ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ.. – ಡಿ.ಆರ್.ಪಾಟೀಲ

ಸಂದರ್ಶನ:| ಪಿ.ಕೆ ಮಲ್ಲನಗೌಡರ್ |

ಧಗಧಗ ಝಳದ ನಡುವೆ ಒಂದು ‘ತಣ್ಣನೆ’ ಸಂದರ್ಶನ
ಈ ಸಲ ಹಾವೇರಿ-ಗದಗು ಸೇರಿದಂತೆ ಈ ಕಡೆಯಲ್ಲಿ ಎಂದಿಗಿಂತ ಜಾಸ್ತಿ ಬಿಸಿಲು. ಚುನಾವಣೆಯ ಕಾಳಗದಲ್ಲೂ ಉರಿ ಉರಿ. ರಾತ್ರಿ ಹತ್ತೂವರೆ ಹೊತ್ತಿಗೆ ಬಯಲಿನಲ್ಲಿ ಈ ಸಂದರ್ಶನ ನಡೆದಾಗ ಝಳ ಝಳ. ಪತ್ರಿಕೆಯ ಪ್ರಶ್ನೆಗಳಿಗೆ ಅಭ್ಯರ್ಥಿ ಕೊಡುತ್ತಿದ್ದ ತಣ್ಣನೆಯ ಉತ್ತರಗಳಲ್ಲಿ ವ್ಯವಸ್ಥೆಯ ವಿರುದ್ಧದ ‘ಕಾವು’ ಕಾಣತೊಡಗಿತ್ತು… ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲರೊಂದಿಗಿನ ಸಂದರ್ಶನ ಇಲ್ಲಿದೆ…

ಪತ್ರಿಕೆ: ಈ ಚುನಾವಣೆ ಮಹತ್ತದ್ದು, ಭಿನ್ನವಾದುದು ಎಂದು ವಿವಿಧ ಪಾರ್ಟಿಗಳು ತಮ್ಮ ಧಾಟಿಯಲ್ಲಿ ಹೇಳ್ತಾ ಇವೆ. ವೈಯಕ್ತಿಕವಾಗಿ ಈ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಡಿ.ಆರ್.ಪಾಟೀಲ್: ಇಲ್ಲಿ ವೈಯಕ್ತಿಕ ಅಭಿಪ್ರಾಯವು ಸಾರ್ವಜನಿಕ ಅಭಿಪ್ರಾಯವೂ ಅಗಬಹುದಲ್ಲ? ನಮ್ಮ ಪಕ್ಷದ ಮಟ್ಟಿಗೆ ಇದು ಚಾಲೆಂಜಿಂಗ್ ಚುನಾವಣೆ. ನನಗಂತೂ ಈ ಚುನಾವಣೆ ಪ್ರಜಾಪ್ರಭುತ್ವದ ಮೌಲ್ಯಗಳ ಜೀವನ್ಮರಣದ ಪ್ರಶ್ನೆ ಅನಿಸ್ತಾ ಇದೆ. ಇನ್ನೊಮ್ಮೆ ಅಧಿಕಾರ ಸಿಕ್ಕರೆ ಅವರೆಲ್ಲ (ಬಿಜೆಪಿ) ಸಂವಿಧಾನವನ್ನೇ ಬದಲಿಸಬಹುದು. ಇದು ಆತಂಕದ ವಿಷಯ. ಆ ಕಾರಣಕ್ಕಾಗಿ ಬಿಜೆಪಿಗೆ ಅಧಿಕಾರ ಸಿಗಲೇಬಾರದು.

