Homeಅಂಕಣಗಳುಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಭಾರತದ ಏಳು ರಾಜ್ಯಗಳಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ ಘಟನೆಗಳಲ್ಲಿ ಇದೂ ಒಂದು. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು 2020ರ ಅಕ್ಟೋಬರ್ 2. ಗಾಂಧಿ ಜಯಂತಿಯ ದಿನ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಆಸ್ಪತ್ರೆಯಲ್ಲಿ ಸೌಮ್ಯ ಎಂಬ ದಲಿತ ಹುಡುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.

ಸೌಮ್ಯ 10 ವರ್ಷದವಳಿದ್ದಾಗಲೇ ತಾಯಿ ಪಳನಿ ಅಮ್ಮಾಳನ್ನು ಕಳೆದುಕೊಂಡಿದ್ದಳು. ತಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆಗ ಅವಳ ತಾತ ಮತ್ತು ಇಬ್ಬರು ಅಜ್ಜಿಯಂದಿರು ಆಕೆಯನ್ನು ಸಾಕಿ ಸಲಹಿದ್ದರು. ಕರಿಮಂಗಲಮ್ ಎಂಬ ಹಳ್ಳಿಯಲ್ಲಿ ವಾಸವಿದ್ದ ಈ ಕುಟುಂಬವು ದಲಿತ ಪರಯ್ಯಾ ಜಾತಿಗೆ ಸೇರಿತ್ತು. ಈ ಧರ್ಮಪುರಿ ಜಿಲ್ಲೆಯು ಇಂದಿಗೂ ಬಲಾಢ್ಯ ಮೇಲ್ಜಾತಿ ವಣ್ಣಿಯಾರ್ ಸಮುದಾಯದ ಹಿಡಿತದಲ್ಲಿದೆ.

ಕರಿಮಂಗಲಮ್ ಗ್ರಾಮದ ಬಹುಸಂಖ್ಯಾತರು ದಲಿತರೇ ಆಗಿದ್ದಾರೆ. ಇಲ್ಲಿನ ದಲಿತರ ಬಳಿ ಎಕರೆಗಟ್ಟಲೆ ಭೂಮಿ ಇದೆ. ಆದರೂ ಸೌಮ್ಯಳ ತಾತನ ಕುಟುಂಬ ಇಂದಿಗೂ ಕೂಲಿಯನ್ನೇ ನಂಬಿಕೊಂಡು ಜೀವಿಸುತ್ತಿದೆ. ಊರಿನ ಕಸ ಗುಡಿಸುವ ಹಾಗೂ ಮಲ ಬಾಚುವ ಕೆಲಸ ಈ ಕುಟುಂಬದ್ದಾಗಿದೆ.

ಇಂತಹ ಪರಿಸ್ಥಿತಿಯಲ್ಲಿಯೂ ಸೌಮ್ಯ 10ನೇ ತರಗತಿಯವರೆಗೆ ಓದಿದಳು. ಓದುತ್ತಲೇ ಸಾಧ್ಯವಾಗುವ ಕೂಲಿ ಕೆಲಸಕ್ಕೂ ಹೋಗಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಆದರೆ ದೂರದೂರಿಗೆ ಹೋಗಿ ಓದಲಾಗದ ಶಕ್ತಿ ಇಲ್ಲದ ಕಾರಣ ಓದನ್ನು ಅರ್ಧಕ್ಕೆ ನಿಲ್ಲಿಸಿದಳು. ಇಲ್ಲಿನ ದಲಿತರು ಭೂಮಿ ಹೊಂದಿದ್ದರೂ ಬಹುತೇಕ ಎಲ್ಲಾ ತೀರ್ಮಾನವೂ ವಣ್ಣಿಯಾರರದ್ದೇ ಆಗಿತ್ತು. 2012ರಲ್ಲಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ 300 ದಲಿತರ ಮನೆಗಳನ್ನು ಸುಟ್ಟು ಕರಕಲಾಗಿಸಿದ್ದು ಇದೇ ಜಿಲ್ಲೆಯಲ್ಲಿಯೇ. ಈ ಗಲಭೆಯನ್ನು ಸಾವಿರ ಪೊಲೀಸರಿಗೂ ನಿಯಂತ್ರಿಸಲು ಆಗಿರಲಿಲ್ಲ.

