊಡುಗೆಗಳನ್ನು ಪ್ರತ್ಯೇಕಿಸಿ ಬೆಂಗಳೂರಿನ ಇತಿಹಾಸವನ್ನು ತಿಳಿದುಕೊಳ್ಳುವುದು  ಸಾಧ್ಯವಿಲ್ಲ. ಮತ್ತೆ, ಐತಿಹಾಸಿಕ ಕಾರಣಗಳಿಗಾಗಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಮಾಡಿದ ವೀರೋಚಿತ ಯುದ್ಧಗಳು- ಬೆಂಗಳೂರನ್ನು ಅಮೇರಿಕಾ ಮತ್ತು ಫ್ರೆಂಚ್ ಕ್ರಾಂತಿಕಾರಿಗಳ ನಡುವೆಯೂ ಸೇರಿದಂತೆ-  ಅಂತರರಾಷ್ಟ್ರೀಯವಾಗಿ ಪ್ರಸಿದ್ಧ ನಗರವನ್ನಾಗಿ ಮಾಡುವುದಕ್ಕೆ ತಮ್ಮ ಪಾಲು ಸಲ್ಲಿಸಿವೆ.

ಹೀಗೆ, 2003ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ- ಅದು ಅವರ ಹುಟ್ಟಿದ ಸ್ಥಳವಾದ ದೇವನಹಳ್ಳಿಗೆ ಹತ್ತಿರ ಇರುವುದರಿಂದ ಟಿಪ್ಪು ಸುಲ್ತಾನರ ಹೆಸರಿಡಬೇಕು ಎಂದು ವ್ಯಾಪಕವಾಗಿ ಸೂಚಿಸಲಾಗಿತ್ತು. ಅಷ್ಟು ಮಾತ್ರವಲ್ಲದೆ, ಅದಕ್ಕೆ ಬೆಂಗಳೂರು ಮತ್ತು ಮೈಸೂರನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತಂದವರು ಟಿಪ್ಪು ಸುಲ್ತಾನ್ ಎಂಬ ಕಾರಣವೂ ಇತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಯಾವುದೇ ಹೆಸರಿಡದೆ, ಕೇವಲ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮಾತ್ರ ಕರೆಯಲಾಗುವುದು ಎಂಬ ರಾಜಿಸೂತ್ರಕ್ಕೆ-  ಆಗಲೂ ಕೂಡಾ ಟಿಪ್ಪು ಹೆಸರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ-ಆರೆಸ್ಸೆಸ್ ಪ್ರಭಾವ ಬೆಳೆಯುತ್ತಿದ್ದುದು ಕಾರಣವಾಗಿತ್ತು.

ಹೀಗಿದ್ದರೂ, ಹಿಂದೂತ್ವದ ವ್ಯೂಹಾತ್ಮಕ ಒತ್ತಡಕ್ಕೆ ಮಣಿಯುವ ಚಾಳಿ ಇರುವ ಕಾಂಗ್ರೆಸ್ ಸರಕಾರ ಇರುವಾಗಲೇ, 2019ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಯಿತು.  ಊಹಿಸಿದಂತೆಯೇ ಇದನ್ನು ತನಗೆ ಸಂದ ಜಯವೆಂದು ಆಚರಿಸಿದ ಬಿಜೆಪಿಯು, ಒಕ್ಕಲಿಗ ರಾಜನೊಬ್ಬನಿಗೆ ಗೌರವ ತಂದುಕೊಟ್ಟ ಶ್ರೇಯಸ್ಸು ತನ್ನದೆಂದು ಬಿಂಬಿಸಿತು. ದಶಕದಿಂದ ನಡೆಯುತ್ತಿರುವ ಈ ನಡೆಗಳ ಮುಂದುವರಿಕೆಯಾಗಿ, ಬಿಜೆಪಿಯು ಇದೀಗ ಕೆಂಪೇಗೌಡರ ಆಡಳಿತದ ಸುತ್ತ ಒಂದು ಥೀಮ್ ಪಾರ್ಕನ್ನು ಯೋಜಿಸಿ, ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡರ ಒಂದು 108 ಅಡಿಗಳ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಇದನ್ನು ಮುಂದೆ ಚುನಾವಣಾ ಪ್ರಚಾರದ ವೇಳೆ- ತಾವು ಹೇಗೆ ಒಬ್ಬ ಒಕ್ಕಲಿಗ ಅರಸನಿಗೆ ವಿಶ್ವಪ್ರಸಿದ್ಧಿಯನ್ನು ತಂದುಕೊಟ್ಟೆವು ಎಂದು ಬಿಂಬಿಸಲು ಬಳಸಲಾಗುವುದು.

