’ಮುಸ್ಲಿಮರು ಯಾರೂ ಗೋಮಾಂಸ ತಿನ್ನಬೇಡಿ’ ಎಂದುಬ ಹೇಳಿ ಇತ್ತಿಚೆಗಷ್ಟೇ ವಿವಾದಕ್ಕೀಡಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ತನ್ನ ಹೇಳಿಕೆಗೆ ಮಲಯಾಳಂ ಭಾಷೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಅವರು, “ಕೈ ಮುಗಿದು ಬೇಡಿಕೊಳ್ಳುತ್ತೇನೆ, ಮುಸ್ಲಿಮರು ಯಾರೂ ಗೋಮಾಂಸ ತಿನ್ನಬೇಡಿ. ಗೋಹತ್ಯೆ ನಿಷೇಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಸ್ವಾಗತಾರ್ಹ” ಎಂದು ಹೇಳಿದ್ದರು.
ಅವರ ಹೇಳಿಕೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ತನ್ನ ಹೇಳಿಕೆಯ ಬಗ್ಗೆ ಸ್ವತಃ ತಾವೇ ವಿಡಿಯೋ ಮಾಡಿ ಮಲಯಾಳಂನಲ್ಲಿ ಸ್ಪಷ್ಟನೆ ನೀಡಿರುವ ಅವರು, “ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಮರು ಯಾರೂ ಗೋಮಾಂಸ ತಿನ್ನಬೇಡಿ: ಸಿ.ಎಂ. ಇಬ್ರಾಹಿಂ
ವಿಡಿಯೋದಲ್ಲಿ, “ತಾನು ಪ್ರಸ್ತುತ ಕರ್ನಾಕಟದಾದ್ಯಂತ ಪ್ರವಾಸದಲ್ಲಿದ್ದು, ಕೆಲ ಸ್ನೇಹಿತರು ’ನಾನು ಮುಸ್ಲಿಮರೊಂದಿಗೆ ಗೋಮಾಂಸ ತಿನ್ನಬೇಡಿ’ ಎಂದು ಬೇಡಿಕೊಂಡಿದ್ದಾಗಿ ಮಾಧ್ಯಮಗಳಲ್ಲಿ ಬರುತ್ತಿರುದನ್ನು ಕರೆ ಮಾಡಿ ತಿಳಿಸಿದ್ದಾರೆ. ಇದನ್ನು ಕೇಳಿ ನನಗೆ ತುಂಬಾ ಆಶ್ಚರ್ಯವಾಗಿದೆ. ಬಿಜೆಪಿ ಜಾರಿಗೆ ತರಬೇಕೆಂದು ಉದ್ದೇಶಿಸಿದ್ದ ಮಸೂದೆಯನ್ನು ಪರಿಷತ್‌ನಲ್ಲಿ ವಿರೋಧಿಸಲು ಕಾಂಗ್ರೆಸ್‌ನೊಂದಿಗೆ ಸಂಖ್ಯಾಬಲ ಇರಲಿಲ್ಲವಾದ್ದರಿಂದ ದೇವೇಗೌಡರೊಂದಿಗೆ ಚರ್ಚಿಸಿ ಜನತಾದಳದೊಂದಿಗೆ ಸೇರಿ ವಿರೋಧಿಸಿದ್ದರಿಂದ ಪರಿಷತ್‌ನಲ್ಲಿ ಬಿಜೆಪಿ ಅದನ್ನು ತಂದಿಲ್ಲ” ಎಂದು ಹೇಳಿದ್ದಾರೆ.
