ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಯಾವುದೇ ಗುಂಪು ಸೇರುವುದನ್ನು ಕಾನೂನುಬಾಹಿರವೆಂದು ಘೋಷಿಸಿದ್ದಾರೆ. ಅಕ್ಟೋಬರ್ 10 ರಂದು ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ರ ನಡುವೆ ಸಂಚರಿಸುವ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ನವ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳನ್ನು ತಲುಪುವುದಿಲ್ಲ ಎಂದು ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163 ಜಾರಿಯಲ್ಲಿದೆ. ಜಂತರ್ ಮಂತರ್‌ನಲ್ಲಿ ಅಥವಾ ಬೇರೆ ಎಲ್ಲಿಯೂ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಸೃಷ್ಟಿ ಪಾಂಡೆ ಶುಕ್ರವಾರ ತಿಳಿಸಿದ್ದಾರೆ. “ಯಾವುದೇ ರೀತಿಯ ಜನ ಸೇರುವಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ” ಎಂದು ಅವರು ಹೇಳಿದ್ದು, ಪೊಲೀಸರು ಕಾನೂನು ಕ್ರಮಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿ, ಸಾರ್ವಜನಿಕರು ದೂರವಿರುವಂತೆ ಮನವಿ ಮಾಡಿದ್ದಾರೆ. ಪ್ರತಿಭಟನೆಗೆ ಪೊಲೀಸರು ಅನುಮತಿ ಕೂಡ ನೀಡಿಲ್ಲ.
ಮತದಾರರ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅನಿಯಮಿತ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಸಂಸ್ಥಾಪಕ ಅಭಿಜಿತ್ ದೀಪ್ಕೆ ನೇತೃತ್ವದ ಸಿಜೆಪಿ ಒತ್ತಾಯಿಸುತ್ತಿದೆ. ಗ್ಯಾನೇಶ್ ಕುಮಾರ್ ಹುದ್ದೆಯಿಂದ ಕೆಳಗಿಳಿಯದಿದ್ದರೆ ದೇಶದಾದ್ಯಂತದ ಬೆಂಬಲಿಗರು ದೆಹಲಿಗೆ ಮೆರವಣಿಗೆ ಮಾಡಲಿದ್ದಾರೆ ಎಂದು ದೀಪ್ಕೆ ಹೇಳಿದ್ದಾರೆ. ಪೊಲೀಸರು ತಮ್ಮನ್ನು ತಡೆಯಲು ಯತ್ನಿಸಿದರೆ, “ಅವರು ನಮ್ಮನ್ನು ಎಲ್ಲಿ ತಡೆಯುತ್ತಾರೋ ಅದೇ ನಮ್ಮ ಜಂತರ್ ಮಂತರ್ ಆಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಯೋಜಿತ ಆಂದೋಲನವು ಶಾಂತಿಯುತವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕರ್ತರ ಮೇಲೆ ಒತ್ತಡ
ದೆಹಲಿ ಪ್ರತಿಭಟನೆಯಿಂದ ದೂರವಿರುವಂತೆ ಸಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ಸೂಚನೆಗಳು ಬರುತ್ತಿವೆ, ಒತ್ತಡ ಹೇರಲಾಗುತ್ತಿದೆ ಎಂದು ಕಳೆದ ಮಂಗಳವಾರದಂದು ದೀಪ್ಕೆ ಆರೋಪಿಸಿದ್ದಾರೆ. ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಾಪುರ ಪೊಲೀಸರು ಕಾರ್ಯಕರ್ತರು ಭಾಗವಹಿಸದಂತೆ ನೋಟಿಸ್ ನೀಡಿದ್ದಾರೆ ಹಾಗೂ ಅವರ ಪ್ರಯಾಣಕ್ಕೆ ಹಣ ಯಾರು ಒದಗಿಸುತ್ತಿದ್ದಾರೆ ಎಂದು ವಿಚಾರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಈ ನಡೆಯನ್ನು ಅವರು “ಸರ್ವಾಧಿಕಾರ” ಎಂದು ಕರೆದಿದ್ದಾರೆ. ಆಂದೋಲನವು ಹಿಂಸಾತ್ಮಕವಾಗುತ್ತದೆ ಎಂದು ಪೊಲೀಸರು ಹೇಗೆ ಮುನ್ಸೂಚನೆ ನೀಡಬಹುದು ಎಂದು ಪ್ರಶ್ನಿಸಿದ್ದಾರೆ.
