Homeಅಂತರಾಷ್ಟ್ರೀಯಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

- Advertisement -
- Advertisement -

2023ರ ಜೂನ್ 8ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದೋಷಾರೋಪಣೆ ಮಾಡಲಾಯಿತು. ಮಿಲಿಟರಿ ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಕ್ಕಾಗಿ, ಅವುಗಳ ದುರ್ಬಳಕೆಗಾಗಿ ಫ್ಲೋರಿಡಾದಲ್ಲಿರುವ ಗ್ರ್ಯಾಂಡ್ ಜ್ಯೂರಿಯು ದೋಷಾರೋಪಣೆ ಮಾಡಿದೆ; ಹಾಗಾಗಿ ಟ್ರಂಪ್ ಅವರು ಫೆಡರಲ್ ಕ್ರಿಮಿನಲ್ ಆರೋಪಗಳನ್ನು ಎದುರಿಸುವ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ. 2023ರ ಜೂನ್ 13ರಂದು ಟ್ರಂಪ್ ಜ್ಯೂರಿ ಎದುರಿಗೆ ಹಾಜರಾಗುವ ನಿರೀಕ್ಷೆಯಿದೆ.

ಟ್ರಂಪ್‌ಅನ್ನು 37 ಅರೋಪಗಳಲ್ಲಿ ದೂಷಿಸಲಾಗಿದೆ, ಅದರಲ್ಲಿ 31 ಆರೋಪಗಳು ರಾಷ್ಟ್ರೀಯ ಭದ್ರತೆಯ ಮಾಹಿತಿಯನ್ನು ತಡೆಹಿಡಿದಿರುವುದಕ್ಕೆ ಸಂಬಂಧಿಸಿದ್ದು; 5 ಆರೋಪಗಳು ಗೌಪ್ಯ ದಾಖಲೆಗಳನ್ನು ಅಕ್ರಮವಾಗಿ ಹೊಂದಿರುವುದಕ್ಕೆ ಸಂಬಂಧಿಸಿವೆ ಹಾಗೂ 1 ಆರೋಪ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್‌ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕೆ ಸಂಬಂಧಿಸಿದೆ. ಅಮೆರಿಕದ ಮತ್ತು ಮಿತ್ರ ರಾಷ್ಟ್ರಗಳಿಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ಹಿಡಿದಿಟ್ಟುಕೊಂಡ ಹಾಗೂ ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ. ಇಲ್ಲಿಯತನಕ 300 ಗೌಪ್ಯ ದಾಖಲೆಗಳನ್ನು ಒಳಗೊಂಡ ಒಟ್ಟು 1300 ದಾಖಲೆಗಳನ್ನು ಎಫ್‌ಬಿಐ ಪಡೆದುಕೊಂಡಿದೆ.

ವಾಲ್ಟ್ ನೌಟಾ

ಇರಾನ್ ಬಗ್ಗೆ ರಹಸ್ಯ ಮಿಲಿಟರಿ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡಿದ್ದಾಗಿ ಟ್ರಂಪ್ 2021ರಲ್ಲಿ ನಡೆದ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಸಹಚರ ವಾಲ್ಟ್ ನೌಟಾನನ್ನು ಸಹಸಂಚುಗಾರ ಎಂದು ಹೆಸರಿಸಲಾಗಿದೆ. ನೌಟಾ ಮೇಲೆ 6 ಆರೋಪಗಳಿವೆ, ಅದರಲ್ಲಿ ದಾಖಲೆಗಳನ್ನು ತಡೆಹಿಡಿದ ಮತ್ತು ಮರೆಮಾಚಿದ 5 ಆರೋಪಗಳು ಮತ್ತು ಸುಳ್ಳು ಹೇಳಿಕೆ ನೀಡಿದ 1 ಆರೋಪವಿದೆ. ಅಮೆರಿಕದ ಮತ್ತು ಇತರ ದೇಶಗಳ ಶಸ್ತ್ರಾಸ್ತ್ರಗಳು, ನ್ಯೂಕ್ಲಿಯರ್ ಯೋಜನೆಗಳು ಮತ್ತು ಮಿಲಿಟರಿ ದಾಳಿಯ ಸಂಭಾವ್ಯ ದುರ್ಬಲ ಪರಿಸ್ಥಿತಿಗಳ ಬಗ್ಗೆ ಮಾಹಿತಿಗಳನ್ನು ಈ ದಾಖಲೆಗಳು ಒಳಗೊಂಡಿವೆ ಎನ್ನಲಾಗಿದೆ. ಆ ದಾಖಲೆಗಳುಳ್ಳ ಬಾಠಿಗಳು ಟ್ರಂಪ್ ಮನೆಯಲ್ಲಿಯೂ ಸಿಕ್ಕಿದ್ದವು.