ಹೀಗಿದ್ದ ಧರ್ಮಪುರಿ ಜಿಲ್ಲೆಯ ಕರಿಮಂಗಲಮ್ ಗ್ರಾಮದಲ್ಲಿ 19 ವರ್ಷದ ದಲಿತೆ ಸೌಮ್ಯಳಿಗೆ 17 ವರ್ಷದ ವಣ್ಣಿಯಾರ್ ಯುವಕ ಮನಿಷ್ ಕುಮಾರ್‌ನೊಂದಿಗೆ ಪ್ರೀತಿಯುಂಟಾಗುತ್ತದೆ. ಸನಾತನಿ ಧರ್ಮದ ಕಾನೂನಿನ ಪ್ರಕಾರ ಇದು ಸಾಧುವಲ್ಲದ ಪ್ರೇಮವಾಗಿದ್ದರೂ ಹೃದಯಕ್ಕೆ ಯಾವ ಜಾತಿ ಇದೆ ಹೇಳಿ? ದೇಶದ ಕಾನೂನಿನ ಪ್ರಕಾರವೂ ವಯಸ್ಸಿನ ತೊಡಕ್ಕಿತ್ತು! ಆದರೂ, ಇಬ್ಬರೂ ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡುಬಿಟ್ಟಿದ್ದರು. ಇದೆಲ್ಲವನ್ನೂ ತಿಳಿಯದ ಜೋಡಿ ಊರುಬಿಟ್ಟು ದೂರ ತೆರಳಿ ಮದುವೆ ಆಗಿಬಿಟ್ಟರು. ಮನಿಷ್ ಕುಟುಂಬದ ಕಣ್ಣಿಗೆ ಬೀಳದಂತೆ ಅಲ್ಲಿಯೇ ಸುತ್ತಾಮುತ್ತಾ ಹಲವು ದಿನಗಳ ಕಾಲ ಜೀವನ ಸಾಗಿಸಿದರು. ಆದರೆ ವಣ್ಣಿಯಾರ್ ಕುಲದಲ್ಲಿ ಅಷ್ಟು ಸುಲಭಕ್ಕೆ ಬಿಡುವ ಮಾತೇ ಇಲ್ಲವಲ್ಲ! ತನ್ನ ಜಾತಿ ನೆಟ್‌ವರ್ಕ್ ಬಳಸಿಕೊಂಡು ಇಬ್ಬರನ್ನೂ ಹುಡುಕಲು ಹಚ್ಚಿತು. 90 ದಿನಗಳ ನಂತರ ಮನಿಷ್ ಮತ್ತು ಸೌಮ್ಯರನ್ನು ವಣ್ಣಿಯಾರ್ ಯುವಕರು ಪತ್ತೆ ಹಚ್ಚಿಬಿಟ್ಟರು. ಅದೂ ಪೊಲೀಸರ ನೆರವಿನಿಂದ ಮತ್ತು ಒಂದು ದೂರನ್ನೂ ದಾಖಲಿಸದಂತೆ!