ಇದೀಗ ಸುಗ್ರಿವಾಜ್ಞೆ ತರುತ್ತೇವೆಂದು ಬಿಜೆಪಿ ಹೊರಟಿದೆ. ಅದರ ವಿರುದ್ದ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಗೋಹತ್ಯೆ ಮಾಡಬೇಡಿ ಎಂದು ಹೇಳುತ್ತಿರುವ ಸರ್ಕಾರದೊಂದಿಗೆ ಹಿಂದಿನಿಂದಲೂ ನನ್ನ ಪ್ರಶ್ನೆ ಏನೆಂದರೆ, ’50 ಸಾವಿರ ನೀಡಿ ನಾನೊಂದು ದನವನ್ನು ಖರೀದಿಸಿ, ಅದರ ಹಾಲಿನಿಂದ ಜೀವಿಸುತ್ತಾ ಇರುತ್ತೇನೆ. ಐದಾರು ವರ್ಷಗಳ ನಂತರ ಅದು ಹಾಲು ನೀಡುವುದನ್ನು ನಿಲ್ಲಿಸಿದರೆ ಅದನ್ನು ಮಾರಾಟ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಾನು ಯಾರಿಗೆ ನೀಡಲಿ ಅದನ್ನು? ಖರೀದಿಸುವವನು ಅದನ್ನು ಸಾಕಲು ಬೇಕಾಗಿ ಖರೀದಿಸುವುದಿಲ್ಲ, ಮಾಂಸಕ್ಕಾಗಿ ಖರೀದಿತ್ತಾನೆ. ಈ ಬಗ್ಗೆ ಸರ್ಕಾರ ಏನು ಹೇಳುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ’ಗೋಹತ್ಯೆ ನಿಷೇದ ಮಸೂದೆ-2020’ ರ ವಿರೋಧಿ ಜನಾಂದೋಲನದ ಪೂರ್ವಭಾವಿ ಸಭೆ ನಾಳೆ
ಅಂಕಿ ಅಂಶದಂತೆ ರಾಜ್ಯದಲ್ಲಿ ಒಂದು ವರ್ಷಕ್ಕೆ 20 ಲಕ್ಷ ಜಾನುವಾರು ಹೆಚ್ಚಾಗುತ್ತವೆ. ಇದರಲ್ಲಿ ಹೋರಿ ಕರುಗಳು ಇದ್ದರೆ ಏನು ಮಾಡಬೇಕು? ಅವುಗಳನ್ನು ಯಾರು ಸಾಕುತ್ತಾರೆ? ಜೆರ್ಸಿ ತಳಿಯನ್ನು ಕೃಷಿಗೆ ಉಪಯೋಗಿಸುವುದಿಲ್ಲ. ಎಮ್ಮೆ, ಆಡನ್ನು ಮಾಂಸಕ್ಕೆ ಬಳಸಬಹುದು ಆದರೆ ಹಾಲು ನೀಡದ ಹಸುವನ್ನು ಮಾಂಸಕ್ಕೆ ಬಳಸಬಾರದು ಎಂದರೆ ಕೃಷಿಕನಾದ ನನ್ನ ಹಸುವನ್ನು ನೀವು ಖರೀದಿಸಿ, ಆ ದುಡ್ಡಿನಿಂದ ನಾನು ಬೇರೆ ಹಸು ಖರೀದಿಸಿ ಹಾಲು ಮಾರಿ ಜೀವಿಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿರುವ ಸಿ.ಎಂ. ಇಬ್ರಾಹಿಂ, “ಇದನ್ನೇ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಆದರೆ ಮಾಧ್ಯಮಗಳು ಇದನ್ನು ತಿರುಚಿವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ನಾನು ಏನೆಂದು ಕರ್ನಾಟಕದ ಜನತೆಗೆ ಗೊತ್ತಿದೆ. ಮಸೂದೆಯನ್ನು ವಿರೋಧಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಿದ್ದೇನೆ. ಬಿಜೆಪಿಗೆ ಸಂವಿಧಾನಾತ್ಮಕವಾಗಿ ಈ ಮಸೂದೆಯನ್ನು ತರಲು ಸಾಧ್ಯವಿಲ್ಲ. ಸುಗ್ರೀವಾಜ್ಞೆ ತಂದರೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಅದಾಗ್ಯೂ ಈ ನಿಯಮ ಬಂದರೆ ಅದನ್ನು ವಿರೋಧಿಸಿ ಕೋಟ್ಯಾಂತರ ರೈತರು ಬೀದಿಗಿಳಿಯಲಿದ್ದಾರೆ” ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ: ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ – ಸಿದ್ದರಾಮಯ್ಯ ಸಲಹೆ