ಇನ್ನೊಂದು ಕಡೆಯಲ್ಲಿ ಟಿಪ್ಪು ಸುಲ್ತಾನರ ಹೆಸರು ಕೆಡಿಸಿ, ಇತಿಹಾಸದಿಂದ ಅವರ ನೆನಪನ್ನು ಅಳಿಸುವ ಅಭಿಯಾನವನ್ನೂ ವ್ಯವಸ್ಥಿತವಾಗಿ ಅನಾವರಣಗೊಳಿಸಲಾಗಿದೆ. ಬಿಜೆಪಿ ಸರಕಾರದ ಹೊಸ ಪಠ್ಯ ಪುಸ್ತಕವು ಒಂದೋ ಟಿಪ್ಪು ಸುಲ್ತಾನರ ಸಾಧನೆಗಳನ್ನು ಕಿತ್ತುಹಾಕಿದೆ ಅಥವಾ ಅವರನ್ನು ಮತಾಂಧ ಎಂದು ಬಿಂಬಿಸುವ ಸುಳ್ಳು ಇತಿಹಾಸವನ್ನು ಸೇರಿಸಿದೆ. ದಶಕದ ಹಿಂದೆ ಟಿಪ್ಪು ಎಕ್ಸ್‌‌ಪ್ರೆಸ್ ಎಂದು ಹೆಸರಿಸಲಾಗಿದ್ದ ಬೆಂಗಳೂರು-ಮೈಸೂರು ರೈಲಿನ ಹೆಸರನ್ನು ಇತ್ತೀಚೆಗೆ ಬಿಜೆಪಿ ಸಂಸದ ಪ್ರತಾಪ ಸಿಂಹ ಸೂಚನೆಯಂತೆ ಬದಲಿಸಿ, ಒಡೆಯರ್ ಹೆಸರು ಇಡಲಾಗಿದೆ.

ಈ ಕೃತ್ಯಗಳು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗುತ್ತವೋ, ಇಲ್ಲವೋ, ಆದರೆ ಸಾರ್ವಜನಿಕ ಅಭಿಪ್ರಾಯವನ್ನು ನಿರಂತರವಾಗಿ ಕಲುಷಿತಗೊಳಿಸಿ, ಹಿಂದೂತ್ವದ ಕಥಾನಕವನ್ನು ಇನ್ನಷ್ಟು ಬೆಳೆಸುತ್ತವೆ.

ಇತಿಹಾಸವನ್ನು ತಿರುಚಿ ಮರಳಿ ಕಟ್ಟುವುದರಲ್ಲಿ ಬಹುಸಂಖ್ಯಾತವಾದಿ ಹಿಂದೂತ್ವ ಶಕ್ತಿಗಳ ಗೆಲುವು, ಇಂದಿನ ಜಾತ್ಯತೀತ ಶಕ್ತಿಗಳ ರಾಜಕೀಯ ಮತ್ತು ಸೈದ್ಧಾಂತಿಕ ಸೋಲಿನ ನೇರ ಫಲಿತಾಂಶವಾಗಿದೆ..

ಇತಿಹಾಸವು ಯಾವಾಗಲೂ ವಿಜಯಿಯ ಭಾಗಶಃ ಮುಖವನ್ನು ಮಾತ್ರ ತೋರಿಸುತ್ತದೆ.

ಶಿವಸುಂದರ್
ಕೃಪೆ: ಸಬ್‌ರಂಗ್
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಕುವೆಂಪು & ನಾಡಗೀತೆ ನಿಂದಕನಿಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ: ಮುಂದುವರೆದ ಪ್ರತಿಭಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...