ಬಲಾಢ್ಯ ವಣ್ಣಿಯಾರ್ ಕುಟುಂಬ ಸೌಮ್ಯಳಿಂದ ಮನಿಷನನ್ನು ದೂರ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ. ಬಹುಶಃ ಮನಿಷ್ ಅಪ್ಪನ ಒಂದು ನೋಟಕ್ಕೆ ಸೌಮ್ಯ ತಣ್ಣಗಾಗಿರಬಹುದು. ಸೌಮ್ಯ ವಿಧಿ ಇಲ್ಲದೆ ತನ್ನ ತಾತನ ಬಳಿಗೆ ಮರಳುತ್ತಾಳೆ. ಆದರೆ ಪ್ರೀತಿ ಎಂಬುದು ಮಾತ್ರ ಮರಳುವುದಿಲ್ಲವಲ್ಲ! ಕೆಲವು ದಿನಗಳ ನಂತರ ಗಟ್ಟಿ ಮನಸ್ಸು ಮಾಡಿಕೊಂಡ ಸೌಮ್ಯ ಮನಿಷ್ ಮನೆಗೆ ಹೊರಟೇಬಿಡುತ್ತಾಳೆ. ’ನನ್ನ ಗಂಡ ನನಗೆ ಬೇಕು’ ಎಂದು ಅಂಗಲಾಚುತ್ತಾಳೆ. ’ಅವನನ್ನು ಒಮ್ಮೆ ಮಾತನಾಡಿಸಲು ಅವಕಾಶ ಕೊಡಿ’ ಎಂದು ಬೇಡಿಕೊಳ್ಳುತ್ತಾಳೆ. ಪಾಪ, ಸೌಮ್ಯಳ ಪ್ರೀತಿಗೆ ಪ್ರಪಂಚದ ಪರಿವೆಯೇ ಇರಲಿಲ್ಲ. ಮನೆಯೊಳಗಿಂದ ಹೊರಗಡೆ ಬಂದ ಮನಿಷ್‌ನನ್ನು ನೋಡಿ ಹರ್ಷಗೊಂಡ ಸೌಮ್ಯ ಇನ್ನೆಲ್ಲ ಕಷ್ಟವೂ ಕೊನೆಯಾಯಿತು ಎಂದುಕೊಳ್ಳುವಷ್ಟರಲ್ಲಿ, ಸ್ವತಃ ಮನಿಷ್ ’ನಿನಗೂ ನನಗೂ ಸಂಬಂಧವಿಲ್ಲ. ನಿನ್ನೊಂದಿಗೆ ಬಾಳಲು ನನಗಿಷ್ಟವಿಲ್ಲ’ ಎಂದುಬಿಡುತ್ತಾನೆ. ಅಲ್ಲಿಗೆ ಸೌಮ್ಯಳ ಕ್ಷಣದ ನಗು ಮಾಯವಾಗುತ್ತದೆ. ಹೌದು, ಅಲ್ಲಾಗಿದ್ದು ಅದೇ. ಕುಟುಂಬದ ಒತ್ತಡಕ್ಕೆ ಮಣಿದು ಮನಿಷ್ ಆ ಮಾತುಗಳನ್ನಾಡುತ್ತಿರಬಹುದು ಎಂದು ಭಾವಿಸಿದ ಸೌಮ್ಯ ಪೊಲೀಸ್ ಠಾಣೆಗೆ ಓಡಿಹೋಗುತ್ತಾಳೆ. ’ವಿಡುದಲೈ ಚಿರುತೈಗಳ್ ಕಚ್ಚಿ’ ರಾಜಕೀಯ ಪಕ್ಷ ಅವಳ ಬೆನ್ನಿಗೆ ನಿಲ್ಲುತ್ತದೆ. ಪೊಲೀಸರ ಬಳಿ ದೂರು ನೀಡಿದಾಗ, ಅವರು ’ಪಂಚಾಯ್ತಿ ಕಟ್ಟೆಯಲ್ಲಿ ತೀರ್ಮಾನ ಮಾಡ್ಕಳಮ್ಮ’ ಎನ್ನುತ್ತಾರೆ! ಆದರೆ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದಂತೆ ಕಾನೂನು ಬೇರೆಯೇ ಹೇಳುತ್ತಿದೆ. ಎಪೆಕ್ಸ್ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟವಾಗಿ ತೀರ್ಪಿತ್ತಿದೆ. ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗದುಕೊಂಡು ರಕ್ಷಣೆ ನೀಡಿ ರಿಮ್ಯಾಂಡ್ ರೂಮಿನಲ್ಲಿರಿಸಬೇಕೆಂಬ ಸ್ಪಷ್ಟ ಆದೇಶವಿದೆ. ಆದರೆ ಪೊಲೀಸರು ಈ ಜಾತಿವಾದಿ ನೆಲದವರಲ್ಲವೇ? ಸೌಮ್ಯಳ ಮಾತಿಗೆ ಬೆಲೆ ಕೊಡುವುದೇ ಇಲ್ಲ.

