Homeಮುಖಪುಟಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣದಲ್ಲಿ ಉದ್ದೇಶಪೂರ್ವಕ ವಿಳಂಬ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ನೋಟಿಸ್

ಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣದಲ್ಲಿ ಉದ್ದೇಶಪೂರ್ವಕ ವಿಳಂಬ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ನೋಟಿಸ್

- Advertisement -
- Advertisement -

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಇತರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ತೀರ್ಪನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಲ್ಲಿಸಿದ ಮನವಿಯ ಮೇರೆಗೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಮೇ 11 ರಂದು ಸಿಎಂ ಶಿಂಧೆ ಮತ್ತು ಇತರ 16 ಜನ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಸ್ಪೀಕರ್ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಅಂದಿನಿಂದ ಸ್ಪೀಕರ್ ಆ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ನಾವು ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಂತರವಷ್ಟೇ ನೋಟಿಸ್ ಕಳುಹಿಸಿದ್ದಾರೆ ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ದೇವದತ್ತ್ ಕಾಮತ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಇದುವರೆಗೂ ಒಂದೇ ಒಂದು ಅನರ್ಹತೆ ಅರ್ಜಿಯನ್ನು ಸಹ ಸ್ಪೀಕರ್ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಈ ಕುರಿತು ಮೂರು ಬಾರಿ ಅವರ ಗಮನಕ್ಕೆ ತಂದರೂ ಸಹ ಅವರು ಉದ್ದೇಶ ಪೂರ್ವಕ ವಿಳಂಬ ಮಾಡುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸಲು ಮತ್ತು ರಾಜಕೀಯ ತಟಸ್ಥ ನೀತಿ ಅನುಸರಿಸಲು ವಿಫಲವಾಗಿದ್ದಾರೆ. ಹಾಗಾಗಿ ಸಿಎಂ ಶಿಂಧೆ ಮತ್ತು ಹಲವು ಶಾಸಕರು ಕಾನೂನುಬಾಹಿರವಾಗಿ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಹತ್ತನೇ ಶೆಡ್ಯೂಲ್‌ನ ಪ್ಯಾರಾ 6 ರ ಅಡಿಯಲ್ಲಿ ಸ್ಪೀಕರ್ ತನ್ನ ಕಾರ್ಯಗಳನ್ನು ನಿರ್ವಹಿಸುವಾಗ ನ್ಯಾಯಾಂಗದ ನ್ಯಾಯಮಂಡಳಿಯಾಗಿ ಕಾರ್ಯನಿರ್ವಹಿಸಬೇಕು. ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ರೀತಿಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸುವಲ್ಲಿ ಸ್ಪೀಕರ್‌ ಕಡೆಯಿಂದ ಆಗುವ ಯಾವುದೇ ಅವಿವೇಕದ ವಿಳಂಬವು ತಪ್ಪಿತಸ್ಥ ಸದಸ್ಯರು ಮಾಡಿದ ಪಕ್ಷಾಂತರದ ಸಾಂವಿಧಾನಿಕ ಪಾಪಕ್ಕೆ ಕೊಡುಗೆ ನೀಡುತ್ತದೆ ಮತ್ತು ಶಾಶ್ವತಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅನರ್ಹತೆ ಅರ್ಜಿಗಳನ್ನು ಕಾಲಮಿತಿಯಲ್ಲಿ ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ರವರ ಜೊತೆಗೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಮಹಾರಾಷ್ಟ್ರ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡಿ ಎರಡು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಇದನ್ನೂ ಓದಿ; ಮಹಾರಾಷ್ಟ್ರ: ವಿರೋಧ ಪಕ್ಷಗಳನ್ನು ಒಡೆಯುವ ಬಿಜೆಪಿಯ ಅನೈತಿಕ ನೀತಿಯ ಹೊಸ ಅಧ್ಯಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read