ಕಾನೂನಿನ ಪ್ರಕಾರ, ತನ್ನ ಅಧ್ಯಕ್ಷೀಯ ಅವಧಿ ಮುಗಿದಕೂಡಲೇ ಟ್ರಂಪ್ ಈ ಎಲ್ಲ ದಾಖಲೆಗಳನ್ನು ಹಿಂತಿರುಗಿಸಬೇಕಿತ್ತು, ಹಾಗಾಗಿ ಈ ದಾಖಲೆಗಳನ್ನು ತನ್ನ ಬಳಿ ಇಟ್ಟುಕೊಳ್ಳುವುದೂ ಒಂದು ಅಪರಾಧವಾಗಿದೆ. ಈ ದಾಖಲೆಗಳು ಕಾಣೆಯಾಗಿವೆ ಎಂದು ತಿಳಿದಕೂಡಲೇ, ಟ್ರಂಪ್ ಈ ದಾಖಲೆಗಳನ್ನು ಮರಳಿಸುವಂತೆ ಮಾಡಲು ನ್ಯಾಷನಲ್ ಆರ್ಕೈವ್ಸ್ & ರೆಕಾರ್ಡ್ ಅಡ್ಮಿನಿಸ್ಟ್ರೇಷನ್ ವಿಭಾಗವು ಮೇ 2021ರಿಂದಲೇ ಹಲವಾರು ಪ್ರಯತ್ನಗಳನ್ನು ಮಾಡಿದೆ. ಈ ದಾಖಲೆಗಳನ್ನು ಟ್ರಂಪ್ ವೈಯಕ್ತಿಕವಾಗಿ ಕೊಂಡೊಯ್ದಿದ್ದಾರೆ ಹಾಗೂ ತನಿಖೆ ನಡೆಯುತ್ತಿರುವಾಗ ಅವುಗಳನ್ನು ಪತ್ತೆಹಚ್ಚುವುದನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಅವುಗಳನ್ನು ಸಾಗಿಸಿದ್ದಾರೆ ಎಂದು ಎಫ್‌ಬಿಐ ತನಿಖೆಯಲ್ಲಿ ಕಂಡುಕೊಂಡಿದೆ.

ಈ ದಾಖಲೆಗಳನ್ನು ಟ್ರಂಪ್‌ನ ಸುರಕ್ಷಿತವಲ್ಲದ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ಇರಿಸಲಾಗಿತ್ತು. ದಾಖಲೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯ ಹಲವಾರು ಸುತ್ತಿನಲ್ಲಿ ಟ್ರಂಪ್ ಈಗಾಗಲೇ ಭಾಗವಹಿಸಿದ್ದಾರೆ, ಹಾಗಾಗಿ ಕೋರ್ಟ್ ಮೂಲಕ ಕೊಡಲಾಗಿದ್ದ ಸರಕಾರದ ಆದೇಶಗಳ ಹೊರತಾಗಿಯೂ, ಎಲ್ಲಾ ವಿಷಯ ಗೊತ್ತಿದ್ದರೂ, ಮಿಲಿಟರಿಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ಇರಿಸಿಕೊಂಡಿದ್ದ ಟ್ರಂಪ್ ಅವನ್ನು ಬೇಕಂತಲೇ ವಿನಿಮಯ ಮಾಡಲಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ದಾಖಲೆಗಳಿಗೆ ಸಂಬಂಧಿಸಿದಂತೆ ಟ್ರಂಪ್ ಉದ್ದೇಶಗಳು ಏನಾಗಿದ್ದವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಸ್ಟಾರ್ಮಿ ಡೇನಿಯಲ್

ತಮ್ಮ ಮತ್ತು ವಯಸ್ಕರ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ ಜೊತೆಗೆ ಇದ್ದ ಸಂಬಂಧದ ಬಗ್ಗೆ ಮೌನವಾಗಿರಲು, ಆ ನಟಿಗೆ ದುಡ್ಡು ನೀಡಿದ್ದರು ಎಂಬ ಆರೋಪವಿದೆ; ಆ ದುಡ್ಡು ನೀಡಲು ಪ್ರಚಾರದ ಹಣವನ್ನು ದುರುಪಯೋಗ ಮಾಡಿದ ಆರೋಪದಲ್ಲಿ ಈಗಾಗಲೇ ಪ್ರಕರಣ ಎದುರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಟ್ರಂಪ್ ಎದುರಿಸುತ್ತಿರುವ ಪ್ರಕರಣದಲ್ಲಿ ಇದು ಎರಡನೆಯದಾಗಿದೆ.