ಪತ್ರಿಕೆ: ಈಗ ಮೋದಿ ಮತ್ತೊಮ್ಮೆ ಎನ್ನುವ ಸದ್ದು ಜೋರಾಗಿದೆಯಲ್ಲ?
ಡಿ.ಆರ್.ಪಾಟೀಲ್: ಜೋರಾಗಿ ಇರುವುದು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ. ಕಾಂಗ್ರೆಸ್ ತಪ್ಪು ಮಾಡಿದಾಗೆಲ್ಲ ಜನ ಶಿಕ್ಷೆ ಕೊಟ್ಟಿದ್ದಾರೆ. ಆದರೆ ಆ ಕಾರಣಕ್ಕೆ ಬಂದ ಇತರ ಸರ್ಕಾರಗಳನ್ನು ಎಂದೂ ಮರು ಆಯ್ಕೆ ಮಾಡಿಯೇ ಇಲ್ಲ. ವಾಜಪೇಯಿ 13 ತಿಂಗಳ ನಂತರ ಮತ್ತೆ ಸರ್ಕಾರ ಮಾಡಿದ್ದನ್ನು ಬಿಟ್ಟರೆ, ಇಲ್ಲಿ ಯಾವ ಕಾಂಗ್ರೆಸ್ಸೇತರ ಸರ್ಕಾರ ಮರು ಆಯ್ಕೆ ಆಗಿಲ್ಲ. ಈ ಸಲವೂ ಅದೇ ಘಟಿಸಲಿದೆ.


ಪತ್ರಿಕೆ: ಸದ್ಯದ ಸರ್ಕಾರದ ಕುರಿತು ಹೇಳಿ.
ಡಿ.ಆರ್. ಪಾಟೀಲ್: ಮೋದಿ ಒಬ್ಬ ಜನದ್ರೋಹಿ ನಾಯಕ. ಇಂತಹ ಮನುಷ್ಯನಿಂದ ಒಳ್ಳೆ ಕೆಲಸ ಅಪೇಕ್ಷಿಸುವುದೇ ಮೂರ್ಖತನ. 2014ರಲ್ಲಿ ಈ ಮನುಷ್ಯ ಸಿಕ್ಕಾಪಟ್ಟೆ ಭರವಸೆ ಕೊಟ್ರು. ಒಂದಾದರೂ ಈಡೇರಿತಾ? ಕಪ್ಪುಹಣ ತರ್ತೀನಿ ಅಂದವ್ರು ಕಪ್ಪುಹಣ ಹೊಂದಿದವರ ಪೋಷಣೆ ಮಾಡಿದರು. 15 ಲಕ್ಷದ ಬಗ್ಗೆ ಮಾತಾಡೊಕ್ಕೆ ಅಸಹ್ಯ ಆಗುತ್ತೆ. ಮೋದಿ ಗೆಲುವಿಗೆ ಕಾರಣವಾಗಿದ್ದು ದೊಡ್ಡ ಯುವ ಸಮೂಹ. ಅವರಿಗೆ ಉದ್ಯೋಗ ಕೊಡುವುದಿರಲಿ, ನೋಟು ರದ್ಧತಿಯಂತಹ ಮೂರ್ಖ ಯೋಜನೆಯಿಂದ ಇದ್ದ ಉದ್ಯೋಗಗಳನ್ನು ನಾಶ ಮಾಡಿಬಿಟ್ಟರು. ನಮ್ಮ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಮೂರಾಬಟ್ಟೆ ಮಾಡಿದ್ದಾರೆ. ದೇಶದ ಗ್ರಾಮೀಣ ಭಾಗ ಅದರಲ್ಲೂ ಕೃಷಿ ಆಧಾರಿತ ವ್ಯವಸ್ಥೆ ಇವತ್ತು ತೀವ್ರ ಸಂಕಷ್ಟದಲ್ಲಿದೆ. ಅಂಬಾನಿ, ಅದಾನಿಗಳನ್ನು ಪಕ್ಕಕ್ಕೆ ಇಟ್ಟುಕೊಂಡು ಜಗತ್ತು ಸುತ್ತಿದರೆ ಇನ್ನೇನಾಗುತ್ತೇ?

