Homeಮುಖಪುಟಗಜ ಪ್ರಸವ ಮುಗಿದರೂ, ಇನ್ನೂ ಮುಗಿಯದ ಖಾತೆ ಖ್ಯಾತೆ..!

ಗಜ ಪ್ರಸವ ಮುಗಿದರೂ, ಇನ್ನೂ ಮುಗಿಯದ ಖಾತೆ ಖ್ಯಾತೆ..!

- Advertisement -
- Advertisement -

ಒಂದೆಡೆ ಸೋತು ಸಚಿವ ಸ್ಥಾನ ಮಿಸ್ ಮಾಡಿಕೊಂಡಿರುವವರ ಒತ್ತಡ, ಮತ್ತೊಂದೆಡೆ ಸಚಿವಗಿರಿ ಸಿಕ್ಕರೂ ಇಷ್ಟದ ಖಾತೆ ಸಿಗದೆ ಕ್ಯಾತೆ ತೆಗೆಯುತ್ತಿರುವವರ ಕಿರಿಕಿರಿ, ಸಾಲದ್ದಕ್ಕೆ `ಎಲ್ಲಿಂದಲೋ ಬಂದವರು’ ತಮ್ಮ ಪಕ್ಷದ ಸರ್ಕಾರದಲ್ಲಿ ಸಚಿವರಾಗೋದನ್ನು ಕಂಡು ಮರುಗುತ್ತಿರುವ ಮಂತ್ರಿಗಿರಿ ವಂಚಿತ ಮೂಲ ಬಿಜೆಪಿಗರ ಗೋಳಾಟ, ಹೈಕಮಾಂಡ್‍ನ ನಿರಂತರ ನಿರ್ಲಕ್ಷ್ಯ ಇವೆಲ್ಲವೂ ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರ  ಸರ್ಕಾರಕ್ಕೆ ಸರಿಯಾಗೇ ಕಾಟಕೊಡಲು ಸಜ್ಜಾಗಿವೆ…..

ಕಳೆದ ಎರಡು ತಿಂಗಳಿನಿಂದ ಸಾಕ್ಷಾತ್ ಗಜ ಪ್ರಸವವೇ ಏನೋ ಎಂಬಂತೆ ಭಾಸವಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ಬಿ.ಎಸ್.ಯಡಿಯೂರಪ್ಪ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಕೊನೆಗೆ ಉಮೇಶ್ ಕತ್ತಿ , ರೇಣುಕಾಚಾರ್ಯನಂತಹ ಸ್ವಪಕ್ಷೀಯ ಶಾಸಕರ ಅಸಮಾಧಾನದ ನಡುವೆಯೂ ಯಶಸ್ವಿಯಾಗಿ ಸಂಪುಟ ವಿಸ್ತರಿಸಿದ್ದ ಬಿಎಸ್‍ವೈ 10 ಜನ ವಲಸಿಗರಿಗೆ ಸಚಿವ ಸ್ಥಾನ ನೀಡುವ ಮೂಲಕ ಗಜ ಪ್ರಸವಕ್ಕೆ ಸ್ವಾಭಾವಿಕ ಹೆರಿಗೆಯನ್ನೇ ಮಾಡಿಸಿದ್ದರು. ಆದರೆ, ಸ್ವಾಭಾವಿಕ ಹೆರಿಗೆಯ ಖುಷಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ತುಂಬಾ ದಿನ ಉಳಿಯುವ ಯಾವುದೇ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.

 

ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಿಜೆಪಿ ವಲಸೆಬಂದ ಶಾಸಕರು ನಿರೀಕ್ಷೆಯಂತೆ ಉಪ-ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹೇಶ್ ಕುಮಟಳ್ಳಿಗೆ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರಿಗೂ ಸಂಪುಟ ದರ್ಜೆಯ ಸಚಿವ ಸ್ಥಾನವನ್ನೇನೋ ನೀಡಲಾಗಿದೆ.

