2 ಲ್ಯಾಪ್‌ಟಾಪ್‌ ಒಯ್ದಿದಿದ್ದಕ್ಕಾಗಿ ತಮಿಳುನಾಡು ಸಚಿವರನ್ನು ತಡೆದ ಚಿನ್ನೈ ಏರ್‌ಪೋರ್ಟ್‌‌ ಅಧಿಕಾರಿ!

ಚೆನ್ನೈ ವಿಮಾನ ನಿಲ್ದಾಣವು ಗುರುವಾರ ಮುಂಜಾನೆ 5.50 ರ ಸುಮಾರಿಗೆ, ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಎರಡು ಲ್ಯಾಪ್‌ಟಾಪ್‌ ಕೊಂಡೊಯ್ದಿದಿದ್ದಕ್ಕಾಗಿ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರನ್ನು ವಿಮಾನ ನಿಲ್ದಾಣದ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ತಡೆದಿದ್ದಾರೆ. ಅವರು ತೂತುಕುಡಿಗೆ ಪ್ರಯಾಣಿಸಲು ತಮ್ಮ ಬ್ಯಾಗ್‌ ಅನ್ನು ಸ್ಕಾನಿಂಗ್ ಮಾಡುವಾಗ ಈ ಘಟನೆ ನಡೆದಿದೆ.

ಪ್ರಯಾಣಿಕರು ಎರಡು ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಅಧಿಕಾರಿ ಸಚಿವರನ್ನು ತಡೆದಿದ್ದರು. ಆದರೆ ಅಂತಹ ಯಾವುದೇ ನಿಯಮ ಇಲ್ಲ ಎಂದು ಸಚಿವರು ಅವರಿಗೆ ಉತ್ತರಿಸಿದ್ದರು. ಇದರ ನಂತರ ಪಳನಿವೇಳ್ ಅವರ ಬಗ್ಗೆ ತಿಳಿದು, ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಿಎಸ್‌ಟಿ ಬಗ್ಗೆ ರಾಜ್ಯಗಳ ಭಯ ನಿಜವಾಗಿದೆ: ತಮಿಳುನಾಡು ಹಣಕಾಸು ಸಚಿವ

“ಇದು ತಪ್ಪು ಸಂವಹನದಿಂದಾಗಿ ನಡೆದ ಘಟನೆ. ಸಿಐಎಸ್‌ಎಫ್‌ ಸಬ್ ಇನ್ಸ್‌ಪೆಕ್ಟರ್ ಮಂತ್ರಿಯ ಬಳಿ ಎರಡು ಲ್ಯಾಪ್‌ಟಾಪ್ ಇರುವುದು ತಿಳಿದಿರಲಿಲ್ಲ. ಲ್ಯಾಪ್‌ಟಾಪ್‌ ಅನ್ನು ಸ್ಕಾನಿಂಗ್‌ಗಾಗಿ ಟ್ರೇನಲ್ಲಿ ಇಡುವಂತೆ ಕೇಳಿದ್ದಾರೆ, ಅದನ್ನು ಸಚಿವರು ತಪ್ಪಾಗಿ ಗ್ರಹಿಸಿದ್ದಾರೆ. ಸಿಐಎಸ್‌ಎಫ್ ಅಧಿಕಾರಿ ಉತ್ತರ ಭಾರತದವರಾದ್ದರಿಂದ, ಅವರ ತಮಿಳು ಸ್ಪಷ್ಟವಾಗಿಲ್ಲದಿರಬಹುದು” ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾವು ದೃಶ್ಯಾವಳಿಗಳನ್ನು ನೋಡಿದ್ದೇವೆ. ಭದ್ರತಾ ತಪಾಸಣೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳು ತಕ್ಷಣ ಅಲ್ಲಿಗೆ ಹೋಗಿ ಸಚಿವರಲ್ಲಿ ಕ್ಷಮೆ ಕೇಳಿದರು. ಸಿಐಎಸ್‌ಎಫ್ ಅಧಿಕಾರಿ ಕೂಡ ಕ್ಷಮೆಯಾಚಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

2020 ರ ಆಗಸ್ಟ್ ತಿಂಗಳಿನಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಅವರು ಕೂಡಾ ಚಿನ್ನೈ ವಿಮಾನ ನಿಲ್ದಾಣದಲ್ಲಿ ತಮಗೆ ಆಗಿರುವ ಸಮಸ್ಯೆಯನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದ್ದರು. ಸಿಐಎಸ್‌ಎಫ್ ಅಧಿಕಾರಿಯೊಬ್ಬರೊಂದಿಗೆ ಹಿಂದಿಯ ಬದಲು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲು ಕೇಳಿಕೊಂಡಾಗ, ಅವರು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದ್ದರು ಅವರು ಆರೋಪಿಸಿದ್ದರು.

ಇದನ್ನೂ ಓದಿ: NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

LEAVE A REPLY

Please enter your comment!
Please enter your name here