ಭದ್ರತಾ ವಲಯ
ಸುಮಾರು 11,000 ಹೆಚ್ಚುವರಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸಿಬ್ಬಂದಿಯನ್ನು ದೆಹಲಿಯಲ್ಲಿ ನಿಯೋಜಿಸಲಾಗುತ್ತಿದ್ದು, ಇದರೊಂದಿಗೆ ಕೇಂದ್ರ ಪಡೆಯ ಒಟ್ಟು ಸಂಖ್ಯೆ ಸರಿಸುಮಾರು 26,000 ಕ್ಕೆ ಏರಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ನಿಯೋಜನೆಗೆ ಅಕ್ಟೋಬರ್ 8 ರಿಂದ 12 ರವರೆಗೆ ಅನುಮೋದನೆ ನೀಡಲಾಗಿದೆ.
ಹೆಚ್ಚುವರಿ 110 ಸಿಎಪಿಎಫ್ ಕಂಪನಿಗಳಲ್ಲಿ 85 ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಂಪನಿಗಳು, 10 ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಕಂಪನಿಗಳು, ಏಳು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಕಂಪನಿಗಳು, ಏಳು ಱಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಕಂಪನಿಗಳು ಮತ್ತು ಒಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಂಪನಿ ಸೇರಿವೆ. ಪ್ರತಿಭಟನೆಗೆ ಬರುವವರಲ್ಲಿ ಗಣನೀಯ ಸಂಖ್ಯೆಯು ಮಹಿಳೆಯರಾಗಿರುವುದರಿಂದ, ಕನಿಷ್ಠ ಐದು ಕಂಪನಿಗಳು ಕೇವಲ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿರಲಿವೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಬರುವ ಮಾರ್ಗಗಳ ಮೇಲೆ ಪೊಲೀಸರು ತೀವ್ರ ನಿಗಾ ಇಡಲಿದ್ದು, ದೆಹಲಿ ಪ್ರವೇಶ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲು ಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಮುಖ ಗುರುತಿಸುವಿಕೆ ವ್ಯವಸ್ಥೆಗಳನ್ನು ಬಳಸಲಾಗುವುದು, ಹೊಸ ದೆಹಲಿ ಜಿಲ್ಲೆಯತ್ತ ಸಾಗುವ ಬಸ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುವುದು, ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳು ಕಣ್ಗಾವಲಿನಲ್ಲಿ ಇರಲಿವೆ. ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಪರಿಸ್ಥಿತಿಗೆ ತಕ್ಕಂತೆ ಪೊಲೀಸರು ಹೊಸ ದೆಹಲಿ ಪ್ರದೇಶದ ಮೆಟ್ರೋ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ನಿಯಂತ್ರಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿ ಸ್ಥಳದಿಂದ ತೆರಳಲು ನಿರಾಕರಿಸಿದಲ್ಲಿ ತಾತ್ಕಾಲಿಕ ಬಂಧನ ಕೇಂದ್ರಗಳ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಗಿದೆ.
ಅಕ್ಟೋಬರ್ 2 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ ಹೊರತಾಗಿಯೂ ಸಾವಿರಾರು ಜನರು ಸೇರಿದ್ದ ಸಿಜೆಪಿ ಪ್ರತಿಭಟನೆಯ ನಂತರ ದೆಹಲಿ ಹೋರಾಟಕ್ಕೆ ಕರೆ ನೀಡಲಾಗಿದೆ. ಕೆಲವು ವರದಿಗಳ ಪ್ರಕಾರ ಅಲ್ಲಿ 10,000 ಕ್ಕೂ ಹೆಚ್ಚು ಜನರು ಸೇರಿದ್ದರು. ಎಸ್‌ಐಆರ್ ಆರೋಪಗಳ ಕುರಿತು ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳಿಂದ ವ್ಯಾಪಕ ಬೇಡಿಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಪ್ರತಿಭಟನೆಯೂ ನಡೆಯುತ್ತಿದೆ.