ಆದರೆ, ಹೀಗೆ ಸಚಿವ ಸ್ಥಾನ ಪಡೆದಿರುವ ಶಾಸಕರು ಅಷ್ಟಕ್ಕೆ ತೃಪ್ತರಾಗದೆ ಇದೀಗ ಪ್ರತಿಯೊಬ್ಬರೂ ಇಂತಹದ್ದೇ ಖಾತೆ ಕೊಡಿ ಎಂದು ಬಿಎಸ್‍ವೈ ಎದುರು ಪ್ರಬಲ ಖಾತೆಗೆ ಬೇಡಿಕೆ ಇಡುತ್ತಿರುವುದು ಸಿಎಂ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಮಹೇಶ್ ಕುಮಟಳ್ಳಿ ಪರ ಮಾತನಾಡುವ ಭರದಲ್ಲಿ ಬಿಜೆಪಿ ಶಾಸಕ ಬಸಡನಗೌಡ ಪಾಟೀಲ್ ಯತ್ನಾಳ್ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಬಿಜೆಪಿ ಸರ್ಕಾರ ಮತ್ತು ಸ್ವತಃ ಯಡಿಯೂರಪ್ಪನವರಿಗೆ ಮತ್ತಷ್ಟು ಮುಜುಗರಕ್ಕೀಡುಮಾಡುತ್ತಿದೆ.

ಬಿಜೆಪಿಯಲ್ಲಿ ಮುಗಿಯದ ಖಾತೆ ಖ್ಯಾತೆ

ಕಳೆದ ಜೂನ್ ತಿಂಗಳಲ್ಲಿ ಬಿಜೆಪಿ ಸರ್ಕಾರದ ರಚನೆ ವೇಳೆ ಬಿ.ಎಸ್. ಯಡಿಯೂರಪ್ಪ ತಾವು ಕೊಟ್ಟ ಮಾತಿನಂತೆ ಕೊನೆಗೂ 10 ಜನ ವಲಸಿಗ/ಅರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಸ್ವಪಕ್ಷೀಯ ಹಿರಿಯ ನಾಯಕರು ಮತ್ತು ದೆಹಲಿಯ ಹೈಕಮಾಂಡ್ ನಾಯಕರ ವಿರೋಧ ಕಟ್ಟಿಕೊಂಡು ಕೊನೆಗೂ ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ವಚನಭ್ರಷ್ಟ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಇದು ಇಲ್ಲಿಗೆ ಮುಗಿಯುವ ಕಥೆ ಅಲ್ಲ.

ಸೋಮವಾರ ರಾಜ್ಯಪಾಲರಿಗೆ ನೂತನ ಸಚಿವರ ಖಾತೆ ವಿವರದ ಪಟ್ಟಿಯನ್ನು ಕಳುಹಿಸಿದ್ದ ಬಿ.ಎಸ್. ಯಡಿಯೂರಪ್ಪ, ರಮೇಶ್ ಜಾರಕಿಹೊಳಿ – ಜಲ ಸಂಪನ್ಮೂಲ, ಡಾ.ಕೆ. ಸುಧಾಕರ್-ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್-ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್-ಕಾರ್ಮಿಕ, ಭೈರತಿ ಬಸವರಾಜು – ನಗರಾಭಿವೃದ್ಧಿ, ಗೋಪಾಲಯ್ಯ-ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್‍ಗೆ ಅರಣ್ಯ ಖಾತೆಯನ್ನು ನೀಡಿದ್ದರು.

 

ಆದರೆ, ಖಾತೆ ಹಂಚಿಕೆಯ ವಿವರಗಳು ಬಹಿರಂಗಗೊಳ್ಳುತ್ತಿದ್ದಂತೆ ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಮತ್ತು ಕೋಲಾರದ ಶಾಸಕ ಡಾ. ಸುಧಾಕರ್ ಬಹಿರಂಗವಾಗಿಯೇ ತಗಾದೆ ತೆಗೆದಿದ್ದಾರೆ.

