ಮರಾಠಾ ಮೀಸಲಾತಿ ರದ್ದು; ರಾಜ್ಯದ ಮೇಲೂ ಪರಿಣಾಮ, ಜನಸಂಖ್ಯಾಧಾರಿತ ಮೀಸಲಾತಿ ಚರ್ಚೆ ಮುನ್ನೆಲೆಗೆ!
PC: Mumbai Mirror

ಶೈಕ್ಷಣಿಕ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮರಾಠಾ ಮೀಸಲಾತಿಯನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಇದನ್ನು ಅಸಂವಿಧಾನಿಕ ಎಂದು ಬುಧವಾರ ಹೇಳಿದೆ. ಶೇ. 50 ರ ಗರಿಷ್ಠ ಮಿತಿಯನ್ನು ಮತ್ತೆ ಪರಿಶೀಲಿಸುವ ಅಗತ್ಯ ಇಲ್ಲ ಎಂದೂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು, ಮಹಾರಾಷ್ಟ್ರ ಸರ್ಕಾರವು ಮೀಸಲಾತಿಯ ಶೇ. 50 ರ ಗರಿಷ್ಠ ಮಿತಿಯನ್ನು ಮುರಿಯಲು ಯಾವುದೇ ಅಸಾಮಾನ್ಯ ಸನ್ನಿವೇಶಗಳಿಲ್ಲ ಎಂದು ಹೇಳಿದೆ.

ರಾಜ್ಯದಲ್ಲಿ ಶೈಕ್ಷಣಿಕ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ 2018 ರ ಕ್ರಮವನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಇದನ್ನೂ ಓದಿ: ಮೀಸಲಾತಿ: ತುಷ್ಟೀಕರಣದ ತಂತ್ರವಾಗುತ್ತಿರುವ ಸಮಾನತೆಯ ಅಸ್ತ್ರ: ಎ ನಾರಾಯಣ

ಸಮುದಾಯವೊಂದಕ್ಕೆ ಪ್ರತ್ಯೇಕ ಮೀಸಲಾತಿ ನೀಡುವ ಕ್ರಮವನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಘೋಷಿಸಿದೆ ಎಂದು ಪಿಟಿಐ ತಿಳಿಸಿದೆ.

ಕರ್ನಾಟಕದಲ್ಲೂ ಹಲವು ಸಮುದಾಯಗಳು ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ಮಾಡಿದ್ದು, ಹೋರಾಟ ಇನ್ನೂ ಚಾಲನೆಲ್ಲಿದೆ. ರಾಜ್ಯ ಸರ್ಕಾರ ಈ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದೆ. ಇದನ್ನು ಸಾಧಿಸಲು ಶೇ. 50 ರ ಗರಿಷ್ಠ ಮಿತಿಯನ್ನು ಉಲ್ಲಂಘಿಸಬೇಕಾಗುತ್ತದೆ. ನ್ಯಾಯಾಲಯಗಳ ಈ ನಿರ್ಬಂಧನೆಯಿಂದ ಪಾರಾಗಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಹಿಂದೆ ಈ ಸಾಹಸ ಮಾಡಿ ಯಶಸ್ವಿಯಾದ ತಮಿಳುನಾಡು ಅಲ್ಲಿ ಶೇ.69 ಪ್ರಮಾಣದ ಮೀಸಲಾತಿ ನಿಗದಿ ಮಾಡಿದೆ.

ದೇಶದ ಜನಸಂಖ್ಯೆಯ ಶೇ. 24 ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಈಗ ಶೇ. 18 ಮೀಸಲಾತಿ ಸಿಗುತ್ತಿದೆ. ಈ ಸಮುದಾಯಗಳಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ಇತರೆ ಹಿಂದುಳಿದ ವರ್ಗದ (ಒಬಿಸಿ) ಸಮುದಾಯಗಳಿಗೂ ನ್ಯಾಯಯುತ ಪಾಲು ಸಿಕ್ಕಿಲ್ಲ ಎಂದು ಹಲವಾರು ಸಂವಿಧಾನ ತಜ್ಞರು, ವಕೀಲರು ಮತ್ತು ಪ್ರಗತಿಪರ ಸಂಘಟನೆಗಳ ನಾಯಕರು ಆಕ್ಷೇಪ ಎತ್ತುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ಶೇ. 50 ರಷ್ಟು ಮೀಸಲಾತಿ ಅಂದರೆ, ಸಾಪೇಕ್ಷವಾಗಿ ಅಲ್ಪಸಂಖ್ಯಾತರಾದ (ಜನಸಂಖ್ಯೆಯಲ್ಲಿ ಎಸ್‌ಸಿ-ಎಸ್‌ಟಿ-ಒಬಿಸಿಗಳಿಗಿಂತ ಕಡಿಮೆ ಇರುವ) ಮುಂದುವರೆದ ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಉಳಿದ ಶೇ. 50 ರಷ್ಟು ಮೀಸಲಾತಿ ನೀಡಿದಂತೆ ಆಗುತ್ತದೆ ಎಂಬ ವಾದವೂ ಇದೆ.