ಪತ್ರಿಕೆ: ‘ನ್ಯಾಯ್’ ಯೋಜನೆ ಲೆಫ್ಟ್‍ನ ಪ್ರಭಾವದಿಂದ ಬಂದಿದ್ದು ಅನಿಸುತ್ತಿದೆ. 90ರ ದಶಕದ ಆರಂಭದಲ್ಲಿ ಜಾಗತೀಕರಣವನ್ನು ಇಂಟ್ರುಡ್ಯೂಸ್ ಮಾಡಿದ ಕಾಂಗ್ರೆಸ್‍ಗೆ ಈಗ ಎಚ್ಚರವಾಯಿತಾ?
ಡಿ.ಆರ್.ಪಾಟೀಲ್: ಒಂದು ಮಾತು ಹೇಳ್ತೇನೆ. ಇದು ಕಾಂಗ್ರೆಸ್‍ನ ನಿಲುವೂ ಹೌದು, ಅದಕ್ಕಿಂತ ಮುಖ್ಯವಾಗಿ ನನ್ನ ನಿಲುವಂತೂ ಹೌದೇ ಹೌದು. ನೀವು ಅದು ಲೆಫ್ಟ್ ಅಂತ ಪ್ರಸ್ತಾಪ ಮಾಡಿದರಲ್ಲ, ಆ ಎಡ ಚಿಂತನೆಗಳಲ್ಲಿ ಸದಾ ಸಮಷ್ಠಿ ಕಲ್ಯಾಣದ ಅಂಶಗಳು ಇವೆ. ಸಮಾಜವಾದಿ ಸಿದ್ದಾಂತಗಳೂ, ಗಾಂಧಿಯ ಸ್ವರಾಜ್ಯ ಕನಸೂ ನಮ್ಮ ಪಕ್ಷದೊಳಗೆ ಅಂತರ್ಗತವಾಗಿದೆ. ನೆಹರೂಗೆ ಸಮಾಜವಾದದ ಒಲವಿತ್ತು. ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದು, ಉಳುವವನೇ ಒಡೆಯ ಕಾಯ್ದೆ ಜಾರಿಗೆ ತಂದಿದ್ದು-ಇವೆಲ್ಲ ಲೆಫ್ಟ್ ಚಿಂತನೆ ಅನ್ನುವುದಾದರೆ ಅನ್ನಲಿ. ಎಲ್ಲ ಚಿಂತನೆಗಳಲ್ಲಿರುವ ಸಮಾಜಮುಖಿ ಆಶಯಗಳನ್ನು ಕಾಂಗ್ರೆಸ್ ಗೌರವಿಸುತ್ತದೆ.

ಹಾಂ, ನೀವು ಜಾಗತೀಕರಣದ ಬಗ್ಗೆಯೂ ಕೇಳಿದಿರಿ. ಅಲ್ಲಿ ಖಾಸಗೀಕರಣವೂ ಇದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಹೇಳುವೆ. ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಹುಟ್ಟು ಹಾಕಿದ್ದು, ಅವಕ್ಕೆ ಬಲ ತುಂಬಿದ್ದು ನಮ್ಮ ಪಕ್ಷವೇ. 90ರ ಆರಂಭದಲ್ಲಿ ಜಾಗತಿಕ ಅರ್ಥವ್ಯವಸ್ಥೆಯ ಜೊತೆ ಹೆಜ್ಜೆ ಹಾಕುವ ಆಶಯದಲ್ಲಿ ಜಾಗತೀಕರಣವನ್ನು ಬರ ಮಾಡಿಕೊಂಡೆವಷ್ಟೇ. ಅದರೆ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಹಿತಕ್ಕೆ ನಾವೆಂದೂ ಅನ್ಯಾಯ ಮಾಡಿಲ್ಲ. ನಮ್ಮ ಆದ್ಯತೆ ಎಚ್‍ಎಎಲ್, ಬಿಎಸ್‍ಎನ್‍ಎಲ್‍ಗೆ ಹೊರತು ರಿಲಾಯನ್ಸ್ ಡಿಫೆನ್ಸ್, ಜಿಯೋಗಳಿಗೆ ಅಲ್ಲ. ‘ನ್ಯಾಯ್’ ಎಂಬುದು ಇವತ್ತಿನ ತುರ್ತು ಅಗತ್ಯ. ಅದು ಬಡವರ, ಅದರಲ್ಲೂ ಹಳ್ಳಿಗಳ ಬಡವರ ಬದುಕಿಗೆ ಘನತೆ, ಗೌರವ ತರುವ ಕೆಲಸ. ಹಿಂದೆ ನಾವು ನರೇಗಾ ಜಾರಿಗೆ ತಂದಿದ್ದೂ ಇದೇ ಉದ್ದೇಶದಿಂದಲೇ…