ಆರಂಭದಿಂದಲೂ ಬಿಸಿ ಪಾಟೀಲ್ ಗೃಹ ಇಲಾಖೆಯ ಮೇಲೆ ಕಣ್ಣಿಟ್ಟಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. “ಪೊಲೀಸ್ ಅಧಿಕಾರಿಯಾಗಿದ್ದ ನಾನು ಗೃಹ ಸಚಿವನಾಗಬೇಕು ಎಂಬುದು ಹಲವು ಪೊಲೀಸರ ಆಕಾಂಕ್ಷೆ” ಎಂದು ಅವರು ಬಹಿರಂಗವಾಗಿಯೇ ಹೇಳಿದ್ದರು. ಹೀಗಾಗಿ ಅರಣ್ಯ ಇಲಾಖೆ ಸ್ಥಾನಮಾನ ಸ್ವಾಭಾವಿಕವಾಗಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೂ ಡಾ. ಸುಧಾಕರ್ ಆರಂಭದಲ್ಲೇ ತನಗೆ ಇಂಧನ ಖಾತೆ ನೀಡುವಂತೆ ಬಿಎಸ್‍ವೈ ಎದುರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಿಎಸ್‍ವೈ ಸಹ ಸಮ್ಮತಿ ಸೂಚಿಸಿದ್ದರು ಎನ್ನಲಾಗುತ್ತಿದೆ. ಆದರೆ, ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಿರುವುದು ಸುಧಾಕರ್ ಅವರನ್ನು ಕೆರಳಿಸಿದೆ. ಹೀಗಾಗಿ ಈ ಇಬ್ಬರೂ ನಾಯಕರು ತಮಗೆ ಪ್ರಬಲ ಖಾತೆ ನೀಡುವಂತೆ ಬಹಿರಂಗವಾಗಿಯೇ ಪಟ್ಟು ಹಿಡಿದು ಕುಳಿತಿದ್ದಾರೆ.

ಪರಿಣಾಮ ಇವರನ್ನು ಸಮಾಧಾನಿಸಲು ಮುಂದಾಗಿರುವ ಸಿಎಂ ಬಿಎಸ್‍ವೈ ಮಂಗಳವಾರ ಮತ್ತೆ ಖಾತೆ ಮರುಹಂಚಿಕೆ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಇದೀಗ ಬಿಸಿ ಪಾಟೀಲ್‍ಗೆ ವಹಿಸಲಾಗಿದೆ.

ಬಿ.ಸಿ. ಪಾಟೀಲ್ ಮಾತ್ರವಲ್ಲದೆ ಇನ್ನೂ ನಾಲ್ವರು ಸಚಿವರಿಗೆ ಖಾತೆ ಮರುಹಂಚಿಕೆ ಮಾಡಲಾಗಿದೆ. ಆನಂದ ಸಿಂಗ್‍ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಬದಲು ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆಯನ್ನು ನೀಡಲಾಗಿದೆ. ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಬದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿದೆ.

ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಇಲಾಖೆ ಜೊತೆಗೆ ಸಕ್ಕರೆ ಖಾತೆಯನ್ನೂ ನೀಡಲಾಗಿದೆ. ಸಚಿವ ಸಿ.ಸಿ. ಪಾಟೀಲ್‍ಗೆ ಗಣಿ ಮತ್ತು ಭೂವಿಜ್ಞಾನ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ನೀಡಲಾಗಿದೆ.

ಈ ಪರಿಷ್ಕøತ ಪಟ್ಟಿಯನ್ನು ಈಗಾಗಲೇ ರಾಜಭವನಕ್ಕೆ ಕಳುಹಿಸಲಾಗಿದೆ. ಆದರೆ, ಡಾ. ಸುಧಾಕರ್ ಅವರ ಖಾತೆ ಬದಲಾವಣೆ ಕುರಿತು ಈ ಪಟ್ಟಿಯಲ್ಲಿ ಎಲ್ಲೂ ಉಲ್ಲೇಖಿಸದಿರುವುದು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಎಸ್‍ವೈಗೆ ಬಿಡದ ಶಾಸಕ ಯತ್ನಾಳ್ ಎಂಬ ತಲೆನೋವು
ಸಂಪುಟ ವಿಸ್ತರಣೆಗೂ ಮುನ್ನವೇ ತನಗೆ ಸಚಿವ ಸ್ಥಾನ ಇಲ್ಲ ಎಂಬ ವಿಚಾರವನ್ನು ಅರಿತಿದ್ದ ಶಾಸಕ ಮಹೇಶ್ ಕುಮಟಳ್ಳಿ, “ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾಣ ಬಿಟ್ಟರೂ ಬಿಟ್ಟಾರು ಆದರೆ, ಕೊಟ್ಟ ಮಾತು ಮಾತ್ರ ತಪ್ಪಲಾರರು. ಅವರು ನನಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಿಯೇ ತೀರುತ್ತಾರೆ” ಎಂದು ವೀರಾವೇಶದ ಹೇಳಿಕೆ ನೀಡುವ ಮೂಲಕ ಹೊಸ ಆಟಕ್ಕೆ ಮುಂದಾಗಿದ್ದರು.

ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಯಡಿಯೂರಪ್ಪ ಬೆಳಗಾವಿಗೆ ಎರಡು ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಲ್ಲದೆ, ಶಾಸಕ ಮಹೇಶ್ ಕುಮಟಳ್ಳಿಗೆ ಎಂಎಸ್‍ಐಎಲ್ (ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್) ನಿಗಮದ ಅಧ್ಯಕ್ಷ ಸ್ಥಾನ ನೀಡಿ ಕೈತೊಳೆದುಕೊಂಡಿದ್ದರು.

ತನಗೆ ಸಚಿವ ಸ್ಥಾನ ಲಭಿಸುವುದಿಲ್ಲ ಎಂಬ ಸತ್ಯ ಅರಿವಾದ ಮೇಲೆ ಕುಮಟಳ್ಳಿ ಸಹ ಸ್ವಲ್ಪ ಮೆತ್ತಗಾಗಿದ್ದಾರೆ. ಹಠವನ್ನು ಪಕ್ಕಕ್ಕಿಟ್ಟು “ನಾನು ಒಬ್ಬ ಸಿವಿಲ್ ಇಂಜಿನಿಯರ್. ಹೀಗಾಗಿ ಎಂಎಸ್‍ಐಎಲ್ ಬದಲು ಬೇರೆ ಯಾವುದಾದರೂ ನಿಗಮ ಅಥವಾ ಮಂಡಳಿ ಕೊಟ್ಟರೆ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಅಸಮಾಧಾನದಿಂದ ಪಕ್ಷಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಿದ್ದರು.

ಆದರೆ, ಸಚಿವ ಸ್ಥಾನ ಸಿಗದ ಕುರಿತಾಗಿ ಸ್ವತಃ ಮಹೇಶ್ ಕುಮಟಳ್ಳಿ ಸುಮ್ಮನಾದರೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ,

ಮಂಗಳವಾರ ವಿಜಯಪುರ ಜಿಲ್ಲೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಯತ್ನಾಳ್, “ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತುಂಬು ಸಭೆಯಲ್ಲಿ ಕುಮಟಳ್ಳಿಯವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಹೀಗಾಗಿ ಅವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಇಲ್ಲದಿದ್ದರೆ, ಹೆಚ್.ಡಿ. ಕುಮಾರಸ್ವಾಮಿಯವರನ್ನು ಈ ಹಿಂದೆ ವಚನಭ್ರಷ್ಟ ಎಂದು ಬೈದಿದ್ದ ಬಿಎಸ್‍ವೈ ಸ್ವತಃ ವಚನಭ್ರಷ್ಟ ಎಂದೆನಿಸಿಕೊಳ್ಳುತ್ತಾರೆ” ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದ್ದಾರೆ.

ಯತ್ನಾಳ್ ಹೀಗೆ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡದ ಕುರಿತಾಗಿ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಮೂಲಕ ಪಕ್ಷದಿಂದ ಷೊಕಾಸ್ ನೋಟಿಸ್ ಪಡೆದಿದ್ದರು. ಶಿಸ್ತು ಕ್ರಮಕ್ಕೂ ಒಳಗಾಗಿದ್ದರು.
ಅಲ್ಲದೆ, ತನಗೂ ಸಿಎಂ ಆಗುವ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷನಾಗುವ ಯೋಗ್ಯತೆ ಇದೆ ಎಂದು ಹೇಳುವ ಮೂಲಕ ಪಕ್ಷದ ವರಿಷ್ಠರ ಕೋಪಕ್ಕೆ ತುತ್ತಾಗಿದ್ದರು. ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಎಂದು ಘೋಷಿಸಿದಾಗ ಬಹಿರಂಗವಾಗಿಯೇ ಕುಟುಕಿದ್ದರು.

ಒಂದೆಡೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯ ಖ್ಯಾತೆ ಸ್ವಪಕ್ಷೀಯರ ಬಂಡಾಯ ಮತ್ತು ಹೈಕಮಾಂಡ್ನ ನಿರಂತರ ಕಿರಿಕಿರಿಯಿಂದ ಈಗಾಗಲೇ ನಲುಗಿಹೋಗಿರುವ ಯಡಿಯೂರಪ್ಪನವರಿಗೆ ಯತ್ನಾಳ್ ಹೀಗೆ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸರ್ಕಾರ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...