ಈ ನಡುವೆ ಕಳೆದ ವರ್ಷ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ಕಲ್ಪಿಸಿದ್ದು, ಶೇ.3 ರಷ್ಟು ಇರುವ ಬ್ರಾಹ್ಮಣರಿಗಷ್ಟೇ ಅನುಕೂಲವಾಗುತ್ತಿದೆ.

ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ವಾದ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಸುಪ್ರೀಂಕೋರ್ಟಿನ ನಿನ್ನೆಯ ಆದೇಶ ಕುರಿತು ಈಗಾಗಲೇ ಮಹಾರಾಷ್ಟ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
’ಅಸಾಮಾನ್ಯ ಸಂದರ್ಭಗಳಲ್ಲಿ’ ಗರಿಷ್ಠ ಮಿತಿ ದಾಟಬಹುದು ಎಂಬ ಸುಪ್ರೀಂಕೋರ್ಟ್ ನಿಲುವು ಕೂಡ ಗೊಂದಲಕ್ಕೆ ಕಾರಣವಾಗಿದೆ ಎನ್ನುವ ಕೆಲವು ತಜ್ಞರು, ಈ ’ಅಸಾಮಾನ್ಯ ಸಂದರ್ಭ-ಸನ್ನಿವೇಶ’ದ ವ್ಯಾಖ್ಯಾನವೇ ಆಗಿಲ್ಲ ಎನ್ನುತ್ತಾರೆ.

ಕೋರ್ಟ್ ನಿಲುವೇನು?

1992 ರ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಶೇ.50 ಕೋಟಾ ಮಿತಿಯನ್ನು ಉಲ್ಲಂಘಿಸಿದೆ ಎನ್ನಲಾದ ‘ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ-2018’ ಯನ್ನು ಪ್ರಶ್ನಿಸಿದ ಒಂದು ಗುಂಪಿನ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಇದನ್ನೂ ಓದಿ: ’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!

ಬುಧವಾರದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಎಸ್. ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್. ರವೀಂದ್ರ ಭಟ್ ಅವರ ಸಂವಿಧಾನ ಪೀಠವು, ಮಹಾರಾಷ್ಟ್ರದಲ್ಲಿ ಹಿಂದಿನ ಭಾರತೀಯ ಜನತಾ ಪಕ್ಷ ಸರ್ಕಾರವು ತಂದಿರುವ ಮೀಸಲಾತಿ ಕ್ರಮವು ಸಮಾನತೆಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ತಿಳಿಸಿದೆ ಎಂದು ಲೈವ್ ಲಾ ವರದಿ ಹೇಳಿದೆ.

“ಗಾಯಕವಾಡ್ ಆಯೋಗ ಅಥವಾ ಹೈಕೋರ್ಟ್ ಎರಡೂ ಮರಾಠರಿಗೆ 50% ಮೀಸಲಾತಿಯನ್ನು ಮೀರಿದ ಯಾವುದೇ ಪರಿಸ್ಥಿತಿಯನ್ನು ಸೂಚಿಸಿಲ್ಲ” ಎಂದು ಭೂಷಣ್ ನೇತೃತ್ವದ ನ್ಯಾಯಪೀಠ ಸರ್ವಾನುಮತದಿಂದ ಘೋಷಿಸಿತು.

“ಆದ್ದರಿಂದ, ಗರಿಷ್ಠ ಮಿತಿಯನ್ನು ಮೀರಲು ಯಾವುದೇ ಅಸಾಮಾನ್ಯ ಸಂದರ್ಭಗಳಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಪೀಠ ಸ್ಪಷ್ಟಪಡಿಸಿದೆ.