ಟ್ರಂಪ್ ಮೇಲೆ ಗೂಢಚರ್ಯೆ ಮತ್ತು ಪಿತೂರಿಯ ಆರೋಪ ಹೊರಿಸಲಾಗಿದೆ. ಒಂದು ವೇಳೆ ಅವರು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಹಲವಾರು ದಶಕಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಟ್ರಂಪ್ ಹಿಂಜರಿಯುವಂತೆ ಕಾಣಿಸುತ್ತಿಲ್ಲ ಹಾಗೂ ಈ ಆರೋಪಗಳನ್ನು ಇಟ್ಟುಕೊಂಡು ರಾಜಕೀಯ ಪ್ರಹಸನ ಸೃಷ್ಟಿಸುವಂತೆ ಕಾಣಿಸುತ್ತಿದೆ. ಇವರ ವಿರುದ್ಧದ ಪ್ರಕರಣಗಳು ದೀರ್ಘಕಾಲ ನಡೆಯಲಿವೆ ಹಾಗೂ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷ ಅಧ್ಯಕ್ಷೀಯ ಪದಕ್ಕಾಗಿ ಸ್ಪರ್ಧಿಸಲಿದ್ದಾರೆ ಹಾಗಾಗಿ ಚುನಾವಣೆ ಪ್ರಚಾರ ಮತ್ತು ವಿಚಾರಣೆಗಳು ಜೊತೆಜೊತೆಗೇ ನಡೆಯಲಿವೆ. ಈ ವಿಚಾರಣೆಗಳು ಟ್ರಂಪ್‌ಅನ್ನು ಘಾಸಿಗೊಳಿಸುವ ಬದಲಿಗೆ, ಟ್ರಂಪ್ ಅವುಗಳನ್ನು ತನ್ನ ಲಾಭಕ್ಕನುಗುಣವಾಗಿ ಬಳಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಟರ್ಕಿ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರೀಕರಣದ ಕರಿನೆರಳು

ತನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಟ್ರಂಪ್ ಅತ್ಯಂತ ದಾರ್ಷ್ಟ್ಯವಾಗಿ ವರ್ತಿಸುತ್ತಿದ್ದಾರೆ. ಅವರ ಇತ್ತೀಚಿನ ಭಾಷಣದಲ್ಲಿ, ತನ್ನ ಪ್ರತಿಪಕ್ಷ ನಿಯಂತ್ರಿಸುವ ಪ್ರದೇಶಗಳಲ್ಲಿ ಸಂಚರಿಸಿದಾಗಲೆಲ್ಲ ತನ್ನ ಮೇಲೆ ಹೊಸದೊಂದು ಪ್ರಕರಣ ಜಡಿಯಲಾಗುತ್ತಿದೆ ಎಂದು ಹೇಳಿದ್ದಾರೆ. ತಾನು ಪ್ರತಿಪಕ್ಷಗಳ ಕಿರುಕುಳಕ್ಕೆ ಬಲಿಪಶು ಎಂದೂ ಹಾಗೂ ತನ್ನ ರಾಜಕೀಯ ವೈರಿಗಳು ತನ್ನ ಹಿಂದೆ ಬಿದ್ದಿದ್ದಾರೆ ಎಂದೂ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಹೊರಬರುತ್ತಿವೆ ಹಾಗೂ ಈ ಪ್ರಕರಣ ಆಳ ಅಗಲದ ಬಗ್ಗೆ ಸ್ಪಷ್ಟತೆ ಇಲ್ಲ. ಅದೇ ಸಮಯದಲ್ಲಿ, ಟ್ರಂಪ್ ತನ್ನ ಭಾಷಣಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಾನು ನಿರಪರಾಧಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಈ ದೋಷಾರೋಪಣೆಯನ್ನು ತನ್ನ ಪ್ರಚಾರದ ಭಾಗವಾಗಿಸಿಕೊಳ್ಳಲಿದ್ದಾರೆ. ಈ ಎಲ್ಲ ಆರೋಪಗಳ ಹೊರತಾಗಿಯೇ ಅವರ ಬೆಂಬಲಿಗರು ಟ್ರಂಪ್ ಬೆನ್ನಿಗೆ ನಿಲ್ಲುವುದನ್ನು ಮುಂದುವರಿಸಿದ್ದಾರೆ.

