Homeಮುಖಪುಟಕಾಂಗ್ರೆಸ್‌ನಲ್ಲಿ ಮೇಜರ್‌ ಸರ್ಜರಿ: ಯುಪಿ ಉಸ್ತುವಾರಿಯಿಂದ ಪ್ರಿಯಾಂಕ ಬಿಡುಗಡೆ, ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ

ಕಾಂಗ್ರೆಸ್‌ನಲ್ಲಿ ಮೇಜರ್‌ ಸರ್ಜರಿ: ಯುಪಿ ಉಸ್ತುವಾರಿಯಿಂದ ಪ್ರಿಯಾಂಕ ಬಿಡುಗಡೆ, ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಮೇಜರ್‌ ಸರ್ಜರಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಪ್ರಧಾನ ಕಾರ್ಯದರ್ಶಿಗಳನ್ನು ಮತ್ತು ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಉತ್ತರ ಪ್ರದೇಶದ ಉಸ್ತುವಾರಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಛತ್ತೀಸ್‌ಗಢದ ಉಸ್ತುವಾರಿಯಾಗಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್‌ ಪೈಲಟ್‌ ಅವರನ್ನು ನೇಮಕ ಮಾಡಲಾಗಿದೆ. 12 ಪ್ರಧಾನ ಕಾರ್ಯದರ್ಶಿಗಳ ಜೊತೆಗೆ 11 ರಾಜ್ಯ ಉಸ್ತುವಾರಿಗಳನ್ನೂ ಪಕ್ಷ ನೇಮಿಸಿದೆ.

ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ನೇತೃತ್ವದ ಪ್ರಣಾಳಿಕೆ ಸಮಿತಿಯನ್ನು ಪಕ್ಷವು ನೇಮಿಸಿದ ಒಂದು ದಿನದ ನಂತರ ಈ ನೇಮಕಾತಿಗಳು ನಡೆದಿವೆ. ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಪಕ್ಷದ ಹಲವಾರು ಮುಖಂಡರು ಸಾರ್ವತ್ರಿಕ ಚುನಾವಣೆಗೆ ತಯಾರಿ ಆರಂಭಿಸುವಂತೆ ಕರೆ ನೀಡಿದ್ದರು.

ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಆದರೆ ಅವರನ್ನು ಉತ್ತರಪ್ರದೇಶ ಕಾಂಗ್ರೆಸ್‌ ಉಸ್ತುವಾರಿಯಿಂದ ಬಿಡುಗಡೆಗೊಳಿಸಲಾಗಿದೆ. ಅವರಿಗೆ ಚುನಾವಣೆಯಲ್ಲಿ ದೊಡ್ಡ ಜವಾಬ್ಧಾರಿ ನೀಡಬಹುದು ಎಂದು ಹೇಳಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್‌ ಪೈಲಟ್‌ ಅವರನ್ನು ನೇಮಕ ಮಾಡಲಾಗಿದೆ. ರಾಜಸ್ಥಾನದಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್ ಹೊಸ ಮುಖವನ್ನು ಹುಡುಕಾಟ ನಡೆಸುತ್ತದೆ ಎಂಬುವುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ.

ಪ್ರಿಯಾಂಕಾ ಗಾಂಧಿ ಬದಲಿಗೆ ಜಾರ್ಖಂಡ್ ಉಸ್ತುವಾರಿಯಾಗಿದ್ದ ಅವಿನಾಶ್ ಪಾಂಡೆ ಅವರನ್ನು ಉತ್ತರಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನೇಮಿಸಲಾಗಿದೆ. ಕಳೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಸಬಲೀಕರಣವನ್ನು ಮುಖ್ಯ ವಿಚಾರವಾಗಿ ಪ್ರಚಾರವನ್ನು ನಡೆಸಿದರೂ ಯಶಸ್ಸು ಕಾಣದ ಪ್ರಿಯಾಂಕ ಗಾಂಧಿ ಬಳಿಕ ಉತ್ತರಪ್ರದೇಶದಲ್ಲಿ ಉಸ್ತುವಾರಿಯಾಗಿ ಮುಂದುವರಿಯಲು ಉತ್ಸುಕತೆ ತೋರಲಿಲ್ಲ ಎನ್ನಲಾಗಿದೆ.

