Homeಮುಖಪುಟರೈತರಿಂದ ಇಂದು 'ದಿಲ್ಲಿ ಚಲೋ': ಕೇಂದ್ರದ ಮನವೊಲಿಸುವ ತಂತ್ರ ವಿಫಲ

ರೈತರಿಂದ ಇಂದು ‘ದಿಲ್ಲಿ ಚಲೋ’: ಕೇಂದ್ರದ ಮನವೊಲಿಸುವ ತಂತ್ರ ವಿಫಲ

- Advertisement -
- Advertisement -

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವು ರಾಜ್ಯಗಳ ರೈತರು ಇಂದು ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದು, ಅದನ್ನು ತಡೆಯಲು ಕೇಂದ್ರ ಸಚಿವರು ರೈತ ಮುಖಂಡರೊಂದಿಗೆ ನಡೆಸಿದ ಐದು ಗಂಟೆಗಳ ಸುದೀರ್ಘ ಸಭೆ ಫಲ ಪ್ರದವಾಗಿಲ್ಲ. ರೈತರ ಪ್ರಮುಖ ಬೇಡಿಕೆಯಾದ ‘ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ’ಯ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.

ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ ಅವರು ರೈತ ಮುಖಂಡರೊಂದಿಗೆ ಚಂಡೀಗಢದಲ್ಲಿ ಸೋಮವಾರ ಮಧ್ಯರಾತ್ರಿಯವರೆಗೆ ಸಭೆ ನಡೆಸಿದ್ದಾರೆ.

ಸುದೀರ್ಘ ಚರ್ಚೆ ನಡೆದು ರಾತ್ರಿ 11 ಗಂಟೆಯ ನಂತರ, ರೈತ ಮುಖಂಡರು ಮತ್ತು ಸಚಿವರು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯ ಸಂದರ್ಭದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿದ್ದಾರೆ.

ಆದರೆ, ರೈತರ ಮೂರು ಪ್ರಮುಖ ಬೇಡಿಕೆಗಳಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ.

ಸಭೆಯ ಬಳಿಕ ತಡರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ, ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ‘ದಿಲ್ಲಿ ಚಲೋ’ ಮೆರವಣಿಗೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ಸರ್ಕಾರವು ನಮ್ಮ ಅರ್ಧದಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಭರವಸೆ ನೀಡಿತ್ತು. ನಾವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಬಯಸಿದ್ದೇವೆ. ಆದರೆ, ಸರ್ಕಾರವು ಪ್ರಾಮಾಣಿಕವಾಗಿಲ್ಲ. ಅವರು ಸಮಯ ವ್ಯರ್ಥ ಮಾಡಲು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರತಿಭಟನಾ ಮೆರವಣಿಗೆ ಕೈಗೊಂಡಿರುವ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಝಿಪುರ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರ್ವಜನಿಕ ಸಭೆಗಳು ನಡೆಸುವುದಕ್ಕೆ ಮತ್ತು ಟ್ರ್ಯಾಕ್ಟರ್, ಟ್ರಾಲಿಗಳು ನಗರಕ್ಕೆ ಪ್ರವೇಶಿಸದಂತೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ.

ದೆಹಲಿಯಾದ್ಯಂತ ಬೃಹತ್ ಸಭೆಗಳನ್ನು ನಿಷೇಧಿಸಲಾಗಿದೆ. ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ಮುಳ್ಳು ತಂತಿಗಳು ಮತ್ತು ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿದೆ. ವಾಣಿಜ್ಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹರಿಯಾಣದ ಅಧಿಕಾರಿಗಳು ಪಂಜಾಬ್‌ನೊಂದಿಗಿನ ಗಡಿಯನ್ನು ಮುಚ್ಚಿದ್ದಾರೆ. ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು ಮುಳ್ಳು ತಂತಿಗಳು ಮತ್ತು ಬ್ಯಾರಿಕೇಡ್‌ಗಳಿಂದ ರಸ್ತೆಗಳನ್ನು ಮುಚ್ಚಿ ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ಮಾಡಿದ್ದಾರೆ.

ಹರಿಯಾಣ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿಯ ವಿರುದ್ಧ 2021 ರ ಕಾನೂನನ್ನು ಅನ್ವಯಿಸುವಂತೆ ಸೂಚಿಸಿದೆ. ರಾಜ್ಯ ಗೃಹ ಇಲಾಖೆಯು ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿಯಮ ಬದ್ಧವಾಗಿರುವಂತೆ ಆದೇಶಿಸಿದೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ‘ದಿಲ್ಲಿ ಚಲೋ’ ಘೋಷಿಸಿದೆ. ಇದೇ ಸಂಘಟನೆಗಳ ನೇತೃತ್ವದಲ್ಲಿ 2020-21 ರಲ್ಲಿ ವರ್ಷವಿಡೀ ನಡೆದ ಆಂದೋಲನದ ನಂತರ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂಗಳನ್ನು ಹಿಂದೆಗೆದುಕೊಂಡಿತ್ತು.

250ಕ್ಕೂ ಹೆಚ್ಚು ರೈತ ಸಂಘಗಳ ಬೆಂಬಲ ಹೊಂದಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು 150 ರೈತ ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಪಂಜಾಬ್‌ನಿಂದ ಪ್ರಾರಂಭಗೊಂಡ ಸಂಘಟಿತವಾದ ಪ್ರತಿಭಟನೆಯು ಸರ್ಕಾರ ಎರಡು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ನೆನಪಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ : ನಾಳೆ ದೆಹಲಿಯಲ್ಲಿ ರೈತರ ಪ್ರತಿಭಟನೆ: ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...