ಪತ್ರಿಕೆ: ಎರಡು ಸಲ ಗದಗಿನಿಂದ ಶಾಸಕರಾಗಿ, ನಿಮ್ಮ ಸಹೋದರನಿಗೆ ಸೀಟು ಬಿಟ್ಟುಕೊಟ್ಟ ನೀವು ಈಗ ಮೊದಲ ಸಲ ಲೋಕಸಭೆ ಚುನಾವಣೆಗೆ ನಿಲ್ತಾ ಇದ್ದೀರಿ. ಹೇಗಿದೆ ಜನರ ಪ್ರತಿಕ್ರಿಯೆ?
ಡಿ.ಆರ್.ಪಾಟೀಲ್: ಇಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಗೆಲ್ತಾವು ಅಂತ ಜನರು ಹೇಳ್ತಾ ಇದ್ದಾರ.., ಹಾಲಿ ಸಂಸದರ ಕೆಲಸ ಅಷ್ಟಕ್ಕಷ್ಟೇ. ಆದರೆ ನಮ್ಮ ಹೋರಾಟ ಎದುರಿನ ಅಭ್ಯರ್ಥಿ ವಿರುದ್ಧ ಮಾತ್ರವಲ್ಲ. ಈ ದೇಶದ ಸಂವಿಧಾನ, ಸೌಹಾರ್ದತೆ ಕಾಪಾಡುವುದರ ಪರ ಇದೆ.

ಪತ್ರಿಕೆ: ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗೆ, ಗ್ರಾಮೀಣ ಅಭಿವೃದ್ಧಿಗೆ ತಾವು ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿಮಗಿರುವ ಸಪೋರ್ಟು ಹಾವೇರಿ ಭಾಗದಲ್ಲಿ ಸಿಗ್ತಾ ಇದೆಯಾ?
ಡಿ.ಆರ್.ಪಾಟೀಲ್: ಆರಂಭದಲ್ಲಿ ನನಗೂ ಡೌಟೇ ಇತ್ತರಿ. ಬಟ್, ಹಾವೇರಿ ಭಾಗದಲ್ಲೂ ಜನ ಬೆಂಬಲ ಸಿಗ್ತಾ ಇದೆ. ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ..

ಪತ್ರಿಕೆ: ನೀವು 101 ಕಿ.ಮೀ. ‘ಗಾಂಧಿಯಾನ’ ಮಾಡಿದಿರಿ. ಆದರೆ ಈ ವಿಷಯ ತುಂಗಭದ್ರಾ ತಟ ದಾಟಿ ಆಚೆ ಮುಟ್ಟಲೇ ಇಲ್ಲವಲ್ಲ?
ಡಿ.ಆರ್.ಪಾಟೀಲ್: ನಮ್ಮ ಕೆಲಸ ನಾವು ಮಾಡಿದ್ದೇವೆ. ನಿಮ್ಮ ಈ ಪ್ರಶ್ನೆಯನ್ನೇ ನೆಪ ಮಾಡಿಕೊಂಡು ಒಂದು ವಿಷಯ ಹೇಳ್ತೇನೆ ಕೇಳಿ: ಮೋದಿ ಪೌರ ಕಾರ್ಮಿಕರ ಕಾಲು ತೊಳೆದ ನಾಟಕೀಯ ಪ್ರಸಂಗ ಈ ದೇಶದಲ್ಲಿ ಇವತ್ತು ಟಿಆರ್‍ಪಿ ಸರಕು ಎಂಬುದೇ ಅಸಹ್ಯದ ವಿಷಯ. ಬಹುಪಾಲು ಮಾಧ್ಯಮಗಳನ್ನು ಮೋದಿ-ಶಾ ಖರೀದಿಸಿದ್ದಾರೆ ಎಂಬ ಮಾತು ನಿಜ ಅನಿಸುತ್ತ ಅಲ್ರಿ? ನಂಗಿಂತಲೂ ನಿಮ್ಗ ಆ ವಿಷಯ ಜಾಸ್ತಿ ಗೊತ್ತಿರತೈತಿ ಅಲ್ಲೇನು?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here