ಈ ಹಿಂದೆ ಹಲವು ರಾಜ್ಯಗಳ ಉಸ್ತುವಾರಿ ವಹಿಸಿದ್ದ ಮುಕುಲ್ ವಾಸ್ನಿಕ್ ಅವರನ್ನು ಗುಜರಾತ್ ಕಾಂಗ್ರೆಸ್‌ನ ಉಸ್ತುವಾರಿಯಾಗಿ, ಕುಮಾರಿ ಸೆಲ್ಜಾ ಅವರನ್ನು ಛತ್ತೀಸ್‌ಗಢದಿಂದ ಉತ್ತರಾಖಂಡಕ್ಕೆ, ದೇವೇಂದ್ರ ಯಾದವ್ ಉತ್ತರಾಖಂಡದಿಂದ ಪಂಜಾಬ್‌ಗೆ, ಮಾಣಿಕಂ ಟ್ಯಾಗೋರ್ ಗೋವಾದಿಂದ ಆಂಧ್ರಪ್ರದೇಶಕ್ಕೆ ಮತ್ತು ಮೋಹನ್ ಪ್ರಕಾಶ್‌ ಅವರನ್ನು ಬಿಹಾರ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳಾಗಿ ಹೊಸದಾಗಿ ಸೇರ್ಪಡೆಗೊಂಡವರು:

ಸಚಿನ್ ಪೈಲಟ್ ಹೊರತಾಗಿ ಪ್ರಧಾನ ಕಾರ್ಯದರ್ಶಿಗಳಾಗಿ ಹೊಸದಾಗಿ ಸೇರ್ಪಡೆಗೊಂಡವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ಅಹ್ಮದ್ ಮಿರ್ ಅವರು ಪಶ್ಚಿಮ ಬಂಗಾಳದ ಹೆಚ್ಚುವರಿ ಉಸ್ತುವಾರಿಯೊಂದಿಗೆ ಜಾರ್ಖಂಡ್‌ನ ಉಸ್ತುವಾರಿ ಕೂಡ ವಹಿಸಿದ್ದಾರೆ. ದೀಪಾ ದಾಸ್ಮುನ್ಸಿ ಅವರನ್ನು ಕೇರಳ, ಲಕ್ಷದ್ವೀಪ್ ಮತ್ತು ಹೆಚ್ಚುವರಿಯಾಗಿ ತೆಲಂಗಾಣದ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರನ್ನು ಕರ್ನಾಟಕದ ಉಸ್ತುವಾರಿಯಾಗಿ ಮುಂದುವರಿಸಲಾಗಿದ್ದು, ದೀಪಕ್ ಬಬಾರಿಯಾ ಹರಿಯಾಣದ ಹೆಚ್ಚುವರಿ ಉಸ್ತುವಾರಿಯೊಂದಿಗೆ ದೆಹಲಿಯ ಉಸ್ತುವಾರಿಯನ್ನು  ವಹಿಸಲಿದ್ದಾರೆ. ಜೈರಾಮ್ ರಮೇಶ್ ಎಐಸಿಸಿ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಕೆಸಿ ವೇಣುಗೋಪಾಲ್ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ಧಾರಿಯಲ್ಲಿ ಮುಂದುವರಿಯಲಿದ್ದಾರೆ. ಅಸ್ಸಾಂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿತೇಂದ್ರ ಸಿಂಗ್ ಅವರಿಗೆ ಮಧ್ಯಪ್ರದೇಶ ಕಾಂಗ್ರೆಸ್‌ನ ಹೆಚ್ಚುವರಿ ಉಸ್ತುವಾರಿಯನ್ನು ನೀಡಲಾಗಿದೆ.

ಅಚ್ಚರಿ ಎಂದರೆ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಮಹಾರಾಷ್ಟ್ರದ ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಿಸಲಾಗಿದೆ. ಆದರೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿಲ್ಲ. ಒಡಿಶಾ ಉಸ್ತುವಾರಿ ವಹಿಸಿದ್ದ ಲೋಕಸಭಾ ಸಂಸದ ಚೆಲ್ಲಕುಮಾರ್ ಅವರನ್ನು ಮೇಘಾಲಯ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಉಸ್ತುವಾರಿ ವಹಿಸಿದ್ದ ಅಜೋಯ್ ಕುಮಾರ್ ಅವರನ್ನು ತಮಿಳುನಾಡು ಮತ್ತು ಪುದುಚೇರಿಯ ಹೆಚ್ಚುವರಿ ಉಸ್ತುವಾರಿಯೊಂದಿಗೆ ಒಡಿಶಾದ ಉಸ್ತುವಾರಿ ನಾಯಕರನ್ನಾಗಿ ನೇಮಿಸಲಾಗಿದೆ. ರಜನಿ ಪಾಟೀಲ್ ಬದಲಿಗೆ ಗುಜರಾತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಅವರಿಗೆ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ನೀಡಲಾಗಿದೆ. ಸುಖಜಿಂದರ್ ಸಿಂಗ್ ರಾಂಧವಾ ಅವರು ರಾಜಸ್ಥಾನ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೆಲಂಗಾಣದ ಉಸ್ತುವಾರಿ ಹೊತ್ತಿದ್ದ ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ಮಾಣಿಕ್ರಾವ್ ಠಾಕ್ರೆ ಅವರನ್ನು ಗೋವಾ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಗೆ ವರ್ಗಾಯಿಸಲಾಗಿದೆ. ಗೋವಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರನ್ನು ತ್ರಿಪುರಾ, ಸಿಕ್ಕಿಂ, ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಇದನ್ನು ಓದಿ: ಕೇರಳ: ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನೆ ವೇಳೆ ಉದ್ವಿಗ್ನ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...