Homeಮುಖಪುಟದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕ ಬಂಧನಕ್ಕೊಳಗಾದ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಬಾಂಡ್‌ ಖರೀದಿಸಿತ್ತು 'ಅರಬಿಂದೋ...

ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕ ಬಂಧನಕ್ಕೊಳಗಾದ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಬಾಂಡ್‌ ಖರೀದಿಸಿತ್ತು ‘ಅರಬಿಂದೋ ಫಾರ್ಮಾ’

- Advertisement -
- Advertisement -

ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಾರ್ಚ್ 21 ರಂದು ಬಂಧಿಸಿದೆ.

ಕಳೆದ ಒಂದು ವಾರದ ಹಿಂದೆ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಫೆಬ್ರವರಿ 2023ರಿಂದ ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.

ಬಾಂಡ್‌ ಸಂಖ್ಯೆಗಳೊಂದಿಗೆ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗ ನಿನ್ನೆ(ಮಾ.21) ಸಂಜೆ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ.

ಇದರಲ್ಲಿ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಕವಿತಾ ಅವರ ಸಹ ಆರೋಪಿ ಪಿ ಶರತ್ ಚಂದ್ರ ಅವರು ಇಡಿಯಿಂದ ಬಂಧಿಸಲ್ಪಟ್ಟ ಬೆನ್ನಲ್ಲೇ ಅವರ ಅರಬಿಂದೋ ಫಾರ್ಮಾ ಕಂಪನಿ ಬಿಜೆಪಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ಗೊತ್ತಾಗಿದೆ.

ಹೈದರಾಬಾದ್ ಮೂಲದ ಉದ್ಯಮಿ ಪಿ ಶರತ್ ಚಂದ್ರ ರೆಡ್ಡಿ ಅವರು ತಮ್ಮ ತಂದೆ ಪಿವಿ ರಾಮ್ ಪ್ರಸಾದ್ ರೆಡ್ಡಿ ಸ್ಥಾಪಿಸಿದ ‘ಅರಬಿಂದೋ ಫಾರ್ಮಾ ಲಿಮಿಟೆಡ್‌’ನ ನಿರ್ದೇಶಕರಲ್ಲಿ ಒಬ್ಬರು. ನವೆಂಬರ್ 11, 2022ರಂದು ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಇಡಿ ಇವರನ್ನು ಬಂಧಿಸಿತ್ತು. ನವೆಂಬರ್ 15 ರಂದು ಶರತ್ ಚಂದ್ರ ರೆಡ್ಡಿ ಅವರ ಕಂಪನಿ ಅರಬಿಂದೋ ಫಾರ್ಮಾ 5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. 2022ರ ನವೆಂಬರ್ 21 ರಂದು ಅವೆಲ್ಲವನ್ನೂ ಬಿಜೆಪಿ ನಗದೀಕರಣ ಮಾಡಿಕೊಂಡಿದೆ. ಜೂನ್ 2023ರಲ್ಲಿ ಶರತ್ ಚಂದ್ರ ರೆಡ್ಡಿ ಈ ಪ್ರಕರಣದಲ್ಲಿ ಅನುಮೋದಕರಾದರು. ನವೆಂಬರ್ 2023ರಲ್ಲಿ ಅರಬಿಂದೋ ಫಾರ್ಮಾ ಬಿಜೆಪಿಗೆ 25 ಕೋಟಿ ರೂ. ದೇಣಿಗೆ ನೀಡಿದೆ.

ಒಟ್ಟಾರೆಯಾಗಿ, ಅರಬಿಂದೋ ಫಾರ್ಮಾ ಲಿಮಿಟೆಡ್‌ 52 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಅದರಲ್ಲಿ 34.5 ಕೋಟಿ ರೂಪಾಯಿ ಬಿಜೆಪಿಗೆ ಹೋಗಿದೆ. ಅರಬಿಂದೋ ಕಂಪನಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಗೆ ರೂ. 15 ಕೋಟಿ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಕ್ಕೆ ರೂ. 2.5 ಕೋಟಿ ದೇಣಿಗೆ ನೀಡಿದೆ.

Image Courtesy : The news minute

2021-22ರಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರವು ಕೆಲ ತಿಂಗಳ ಕಾಲ ನೂತನ ಅಬಕಾರಿ ನೀತಿಯನ್ನು ಜಾರಿಗೊಳಿಸಿತ್ತು. ಆಗ ದೆಹಲಿಯಲ್ಲಿ ಮದ್ಯದ ಪರವಾನಗಿ ಪ್ರಕ್ರಿಯೆಗೆ ಕಿಕ್‌ಬ್ಯಾಕ್‌ ನೀಡುವಲ್ಲಿ ಶರತ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಇಡಿ ‘ದಕ್ಷಿಣ ಗುಂಪು'(ಸೌತ್ ಗ್ರೂಪ್) ಎಂದು ಉಲ್ಲೇಖಿಸಿರುವ ತೆಲುಗು ರಾಜ್ಯಗಳ ಹಲವಾರು ವ್ಯಕ್ತಿಗಳಲ್ಲಿ ಶರತ್ ಮತ್ತು ಕವಿತಾ ಸೇರಿದ್ದಾರೆ.