ರಿಪಬ್ಲಿಕನ್ ಪಾರ್ಟಿಯ ಒಳಗೂ, ’ತನಗೆ ಕಿರುಕುಳ ನೀಡಲಾಗುತ್ತಿದೆ’ ಎಂಬ ಟ್ರಂಪ್‌ನ ಹೇಳಿಕೆಯನ್ನು ಅವರ ಮಿತ್ರರು ಪುನರುಚ್ಚರಿಸುತ್ತಿದ್ದಾರೆ. ರಿಪಬ್ಲಿಕನ್ ಪಾರ್ಟಿಯಲ್ಲಿ ಟ್ರಂಪ್‌ನ ಪ್ರಮುಖ ಎದುರಾಳಿಯಾದ ರಾನ್ ಡೆಸಾಂಟಿಸ್ ಅವರು, ಜಸ್ಟೀಸ್ ಡೆಪಾರ್ಟ್‌ಮೆಂಟ್‌ನ್ನು ಟ್ರಂಪ್ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ ಎಂದು ಬಿಡೆನ್ ಸರಕಾರದ ಮೇಲೆ ಆರೋಪ ಮಾಡಿದ್ದಾರೆ. ಟ್ರಂಪ್‌ಗೆ ತನ್ನ ಅಧ್ಯಕ್ಷೀಯ ಪ್ರಚಾರದಲ್ಲಿ ಸಹಾಯ ಮಾಡುವ ಅನೇಕ ಪ್ರಭಾವಿ ಸ್ನೇಹಿತರಿದ್ದಾರೆ. ಒಂದು ವೇಳೆ ಟ್ರಂಪ್ ಅದ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ಈ ಪ್ರಕರಣಗಳನ್ನು ಮುನ್ನಡೆಸುವಲ್ಲಿ ಯಾವ ರೀತಿಯ ರಾಜಕೀಯ ತೊಡಕುಗಳು ಎದುರಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ರಿಪಬ್ಲಿಕ್ ಪಾರ್ಟಿಯೊಳಗೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಮುಂಚೂಣಿಯಲ್ಲಿದ್ದಾರೆ, ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ವಿರುದ್ಧ ಅಧ್ಯಕ್ಷ ಪದಕ್ಕಾಗಿ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳು ಇವೆ. ಟ್ರಂಪ್ ವಿರುದ್ಧದ ದೋಷಾರೋಪಣೆಯ ಬಗ್ಗೆ ಅಧ್ಯಕ್ಷ ಬೈಡೆನ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ರಾನ್ ಡೆಸಾಂಟಿಸ್

ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಆಯಾ ರಾಜಕೀಯ ಪಕ್ಷದ ಸದಸ್ಯರು ಮತ ಚಲಾಯಿಸುವ ಮೂಲಕ ಆಂತರಿಕ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಸಮೀಕ್ಷೆಗಳು ಹೇಳುವುದೇನೆಂದರೆ, ಒಂದು ವೇಳೆ ಇಂದೇ ಆ ಆಂತರಿಕ ಚುನಾವಣೆಯನ್ನು ನಡೆಸಿದಲ್ಲಿ, ರಿಪಬ್ಲಿಕನ್ ಪಾರ್ಟಿಯಲ್ಲಿ ಇತರ ಯಾವುದೇ ಅಭ್ಯರ್ಥಿಗಿಂತ ಟ್ರಂಪ್ ಹೆಚ್ಚು ಮತಗಳನ್ನು ಪಡೆಯುತ್ತಾರೆ ಎಂದು. ಅಧ್ಯಕ್ಷೀಯ ಚುನಾವಣೆಗಳಲ್ಲಿ ಯಾರು ಗೆಲ್ಲುವುರು ಎಂಬುದರ ಬಗ್ಗೆ ಸಮೀಕ್ಷೆಗಳು ಸ್ಪಷ್ಟ ಇತ್ತರ ನೀಡಿಲ್ಲ. ಅವರ ವಿರುದ್ಧ ಕ್ರಿಮಿನಲ್ ಆರೋಪ ಮತ್ತು ಭ್ರಷ್ಟಾಚಾರಗಳ ಆರೋಪಗಳ ಹೊರತಾಗಿಯೂ ಟ್ರಂಪ್‌ಗೆ ಅಮೆರಿಕದಲ್ಲಿ ದೊಡ್ಡ ನೆಲೆಯಿದೆ, ಅನೇಕರ ಬೆಂಬಲವಿದೆ. ಹವಾರು ರೀತಿಯಲ್ಲಿ, ಈ ಪ್ರಕರಣಗಳು ಅವರಿಗೇ ಸಹಾಯ ಮಾಡುತ್ತಿವೆ. ಅವರ ಅನೇಕ ಬೆಂಬಲಿಗರು ಹೇಳಿದ್ದೇನೆಂದರೆ, ಅವರ ವಿರುದ್ಧ ಹೊರೆಸಿದ ಆರೋಪಗಳಿಗಿಂತ ಅದರ ಹಿಂದಿರುವ ರಾಜಕೀಯ ಪ್ರೇರಣೆಯ ಬಗ್ಗೆ ಅವರು ಚಿಂತಿತರಾಗಿದ್ದಾರೆಂದು.

