Homeಮುಖಪುಟಛತ್ತೀಸ್‌ಗಡ: ಚರ್ಚ್‌ ಮೇಲೆ ದಾಳಿ; ಬಿಜೆಪಿ ಮುಖಂಡ ಸೇರಿ ಐವರ ಬಂಧನ

ಛತ್ತೀಸ್‌ಗಡ: ಚರ್ಚ್‌ ಮೇಲೆ ದಾಳಿ; ಬಿಜೆಪಿ ಮುಖಂಡ ಸೇರಿ ಐವರ ಬಂಧನ

- Advertisement -
- Advertisement -

ಛತ್ತೀಸ್‌ಗಡ ನಾರಾಯಣಪುರ ಜಿಲ್ಲೆಯ ಚರ್ಚ್‌ನ ಮೇಲೆ ನಡೆದ ಗುಂಪು ದಾಳಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಮುಖಂಡ ಸೇರಿದಂತೆ ಐವರನ್ನು ಛತ್ತೀಸ್‌ಗಢ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬಿಜೆಪಿ ಮುಖಂಡ ರೂಪಸಾಯಿ ಸಲಾಂ, ಪವನ್‌ಕುಮಾರ್ ನಾಗ್, ಅತುಲ್ ನೇತಮ್, ಅಂಕಿತ್ ನಂದಿ ಮತ್ತು ದೊಮೇಂದ್ರ ಯಾದವ್ ಬಂಧಿತರು ಎಂದು ಗುರುತಿಸಲಾಗಿದೆ.

ಅಕ್ರಮವಾಗಿ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಆದಿವಾಸಿಗಳ ಗುಂಪು ನಾರಾಯಣಪುರದ ಎಡ್ಕಾ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ನಂತರ ಚರ್ಚ್ ಅನ್ನು ಧ್ವಂಸಗೊಳಿಸಲಾಗಿತ್ತು. ಆದಿವಾಸಿಗಳ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಎಂಟು ಜನರು ಗಾಯಗೊಂಡ ಒಂದು ದಿನದ ನಂತರ ಬಂಧನ ನಡೆದಿದೆ.

ಸೋಮವಾರ ನಡೆದ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ದಾಳಿಗೊಳಗಾದ ಪೊಲೀಸ್ ಅಧಿಕಾರಿಗಳ ಪೈಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ್ ಕುಮಾರ್ ಕೂಡ ಸೇರಿದ್ದಾರೆ.

ಗಲಭೆ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಚರ್ಚ್ ಅನ್ನು ಧ್ವಂಸಗೊಳಿಸಿದ್ದಕ್ಕಾಗಿ ಮೂರು ಎಫ್‌ಐಆರ್‌ಗಳನ್ನು ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದಾರೆ.

ಜನವರಿ 1 ರಂದು ಎಡ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಗೊರ್ರಾ ಗ್ರಾಮದಲ್ಲಿ ಎರಡು ಆದಿವಾಸಿ ಗುಂಪುಗಳ ನಡುವಿನ ಘರ್ಷಣೆಯ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಜನರಲ್ ಸುಂದರರಾಜ್ ಪಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 148 (ಗಲಭೆ, ಮಾರಣಾಂತಿಕ ಆಯುಧಗಳಿಂದ ಶಸ್ತ್ರಸಜ್ಜಿತ), 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 120 ಬಿ (ಅಪರಾಧದ ಪಿತೂರಿ), 295 (ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಕೃತ್ಯಗಳು) ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಬಿಜೆಪಿ ಸಂಸದರಾದ ಸಂತೋಷ್ ಪಾಂಡೆ, ಮೋಹನ್ ಮಾಂಡವಿ ಮತ್ತು ಶಾಸಕ ಶಿವರತನ್ ಶರ್ಮಾ ಅವರು  ನಾರಾಯಣಪುರಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ. ಭದ್ರತಾ ಕಾರಣಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

“ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ, ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ” ಎಂದು ಬಿಜೆಪಿಯ ಛತ್ತೀಸ್‌ಗಢ ಘಟಕದ ಮುಖ್ಯ ವಕ್ತಾರ ಅಜಯ್ ಚಂದ್ರಕರ್ ಆರೋಪಿಸಿದ್ದಾರೆ.

“ನಮ್ಮ ನಾಯಕರನ್ನು ನಾರಾಯಣಪುರಕ್ಕೆ ಹೋಗದಂತೆ ತಡೆಯಲಾಗಿದೆ. ಮತಾಂತರದಲ್ಲಿ ತೊಡಗಿರುವವರಿಗೆ ಕಾಂಗ್ರೆಸ್‌ನ ರಕ್ಷಣೆ ಇದೆ ಎಂಬುದನ್ನು ಇದು ಸೂಚಿಸುತ್ತಿದೆ” ಎಂದು ದೂರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read