ದಕ್ಷಿಣ ಗುಂಪು ಒಳಗೊಂಡಿರುವ ವ್ಯಕ್ತಿಗಳು ಆಮ್ ಆದ್ಮಿ ಪಕ್ಷಕ್ಕೆ ಪಕ್ಷದ ಸಂವಹನ ಉಸ್ತುವಾರಿ ವಹಿಸಿದ್ದ ವಿಜಯ್ ನಾಯರ್ ಮೂಲಕ ಸುಮಾರು 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ದೆಹಲಿಯಲ್ಲಿ ಮದ್ಯದ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಈ ಮೊತ್ತವನ್ನು ಪಾವತಿಸಲಾಗಿದೆ ಮತ್ತು 2022ರ ಗೋವಾ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷವು ಈ ಹಣವನ್ನು ಬಳಸಿದೆ ಎಂದು ಇಡಿ ಆರೋಪಿಸಿದೆ.

ಜೂನ್ 1,2023 ರಂದು, ದೆಹಲಿ ನ್ಯಾಯಾಲಯವು ಶರತ್‌ಗೆ ಪ್ರಕರಣದಲ್ಲಿ ಅನುಮೋದಿಸಲು ಅನುಮತಿ ನೀಡಿತ್ತು. ‘ದಕ್ಷಿಣ ಗುಂಪಿನ’ ನ ಇತರ ಇಬ್ಬರು ಸದಸ್ಯರಾದ ಒಂಗೋಲ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ (ವೈಎಸ್‌ಆರ್‌ಸಿಪಿ ಟಿಕೆಟ್‌ನಲ್ಲಿ ಗೆದ್ದು ಇತ್ತೀಚೆಗೆ ಟಿಡಿಪಿಗೆ ಸೇರಿದವರು) ಮತ್ತು ಅವರ ಮಗ ರಾಘವ್ ಕೂಡ ದೆಹಲಿ ಮೂಲದ ಉದ್ಯಮಿ ದಿನೇಶ್ ಅರೋರಾ ಅವರಂತೆ ಈ ಪ್ರಕರಣದಲ್ಲಿ ಅನುಮೋದಕರಾಗಿದ್ದಾರೆ.

ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೂ ಅರಬಿಂದೋ ಫಾರ್ಮಾದ ಶರತ್ ಅವರ ಹೆಸರು ಕೇಳಿ ಬಂದಿದೆ.

2012ರಲ್ಲಿ ಜಗನ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ ಆರೋಪ ಪಟ್ಟಿಯಲ್ಲಿ ಶರತ್ ಹೆಸರಿತ್ತು. ಇದು 2006 ರಲ್ಲಿ ಆಂಧ್ರ ಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದೊಂದಿಗೆ ಭೂ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದೆ. ಶರತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಟ್ರೈಡೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್‌ಗೆ ಲಾಭ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ನವೆಂಬರ್ 2021ರಲ್ಲಿ ಮದ್ಯ ನೀತಿಯನ್ನು ಪರಿಚಯಿಸಿತ್ತು. ಜುಲೈ 2022 ರಲ್ಲಿ ಅದನ್ನು ರದ್ದುಗೊಳಿಸಲಾಗಿದೆ. ಕೇಂದ್ರೀಯ ತನಿಖಾ ದಳ(ಸಿಬಿಐ) ವು ನೀತಿಯಲ್ಲಿನ ಅಕ್ರಮಗಳ ಬಗ್ಗೆ ಪ್ರಕರಣವನ್ನು ದಾಖಲಿಸಿದೆ.

ಕೆಲ ಮದ್ಯ ಮಾರಾಟಗಾರರಿಗೆ ಆದ್ಯತೆಯ ಮೂಲಕ ಕಾರ್ಟೆಲೈಸೇಶನ್ ಅನ್ನು ನೀಡಲಾಗಿದೆ ಎಂದು ಸಿಐಡಿ ಹೇಳಿದೆ. ವಿತರಕರು ಮದ್ಯದ ಪರವಾನಗಿಗಾಗಿ 100 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಜಾರಿ ನಿರ್ದೇಶನಾಲಯವು ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.

ಮಾರ್ಚ್ 9, 2023 ರಂದು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಬಂಧಿಸಿದ ನಂತರ ಜಾರಿ ನಿರ್ದೇಶನಾಲಯವು ಕವಿತಾ ಅವರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದಿತ್ತು.

ಮಾಹಿತಿ ಕೃಪೆ : The news minute

ಇದನ್ನೂ ಓದಿ : ಬಾಂಡ್ ಸಂಖ್ಯೆಗಳೊಂದಿಗೆ ಚುನಾವಣಾ ಬಾಂಡ್ ಮಾಹಿತಿ ಪ್ರಕಟಿಸಿದ ಚು. ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...