ಅಧಿಕಾರ ಮತ್ತು ಕಾನೂನಿನ ನಿಯಮ

ಒಂದು ರಾಷ್ಟ್ರದ ಮಾಜಿ ಮುಖ್ಯಸ್ಥರಾಗಿ, ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ತಮ್ಮ ದೇಶದ ಭದ್ರತೆಯನ್ನು ಅಪಾಯಕ್ಕೀಡಾಗಿಸಿದ ಆರೋಪ ಎದುರಿಸುತ್ತಿರುವ ವಿಶ್ವದ ನಾಯಕರ ಪಟ್ಟಿಯಲ್ಲಿ ಟ್ರಂಪ್ ಸೇರುತ್ತಿದ್ದಾರೆ, ಈ ಪಟ್ಟಿ ದೀರ್ಘವಾಗುತ್ತಲೇ ಇದೆ. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಸಂಸತ್ತಿಗೆ ಸುಳ್ಳು ಹೇಳಿದ ಹಲವಾರು ಹಗರಣಗಳು ಹೊರಬಂದಾಗ ಕಳೆದ ವರ್ಷ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರು. ಬ್ರೆಜಿಲ್‌ನಲ್ಲಿ ಬೊಲ್ಸನಾರೊ ಕೂಡ ತಾವು ಮಾಡಿದ ಭಾಷಣಗಳಿಗಾಗಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಅವುಗಳಲ್ಲಿ ಅವರು ಚುನಾವಣೆಗಳನ್ನು ತಮ್ಮ ವಿರುದ್ಧ ರಿಗ್ಗಿಂಗ್ ಮಾಡಲಾಗಿದೆ, ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮಾಡಿದ್ದ ಚುನಾವಣಾ ಭಾಷಣಗಳೂ ಸೇರಿವೆ; ಅವರು ಭಾಷಣಗಳು ಅತ್ಯಂತ ಪ್ರಚೋದನಾಕಾರಿಯಾಗಿದ್ದವು ಮತ್ತು ಗಲಭೆಗಳಿಗೆ ಕಾರಣವಾಗುವಂತಿದ್ದವು. ಒಂದು ವೇಳೆ ಟ್ರಂಪ್ ತನ್ನ ಮೇಲಿರುವ ಆರೋಪಗಳನ್ನು ಬಳಸಿಕೊಂಡು ರಾಜಕೀಯವಾಗಿ ಗೆಲುವನ್ನು ಸಾಧಿಸಿದರೆ ಅದರಿಂದ ಜಾಗತಿಕ ಮಟ್ಟದಲ್ಲಿ ಯಾವ ಪರಿಣಾಮಗಳನ್ನು ಬೀರಬಹುದು? ಈಗಾಗಲೇ, ವಿಶ್ವದಾದ್ಯಂತ ಬಲಪಂಥೀಯ ರಾಜಕೀಯ ಮರುಜೀವ ಪಡೆದುಕೊಳ್ಳುತ್ತಿದೆ. ಭ್ರಷ್ಟಾಚಾರಗಳು ಮತ್ತು ರಾಷ್ಟ್ರೀಯ ಭದ್ರತೆಯ ಗಂಭೀರ ನಿರ್ಲಕ್ಷ್ಯಗಳ ಆರೋಪಗಳ ಹೊರತಾಗಿಯೂ ಬಲಪಂಥೀಯ ನಾಯಕರು ವಿಶ್ವದಲ್ಲಿ ಪ್ರಮುಖ ರಾಜಕೀಯ ನಾಯಕರಾಗಿ ಮುಂದುವರಿದಿದ್ದಾರೆ. ಈ ಪ್ರಕರಣಗಳು ಅವರಿಗೆ ನಷ್ಟ ಉಂಟುಮಾಡುವ ಬದಲಿಗೆ ಸಹಕಾರಿಯಾಗುತ್ತವೆ ಎಂದೆನಿಸುತ್ತಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...