Homeಕರ್ನಾಟಕಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ 'ನಮ್ಮ ಮೆಟ್ರೋ' ಪ್ರಯಾಣಕ್ಕೆ ನಿರಾಕರಣೆ

ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ‘ನಮ್ಮ ಮೆಟ್ರೋ’ ಪ್ರಯಾಣಕ್ಕೆ ನಿರಾಕರಣೆ

ವಿಷಾದ ವ್ಯಕ್ತಪಡಿಸಿದ ಬಿಎಂಆರ್‌ಸಿಎಲ್‌: ಭದ್ರತಾ ಮೇಲ್ವಿಚಾರಕ ಸೇವೆಯಿಂದ ವಜಾ

- Advertisement -
- Advertisement -

ರೈತರೊಬ್ಬರು ಕೊಳೆ ಬಟ್ಟೆ ಧರಿಸಿಕೊಂಡು ಬಂದಿದ್ದಾರೆ ಎಂಬ ಕಾರಣಕ್ಕೆ ನಮ್ಮ ಮೆಟ್ರೋ ಸಿಬ್ಬಂದಿ ಅವರಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಘಟನೆಯ ಕುರಿತು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್‌ (ನಮ್ಮ ಮೆಟ್ರೋ) “ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ, ಭದ್ರತಾ ಮೇಲ್ವಿಚಾರಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ” ಎಂದು ಹೇಳಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ರೈತನೆಂದು ಹೇಳಲಾದ ವೃದ್ದರೊಬ್ಬರು ತಲೆಮೇಲೆ ಗಂಟು ಹೊತ್ತುಕೊಂಡು ಮೆಟ್ರೋ ನಿಲ್ದಾಣ ಪ್ರವೇಶಿಸಿದ್ದರು. ಈ ವ್ಯಕ್ತಿ ಕೊಳೆ ಬಟ್ಟೆ ಧರಿಸಿದ್ದಾರೆಂದು ಭದ್ರತಾ ಸಿಬ್ಬಂದಿ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದರು.

“ಅವರು ರೈತರು ಸರ್, ನಿಯಮ ಪ್ರಕಾರ ಅವರಲ್ಲಿ ಮೆಟ್ರೋ ಪ್ರಯಾಣಕ್ಕೆ ನಿಷೇಧಿಸಲ್ಪಟ್ಟ ವಸ್ತುಗಳೇನಾದರು ಇದ್ದರೆ, ಅದನ್ನು ತೆಗೆದಿಡಿ ನಾವು ಬೇಡ ಅನ್ನಲ್ಲ. ಅವರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ಕೊಡಿ. ಅವರು ಕೊಳೆ ಬಟ್ಟೆ ಧರಿಸಿದ್ದಾರೆಂದು ನೀವು ಪ್ರಯಾಣಿಸಲು ಬಿಡುತ್ತಿಲ್ಲ. ನಾನು ಒಳ್ಳೆಯ ಬಟ್ಟೆ ಧರಿಸಿದ್ದೇನೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೀರಾ?” ಎಂದು ವಿಡಿಯೋದಲ್ಲಿರುವ ವ್ಯಕ್ತಿ ಪ್ರಶ್ನಿಸಿದ್ದಾರೆ.

ವೈರಲ್ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) “ಬಡವರು ಮೆಟ್ರೋದಲ್ಲಿ ಹೋಗಬಾರದಾ? ಬಟ್ಟೆ ಗಲೀಜಾಗಿದೆ ಎಂದು ಮೆಟ್ರೋ ಪ್ರಯಾಣ ನಿರಾಕರಣೆ. ಬಡವರ ಪರ ಧ್ವನಿ ಎತ್ತಿದ ಗೆಳೆಯರಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಇರುವ ಉದ್ಯೋಗವನ್ನೂ ಪ್ರಧಾನಿ ಮೋದಿ ಕಸಿದ ಕಾರಣ ದೇಶದಲ್ಲಿ ನಿರುದ್ಯೋಗ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...