ಈ ತೀರ್ಪು 2020 ರ ಸೆಪ್ಟೆಂಬರ್ 9 ರವರೆಗೆ ನಡೆದಿರುವ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ದಾಖಲಾತಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಜನಸಂಖ್ಯಾವಾರು ಮೀಸಲಾತಿ ಈ ಕ್ಷಣದ ತುರ್ತು: ಸದಾನಂದ ಗಂಗನಬೀಡು

ಮೀಸಲಾತಿ ಮಿತಿಯನ್ನು ಶೇ.50 ಎಂದು ನಿಗದಿಪಡಿಸಿದ 1992 ರ ಇಂದಿರಾ ಸಾಹ್ನಿ ತೀರ್ಪನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ. “ಈ ತೀರ್ಪನ್ನು ಈ ನ್ಯಾಯಾಲಯವು ಪದೇ ಪದೇ ಅನುಸರಿಸುತ್ತಿದೆ ಮತ್ತು ಈ ನ್ಯಾಯಾಲಯದ ಕನಿಷ್ಠ ನಾಲ್ಕು ಸಂವಿಧಾನ ಪೀಠಗಳಿಂದ ಅನುಮೋದನೆ ಪಡೆದಿದೆ” ಎಂದು ಅದು ಹೇಳಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ತೀರ್ಪನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ ಎಂದ ಎನ್‌ಐ ವರದಿ ಮಾಡಿದೆ. ಸಮುದಾಯದ ಸದಸ್ಯರಿಗಾಗಿ “ಸ್ವಾಭಿಮಾನದ ಜೀವನ”ದ ಸಲುವಾಗಿ ಸರ್ವಾನುಮತದಿಂದ ಶಾಸನವನ್ನು ಅಂಗೀಕರಿಸಲಾಗಿದೆ ಎಂದು ಠಾಕ್ರೆ ಹೇಳಿದರು. “ಈಗ ಸುಪ್ರೀಂಕೋರ್ಟ್ ಮಹಾರಾಷ್ಟ್ರವು ಈ ಬಗ್ಗೆ ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ, ಪ್ರಧಾನಿ ಮತ್ತು ಅಧ್ಯಕ್ಷರಿಗೆ ಮಾತ್ರ ಸಾಧ್ಯ” ಎಂದು ಅವರು ಹೇಳಿದರು.

2018 ರಲ್ಲಿ, ರಾಜ್ಯವ್ಯಾಪಿ ನಡೆದ ಮರಾಠಾ ಮೀಸಲಾತಿ ಹೋರಾಟದ ಆಗ್ರಹಕ್ಕೆ ಮಣಿದಿದ್ದ ಮಹಾರಾಷ್ಟ್ರದ ಅಂದಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರವು ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.18 ಮೀಸಲಾತಿಯನ್ನು ಅನುಮೋದಿಸಿತ್ತು. 2019 ರಲ್ಲಿ ಈ ಕ್ರಮದ ವಿರುದ್ಧ ಅರ್ಜಿಗಳನ್ನು ವಿಚಾರನಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು, ಆದರೆ ಶೇ.18 ಮೀಸಲಾತಿ ಸಮರ್ಥನೀಯವಲ್ಲ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳ ಪ್ರಕಾರ ಕೋಟಾವನ್ನು ಶೇ.12 -13 ಕ್ಕೆ ಇಳಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ; ಸಿದ್ದರಾಮಯ್ಯ

ಹೈಕೋರ್ಟ್‌ನ ತೀರ್ಪನ್ನು ತರುವಾಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು, ಅದು 2020 ರ ಸೆಪ್ಟೆಂಬರ್‌ನಲ್ಲಿ ತೀರ್ಪನ್ನು ತಡೆಹಿಡಿಯಿತು. ನಂತರ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ನೋಟಿಸ್ ನೀಡಿ, ಶೇ. 50 ರ ಮಿತಿಯನ್ನು ಮೀರಿ ಮೀಸಲಾತಿಯನ್ನು ಅನುಮತಿಸಬಹುದೇ ಎಂಬ ಬಗ್ಗೆ ರಾಜ್ಯಗಳ ಪ್ರತಿಕ್ರಿಯೆ ಕೋರಿತ್ತು.

ಕನಿಷ್ಠ ಆರು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ಜಾಖಂಡ್ – ಮೀಸಲಾತಿ ಮೇಲಿನ ಮಿತಿಯನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿವೆ. ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸಿದ ಕಾನೂನು ಸಾಂವಿಧಾನಿಕವಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು.

ಸುಪ್ರೀಂಕೋರ್ಟಿನ ಈ ತೀರ್ಪು, ವಿವಿಧ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಅಥವಾ ಮೀಸಲಾತಿ ಪರಿಷ್ಕರಣೆ ಮಾಡುವ ಒತ್ತಡದಲ್ಲಿರುವ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಮತ್ತು ಜಾಖಂಡ್ ರಾಜ್ಯಗಳ ಸರ್ಕಾರಗಳಿಗೆ ಹೊಸ ಸವಾಲನ್ನು ಒಡ್ಡಿದೆ.

ಇದನ್ನೂ ಓದಿ: ಮೀಸಲಾತಿಯ ಜೊತೆಗೇ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡಬೇಕು: ಸುಪ್ರೀಂ ಅಭಿಮತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here