ಚಿತ್ರದುರ್ಗ: ಅಪ್ಪ, ಅಮ್ಮ, ಅಜ್ಜಿ, ಅಣ್ಣ, ತಂಗಿಗೆ ವಿಷವಿಟ್ಟ ವಾತ್ಸಲ್ಯ ವಂಚಿತ ಅಪ್ರಾಪ್ತೆ

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯಲ್ಲಿ ಜುಲೈ 12 ರಂದು ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮನೆ ಮಗಳೇ ಮುದ್ದೆಯಲ್ಲಿ ವಿಷವಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

ಮನೆಯ ಮೂವರು ಮಕ್ಕಳಲ್ಲಿ ಎರಡನೇ ಮಗಳಾದ 17 ವರ್ಷದ ಅಪ್ರಾಪ್ತೆ ಮನೆಯಲ್ಲಿ ಇನ್ನಿಬ್ಬರು ಮಕ್ಕಳಿಗೆ ನೀಡುತ್ತಿದ್ದ ಪ್ರೀತಿಗೂ ತನಗೆ ದೊರೆಯುತ್ತಿದ್ದ ಪ್ರೀತಿ-ವಾತ್ಸಲ್ಯದ ತಾರತಮ್ಯದಿಂದ ಬೇಸತ್ತು ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಜುಲೈ 12 ರಂದು ಭರಮಸಾಗರ ಹೋಬಳಿಯ ಇಸಾಮುದ್ರ ಗ್ರಾಮದ ಗೊಲ್ಲರಹಟ್ಟಿಗೆ ಹೊಂದಿಕೊಂಡಿರುವ ಲಂಬಾಣಿಹಟ್ಟಿಯಲ್ಲಿ ಮುದ್ದೆ ಊಟ ಮಾಡಿದ್ದ ಮನೆಯ ಮುಖ್ಯಸ್ಥ ತಿಪ್ಪನಾಯ್ಕ (45), ಪತ್ನಿ ಸುಧಾಬಾಯಿ (40) ತಾಯಿ ಗುಂಡಿಬಾಯಿ (80), ಮಗಳು ರಮ್ಯಾ (16) ಸಾವನ್ನಪ್ಪಿದ್ದರು. ಅಸ್ವಸ್ಥರಾಗಿದ್ದ ಮಗ ರಾಹುಲ್ (19) ರನ್ನು  ದಾವಣಗೆರೆಯ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಾಹುಲ್ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ’ಹಿಂದೂಗಳಿಗೆ ಮಾತ್ರ’: ವಿವಾದ ಸೃಷ್ಟಿಸಿದ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಜಾಹೀರಾತು

ಮುದ್ದೆ ಊಟ ಮಾಡಿದ್ದವರು ಮಾತ್ರ ಸಾವನ್ನಪ್ಪಿದ್ದು, ಪೊಲೀಸರು ಊಟದಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತಪಡಿಸಿ, ಉಳಿದಿದ್ದ ಅಡುಗೆಯನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದರು. ಎಸ್‌ಎಫ್‌ಎಲ್‌ ವರದಿಯಲ್ಲಿ ಮುದ್ದೆಯಲ್ಲಿ ಕೀಟನಾಶಕ ಬೆರೆತಿರುವುದು ತಿಳಿದು ಬಂದಿತ್ತು.

ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಅಂದು ಮನೆಯಲ್ಲಿ ಬರಿ ಅನ್ನ-ಸಾಂಬರ್‌ ಊಟ ಮಾಡಿ ಆರೋಗ್ಯವಾಗಿದ್ದ ಬಾಲಕಿಯನ್ನು ವಿಚಾರಣೆ ಒಳಪಡಿಸಿದ್ದಾರೆ. ಘಟನೆಯ ದಿನದಂದು ಮುದ್ದೆ ತಯಾರಿಸಿದ್ದ ಬಾಲಕಿ ಮುದ್ದೆಯಲ್ಲಿ ಕೀಟನಾಶಕ ಬೆರೆಸಿದದ್ದು ಬೆಳಕಿಗೆ ಬಂದಿದೆ. ಬಾಲಕಿಯನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಮನೆಯಲ್ಲಿ ರಮ್ಯಾ ಮತ್ತು ರಾಹುಲ್‌ಗೆ ಸಿಗುವ ಪ್ರೀತಿ ತನಗೆ ಸಿಗುತ್ತಿಲ್ಲ. ಅಜ್ಜಿ ಮನೆಯಿಂದ ಕರೆದುಕೊಂಡು ಬಂದು ಕೂಲಿ ಕೆಲಸಕ್ಕೆ ಆಕೆಯನ್ನು ಕಳುಹಿಸಲಾಗುತ್ತಿತ್ತು. ಜೊತೆಗೆ ಪೋಷಕರು ವಿನಾಕಾರಣ ಬೈಯುವುದು, ತಾತ್ಸಾರದಿಂದ ಕಾಣುವುದರಿಂದ ಬೇಸತ್ತು ಕೊಲೆಗೆ ಸಂಚು ಮಾಡಿದ್ದೆ ಎಂದು ಬಾಲಕಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಅನುಮಾನಸ್ಪದ ಸಾವು ಗ್ರಾಮದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಹಲವರ ಮೇಲೆ ಸಂಶಯ ವ್ಯಕ್ತವಾಗಿತ್ತು. ಆದರೆ ಮನೆ ಮಗಳೇ ಮನೆಯವಿಗೆ ವಿಷವಿಟ್ಟಿರುವ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಇದನ್ನೂ ಓದಿ: ಚಿತ್ರದುರ್ಗ: ವಿಷಾಹಾರ ಸೇವನೆ ಅನುಮಾನ- ಒಂದೇ ಕುಟುಂಬದ ನಾಲ್ವರು ಸಾವು

LEAVE A REPLY

Please enter your comment!
Please enter your name here