ಇದನ್ನೂ ಓದಿ: ಮಾತು ಮರೆತ ಭಾರತ-31; ಲಾಕ್‌ಡೌನ್ ಫೈಲ್ಸ್ : ಅಂಬೇಡ್ಕರ್ ಟಿ-ಶರ್ಟ್ ಜಾತಿ ಹೇಳಿತು

ಪಂಚಾಯ್ತಿ ಕಟ್ಟೆಗೆ ಸೌಮ್ಯಳ ಪ್ರೇಮ ಬಂದು ನಿಲ್ಲುತ್ತದೆ. ಫಲಿತಾಂಶ ಯಥಾವತ್ ಆಗುತ್ತದೆ. ಬಡವರ ಮಕ್ಕಳನ್ನು ದುಡ್ಡುಕೊಟ್ಟು ಸರಿ ಮಾಡಿಬಿಡುವ ಕುತಂತ್ರ ನಡೆಯುತ್ತದೆ. ಸೌಮ್ಯಳಿಗೆ ಇಂತಿಷ್ಟು ಹಣ ನೀಡಿಬಿಡುತ್ತೇವೆ ನಮ್ಮ ಮಗನ ತಂಟೆಗೆ ಬರಬಾರದು ಎಂಬ ತೀರ್ಮಾನವಾಗುತ್ತದೆ. ಇದರ ಪರವಾಗಿ ಮನಿಷ್ ಸಹ ನಿಂತುಬಿಡುತ್ತಾನೆ. ಹೆಣ್ಣುಜೀವ, ಅದು ಹೇಗೆ ತಡೆಯಬಲ್ಲದು? ಆಕಾಶವೇ ತಲೆ ಮೇಲೆ ಬಿದ್ದಂತಾಗುತ್ತದೆ. ಹಿಂದೆಮುಂದೆ ಯೋಚಿಸದೇ ಸೌಮ್ಯ ವಿಷ ಸೇವಿಸುತ್ತಾಳೆ. ಸತತವಾಗಿ 22 ದಿನಗಳ ಹೋರಾಟದಲ್ಲಿ ಸಾವು ಗೆಲ್ಲುತ್ತದೆ. ಪ್ರಾಮಾಣಿಕ ಪ್ರೀತಿ ಸೋಲುತ್ತದೆ.

ಇಂದು ಮನಿಷ್ ಕುಮಾರ್ ಮತ್ತು ಆತನ ಕುಟುಂಬದ ಮೇಲೆ ಕೇಸು ದಾಖಲಾಗಿದೆ. ನ್ಯಾಯಾಲಯ ಏನೆಂದು ತೀರ್ಪಿತ್ತಬಹುದೋ ಊಹಿಸಬಹುದಾಗಿದೆ. ಸೌಮ್ಯ ಮಾತ್ರ ತನ್ನ ಪ್ರಾಮಾಣಿಕ ಪ್ರೀತಿಯನ್ನು ಹೊತ್ತು ನೆಲದೊಳಗೆ ಮಲಗಿದ್ದಾಳೆ. ಅವಳಿಗೆ ಮನಿಷ್ ಮತ್ತೆ ಹಿಂದಿರುಗುವ ಕನಸಾದರೂ ಬೀಳಲಿ. ನಮಗೆ ಮನಿಷ್‌ನನ್ನು ಸೃಷ್ಟಿಸಿದ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಣ್ಣು ಕೆಂಪಗಾಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...